

ಬದುಕು ತಣ್ಣಗೆ ನಗುತ್ತಿತ್ತು. ಗೊಂದಲದ ಮನಸ್ಸಿನ ಗೋಗರೆತಕ್ಕೆ ಕಿವಿಯಾಗದೆ ಯಾವುದರ ಅರಿವು ಕೂಡ ಇಲ್ಲದಂತೆ ತನ್ನಷ್ಟಕ್ಕೆ ಮುಂದೆ ಸಾಗುತ್ತಿತ್ತು. ಒದ್ದಾಡುತ್ತಿರುವುದು ಮಾತ್ರ ಪುಟ್ಟ ಮನಸ್ಸು.
ಒಡೆದ ಕನ್ನಡಿಯ ಬಿಂಬ ನನ್ನ ಸ್ಪಷ್ಟ ಸೌಂದರ್ಯ ಬಿಂಬಿಸಲು ವ್ಯರ್ಥ ಪ್ರಯತ್ನ ಮಾಡುತ್ತಿತ್ತು. ಕಚ್ಚುವ ಮಾತುಗಳು, ಚುಚ್ಚುವ ನೋವುಗಳು, ನನ್ನನ್ನೇ ಅಳೆದು ತೂಗಿ ತಿನ್ನುವಂತೆ ನೋಡುವ ಆ ಅನಾಮಿಕ ಕಣ್ಣುಗಳು..ಥತ್, ಯೋಚಿಸಿದರೆ ವಾಕರಿಕೆ. ಇಲ್ಲಿವರೆಗೂ ಸಹಿಸಿಕೊಂಡು ಸಾಹಸದ ಬದುಕನ್ನು ಸಾಗಿಸಿದ್ದೇನೆ! ಸಾಕಿನ್ನು ಎಂದರೆ ಹೊಟ್ಟೆಯ ಹಸಿವಿನ ಹಂಬಲಿಕೆಯ ಎದುರು ಹೇವರಿಕೆಯೂ ಸಹ್ಯವಾಗುತ್ತಿದೆ.
ನಾನಿರುವುದು ಭಯಾನಕ ಪ್ರಪಂಚದಲ್ಲಿ. ಮುಖ ಸಿಂಡರಿಸಿಕೊಂಡು ನನ್ನನ್ನು ವೇಶ್ಯೆ ಎಂದು ಕರೆಯುತ್ತಾರೆ. ನನ್ನೆದುರಿಗೇ ನನ್ನ ಬದುಕಿಗೆ ಛೀ, ಥೂ ಅನ್ನುತ್ತಾರೆ. ನನ್ನೊಳಗಿನ ಬೇಗುದಿಗೆ ಮತ್ತಷ್ಟು ಬರೆ ಎಳೆಯುತ್ತಾರೆ.
ಬರಿದೇ ಬಂದು ಆರಿಸಿಕೊಂಡ ಹಾದಿಯಲ್ಲ ಇದು. ಇನ್ನೆಲ್ಲೂ ಮಾರ್ಗವಿಲ್ಲ ಎಂದಾಗ ಮುಂದಿನ ದಿನಗಳ ದೀನ ನೋಟಗಳು ನನ್ನನ್ನು ಈ ಪ್ರಪಂಚಕ್ಕೆ ತಳ್ಳಿ ಬಿಟ್ಟಿದ್ದವು. ಇಲ್ಲಿಗೆ ಬಂದ ಮೇಲೆ ಗೊತ್ತಾಗಿದ್ದು ನನ್ನಲ್ಲಿ ಹಸಿವಿಗೆಂದು ಬರುವವರ ಮುಂದೆ ನನ್ನ ಹಸಿವಿನ ಹರವು ಇದ್ದಿದ್ದು ಸ್ವಲ್ಪವೆಂದು! ಆದರೆ ಈ ಪ್ರಪಂಚದೊಳಗೆ ಕಾಲಿಟ್ಟಾಗಿತ್ತು. ಹೊರ ಬಂದರೂ ನನ್ನ ಹೆಸರಿನ ಮುಂದಿರುವ ಆ ಪಟ್ಟವನ್ನು ಅಳಿಸಿಹಾಕಲು ಸಾಧ್ಯವಿಲ್ಲ.
