ಮಕರಂದ/ದೋಣಿ

ನನ್ನ ಇಬ್ಬರು ಮೇಷ್ಟರು

ನನ್ನ ಇಬ್ಬರು ಪ್ರಿಯ ಮೇಷ್ಟ್ರುಗಳು ಒಂದೇ ವಾರದಲ್ಲಿ ನಿಧನರಾಗಿದ್ದಾರೆ. ಅವರಿಬ್ಬರು ಪ್ರೊ. ಎಸ್. ಆರ್. ಮಳಗಿ ಮತ್ತು ಜಿಎಸ್ಸೆಸ್. ..

ನನ್ನ ಇಬ್ಬರು ಮೇಷ್ಟರು
Published On :

ನನ್ನ ಇಬ್ಬರು ಪ್ರಿಯ ಮೇಷ್ಟ್ರುಗಳು ಒಂದೇ ವಾರದಲ್ಲಿ ನಿಧನರಾಗಿದ್ದಾರೆ. ಅವರಿಬ್ಬರು ಪ್ರೊ. ಎಸ್. ಆರ್. ಮಳಗಿ ಮತ್ತು ಜಿಎಸ್ಸೆಸ್.
ಮೇಷ್ಟರುಗಳ ಮೇಷ್ಟರೆಂದೇ ಗೌರವಾನ್ವಿತರಾದ ಪ್ರೊ. ಎಸ್.ಆರ್. ಮಳಗಿ 103 ವರ್ಷ ನಮ್ಮೊಡನೆ ಬದುಕಿದ್ದರೂ ಅವರ ಶತಾಯುಸ್ಸು ಕೆಲವರನ್ನಷ್ಟೇ ಕೊಂಡಾಡ ಹವಣಿಸುವ ಯಾರಿಗೂ ವಿಶೇಷ ಎನಿಸಲೇ ಇಲ್ಲ. ಮಳಗಿ ಮೇಷ್ಟರು ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಗೌರವ ಪ್ರಾಧ್ಯಾಪಕರಾಗಿದ್ದರು. ಆಗ ಅವರು ನಮಗೆ ಎಂಎ ತರಗತಿಯ ಒಂದು ಸೆಮಿಸ್ಟರ್‌ನಲ್ಲಿ ಛಂದಸ್ಸು ಪಾಠ ಹೇಳಿದ್ದರು. ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರನ್ನು ಬಿಟ್ಟರೆ ಹಳಗನ್ನಡ ಪದ್ಯ ಜಾತಿಗಳ ಛಂದೋವಿಲಾಸಗಳನ್ನು ಈಗಿನ ಹುಡುಗರಿಗೆ ಒಂದಿಷ್ಟಾದರೂ ಮನಂಬುಗುವಂತೆ ಪಾಠ ಹೇಳುವ ಅನುಭವ ಹಾಗೂ ಒಲವಿದ್ದವರು ಆಗ ಬೇರೆ ಇದ್ದಂತಿರಲಿಲ್ಲ. ಬಹಶಃ ಈ ಕೊರತೆಯನ್ನು ತುಂಬುವುದಕ್ಕಾಗಿಯೇ ಕೇಂದ್ರದ ನಿರ್ದೇಶಕರಾಗಿದ್ದ ಪ್ರೊ. ಜಿ ಎಸ್.ಶಿವರುದ್ರಪ್ಪ ಅವರು ಅದಾಗಲೇ ನಿವೃತ್ತರಾಗಿದ್ದ ಪ್ರೊ. ಮಳಗಿ ಅವರನ್ನ ಪುನರ್ನೇಮಕ ಮಾಡಿಕೊಂಡಿದ್ದರು.
