ನಟನವಿಶಾರದ

ನಟನವಿಶಾರದ
Updated on: 

ಚಿತ್ರಕಲೆಯಲ್ಲಿ ವಿಭಿನ್ನವಾದುದನ್ನು ಮಾಡಬೇಕು. ಭಾರತೀಯ ಸಂಸ್ಕೃತಿಯ ಪೌರಾಣಿಕ ಕಥಾನಕಗಳ ಸೊಗಡನ್ನು ಚಿತ್ರಗಳಲ್ಲಿ ಬಿಂಬಿಸಬೇಕು ಎಂಬ ಅಭಿಲಾಷೆಯೇ ಈ ಚಿತ್ರಗಳಿಗೆ ಸ್ಫೂರ್ತಿ- ಮನೆಯ ಗೋಡೆಯಲ್ಲಿ ನೇತುಹಾಕಿರುವ ಕೃಷ್ಣ ರಾಧೆಯ ಚಿತ್ರವನ್ನು ತೋರಿಸಿ ಕಲಾವಿದ ಎಪಿಎಂ ನಟರಾಜಯ್ಯ ವಿವರಿಸಿದ್ದು ಹೀಗೆ. ಮೂಲತಃ ದಾವಣಗೆರೆಯವರಾದ ನಟರಾಜಯ್ಯ ಇದೀಗ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ವಾಸ. ಅವರನ್ನು ಬೈಟು ಕಾಫಿಗಾಗಿ ಮಾತನಾಡಿಸಿದಾಗ...
ಚಿತ್ರಕಲೆ ವೃತ್ತಿಯಾದದ್ದು ಹೇಗೆ?
ಚಿಕ್ಕಂದಿನಿಂದಲೇ ನನಗೆ ಚಿತ್ರಕಲೆಯಲ್ಲಿ ಆಸಕ್ತಿ. ದಾವಣಗೆರೆಯ ಯುನಿವರ್ಸಿಟಿ ಕಾಲೇಜ್ ಆಫ್ ಫೈನ್ ಆರ್ಟ್ಸ್‌ನಲ್ಲಿ ಪದವಿ ಪಡೆದ ನಂತರ ಬೆಂಗಳೂರಿಗೆ ಬಂದು ಕೆಲವು ವರ್ಷ
ಕಾರ್ಪೊರೇಟ್ ಸಂಸ್ಥೆಗಳಲ್ಲಿ ದುಡಿದೆ. ಅಲ್ಲಿ ದುಡಿದರೆ ದುಡ್ಡು ಬರುತ್ತೆ ನಿಜ, ಆದರೆ ತಾತ್ವಿಕವಾದ ನೆಲೆ, ಆತ್ಮತೃಪ್ತಿ ಲಭಿಸುವುದಿಲ್ಲ. ಮಾತ್ರವಲ್ಲದೆ ಅತೀ ಒತ್ತಡದ ಕೆಲಸ ಅದು. ಸ್ವಂತದ್ದು ಏನಾದರೂ ಮಾಡಬೇಕು ಎಂದು ಕಂಪನಿ ತೊರೆದು, ಮನೆಯಲ್ಲಿಯೇ ಚಿತ್ರ ರಚಿಸಲು ಆರಂಭಿಸಿದೆ.
ಯಾವ ರೀತಿಯ ಕಲಾಕೃತಿಗಳನ್ನು ರಚಿಸುತ್ತೀರಿ?
ಆಯಿಲ್ ಪೇಂಟಿಂಗ್, ವಾಟರ್ ಕಲರ್, ಪೆನ್ಸಿಲ್ ಹಾಗು ಡಿಜಿಟಲ್ ಆರ್ಟ್ ಮಾಡುತ್ತೇನೆ. ಆಯಿಲ್ ಪೇಂಟಿಂಗ್ ತುಂಬಾ ದುಬಾರಿ ಮಾತ್ರವಲ್ಲ ಅದನ್ನು ರಚಿಸಲು ಹೆಚ್ಚಿನ ಕಾಲಾವಕಾಶ ಬೇಕು. ಇತ್ತೀಚೆಗೆ ಜನ ಡಿಜಿಟಲ್ ಪೇಂಟಿಂಗ್‌ನತ್ತ ಹೆಚ್ಚು ಒಲವು ತೋರುತ್ತಿದ್ದು, ಇದರ ಬೆಲೆಯೂ ಕೈಗೆಟುಕುತ್ತದೆ.
