ಮಕರಂದ/ದೋಣಿ

ಇಲ್ಲೆ ಕೊಡವರ ನಾಡಲಾ!

ಕಾವೇರಿ ನಾಡಿನಲ್ಲಿ ಸಾಹಿತ್ಯದ ಸೇವೆಯೂ ಶತಮಾನಗಳಿಂದ ಸಾಗಿ ಬಂದಿದೆ. ಅಧಿಕೃತ ದಾಖಲೆಗಳ ಪ್ರಕಾರ, ವೆಂಕಟಾದ್ರಿ ...

ಇಲ್ಲೆ ಕೊಡವರ ನಾಡಲಾ!
Published On :

ಕಾವೇರಿ ನಾಡಿನಲ್ಲಿ ಸಾಹಿತ್ಯದ ಸೇವೆಯೂ ಶತಮಾನಗಳಿಂದ ಸಾಗಿ ಬಂದಿದೆ. ಅಧಿಕೃತ ದಾಖಲೆಗಳ ಪ್ರಕಾರ, ವೆಂಕಟಾದ್ರಿ ಶಾಮರಾವ್ ಮತ್ತು ನಾಗವರ್ಮ ಕೊಡಗಿನಲ್ಲಿ ಸಾಹಿತ್ಯ ಕೃಷಿಗೆ ಬುನಾದಿ ಹಾಕಿದ್ದರು. ಕಿಟೆಲ್ ಕನ್ನಡ ಅರ್ಥಕೋಶದ ರಚನೆಕಾರ ರೆ. ಜಾರ್ಜ್ ಫರ್ಡಿನೆಂಡ್ ಕಿಟಲ್ ಅವರು ಕೂಡ ಕೊಡಗಿನಲ್ಲಿ ಸೇವೆ ಸಲ್ಲಿಸಿದ್ದು ಸ್ಮರಣೀಯ.
ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ, ನಡಿಕೇರಿಯಂಡ ಚಿಣ್ಣಪ್ಪ, ಐ.ಮಾ. ಮುತ್ತಣ್ಣ, ಬಿ.ಡಿ. ಗಣಪತಿ, ಕಾಕೆಮಾನಿ, ಡಿ.ಎನ್. ಕೃಷ್ಣಯ್ಯ, ಭಾರತೀಸುತ, ಕೊಡಗಿನ ಗೌರಮ್ಮ ಮತ್ತಿತರರು ಸಾಹಿತ್ಯ ಕೃಷಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕೊಡಗಿನ ರಾಜರ ಕಾಲದಲ್ಲಿ ದೊಡ್ಡವೀರರಾಜೇಂದ್ರನು ರಾಜೇಂದ್ರ ನಾಮೆ ಕೃತಿಯನ್ನು  ರಚನೆ ಮಾಡಿಸಿ, ಹತ್ತು ಹಲವು ವಿಧದ ಕಾನೂನು ಕಟ್ಟಲೆಗಳನ್ನು ಜಾರಿಗೆ ತಂದಿದ್ದರು. ಕೊಡಗಿನ ಬಗ್ಗೆ ಜಿ. ರಿಟ್ಟರ್ ಬರೆದ ಕೊಡಗಿನ ಗೆಜಟಿಯರ್, ಡಿ.ಎನ್. ಕೃಷ್ಣಯ್ಯ ಅವರ ಕೊಡಗಿನ ಇತಿಹಾಸ ಕೃತಿಗಳು  ಇಂದಿಗೂ ಕೊಡಗಿನ ಇತಿಹಾಸದ ಬಗ್ಗೆ ಬೆಳಕು ಚೆಲ್ಲುವ ಅಧಿಕೃತ ಆಕರ ಗ್ರಂಥಗಳಾಗಿವೆ.
