ಮಕರಂದ/ದೋಣಿ

ತೆಲುಗಿನಲ್ಲಿ ತುಳು ಕವಿತ

ತುಳು ಕವನಗಳಿಗೆ ಸಂಬಂಧಪಟ್ಟಂತೆ ತೆಲುಗಿನಲ್ಲಿ ನಡೆದ ಚೊಚ್ಚಲ ಪ್ರಯತ್ನ 'ಕವಿತ' ಜುಲೈ 2013ರ ಸಂಚಿಕೆಯಲ್ಲಿದೆ...

ತೆಲುಗಿನಲ್ಲಿ ತುಳು ಕವಿತ
Published On :

ತುಳು ಕವನಗಳಿಗೆ ಸಂಬಂಧಪಟ್ಟಂತೆ ತೆಲುಗಿನಲ್ಲಿ ನಡೆದ ಚೊಚ್ಚಲ ಪ್ರಯತ್ನ 'ಕವಿತ' ಜುಲೈ 2013ರ ಸಂಚಿಕೆಯಲ್ಲಿದೆ. ಕವಿತೆಗಳಿಗಾಗಿಯೇ ಮೀಸಲಾದ ತೆಲುಗಿನ ಪತ್ರಿಕೆ ಕವಿತ. ಇದನ್ನು ಪ್ರಕಟಿಸುತ್ತಿರುವವರು ಆಂಧ್ರಪ್ರದೇಶದ ವಿಜಯವಾಡದ ಶ್ರೀಶ್ರೀ ಪ್ರಕಾಶನ(ಸಾಹಿತಿ ಮಿತ್ರುಲು). ಅಪಾರ ಸಾಹಿತ್ಯ ಪ್ರೀತಿಯನ್ನು ಹೊಂದಿರುವ, ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸಮಾನ ಮನಸ್ಕ ಲೇಖಕರು ಕವಿಗಳ ಬಳಗವಿದು. ಇದುವರೆಗೆ ಪತ್ರಿಕೆಯ 19 ಸಂಚಿಕೆಗಳು ಪ್ರಕಟವಾಗಿದ್ದು ಟಿ.ಎಸ್.ಎಲಿಯಟ್‌ನ 'ದಿ ವೇಸ್ಟ್‌ಲ್ಯಾಂಡ್‌' ಕವಿತೆಯ ತೆಲುಗು ಅನುವಾದ, ಆಸ್ಕರ್ ವೈಲ್ಡ್‌ನ 'ದಿ ಬಲ್ಲಾಡ್ ಆಫ್ ರೀಡಿಂಗ್ ಗೋಲ್‌'ನ ಅನುವಾದಗಳು ಇತ್ತೀಚಿನ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ವಿಶ್ವೇಶ್ವರ ರಾವ್ ಇದರ ನಿರ್ವಾಹಕ ಸಂಪಾದಕ, ಖಾದರ್ ಮೊಹಿದ್ದೀನ್ ಸಂಪಾದಕ.
ಇಪ್ಪತ್ತನೇ ಸಂಚಿಕೆಯು ತುಳು ಕವನಗಳನ್ನು ತೆಲುಗು ಓದುಗರಿಗೆ ಮೊತ್ತಮೊದಲ ಬಾರಿ ಪರಿಚಯಿಸಿದೆ. ಇದರಲ್ಲಿ ಕಯ್ಯಾರ ಕಿಞಣ್ಣ ರೈ, ಪ್ರೊ.ಅಮೃತ ಸೋಮೇಶ್ವರ, ಪಾ.ವೆಂ.ಆಚಾರ್ಯ, ಡಾ.ಸುನೀತಾ ಶೆಟ್ಟಿ, ಡಾ.ವೆಂಕಟರಾಜ ಪುಣಿಂಚತ್ತಾಯ, ಕೆ.ಟಿ.ಗಟ್ಟಿ, ಡಾ.