ಕರಗಿದ ತರಾಸು ನೆರಳು
ತರಾಸು ಅವರಿಗೆ ಕೊನೆಯ ದಿನಗಳಲ್ಲಿ ನೆರಳಾದವರು ನಾ. ಪ್ರಭಾಕರ ಅವರು....

ತರಾಸು ಅವರಿಗೆ ಕೊನೆಯ ದಿನಗಳಲ್ಲಿ ನೆರಳಾದವರು ನಾ. ಪ್ರಭಾಕರ ಅವರು. ಮೊನ್ನೆ ಜನವರಿ 1ರಂದು ಆ ನೆರಳೂ ಕರಗಿ ಹೋಯಿತು. ಈ ನೆನಪಿನಲ್ಲಿ ಹೀಗೊಂದು ಲೇಖನ...
ಆಗ ತರಾಸುಗೆ ಅಲ್ಸರ್ ಅಂಟಿತ್ತು. ಮನಸ್ಸಿಗೆ ಮತ್ತು ದೇಹಕ್ಕೆ ವಿಶ್ರಾಂತಿ ಅತ್ಯಗತ್ಯ ಅಂತ ವೈದ್ಯರೂ ಹೇಳಿದ್ದರು. ಹೀಗಾಗಿ ಅವರು ಮೈಸೂರಿನ 'ಗಿರಿ ಕನ್ನಿಕಾ'ದ ಕಾಂಪೌಂಡಿನಲ್ಲೇ ಒಂದಿಪ್ಪತ್ತು ಹೆಜ್ಜೆ ಸುತ್ತಾಡಿಕೊಂಡು ತಮ್ಮ ಆಕ್ಮಕಥೆ ಬರೆಯುವುದರ ಬಗ್ಗೆ ಚಿಂತಿಸುತ್ತಿದ್ದರು. ಬೆಳಗಿನ ಸೂರ್ಯನ ಶಾಖಕ್ಕೆ ಮೈಯ್ಯೊಡ್ಡಿ ಕಾಂಕ್ರೀಟ್ ಬೆಂಚಿನ ಮೇಲೆ ಕೂತಿರುತ್ತಿದ್ದರು.
ಅವರ ಆತ್ಮಕಥೆ 'ಹಿಂತಿರುಗಿ ನೋಡಿದಾಗ' ತಾವು ಯಾರು? ಮತ್ತು ತಮ್ಮ ನೆರಳಿನ ಬಗ್ಗೆ ಪ್ರಸ್ತಾಪಿಸುತ್ತಾರೆ. ತಾವು ಯಾರು ಎಂಬುದಕ್ಕೆ ಬರೀ ಬಯೋಡೇಟಾ ಸಾಕೆ? ಎಂದು ಪ್ರಶ್ನಿಸಿಕೊಂಡು, ಹಾಗಾದರೆ ತಾವು ಅಂದರೆ ಬರೀ ಇಷ್ಟೇನೆ? ಇದನ್ನು ಬಿಟ್ಟು ಇನ್ನೇನೇನೂ ಇಲ್ಲವೇ? ಇದನ್ನು ಅರಿಯಲು ತಮ್ಮಲ್ಲಿ ತಾವೇ ಪರಿಪೂರ್ಣತೆಯನ್ನು ಕಂಡುಕೊಳ್ಳಲು ಹವಣಿಸುತ್ತಾರೆ.
'ನಾನು ಅನಕೃ ಬರೆಯುವಾಗ ಅವರ ಬಳಿಯೇ ಇದ್ದೆ. ನೀನೂ ನನ್ನೊಂದಿಗಿದ್ದರೆ ನಿನಗೆಲ್ಲ ತಿಳಿಯುತ್ತೆ' ಈ ಮಾತನ್ನು 'ತರಾಸು'ರವರ ಬಗ್ಗೆ ಬರೆಯಬೇಕೆಂದು ಬಯಸಿ ಕೆಲವು ಮಾಹಿತಿ ಕೇಳಲು ಹೋದ ತರುಣನಿಗೆ ತರಾಸು ಹೇಳಿದ್ದರು (1969).
