ಏಣಿಯಿಂದ ಬಿದ್ದ ಮೇಲೆ ಯಶಸ್ಸಿನ ಏಣಿ ಏರಿದ!

Updated on: 

ಮನೆಯ ಗೋಡೆಯೊಂದರ ಮೇಲೆ ಎತ್ತರದಲ್ಲಿ ತೂಗು ಹಾಕಿದ್ದ ಆ ಚಿತ್ರ ಪಟವನ್ನು ಬದಲಿಸಲೇಬೇಕಾದ ಸಂದರ್ಭ; ಚಿತ್ರಪಟವು ಕೈಗೆಟುಕದ್ದರಿಂದ ಆ ಕೆಲಸ ನಿರ್ವಹಿಸಲು ಏಣಿ ಏರಬೇಕಾಗಿತ್ತು. ಹಾಗೆ ಏಣಿ ಏರಿದವ ಆಕಸ್ಮಾತ್ ಕಾಲು ಜಾರಿ ನೆಲಕ್ಕೆ ಉರುಳಿದ. ಏಣಿ ಕೂಡಾ ಅವನನ್ನೇ ಹಿಂಬಾಲಿಸಿ ಆತನ ಮೇಲೆ ಮಲಗಿಬಿಟ್ಟಿತ್ತು.
ಹೀಗೆ ಬಿದ್ದವನ ಮನದಲ್ಲಿ ಕಾಡಿದ್ದು ಮೇಲೇಳುವ ಚಿಂತೆಯಲ್ಲ. ಬದಲಿಗೆ ಏಣಿ ಹಾಗೆ ಬೀಳಲು ಕಾರಣವೇನೆಂಬ ಚಿಂತನೆ. ಅಂದಿನಿಂದ ಆ ಹುಡುಗ ಏಣಿಯ ಪತನ ವೈಖರಿಯನ್ನೇ ಧ್ಯಾನಿಸುತ್ತಾ ಕುಳಿತ. ಗಣಿತಶಾಸ್ತ್ರ ರೀತಿಯಾಗಿ ಪತನ ಕ್ರಿಯೆಯನ್ನು ವಿಶ್ಲೇಷಿಸಿ ಗುರುತ್ವಾಕರ್ಷಣ ಸಿದ್ಧಾಂತವನ್ನು ಮತ್ತಷ್ಟು ಹುರಿಗೊಳಿಸಿದ. ಇದು ಮುಂದೆ ವಿಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಯಿತು.
ಈ ಪ್ರಸಂಗದ ಪಾತ್ರಧಾರಿ ಬಾಲ್ಯದಲ್ಲಿ ಶಾಲೆಯ ಒಳಗೆ ಅಂಥಾ ಪ್ರತಿಭೆಯುಳ್ಳ ವಿದ್ಯಾರ್ಥಿ ಅನ್ನಿಸಿಕೊಂಡಿರಲಿಲ್ಲ. ಪದಗಳನ್ನು ಉಚ್ಚರಿಸುವಾಗ ತೊದಲುತ್ತಿದ್ದ ಆತ ಸದಾ ಅಂತರ್ಮುಖಿ. ಈ ಸ್ವಭಾವದಿಂದಾಗಿಯೇ ಆತ ಓರಗೆಯ ಇತರ ಹುಡುಗರೊಂದಿಗೆ ಆಟ- ಪಾಠಗಳಲ್ಲಿ ಜೊತೆಯಾಗುತ್ತಿರಲಿಲ್ಲ. ಶಾಲೆಯ ಆಡಳಿತ ವರ್ಗಕ್ಕೆ ಹುಡುಗನ ಈ ವರ್ತನೆ ಸರಿಕಾಣಲಿಲ್ಲ. ಇವನ ನಡವಳಿಕೆ ಉಳಿದ ಮಕ್ಕಳನ್ನು ಪ್ರಭಾವಿಸುವುದೆಂದು ಭಾವಿಸಿ, ಆತನಿಗೆ ಶಾಲೆ ತೊರೆಯುವಂತೆ ತಿಳಿಸಿದ್ದರು.
