

ಸುತ್ತಮುತ್ತ ತಮಿಳಿನ ಕಲರವ. ಎಲ್ಲೋ ಒಂದೆಡೆ ಕೇಳಿಸಿದೆ ಕನ್ನಡದ ಕ್ಷೀಣದನಿ. ಆದರೆ, ಇಂದು ಹಾಗಿಲ್ಲ. ಚೆನ್ನೈ ಮಹಾನಗರದಲ್ಲಿ ಕನ್ನಡದ ಸಂಘಟನೆಗಳೆಲ್ಲ ಒಂದಾಗಿವೆ. ಕನ್ನಡವನ್ನು ಶಾಲೆಗಳಿಂದ ಓಡಿಸಲು ಮಾಡಿದ ಪ್ರಯತ್ನಗಳನ್ನು ಹೆಮ್ಮೆಟ್ಟಿಸಿ ಐಚ್ಛಿಕವಾಗಿ ಕನ್ನಡ ಭಾಷೆ ಕಲಿಯುವ ಅವಕಾಶವನ್ನು ಜೀವಂತಗೊಳಿಸಿವೆ. ಕನ್ನಡದ ದನಿ ಅನುರಣಿಸುವ ಉಪನ್ಯಾಸಗಳು, ಗೀತಗುಚ್ಛಗಳು, ಯಕ್ಷಗಾನಗಳ ಪ್ರದರ್ಶನದ ಮೂಲಕ ಅಲ್ಲಿ ನೆಲೆಸಿರುವ ಕನ್ನಡಿಗರನ್ನು ಬೆಸೆಯುವ ಕಾರ್ಯ ನಡೆಸಿವೆ.
ಕನ್ನಡಕ್ಕಾಗಿ 17 ವರ್ಷಗಳಿಂದ ಉತ್ತಮ ಕೆಲಸಗಳು ಅಲ್ಲಿ ನಡೆಯುತ್ತಿರುವ ಈ ಸಾಧನೆಯ ಹಿಂದೆ ಎಪ್ಪತ್ತರ ಹಿರಿಯ ಜೀವ ಇಪ್ಪತ್ತರ ಯುವಕನಂತೆ ಇಂದಿಗೂ ಶ್ರಮಿಸುತ್ತಲೇ ಇದೆ. ಆ ಶಕ್ತಿಯ ವ್ಯಕ್ತಿಯೇ ಕೆ.ಪಿ. ಆಚಾರ್. ಬ್ಯಾಂಕ್ ಉದ್ಯೋಗಿಯಾಗಿ 1979ರಲ್ಲಿ ಚೆನ್ನೈ ಸೇರಿಕೊಂಡ ಅವರು ಅಲ್ಲಿ ನಡೆಯುವ ಕನ್ನಡಪರ ಚಟುವಟಿಕೆಗಳಲ್ಲಿ ಸಕ್ರಿಯರಾಗುತ್ತಿದ್ದರು. 1995ರಿಂದ ಕರ್ನಾಟಕ ಸಂಘದ ಅಧ್ಕಕ್ಷರಾಗಿ ಆಯ್ಕೆಗೊಂಡು ಇಂದಿನ ವರೆಗೂ ಅವಿರೋಧ ಆಯ್ಕೆ ಆಗುತ್ತಲೇ ಬಂದಿರುವ ಆಚಾರ್ ತಮಿಳಿನ ಮಾಮರದಲ್ಲಿ ಕನ್ನಡದ ಕೋಗಿಲೆಯ ಕೂಜನ ಮೊಳಗಲು ಕೈಗೊಂಡ ಪ್ರಯತ್ನಗಳು ಬಲು ದೊಡ್ಡದು.