ನಾನೂ ಎಲ್ಲ ಹುಡುಗಿಯರಂತೆ ಬಣ್ಣ ಬಣ್ಣದ ಕನಸು ಕಂಡವಳು. ಆದರೆ ಕಡೆಗೆ ಹೋಗಿ ಸೇರಿದ್ದು ಬದುಕು ಕೊಂಡೊಯ್ದ ಹಾದಿಗೆ. ಎದುರಿಗಿರುವ ಪುಟ್ಟ ಮಗುವಿನ ಬೊಚ್ಚು ನಗು ನನ್ನ ಕೈಗಳನ್ನು ಸುಮ್ಮನಿರಿಸುತ್ತಿಲ್ಲ. ಎತ್ತಿಕೊಂಡು ಎದೆಗಪ್ಪಿಕೊಳ್ಳೋಣವೆಂದರೆ ಅದರಮ್ಮನ ಕೆಟ್ಟ ನೋಟ. ನನ್ನೊಳಗಿನ ವಾತ್ಸಲ್ಯ, ನನ್ನ ಭಾವನೆಗಳು ಎಲ್ಲವೂ ಕ್ಷಣ ಕ್ಷಣವೂ ನನ್ನನ್ನು ಕೊಲ್ಲುತ್ತಿವೆ. ಹಿಡಿ ಪ್ರೀತಿಗಾಗಿ ಹಿಡಿದ ಕರಗಳಲ್ಲಿ ಹಸಿವಿನ ಆತುರವೇ ಹೊರತು ಭಾವಗಳ ಹುಡುಕಾಟ ನನ್ನ ವ್ಯರ್ಥ ಪ್ರಯತ್ನವಾಗಿತ್ತು.
ನನ್ನ ಮನೆಯೊಳಗೆ ಬಂದು ಹೋಗುವ ಅನೇಕ ಪಯಣಿಗರು. ಸುಮ್ಮನೆ ಅವರೆಲ್ಲರ ನಡುವೆ ನಡೆವ ಏನೇನೋ ಸಂಧಾನ. ಕ್ಷಣದಷ್ಟು ಹೊತ್ತಿಗೆ ಮಾತ್ರ ವ್ಯಾವಹಾರಿಕ ಸಂಬಂಧ. ಅವರಷ್ಟಕ್ಕೇ ಸಂಭ್ರಮಿಸುತ್ತಾರೆ. ತೆರಳಿದವರು ಮತ್ತೆ ತಿರುಗಿ ನೋಡಲಾರರು.
ಬದುಕಿಗೊಂದು ಅರ್ಥವಿದೆ ಎಂದು ಸಾವಿರಾರು ಜನ ಹೇಳುತ್ತಾರೆ. ನೂರಾರು ಜನ ಸ್ಫೂರ್ತಿಯ ಮಾತನಾಡುತ್ತಾರೆ. ಆದರೆ ನನ್ನ ಬದುಕಿಗೇನಿದೆ ಅರ್ಥ. ನನ್ನೊಳಗೇ ಸ್ಪೂರ್ತಿಯನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದಿದೆ. ನನ್ನ ಬದುಕು ಪೂರ್ತಿ ಕೊಳಕುಗಳೇ ತುಂಬಿರುವಾಗ ಇನ್ನೇನು ಸ್ಪೂರ್ತಿ? ನನ್ನ ದಿನಗಳ ಬಳಿಯೂ ಸಂಭ್ರಮಗಳು ಬರಬಹುದೇನೋ ಎಂದು ಕಾದೇ ಕಾಯುತ್ತೇನೆ. ಅಷ್ಟರೊಳಗೆ ಯಾರೋ ನನ್ನನ್ನು ಕರೆಯುತ್ತಾರೆ. ನನ್ನ ಏಕಾಂತದ ಯೋಚನೆಗಳಿಗೆ ಭಂಗ ತರುತ್ತಾರೆ. ನನ್ನ ಕಾಯುವಿಕೆಯ ಸುಖವನ್ನು ದೋಚಿಕೊಂಡು ಸಾಗುತ್ತಾರೆ. ಮತ್ತೆ ಎದ್ದು ಅಲ್ಲೇ ನಗುತ್ತಿರುತ್ತೇನೆ, ಅಳುತ್ತಿರುತ್ತೇನೆ. ಮತ್ತೆ ಕಾಯುತ್ತಲೇ ಇರುತ್ತೇನೆ. ಆದರೆ ಅವರೆಲ್ಲರೂ ನನ್ನ ಕಾಯುವಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಬಂದು ಹೋಗುತ್ತಲೇ ಇರುತ್ತಾರೆ. ಯಾರೂ ನಿಲ್ಲಲಾರರು!
- ಅನುರಾಧಾ ತೆಳ್ಳಾರ್