ಅದಾಗಲೇ ಹಿರಿಯರೆನಿಸಿದ್ದ, ಹೆಸರಾಗಿದ್ದ ಕೆಲ ಗುರುಗಳಿಗೂ ಇವರು ಪಾಠ ಹೇಳಿದ್ದವರೆಂಬ ಸುಳಿವು ಸಿಕ್ಕಮೇಲೆ ಹಿರಿತನಕೆ ನಮ್ಮದೂ ಒಂದು ಶರಣು ಎಂದುಕೊಳ್ಳುತ್ತಿದ್ದೆವು. ನಮ್ಮ ಪ್ರೀತಿಯ ಕಿರಂ ಅಂತಹ ಗುರುಗಳೂ ಮಳಗಿ ಮೇಷ್ಟರನ್ನು ಬಹು ಗೌರವದಿಂದ ಮಾತಾಡಿಸುತ್ತಿದ್ದುದು, ನಾವೂ ಅದೇ ಬಗೆಯಲ್ಲಿರಬೇಕೆಂಬುದರ ಎಚ್ಚರಿಕೆಯಾಗಿತ್ತು. ಇಷ್ಟಾಗಿಯೂ, ಅವರ ಛಂದಸ್ಸನ್ನು ಪ್ರೀತಿಯಿಂದ ಆಲಿಸಿದವರು ಹೆಚ್ಚೇನೂ ಇರಲಿಲ್ಲ ಎಂದರೆ ಅದು ಅಸಡ್ಡೆಯ ಮಾತೇನೂ ಅಲ್ಲ. 'ಈ ಕಾಲದ ಹುಡುಗರು ಹಳಗನ್ನಡ ಕಾವ್ಯ-ಛಂದಸ್ಸು ಬಗ್ಗೆ ನಿರ್ಲಕ್ಷ್ಯ ಮಾಡುತ್ತೀರಿ. ನಮ್ಮ ಕಾಲ ಹೀಗಿರಲಿಲ್ಲ...' ಎಂದು ಒಮ್ಮೆ ಕ್ಲಾಸಿನಲ್ಲಿ ಅದನ್ನೂ ಕಕ್ಕುಲತೆಯಿಂದಲೇ ಹೇಳಿಕೊಂಡಿದ್ದರು. ವೃತ್ತ ಜಾತಿಗಳ ಲಯ, ಗಣ ವಿನ್ಯಾಸಗಳ ಸೊಗಸನ್ನು ಹೀಗಾದರೂ ಅರಿತು ಪಾಠ ಕಲಿಯಲಿ- ಎಂದು ಕೆಲವೊಮ್ಮೆ ರಾಗವಾಗಿ ಹಾಡಿ, ಆಕರ್ಷಿಸುವ ಕೆಲಸ ಮಾಡಿದರೂ, ಕೆಲವರು ಮೇಜು ಕುಟ್ಟಿ ತಾಳ ಹಾಕಿದರೂ ಆ ಛಂದಸ್ಸನ್ನು ತಲೆಗೆ ತುಂಬಿಕೊಂಡವರು ಯಾರೂ ಇದ್ದಿರಲಾರರು.
ಪ್ರೊ. ಮಳಗಿ ಮೇಷ್ಟರು ಅದೆಷ್ಟು ಬಾರಿ ಗೌರವ ಪ್ರಾಧ್ಯಾಪಕರಾಗಿ ನೇಮಕವಾಗಿ, ನಿವೃತ್ತರಾಗಿದ್ದರೋ ಆ ಬಳಿಕವಂತೂ ಮತ್ತೆ ಸಂಪರ್ಕವಿರಲಿಲ್ಲ. ಆದರೆ ಅವರ ನೆನಪು ಮಾತ್ರ ನನ್ನಲ್ಲಿ ಹಸಿರಾಗಿದೆ. ಹಳಗನ್ನಡ ಸಾಹಿತ್ಯಕ್ಕೆ ಸಂಬಂಧಿಸಿ ಕೆಲವೊಂದು ಕೃತಿಗಳನ್ನೂ ರಚಿಸಿದ್ದ ಪ್ರೊ. ಮಳಗಿ ಅವರು ನೂರನೇ ವಯಸ್ಸಿಗೆ ಕಾಲಿಟ್ಟಾಗ ಒಂದು ಪತ್ರಿಕೆ ಪ್ರಾಸ್ತಾವಿಕವಾಗಿ ನಾಲ್ಕು ಸಾಲು ಬರೆದದ್ದು ಬಿಟ್ಟರೆ, ಬೇರಾವ ಪ್ರಸ್ತಾಪವೂ ಮಾಧ್ಯಮಗಳಲ್ಲಾಗಲೀ, ಇತರರಿಂದಾಗಲೀ ಆಗಲಿಲ್ಲ.
ನಾನು ಕೃತಜ್ಞತೆಯಿಂದ ಸ್ಮರಿಸಬೇಕಾದವರು ಪ್ರೊ.ಜಿ.ಎಸ್. ಶಿವರುದ್ರಪ್ಪ ಅವರು. ಅವರ ಪಾಠಕ್ಕಿಂತ ಮಿಗಿಲಾಗಿ ನನ್ನ ಮನಸ್ಸಲ್ಲಿ ಸದಾ ಉಳಿದದ್ದು ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿ ಅವರು ನನಗೆ ನೀಡಿದ ಎರಡು ವಿಶೇಷ ಅವಕಾಶ.