ಆ ಯುವಕ ನಾ. ಪ್ರಭಾಕರ. (22.09.1949). ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯಾಸಕ್ತನಾಗಿ 17-18ರ ವಯಸ್ಸಿಗೇ ಅನಕೃ, ತರಾಸು, ಮ. ರಾಮಮೂರ್ತಿ, ನಿರಂಜನ, ಕೈಲಾಸಂ ಅವರ ಕೃತಿಗಳನ್ನು, ಚಿಂತನೆಗಳನ್ನು ಅಧ್ಯಯಿನಿಸಿದ್ದವರು. ಅಂತೂ ಅವರು ತರಾಸು ಅವರಿಗೆ ಒಡನಾಡಿಯಾಗಿಬಿಟ್ಟರು. ನಂತರ ರಾಯರ ಆರೋಗ್ಯ ಏರುಪೇರಾಯಿತು. 50 ವರ್ಷದ ಹೊತ್ತಿಗೆ ಸ್ವಯಂ ಬರೆಯುವ ಶಕ್ತಿಯೂ ಕಡಿಮೆಯಾಯಿತು. ಪ್ರಭಾಕರನ ಮೂಲಕವೇ ಅವರು ಬರೆಸುತ್ತಿದ್ದರು. ತರಾಸುರವರೇ ಹೇಳಿರುವಂತೆ, 'ನನ್ನ ಮನಸ್ಸಿನ ಭಾವನೆಗಳಿಗೆ ಪ್ರಭಾಕರ ಕೈ' ಆದರು. ಮತ್ತು ಮಗನಂತೆ ನೋಡಿಕೊಂಡರು.
ತರಾಸುರವರ ಬರಹ ಶೈಲಿ ಮತ್ತು ನಿರೂಪಣೆಗಳನ್ನು ಅಭ್ಯಸಿಸಲು ನೆರವಾದದ್ದು ರಾಯರ ಕೃತಿಗಳಾದ 'ಅಕ್ಕಮ್ಮನ ಭಾಗ್ಯ', 'ಬಯಕೆಯ ಬಂಧಿ', 'ಗ್ರಹಣ ಬಿಟ್ಟಿತು', 'ಶ್ರೀ ಚಕ್ರೇಶ್ವರಿ ಭಾಗ-1' ಮತ್ತು 'ಪರಿಮಳಮಳದ ಉರುಳು' ಈ ಕೃತಿಗಳ ಕೈ ಬರಹಗಳನ್ನು ನಕಲು ಮಾಡುವಾಗ.
ತರಾಸು ವಿಧಿವಶರಾದ ನಂತರ, 'ತರಾಸು ಎಂದರೆ ಪ್ರಭಾಕರ, ಪ್ರಭಾಕರ ಎಂದರೆ ತರಾಸು' ಎಂಬ ಮಾತು ಜನಜನಿತವಾಯಿತು. 'ನಾನು ಹೋದ ಮೇಲೆ ನನ್ನ ನೆರಳು ನನ್ನದಾಗುವುದಿಲ್ಲ' ಎಂಬ ತರಾಸು ಅವರ ಅಂತರಂಗದ ಅನಿಸಿಕೆಯನ್ನು ಸುಳ್ಳು ಮಾಡಿ ಅದರ ನೆರಳಾಗಿಯೇ ಮುಂದುವರಿದು, ನಿಧನದ ನಂತರವೂ ತಮ್ಮ ಗುರುವನ್ನು ಜೀವಂತವಾಗಿ ನೋಡಿದವರು ಶಿಷ್ಯ ಪ್ರಭಾಕರ್.
ಅಗಲಿದ ಗುರುವಿನ ದುಃಖದ ತೀವ್ರತೆಯಲ್ಲಿ ಲೇಖನಿಯ ಮಸಿಯನ್ನು ಹೆಪ್ಪುಗಟ್ಟಿಸುವುದು ಬೇಡವೆನಿಸಿದಾಗ, ಅವರ ನೆನಪಿನ ದೋಣಿಯಲ್ಲಿ ರಚಿಸಿದ 'ಚಿತ್ರದುರ್ಗ- ತರಾಸು, ತರಾಸು- ಚಿತ್ರದುರ್ಗ', 'ತರಾಸು- ಆತ್ಮೀಯ ನೆನಪು ಮತ್ತು ವಿಚಾರಗಳು', 'ಬರಹದಿಂದಲೇ ಬದುಕಿದ ಬಂಡುಜೀವಿ', 'ಗುಲಾಬಿ ಹೂವು', 'ತರಾಸು ಸೃಷ್ಟಿಸಿದ ವೈವಿಧ್ಯಮಯ ಲೋಕ...', 'ಭಗವದರ್ಪಿತ ಬಾಳು'- ಈ ಲೇಖನಗಳಲ್ಲಿ ತರಾಸುರನ್ನು ಜೀವಂತವಾಗಿಸಿದ್ದಾರೆ. ಈ ಲೇಖನಗಳನ್ನು ಒಟ್ಟುಗೊಡಿಸಿ 'ತರಾಸು ಕುರಿತು' ಪುಸ್ತಕ ಪ್ರಕಟಿಸಿದ್ದಾರೆ. ಅರ್ಧಕ್ಕೆ ನಿಂತಿದ್ದ ಆತ್ಮಕಥೆ 'ಹಿಂತಿರುಗಿ ನೋಡಿದಾಗ' ಇದನ್ನು ಅದನ್ನು ಅಂಬುಜಾ ತರಾಸು ಜೊತೆ ಸೇರಿ ಪುಸ್ತಕದ ನಿರೂಪಣೆಯನ್ನು ಮಾಡಿ, ಧಾರಾವಾಹಿಯಾಗಿ ಪ್ರಕಟಿಸಿದರು.