ಶಾಲೆಯ ಪಾಠ-ಪ್ರವಚನಗಳು ರುಚಿಸದಿದ್ದರೇನಂತೆ; ಆತನಿಗೆ ಪ್ರಕೃತಿಯೆಡೆಗೆ ವಿಶೇಷ ಒಲವಿತ್ತು. ಅದು ಸುತ್ತಲ ಹಸಿರಲ್ಲಿ ಮೈ ಮರೆಯುವ ಕನಸು. ಪ್ರಕೃತಿ ಪ್ರೇಮಿಯಾಗಿದ್ದ ಆತನಿಗೆ ಸಂಗೀತದ ಒಲವು ಸಾಥ್ ನೀಡಿತ್ತು. ನಾದ ಸುಖದಲ್ಲಿ ಆಗಾಗ ಮೈ ಮರೆಯುವ ಗುಣ ಪೋಷಿಸಿಕೊಂಡೇ ಬಂದಿದ್ದ. ಈ ಸೆಳೆತದಿಂದಾಗಿ ಎಳೆತನದಲ್ಲಿಯೇ ಪಿಟೀಲು ನುಡಿಸುವುದನ್ನು ಕರಗತ ಮಾಡಿಕೊಂಡಿದ್ದ.
ಬೇರೆಯವರು ಅವಗುಣಗಳೆಂದು ಪಟ್ಟಿ ಮಾಡುವ ಇವನ ಯಾವ ವರ್ತನೆಯೂ, ಇವನನ್ನು ಅಧೀರನಾಗಿಸಲಿಲ್ಲ. ಬೆಳೆದು ದೊಡ್ಡವನಾದಂತೆ ಗಣಿತಶಾಸ್ತ್ರ, ಭೌತಶಾಸ್ತ್ರಗಳೆರಡರಲ್ಲೂ ವಿಶೇಷವಾದ ಆಸಕ್ತಿ ರೂಢಿಸಿಕೊಂಡಿದ್ದ. ಈ ವಿಷಯಗಳನ್ನು ಕಲಿಸುವ ಹಂಬಲದಿಂದ ಮುಂದೆ ಉಪಾಧ್ಯಾಯ ವೃತ್ತಿ ಹಿಡಿದು, ಉತ್ತಮ ಬೋಧಕನೂ ಆದ.
ಕಾರಣಾಂತರದಿಂದ ಆ ಕೆಲಸ ತೊರೆಯಬೇಕಾದಾಗ ಮುಂದೆ ಪೇಟೆಂಟ್ ಆಫೀಸಿನಲ್ಲಿ ಉದ್ಯೋಗಿಯಾದ. ಇದು ಆತನ ವೈಜ್ಞಾನಿಕ ಚಿಂತನೆಗೆ ಹೆಚ್ಚಿನ ಅನುಕೂಲವಾಯಿತು. ನಂತರ ಜಡತ್ವ, ಶಕ್ತಿ, ಚಲಿಸುತ್ತಿರುವ ವಸ್ತುಗಳ ವಿದ್ಯುತ್ ಸ್ವಭಾವ ಇವೇ ಮೊದಲಾದ ಗಹನ ವಿಷಯಗಳಿಗೆ ನೂತನ ಪರಿಹಾರ ಸೂಚಿಸಿ ತನ್ನ ಇಪ್ಪತ್ತಾರನೇ ವಯಸ್ಸಿಗೇ ಡಾಕ್ಟರೇಟ್ ಪದವಿ ಪಡೆದ.
ದೇಶ- ಕಾಲಗಳ (ಸ್ಪೇಸ್- ಟೈಮ್) ವಿಷಯವಾಗಿ ಒಂದು ಹೊಸ ಕಲ್ಪನೆಯನ್ನೇ ಪ್ರತಿಪಾದಿಸಿದ. 'ಸಾಪೇಕ್ಷ ಸಿದ್ಧಾಂತ' ಮಂಡಿಸಿ, ಭೌತಶಾಸ್ತ್ರಿಯ ಸಂಶೋಧನೆಯ ಜಗತ್ತಿನಲ್ಲಿ ಮಹತ್ವದ ಮೈಲಿಗಳನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದ. ಮುಂದೆ ದ್ಯುತಿ ವಿದ್ಯುತ್ ಪ್ರಕ್ರಿಯೆಯ (ಫೋಟೋ ಎಲೆಕ್ಟ್ರಿಕ್ ಎಫೆಕ್ಟ್) ಪ್ರಯೋಗಿಕ ಅಂಶಗಳನ್ನು ಕ್ವಾಂಟಂ ಸಿದ್ಧಾಂತದ ಅನ್ವಯ ವಿಶ್ಲೇಷಣೆ ಮಾಡಿದ್ದಕ್ಕಾಗಿ 'ನೊಬೆಲ್ ಬಹುಮಾನ' ಪುರಸ್ಕೃತನೂ ಆದ.