ಕೆ.ಪಿ. ಆಚಾರ್ ಮೂಲತಃ ಉಡುಪಿ ತಾಲೂಕಿನ ಎಲ್ಲೂರಿನವರು. ಇಂಡಿಯನ್ ಓವರ್‌ಸೀಸ್ ಬ್ಯಾಂಕಿಗೆ ಉದ್ಯೋಗಿಯಾಗಿ ಹತ್ತು ವರ್ಷ ಸುಬ್ರಮಣ್ಯದಲ್ಲೇ ದುಡಿದರು. ಆಮೇಲೆ ಚೆನ್ನೈಗೆ ಸ್ಥಳಾಂತರ. 2001ರಲ್ಲಿ ವೃತ್ತಿಯಿಂದ ನಿವೃತ್ತನಾದ ಮೇಲೆ ಕನ್ನಡಕ್ಕಾಗಿ ನಿರಂತರ ಪ್ರವೃತ್ತಿ.
ಚೆನ್ನೈಯಲ್ಲಿ ಜತೆಯಾದವರು ಡಾ. ಶ್ರೀಕೃಷ್ಣಭಟ್ ಅರ್ತಿಕಜೆ. ಅವರೊಂದಿಗೆ ಆಚಾರ್ ಕನ್ನಡ ಸಂಘ ಪ್ರವೇಶಿಸಿದರು. ಚೆನ್ನೈನಲ್ಲಿ ಕನ್ನಡ ಸಂಘಟನೆಗಳು ಬೇರೆಬೇರೆಯಾಗಿ ಆಚರಿಸುತ್ತಿದ್ದ ರಾಜ್ಯೋತ್ಸವವನ್ನು ಒಂದೇ ವೇದಿಕೆಯಲ್ಲಿ ಆಚರಿಸುವ ಯೋಜನೆಯನ್ನು ಆಚಾರ್ ಕೈಗೊಂಡರು. ಆ ಪರಂಪರೆ ಈಗಲೂ ಇದೆ. ಆಚಾರ್ ಅಧ್ಯಕ್ಷರಾದ ಮೇಲೆ ಕನ್ನಡ ಸಂಘದ ಜೀವಂತಿಕೆ ಮೆರೆದಾಡಿದೆ. ಪ್ರಥಮ ಬಾರಿಗೆ ಚೆನ್ನೈನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದ ಕೀತರ್ ಆಚಾರ್ ಅವರದು.
ಅಲ್ಲಿನ ಶಾಲೆಗಳಲ್ಲಿ ಮಾತೃಭಾಷಾ ಶಿಕ್ಷಣ ರದ್ದುಮಾಡಿ ತಮಿಳು ಕಲಿಕೆ ಕಡ್ಡಾಯವಾದಾಗ ಉನ್ನತ ಶಿಕ್ಷಣ ಸಚಿವರನ್ನು ಭೇಟಿಯಾಗಿ 'ಮಾತೃಭಾಷೆ ಕಲಿಯುವ ಹಕ್ಕು ಸಾಂವಿಧಾನಿಕವಾದದ್ದು. ಇದನ್ನು ನಿರಾಕರಿಸಿದರೆ ಕಾನೂನುಬಾಹಿರವಾಗುತ್ತದೆ' ಎಂಬುದನ್ನು ಮನದಟ್ಟು ಮಾಡಿದ ನಿಯೋಗದ ಮುಂಚೂಣಿಯಲ್ಲಿ ಆಚಾರ್ ಇದ್ದರು. ಕ್ರಿಶ್ಚಿಯನ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕನ್ನಡ ಐಚ್ಛಿಕ ಪಠ್ಯವಾಗಿ ತೆಗೆದುಕೊಂಡರೆ ಮಾಸಿಕ 3 ಸಾವಿರ ರು. ಪ್ರೋತ್ಸಾಹಧನವನ್ನು ಕೊಡಿಸಿದರು. ಅಲ್ಲಿನ ಸಾಹಿತ್ಯ ಪರಿಷತ್ತಿಗೆ ಆಚಾರ್ ಅಧ್ಯಕ್ಷತೆ ಎರಡನೇ ಅವಧಿಗೂ ಮುನ್ನಡೆದಿದೆ. <
-ಪ. ರಾಮಕೃಷ್ಣ ಶಾಸ್ತ್ರಿ