ಐ.ಮಾ. ಮುತ್ತಣ್ಣ ಮತ್ತು ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಕೆ.ಸಿ. ಪೊನ್ನಪ್ಪ ಅವರ ಕೃತಿಗಳು ಕೂಡ ಕೊಡಗಿನಲ್ಲಿ ಕೊಡವ ಜನಾಂಗದ ಏಳಿಗೆ ಮತ್ತು ಭಾರತೀಯ ರಕ್ಷಣಾ ಪಡೆಗಳಲ್ಲಿ ಕೊಡವರ ಸಾಧನೆಯ ಬಗ್ಗೆ ನೀಡಿದ ದಾಖಲೆಗಳು ಅತ್ಯಮೂಲ್ಯ ಆಧಾರಗಳಾಗಿವೆ. ಕೊಡಗಿನ ನಾಡಗೀತೆ ಎಂದೇ ಖ್ಯಾತಿಗಳಿಸಿದ ಎಲ್ಲಿ ಭೂರಮೆ ಬಯಸಿ ಬಿಮ್ಮನೆ ಬಂದಳೋ.. ಎಂಬ ಗೀತೆಯಲ್ಲಿ ಕೊಡಗಿನ ಪ್ರಕೃತ್ತಿ ಸೌಂದರ್ಯ, ವೀರ ಪರಂಪರೆ, ಕ್ಷಾತ್ರ ತೇಜಸ್ಸಿನ ಬಗ್ಗೆ ಹುತ್ತರಿ ಹಾಡಿನ ಮೂಲಕ ಬಿಂಬಿಸಿದ ಪಂಜೆ ಮಂಗೇಶರಾಯರು ಅಂದಿನ ಸೆಂಟ್ರಲ್ ಹೈಸ್ಕೂಲ್‌ನ ಪ್ರಥಮ ಭಾರತೀಯ ಮುಖ್ಯೋಪಾಧ್ಯಾಯರಾಗಿದ್ದು ವಿಶೇಷ. ಕುವೆಂಪು, ಜಿ.ಪಿ. ರಾಜರತ್ನಂ, ಜಿ.ಎಸ್. ಶಿವರುದ್ರಪ್ಪ ಸೇರಿದಂತೆ ಅನೇಕರು ತಮ್ಮ ಕವನಗಳಲ್ಲಿ ಕೊಡಗಿನ ಸೌಂದರ್ಯ ಬಿಂಬಿಸಿದ್ದಾರೆ. ಅದರಲ್ಲಿಯೂ ಜಿ.ಪಿ. ರಾಜರತ್ನಂ ಅವರ ಮಡಿಕೇರಿ ಮೇಲ್ಮಂಜು ನಿತ್ಯನೂತನ ಗೀತೆಯಾಗಿದೆ. ಈಗಲೂ ಸಾಕಷ್ಟು ಲೇಖಕರು ಕೊಡಗಿನಲ್ಲಿ ಸಾಹಿತ್ಯ ಲೋಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಕೊಡಗಿನ ಸೇನಾ ಪರಂಪರೆ