56 ಪುಟಗಳಿಗೆ ನಿಂತಿದ್ದ ಅಪೂರ್ಣವಾದ 'ಶ್ರೀ ಚಕ್ರೇಶ್ವರಿ ಭಾಗ- 2' ಅನ್ನು ತರಾಸುರವರು ಹೇಳಿದ ಕಥೆಯನ್ನೇ ಆಧರಿಸಿ ಮುಗಿಸಿದರು ಪ್ರಭಾಕರ. ನಂತರ 'ಶ್ರೀ ಚಕ್ರೇಶ್ವರಿ ಭಾಗ-2' ಅನ್ನು ಓದಿದ ಖ್ಯಾತ ಸಂಶೋಧಕ ಡಾ. ಎಚ್.ಎಸ್. ಗೋಪಾಲರಾಯರು, ಪ್ರಭಾಕರರಿಗೆ ಪತ್ರ ಬರೆದು ಅಭಿನಂದಿಸಿದ್ದರು.
ನವಕರ್ನಾಟಕ ಪಬ್ಲಿಕೇಷನ್ ಹೊರತಂದ 'ನವಕರ್ನಾಟಕ ಸಾಹಿತ್ಯ ಸಂಪದ' ಮಾಲಿಕೆಯಲ್ಲಿ ಹೊರತಂದ 'ತರಾಸು' ಹೊತ್ತಗೆಯಲ್ಲಿ ಪ್ರಭಾಕರರು ತರಾಸುರವರ ಬಹುತೇಕ ಕಾದಂಬರಿಗಳನ್ನು ವಿಶ್ಲೇಷಿಸಿದ್ದಾರೆ. ರಾಯರ ಕಾದಂಬರಿಗಳನ್ನು ಬಿಡಿಬಿಡಿಯಾಗಿ ಓದುವ ಓದುಗರು ಒಮ್ಮೆ ಈ ಪುಸ್ತಕವನ್ನು ಓದಿದರೆ ತರಾಸುರವರ ಕೃತಿಗಳ ವಿಶ್ಲೇಷಣೆ ದೊರೆಯುತ್ತದೆ. ಪ್ರಕಟಣೆ: ನವಕರ್ನಾಟಕ ಪಬ್ಲಿಕೇಷನ್, ಬೆಲೆ- 60 ರು. (2005).
ಪಾಂಡವಪುರದಿಂದ ದುರ್ಗಕ್ಕೆ...
ನಾ. ಪ್ರಭಾಕರರ ಹುಟ್ಟೂರು ಪಾಂಡವಪುರ. ತರಾಸುರವರ ಸಹವಾಸದಿಂದಾಗಿ ಚಿತ್ರದುರ್ಗದ ಇತಿಹಾಸವನ್ನು ಆಳವಾಗಿ ಅಭ್ಯಸಿಸಿದರು. 'ಮದಕರಿ ನಾಡಿನಲ್ಲಿ' ಎಂಬ ಕೃತಿಯನ್ನೂ ಹೊರತಂದರು. ಇದರಲ್ಲಿ 'ದುರ್ಗಾಸ್ತಮಾನ'ವನ್ನು ಕೇವಲ 18 ಪುಟಗಳಲ್ಲಿ ಭಟ್ಟಿ ಇಳಿಸಿದ್ದಾರೆ. (ಕಾವ್ಯಾಲಯ ಪ್ರಕಾಶನ, ಮೈಸೂರು- ಬೆಲೆ ರು. 60) ಅಂದರೆ ಪ್ರಭಾಕರ ರಚನಾ ಶಕ್ತಿಯನ್ನು ಊಹಿಸಬಹುದು. ಸಾಹಿತ್ಯ ಸಮ್ಮೇಳನದ ನವಕರ್ನಾಟಕ ಪಬ್ಲಿಕೇಷನ್ ಪುಸ್ತಕ ಮಳಿಗೆಯಲ್ಲಿ ಸ್ವತಃ ನಾ. ಪ್ರಭಾಕರ ಅವರೇ 70-80 ಪುಸ್ತಕಗಳನ್ನು ಇಟ್ಟುಕೊಂಡು ಮಾರಿದ್ದರು. ಬಿಕರಿಯಾದದ್ದು ಹತ್ತೋ- ಹದಿನೈದೋ. ಕೊನೆಗೆ ಉಳಿದ ಪುಸ್ತಕಗಳಿಗೆ ಸಹಿಮಾಡಿ, ಹಂಚಿ ಹೋಗಿಬಿಟ್ಟರು.
- ಅಂಜನಾದ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


