

ನಾನು ಅಡುಗೆ ಮಾಡುತ್ತೇನೆ
ಹಸಿವ ನೀಗಿಸಲು!
ಹೊತ್ತು ಹೊತ್ತಿಗೆ ಆಮ್ಲವ ಸೃಜಿಸಿ
ಹೊಟ್ಟೆಯ ಕಿಚ್ಚನ್ನು ಹೆಚ್ಚಿಸುವ
ಹಸಿವ ಹೊಡೆದೋಡಿಸಲು
ನಾನು ಅಟ್ಟುತ್ತೇನೆ.
ಕೊನೆಯಿಲ್ಲ ಈ ಹಸಿವಿಗೆ;
ಹಸಿವು, ಹಸಿವಿನ ಹಾಹಾಕಾರ.
ಹಣ, ಹೆಣ್ಣು, ಹುದ್ದೆ-
ಗದ್ದುಗೆಗಳ ಹಸಿವು
ಮನೆ, ಮನ, ಮಠಗಳನೂ
ಬಿಡದೀ ಹಸಿವು.
ನಾನು ಅಟ್ಟುತ್ತೇನೆ
ಹೆಣ್ಣಾಗಿ ಹುಟ್ಟಿರುವುದಕ್ಕೆ
ಹಸಿವಿನ ರೋಷ ನನ್ನಲ್ಲಿ;
ಗಂಡ, ಮಕ್ಕಳು, ಮನೆಮಂದಿಯ
ಹಸಿವಿನ ರೂವಾರಿ ನಾನು;
ಹೆಣ್ಣು ಜನ್ಮದ ಋಣ ಹೆಣಭಾರ
ತಣಿಸಬೇಕು ಎಲ್ಲರ ಹಸಿವು;
ಆಳು-ಕಾಳುಗಳ ಹಂಗಿಲ್ಲ
ಧರ್ಮ ದೇವರುಗಳ ಭಯವಿಲ್ಲ ಎನಗೆ
ಸಂಪೂರ್ಣ ಸ್ವಾವಲಂಬಿ;
ಒಂದೇ ಉಸಿರಿಗೆ ಅಟ್ಟಿಟ್ಟು
ನಿಟ್ಟುಸಿರು ಬಿಡುತ್ತೇನೆ!
ಏನನ್ನಾದರೂ ಸಾಧಿಸುವ ಛಲದಿಂದ!
ನಾನು ಅಟ್ಟುತ್ತೇನೆ
ಅಟ್ಟುತ್ತಾ ಅಟ್ಟುತ್ತಾ ಅರ್ಥೈಸಿಕೊಳ್ಳುತ್ತೇನೆ
ನನಗೂ ಹಸಿವಿದೆ ಎಂದು!
ಹಸಿವು ಇಮ್ಮಡಿ ನೂರ್ಮಡಿಗೊಂಡು
ಕುದಿಯುತ್ತದೆ ಆತ್ಮ ಅಡುಗೆಯೊಂದಿಗೆ,
ಆಗ ಅಟ್ಟುತ್ತೇನೆ ಮತ್ತೆ ಎಡೆಬಿಡದೇ
ಒಂದೇ ಪಟ್ಟು ಹಿಡಿದು,
ಆತ್ಮ ತೃಪ್ತಿಗಾಗಿ.
-ಜಿ.ಆರ್. ಸೌಮ್ಯ