ವಾಮನ ನಂದಾವರ, ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ , 'ಕಿರಣ'ಕುತ್ಯಾಳ ನಾಗಪ್ಪ ಗೌಡ, ಡಾ. ವಸಂತಕುಮಾರ್ ಪೆರ್ಲ, ಕೋಡು ಭೋಜ ಶೆಟ್ಟಿ, ಡಾ.ಕಬ್ಬಿನಾಲೆ ವಸನ್ತ ಭಾರದ್ವಾಜ್ ಮುಂತಾದವರ ಒಟ್ಟು ಇಪ್ಪತ್ತಮೂರು ಕವನಗಳಿವೆ. ಇದೊಂದು ಪ್ರಯೋಗಾತ್ಮಕವಾಗಿ ನಡೆದ ಅನುವಾದ ಪ್ರಕ್ರಿಯೆಯಾಗಿದ್ದು ಅನುವಾದದ ಮೂಲಕ ತೆಲುಗು ಓದುಗರಿಗೆ ತುಳು ಕವಿತೆಯನ್ನು ಪರಿಚಯಿಸುವ ಪ್ರಾಥಮಿಕ ಪ್ರಯತ್ನವಾಗಿದೆ. ಸಾಂದರ್ಭಿಕವಾಗಿ ಆಯ್ದುಕೊಂಡ ಕವನಗಳಿವು. ಅರ್ಥ, ಭಾವಗಳಿಗೆ ಇಲ್ಲಿ ಒತ್ತು ನೀಡಲಾಗಿದೆ. ಆಂಧ್ರದ ಖಮ್ಮಂನಲ್ಲಿರುವ ತೆಲುಗಿನ ಕವಿ, ಲೇಖಕ, ಸಹಾಯಕ ಪ್ರಾಧ್ಯಾಪಕ ಡಾ.ಸೀತಾರಾಂ ಮತ್ತು ಕುಪ್ಪುಂ ದ್ರಾವಿಡ ವಿವಿಯ ಡಾ.ಎಂ.ಎಸ್.ದುರ್ಗಾಪ್ರವೀಣ್ ಈ ಕವನಗಳ ಅನುವಾದಕರು.
ಮಂಗಳೂರಿನ ಕಲಾವಿದ ಎಂ.ಜಿ.ಕಜೆಯವರ ಅರ್ಥವತ್ತಾದ ಚಿತ್ರ ಮುಖಪುಟದಲ್ಲಿದೆ. ಸಂಪಾದಕೀಯದಲ್ಲಿ ತುಳು ಭಾಷೆ ಸಂಸ್ಕೃತಿಯ ಸ್ಥೂಲ ಪರಿಚಯವಿದ್ದು ಒಳಪುಟಗಳಲ್ಲಿ ಡಾ.ನಂದಾವರ ಅವರ ಸಂಗ್ರಹದ ಹಲವು ಫೋಟೋಗಳನ್ನು ಸಾಂದರ್ಭಿಕವಾಗಿ ಬಳಸಿಕೊಳ್ಳಲಾಗಿದೆ. ವಿವಿಧ ಭಾಷಾ ಸಾಹಿತ್ಯಗಳಂತೆಯೇ ದ್ರಾವಿಡ ಭಾಷೆ ಸಾಹಿತ್ಯ ಸಂಸ್ಕೃತಿಗಳ ನಡುವಿನ ಬಾಂಧವ್ಯವೂ ಅರ್ಥಪೂರ್ಣವಾಗಿ ಬೆಳೆಯಬೇಕು ಮತ್ತು ಅಜ್ಞಾತ ಜಗತ್ತೊಂದು ತಮ್ಮ ಓದುಗರಿಗೆ ಪರಿಚಯವಾಗಬೇಕು ಎಂಬುದು ಪ್ರಕಾಶಕರ ಆಶಯವಾಗಿದೆ. ಮೂಲ ಮತ್ತು ಅನುವಾದವನ್ನು ಡಾ. ಶಿವಕುಮಾರ್ ಭರಣ್ಯ ಪರಿಶೀಲಿಸಿದ್ದರು.

- ಡಾ.ಎಂ.ಎಸ್.ದುರ್ಗಾಪ್ರವೀಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.