ನಿಮ್ಮ ಪೇಂಟಿಂಗ್‌ನಲ್ಲಿ ಅಧ್ಯಾತ್ಮವೇ ಕಥಾವಸ್ತು. ಯಾಕೆ?
ನನ್ನದೇ ಶೈಲಿಯಲ್ಲಿ ಚಿತ್ರ ಬಿಡಿಸಬೇಕೆಂಬ ಕಾರಣದಿಂದ ಆಧ್ಯಾತ್ಮವನ್ನೇ ಕಥಾವಸ್ತುವನ್ನಾಗಿಸಿಕೊಂಡೆ. ಭಾರತೀಯ ಸಂಸ್ಕೃತಿಯಲ್ಲಿನ ಪೌರಾಣಿಕ ಕಥಾನಕಗಳು ನಮಗೆ ಸಾಕಷ್ಟು ಸಂದೇಶ ನೀಡುತ್ತವೆ. ಅಂಥಾ ಸಂದೇಶಗಳನ್ನು ಚಿತ್ರಿಸಿ ನೆರಳು ಬೆಳಕಿನ ವರ್ಣಶೈಲಿಯಲ್ಲಿ ರಚಿಸುವುದು ನನಗಿಷ್ಟ. ಪ್ರಕೃತಿಯೂ ನನ್ನ ಪೇಂಟಿಂಗ್‌ಗೆ ಸ್ಫೂರ್ತಿ ನೀಡಿದೆ.
ಪರ್ಸನಲ್ ಮತ್ತು ಕಮರ್ಷಿಯಲ್ ಪೇಂಟಿಂಗ್- ಇದರಲ್ಲಿ ನಿಮಗೆ ಯಾವುದು ಇಷ್ಟ?
ಪರ್ಸನಲ್. ಯಾಕೆಂದರೆ ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಇಲ್ಲಿ ನಮ್ಮ ಭಾವನೆಗಳಿಗೆ ಕಲೆಯ ರೂಪವನ್ನು ಕೊಡಬಹುದು. ಕಮರ್ಷಿಯಲ್‌ನಲ್ಲಿ ಹಣ ಸಿಗುತ್ತೆ ವಿನಹ ಆತ್ಮತೃಪ್ತಿ ಸಿಗಲ್ಲ. ಪರ್ಸನಲ್ ಪೇಂಟಿಂಗ್ ರಚಿಸುವಾಗ ಅಲ್ಲಿ ಒತ್ತಡ ಇರಲ್ಲ, ಆದ್ರೆ ಕಮರ್ಷಿಯಲ್‌ನಲ್ಲಿ ಸಮಯದ ಅಭಾವ ಮತ್ತು ಒತ್ತಡ ಜಾಸ್ತಿ.
ನಿಮ್ಮ ಕಲೆಗೆ ಪ್ರೋತ್ಸಾಹ, ಪ್ರೇರಣೆ ನೀಡಿದವರು?
ಕಾಲೇಜಿನಲ್ಲಿ ಮಲ್ಲಿಕಾರ್ಜುನ ಜಾಧವ್, ಬಿ.ಆರ್ ಕೊರತ್ತಿ, ರವೀಂದ್ರ ಎನ್ ಕಮ್ಮಾರ್, ದಿ. ಹೀರೇಗೌಡರ್ ಮೊದಲಾದವರ ಪ್ರೋತ್ಸಾಹ ಸಿಕ್ಕಿತ್ತು. ಅದೇ ವೇಳೆ ಮಹಾನ್ ಕಲಾವಿದರಾದ ಎಸ್.ಎಂ ಪಂಡಿತ್ ಮತ್ತು ಬಿ. ಕೆ.ಎಸ್. ವರ್ಮಾ, ಚಂದ್ರನಾಥ ಆಚಾರ್ಯ ಮೊದಲಾದವರು ಪ್ರೇರಣೆ ನೀಡಿದ್ದಾರೆ. ಅಪ್ಪನಿಗೆ ಕಲೆಯಲ್ಲಿ ಸಿಕ್ಕಾಪಟ್ಟೆ ಆಸಕ್ತಿ ಇತ್ತು. ಅವರು ಕಲಾವಿದರಾಗಬೇಕೆಂದು ಬಯಸಿದ್ದರೂ, ಸಾಧ್ಯವಾಗಲಿಲ್ಲ.
ನಿಮ್ಮ ಲೈಫ್‌ಗೆ ತಿರುವು ಕೊಟ್ಟ ಕಲಾಕೃತಿ?
2004ರಲ್ಲಿ ರಚಿಸಿದ ಕಾಳಿ ಮಾತೆಯ ಚಿತ್ರ. ಈ ಚಿತ್ರಕ್ಕೆ ಜನರಿಂದ ಹೆಚ್ಚಿನ ಮೆಚ್ಚುಗೆ ವ್ಯಕ್ತವಾಗಿತ್ತು.
ಡಿಜಿಟಲ್ ಮಾಧ್ಯಮದಲ್ಲಿ ಕಲೆಯನ್ನರಳಿಸುವ ಅನುಭವದ ಬಗ್ಗೆ...
ಡಿಜಿಟಲ್ ಪೇಂಟಿಂಗ್ ಮಾಡಲು ಕಡಿಮೆ ಸಮಯ ಸಾಕು. ನಾನು ಮಾಡಿದ ಡಿಜಿಟಲ್ ಪೇಂಟಿಂಗ್‌ಗಳನ್ನು ನನ್ನ ಬ್ಲಾಗ್(ಡಿಡಿಠ://ಟಠಟಟಿಛಡಿಛ್ಠಛಞಛ.ಛಿಟ್ಟ್ಜಡಠ್ಟಡಿ.್ಝಟಿ/)ನಲ್ಲಿ ಹಾಕಿದ್ದೇನೆ. ಕಲಾವಿದರ ಚಿತ್ರಗಳನ್ನು ಯಾವುದೇ ಕ್ರೆಡಿಟ್ ಕೊಡದೆ ಬಳಸಿಕೊಳ್ಳುವವರು ಸಾಕಷ್ಟು ಜನ ಇದ್ದಾರೆ. ಇನ್ನು ಕೆಲವರು ನನ್ನ ಪೇಂಟಿಂಗ್‌ಗಳನ್ನು ಕದ್ದು, ತಮ್ಮ ಹೆಸರನ್ನು ಹಾಕಿ ಮಾರಾಟ ಮಾಡಿದ್ದಾರೆ. ಈ ಘಟನೆಗಳ ನಂತರ ನಾನು ರಚಿಸಿದ ಪೇಂಟಿಂಗನ್ನು ಯಾರಿಗಾದರೂ ಮುಕ್ತವಾಗಿ ತೋರಿಸಲೂ ಭಯವಾಗುತ್ತಿದೆ.
ನೀವು ಪರಿಪೂರ್ಣತಾಕಾಂಕ್ಷಿ ಅಲ್ಲವೆ?
ನಾನು ಯಾವುದೇ ಚಿತ್ರ ರಚಿಸಿದರೂ ಅದು ಪರ್‌ಫೆಕ್ಟ್ ಆಗಿರಬೇಕೆಂದು ಬಯಸುತ್ತೇನೆ. ನನ್ನ ಪೇಂಟಿಂಗ್‌ಗಳಲ್ಲಿ ಅಧ್ಯಾತ್ಮವೇ ಪ್ರಧಾನವಾಗಿರುವುದರಿಂದ ಚಿತ್ರಗಳಲ್ಲಿ ಪರ್‌ಫೆಕ್ಷನ್ ಮೂಡಿಸುವ ಜತೆಗೆ ಮನಸ್ಸಿಗೆ ದೈವಿಕ ತೃಪ್ತಿ ಲಭಿಸುತ್ತದೆ.
ನಿಮ್ಮ ಮುಂದಿನ ಯೋಜನೆ?
ಚಿತ್ರಕಲೆಯನ್ನು ಇನ್ನೂ ಬೇರೆ ಬೇರೆ ಶೈಲಿಯಲ್ಲಿ ವ್ಯಕ್ತಪಡಿಸಬೇಕು. ಹಳ್ಳಿಯ ಸಾಧಕರು, ಜನಪದ ಸಾಧಕರನ್ನು ಕಲೆಯಲ್ಲರಳಿಸಿ ಅವರಿಗೆ ಗೌರವ ಸಲ್ಲಿಸಬೇಕು ಎಂಬ ಯೋಜನೆ ಇದೆ.

-ರಶ್ಮಿ ಕಾಸರಗೋಡು


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com