ಆತನ ಸಂಶೋಧನೆಗಳನ್ನು ಕ್ಷಣಕ್ಷಣಕ್ಕೂ ಬೆರಗಿನಿಂದ ನೋಡಿದ ಈ ಲೋಕ, ಈತ ಅಸಾಧಾರಣ ಪ್ರತಿಭಾವಂತನೆಂದು ಜಗತ್ತು ಕೊಂಡಾಡಿತು. ಆದರೆ ಹೊಗಳಿಕೆ ಆತನನ್ನು ಯಾವತ್ತೂ ವಿಚಲಿತಗೊಳಿಸಲಿಲ್ಲ. ಅಸಲಿಗೆ ಪ್ರಶಸ್ತಿ, ಪ್ರಶಂಸೆಗಳು ಆತನಿಗೆ ಇಷ್ಟವೇ ಆಗುತ್ತಿರಲಿಲ್ಲ.
ಒಮ್ಮೆ ರಾಣಿಯ ಆಹ್ವಾನದ ಮೇರೆಗೆ ಅರಮನೆಗೆ ಭೇಟಿಕೊಡುವ ಸಂದರ್ಭ; ರೈಲ್ವೆ ನಿಲ್ದಾಣದಲ್ಲಿ ಗಣ್ಯಾತಿಗಣ್ಯರು ಸ್ವಾಗತಿಸಿ ವೈಭವದಿಂದ ಕರೆದೊಯ್ಯಲು ಕಾಯುತ್ತಿದ್ದರು. ಆತ ಒಂದು ಸಾಧಾರಣ ಉಡುಪು ಧರಿಸಿ, ಒಂದು ಕೈಯಲ್ಲಿ ಪೆಟ್ಟಿಗೆ, ಮತ್ತೊಂದು ಕೈಯಲ್ಲಿ ಪಿಟೀಲು ಹಿಡಿದು, ನಡೆದುಕೊಂಡೇ ಅರಮನೆಯನ್ನು ತಲುಪಿದ. ಸ್ವಾಗತ ಕೋರಲು ಬಂದವರಿಗೆ ಆತನನ್ನು ಗುರುತಿಸಲೇ ಆಗಲಿಲ್ಲ! ಆತ ಅಷ್ಟು ಸರಳ ಹಾಗೂ ನಿಗರ್ವಿಯಾಗಿದ್ದ.
ಇಂತಹ ಮಹಾನ್ ವ್ಯಕ್ತಿ, ರಾಜಕೀಯ ಕಾರಣಗಳಿಗಾಗಿ ತನ್ನ ಕಣ್ಣ ಮುಂದೆಯೇ ವಿನಾಶಕಾರಿ ಅಸ್ತ್ರ (ಅಣುಬಾಂಬ್)ಗಳು ತಯಾರಾದದ್ದು ಕಂಡು ವಿಪರೀತ ಸಂಕಟಪಟ್ಟ. ಪರಮಾಣು ಯುದ್ಧವಾದರೆ ಅದರಿಂದ ಮನುಕುಲದ ಸರ್ವನಾಶವೆಂದ ಆತ; ಅಣು ವಿಜ್ಞಾನವನ್ನು ಜಾಗತಿಕ ಶಾಂತಿ, ಹಾಗೂ ಮನುಕುಲದ ಒಳಿತಿಗಾಗಿಯೇ ಉಪಯೋಗಿಸಬೇಕೆಂದ. ಜೀವಮಾನದುದ್ದಕ್ಕೂ ಸ್ನೇಹ- ಶಾಂತಿಯನ್ನು ಪ್ರತಿಪಾದಿಸಿದ ಆ ಮಹಾನ್ ವಿಜ್ಞಾನಿಯೇ 'ಅಲ್ಬರ್ಟ್ ಐನ್‌ಸ್ಟೈನ್‌'.

- ಹೊಸ್ಮನೆ ಮುತ್ತು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com