ಒಂದು, ಆಗಲೇ ವಿದ್ಯಾರ್ಥಿಗಳ ಸಂಖ್ಯೆ ತುಂಬಿದ್ದರೂ ನನಗೆ ಜಾನಪದ ವಿಷಯದ ಆಯ್ಕೆಗೆ ಅವಕಾಶ ನೀಡಿದ್ದು. ಇನ್ನೊಂದು, ವಿವಿ ವತಿಯಿಂದ ಕ್ಯಾಂಟೀನ್‌ನಲ್ಲಿ ಪ್ರಾಯೋಜಿತವಾಗಿದ್ದ ಉಪಾಹಾರ ಯೋಜನೆಯನ್ನು ಒದಗಿಸಿದ್ದು. ಇದರ ಹೊರತಾಗಿ ಜಿಎಸ್ಸೆಸ್ ಜತೆ ನಮ್ಮ ಸಂಪರ್ಕ ತೀರಾ ಕಡಿಮೆ, ತರಗತಿಯ ಹೊರತಾಗಿ. ಅವರ ತರಗತಿಯಲ್ಲಿ ಎಲ್ಲ ವಿದ್ಯಾರ್ಥಿಗಳೂ ಶಿಸ್ತಿನ ಸಿಪಾಯಿಗಳು. ಕಾವ್ಯ ಮೀಮಾಂಸೆ ಪಾಠ ಮಾಡುತ್ತಿದ್ದರು. ತರಗತಿಯಲ್ಲಿ ಅನವಶ್ಯಕ ಮಾತು, ಉಪೋದ್ಘಾತಗಳಿಗೆ ಅವಕಾಶವಿಲ್ಲ.
ಇಂತಹ ನನ್ನ ಪ್ರಿಯ ಗುರುವಿಗೆ, ಜಾನಪದ ಕ್ಷೇತ್ರದಲ್ಲಿ ಯಾವ ಸಾಧನೆ ಮಾಡಿದ್ದೇನೆಂಬುದನ್ನು, ಅವಕಾಶದ ಸದುಪಯೋಗ ಮಾಡಿದ್ದೇನೆಂಬುದನ್ನು ಒಮ್ಮೆ ಅವರಿಗೆ ನನ್ನ ಕೃತಿಗಳನ್ನು ನೀಡಿ ಮನವರಿಕೆ ಮಾಡಬೇಕೆಂಬ ಅಪೇಕ್ಷೆ ನನ್ನಲ್ಲಿತ್ತು. ಸಾಂದರ್ಭಿಕವಾಗಿ ಭೇಟಿಯಾಗಿದ್ದಾಗ, ಪುತಿನ ಅವರ ಸಮಗ್ರ ಸಂಪುಟಗಳ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರು. ಅದಾದ ಕೆಲವು ಕಾಲಕ್ಕೆ ಅನಾರೋಗ್ಯಕ್ಕೆ ತುತ್ತಾದರು. ಇನ್ನು ಯಾವುದಕ್ಕೂ ಅವಕಾಶವಿಲ್ಲ. ಜಿಎಸ್ಸೆಸ್ ಅವರ ಗುರು ಕುವೆಂಪು ಬರೆದ ಕಾವ್ಯ ಓದಿ ಹರಸಲು ವೆಂಕಣ್ಣಯ್ಯ ಅವರಿದ್ದರು. ಜಿಎಸ್ಸೆಸ್ ಎದೆ ತುಂಬಿ ಹಾಡಿದ ಭಾವಗೀತೆ ಕೇಳಲು ಅವರ ಗುರು ತ.ಸು. ಶಾಮರಾಯರಿದ್ದರು. ಆದರೆ, ನನ್ನ ಅಧ್ಯಯನಗಳನ್ನು ಓದಲು ನನ್ನ ಗುರು ಜಿಎಸ್ಸೆಸ್ ಕೊನೆಗೂ ಸಿಗಲಿಲ್ಲ.

- ಡಾ.ಟಿ. ಗೋವಿಂದರಾಜು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.