ಕೊಡಗಿನ ಬಗ್ಗೆ ಹೇಳುವಾಗ ಮರೆಯಲೇಬಾರದ ಅಂಶ ಇಲ್ಲಿನ ಸೇನಾ ಪರಂಪರೆ. 1174 ನೇ ಇಸವಿಯಲ್ಲಿ ಕಂಡುಬಂದ ಹುಣಸೂರು ಸಮೀಪದ ವಾಲ್ಪರೆ ಶಾಸನದಲ್ಲಿ ಕೊಡವ ಸೇನಾನಿಗಳು ಪಾಲ್ಗೊಂಡ ಉಲ್ಲೇಖವಿದೆ. ಅಂದಿನಿಂದ ಇಂದಿನವರೆಗೆ ಕೊಡಗಿನವರು ಸಾವಿರಾರು ಸಂಖ್ಯೆಯಲ್ಲಿ ಸೇನೆಯಲ್ಲಿ ಕರ್ತವ್ಯ ಸಲ್ಲಿಸಿದ್ದಾರೆ.  ರಾಜರು, ಬ್ರಿಟಿಷರ ಕಾಲದಲ್ಲಿ ಕೊಡಗಿನ ಮಂದಿ ಯುದ್ದದಲ್ಲಿ ಮತ್ತು ನಾಡಿನ ರಕ್ಷಣೆಗಾಗಿ ಸೇವೆ ಸಲ್ಲಿಸಿದ್ದಾರೆ. ಸ್ವತಂತ್ರ್ಯ ಭಾರತದಲ್ಲಿ ಮೊಟ್ಟಮೊದಲ ಭಾರತೀಯ ಜನರಲ್ ಆದ ಖ್ಯಾತಿ ಕೊಡಗಿನ ಪ್ರಾತಃಸ್ಮರಣೀಯರಲ್ಲಿ ಒಬ್ಬರಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಸಲ್ಲುತ್ತದೆ. ಕಾರ್ಯಪ್ಪ ಅವರ ಮನೆಯವರೇ  (ಕೊಡಂದೇರ) ಆದ ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಕೂಡ ಭಾರತೀಯ ಸೇನೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದು, ಕೊಡಗಿನ ಇತಿಹಾಸದಲ್ಲಿ ಅಜರಾಮರ ದಾಖಲೆ. ವಿಶೇಷ ಎಂದರೆ, ಭಾರತೀಯ ಸೇನಾ ಪರಂಪರೆಯಲ್ಲಿ ಕೇವಲ ಇಬ್ಬರು ಫೀಲ್ಡ್ ಮಾರ್ಷಲ್‌ಗಳಾಗಿದ್ದು ಅವರಲ್ಲಿ ಕೊಡಗಿನ ಕಾರ್ಯಪ್ಪ ಎಂಬುದು ಈ ನಾಡಿನ ಹೆಮ್ಮೆ.
ಜನರಲ್ ಕಾರ್ಯಪ್ಪ ಭಾರತೀಯ ಅಂಚೆ ಇಲಾಖೆಯಲ್ಲಿ ಅಂಚೆ ಚೀಟಿಯ ಮೂಲಕ ಮೂಡಿ ಬಂದ ಕೊಡಗಿನ ಏಕೈಕ ವ್ಯಕ್ತಿ. ಕಾರ್ಯಪ್ಪ ಜನವರಿ 15, 1949 ರಂದು ಭಾರತೀಯ ಸೇನಾ ಪಡೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ದಿನವನ್ನು ಇಂದಿಗೂ ಸೇನಾ ದಿನವೆಂದು ಪ್ರತೀ ವರ್ಷ ಆಚರಿಸಲಾಗುತ್ತಿದೆ. ಈ ಪರಂಪರೆಯಲ್ಲಿ ಹಾದು ಬಂದ ಸಹಸ್ರಾರು ಯೋಧರು ಮತ್ತು ಅಧಿಕಾರಿಗಳ ಪಟ್ಟಿಯಲ್ಲಿ ಈವರೆಗೆ ಕೊಡಗಿನಿಂದ ಇಬ್ಬರು ಮಹಾವೀರ ಚಕ್ರ ಪ್ರಶಸ್ತಿ ಭಾಜನರಾಗಿದ್ದಾರೆ. 1965 ರಲ್ಲಿ ಭಾರತ- ಪಾಕ್ ಯುದ್ದದ ಸಂದರ್ಭದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಅಪ್ರತಿಮ ಸಾಹಸಿ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ಮತ್ತೋರ್ವರು ಭಾರತೀಯ ಭೂ ಸೇನೆಯ ಶಾಂತಿಪಾಲನಾ ಪಡೆಯಲ್ಲಿ ಶ್ರೀಲಂಕಾದಲ್ಲಿ ಕಾರ್ಯಾಚರಣೆ ನಡೆದ ಸಂದರ್ಭ ತೋರಿದ ಅಪ್ರತಿಮ ಸಾಹಸಕ್ಕೆ ಲೆಪ್ಟಿನೆಂಟ್ ಕರ್ನಲ್ ಪುಟ್ಟಿಚಂಡ ಎಸ್. ಗಣಪತಿ. ಈವರೆಗೆ ಭಾರತೀಯ ಭೂ ಸೇನೆಯಲ್ಲಿ ಕೊಡಗಿನಿಂದ 5  ಲೆಫ್ಟಿನೆಂಟ್ ಜನರಲ್‌ಗಳು, 17 ಮಂದಿ ಮೇಜರ್ ಜನರಲ್‌ಗಳು, 4 ಮಂದಿ ಏರ್ ಮಾರ್ಷಲ್‌ಗಳು, ಓರ್ವ ಏರ್ ವೈಸ್ ಮಾರ್ಷಲ್ ಹಾಗೂ ಇಬ್ಬರು ಕಮಾಂಡರ್‌ಗಳಾಗಿದ್ದು ಕೊಡಗಿನ ಸೇನಾ ಪರಂಪರೆಯ ಕಿರೀಟಕ್ಕೆ ಹೆಮ್ಮೆಯ ಗರಿಯಾಗಿದೆ.  ಕೊಡಗಿನ ಪ್ರತೀ ಮನೆಯಲ್ಲಿಯೂ ಸೇನಾ ಪರಂಪರೆಯನ್ನು ಪ್ರತಿಬಿಂಬಿಸುವ ವೀರ ಯೋಧರಿದ್ದಾರೆ. ಹೀಗಾಗಿಯೇ ಕೊಡಗು ಧೀರರ ನಾಡು ಎಂದೇ ಖ್ಯಾತಿ ಪಡೆದಿದೆ.


ಎಚ್.ಟಿ.ಅನಿಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.