ಮುಪ್ಪು ಮುಂದೂಡುವ ಮಾಂತ್ರಿಕ ಶಕ್ತಿ!

Updated on: 

ಸೋರಿಯಾಸಿಸ್ ಎನ್ನುವ ಚರ್ಮವ್ಯಾಧಿಯ ಬಗ್ಗೆ ಕೇಳಿಯೇ ಇರುತ್ತೀರಿ. ಈ ಕಾಯಿಲೆ ಬಂತೆಂದರೆ ಜೀವನಪೂರ್ತಿ ಇರುತ್ತದೆ ಎಂದೇ ಲೆಕ್ಕ. ಮೊಳಕೈ, ಮೊಳಕಾಲುಗಳಲ್ಲಿ ಮೊದಲು ಕಾಣಿಸಿಕೊಳ್ಳುತ್ತದೆ. ನಿರ್ಲಕ್ಷ್ಯ ಮಾಡಿದರೆ ನಂತರ ನಿಧಾನವಾಗಿ ಜನನಾಂಗಗಳೂ ಸೇರಿದಂತೆ ದೇಹದ ಇತರ ಭಾಗಗಳಿಗೆ ಹರಡಿಕೊಳ್ಳುತ್ತದೆ. ವಿಪರೀತ ತುರಿಕೆ. ಒಮ್ಮೊಮ್ಮೆ ಅಸಾಧ್ಯ ನೋವು. ಚರ್ಮ ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಆಧುನಿಕ ಆಲೋಪಥಿ ವೈದ್ಯದಲ್ಲಿ ಇದಕ್ಕೆ ಮದ್ದಿಲ್ಲ. ಆದರೆ ಅದರ ತೀವ್ರತೆ ಕಡಿಮೆ ಮಾಡುವ ಚಿಕಿತ್ಸೆಗಳಿವೆ. ನನ್ನ ವೈದ್ಯ ಸ್ನೇಹಿತರೊಬ್ಬರು ಹೇಳಿದ ಪ್ರಕಾರ, ಆಯುರ್ವೇದದಲ್ಲಿ ಇದಕ್ಕೆ ಪರಿಹಾರವಿದೆ. ಆಯುರ್ವೇದ ವೈದ್ಯರು ಹೇಳಿದ ಆಹಾರ ಪದ್ಧತಿ, ಪಥ್ಯ ಅನುಸರಿಸಿದರೆ ಸೋರಿಯಾಸಿಸ್ ಬಾಧೆಯನ್ನು ತ್ವರಿತವಾಗಿ ಕಡಿಮೆ ಮಾಡಿಕೊಳ್ಳಬಹುದು. ನೋವು ಕೂಡ ಅಷ್ಟಾಗಿ ಕಾಡುವುದಿಲ್ಲ. ಗುಲಾಬಿಯ ಕೆಂಪು ಬಣ್ಣದ ಕಲೆಗಳೂ ನಿಧಾನಕ್ಕೆ ಮಾಯವಾಗುತ್ತವೆ. ದೇಹದ ಇತರ ಭಾಗಗಳಿಗೆ ಹರಡುವುದನ್ನೂ ತಡೆಯಬಹುದು. ಆಹಾರದಲ್ಲಿ ಎಂಥ ವಿಸ್ಮಯಕಾರಕ ಶಕ್ತಿ ಇದೆ ಅಲ್ಲವೆ?
ಆಹಾರದ ಕುರಿತು ಇನ್ನೂ ಆಶ್ಚರ್ಯ ಮೂಡಿಸುವ ಸಂಗತಿ ಎಂದರೆ ಎರಡು ಮಿಲಿಯನ್ ಅಂದರೆ 20 ಲಕ್ಷ ವರ್ಷ ಹಿಂದೆಯೇ ಗ್ರೀಕರು ಸ್ವಾದಿಷ್ಟವಾದ, ಆರೋಗ್ಯಪೂರ್ಣವಾದ ತಿನಿಸುಗಳನ್ನು ಸೇವಿಸುತ್ತಿದ್ದರು ಎನ್ನುವುದು. ಫ್ರಾನ್ಸ್ ಸರ್ಕಾರದ ಪ್ರಮುಖ ಸಂಶೋಧನಾ ಸಂಸ್ಥೆಯಾಗಿರುವ ಇನ್‌ಸೆರ್ಮ್ (ಐಃಖಊಖಂ) ಜೀವಶಾಸ್ತ್ರ ಮತ್ತು ಸೋಂಕು ಶಾಸ್ತ್ರ ತಜ್ಞ ಸರ್ಜ್ ರಿನೌಡ್ ತಮ್ಮ ಸಂಶೋಧನಾ ವರದಿಯೊಂದರಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ರೋಗ ನಿವಾರಣೆಗೆ ಇಲ್ಲದ ಕಸರತ್ತು ಮಾಡುವುದಕ್ಕಿಂತ ಸಾವಿರಾರು ವರ್ಷಗಳ ಹಿಂದೆ ನಮ್ಮ ಹಿರಿಯರು ಪ್ರಕೃತಿ ಮಾತೆಯ ಮಡಿಲಲ್ಲಿ ಎಷ್ಟು ಸಂತೋಷದಿಂದ ಇದ್ದರು? ನಿಸರ್ಗದೊಂದಿಗೆ ಹೊಂದಿಕೊಂಡೇ ಎಂಥ ಆಹಾರ ಪದ್ಧತಿ ರೂಢಿಸಿಕೊಂಡಿದ್ದರು ಎನ್ನುವುದನ್ನು ಅರಿಯುವುದು ಮುಖ್ಯ ಎನ್ನುತ್ತಾರೆ ಅವರು.
ಇಂದಿನ ಪೀಳಿಗೆ ಅಕಾಲ ವೃದ್ಧಾಪ್ಯದತ್ತ ಮುಖ ಮಾಡಿದೆ. ದೇಹಕ್ಕೆ ವಯಸ್ಸಾಗುವುದು ಪ್ರಕೃತಿ ಸಹಜ ಪ್ರಕ್ರಿಯೆ ನಿಜ. ದೈಹಿಕವಾಗಿ ಅಥವಾ ಮಾನಸಿಕವಾಗಿ ಮೀರಿದ ಭಾರ ