ಭಾರತೀಯರಾದ ನಾವು, ಸನಾತನ ಭಾರತವನ್ನು ಭವಿಷ್ಯ ಜಗತ್ತಿಗೆ ತೆರೆದು ಸಾರುವ ಧೀರರು, ವೀರರು ಎನ್ನಲಾಗದಿದ್ದರೂ, ಭಾರತ ಇತಿಹಾಸ ಪರಂಪರೆಯ ಕೊನೆಯ ಕೊಂಡಿಗಳು. ಅನವರತ ಆಕ್ರಮಣಕ್ಕೆ ಒಳಗಾದರೂ ಶಾಂತಿ ಸಾರುವವರು, ಮತೀಯ ಮೌಢ್ಯಕ್ಕೆ ಸಿಲುಕಿ, ಅಂಧ ಧರ್ಮಾಚರಣೆಗಳಲ್ಲಿ ಮುಳುಗಿ ತಮ್ಮತನವನ್ನು ಕಳೆದುಕೊಂಡವರು, ಪರರ ಆಕ್ರಮಣದಿಂದ ಕ್ಷಾತ್ರತ್ವ ಕಳೆದುಕೊಂಡವರು, ದೇಶೀಯ ಮತೀಯ ದಾಳಿಯಿಂದ ಮತಿತ್ವ ಕಳೆದುಕೊಂಡವರು, ಆಲೋಚಿಸುವ, ಪ್ರಶ್ನಿಸುವ, ವಿಮರ್ಶಿಸುವ ಸ್ವಭಾವದಿಂದ ಬಹುದೂರ ಉಳಿದವರು ಭಾರತೀಯರು.
ನೀವೂ ನನ್ನಂತೆಯೇ ಆತ್ಮಶ್ರದ್ಧೆಯುಳ್ಳವರಾದರೆ, ನಿಮ್ಮೊಳಗೂ ಅನಂತ ಬಲವಿದೆ ಎಂದು ನೀವು ದೃಢವಾಗಿ ನಂಬಿದ್ದೇ ಆದರೆ ನಿಮ್ಮೊಳಗೂ ಅಪರಿಮಿತ ಜ್ಞಾನ-ಅದಮ್ಯ ಶಕ್ತಿ ಅಡಗಿದೆಯೆಂದು ತಿಳಿದುದೇ ಆದರೆ ಮತ್ತು ಆ ಶಕ್ತಿಯನ್ನು ಜಾಗೃತಗೊಳಿಸಿಕೊಂಡುದೇ ಆದರೆ ನೀವೂ ನನ್ನಂತೆಯೇ ಆಗುವಿರಿ, ಅದ್ಭುತಗಳನ್ನು ಸಾಧಿಸುವಿರಿ. ನಮ್ಮನ್ನು ನಾವು ಕಳಪೆ ಎಂದೇಕೆ ತಿಳಿದುಕೊಳ್ಳಬೇಕು? ನಮ್ಮನ್ನು ನಾವು ಏಕೆ ನಿಂದಿಸಿಕೊಳ್ಳಬೇಕು? ನಾವು ದಿವ್ಯಜ್ಯೋತಿಯ ಪುತ್ರರು, ನಮಗೆಲ್ಲಿದೆ ಕತ್ತಲು! ಯಾವ ಜ್ಯೋತಿ ಈ ವಿಶ್ವವನ್ನೇ ಬೆಳಗುತ್ತಿದೆಯೋ ಆ ದಿವ್ಯಜ್ಯೋತಿಯಲ್ಲೇ ಇರುವವರು ನಾವು; ಆ ದಿವ್ಯಜ್ಯೋತಿಯ ಒಡನಾಡಿಗಳು; ಕೊನೆಗೆ ಆ ದಿವ್ಯಜ್ಯೋತಿಯನ್ನೇ ಸೇರಿಕೊಳ್ಳುವವರು!
ಏಳಿ, ಎಚ್ಚರಗೊಳ್ಳಿ, ಕನಸು ಕಾಣುತ್ತ ಕುಳಿತಿರಬೇಡಿ. ಜಾಗೃತರಾಗಿ, ನಿಮ್ಮೊಳಗಣ ದಿವ್ಯತೆಯನ್ನು ಪ್ರಕಟಗೊಳಿಸಿ.
-ಆನಂದ ಎಸ್.ಎನ್.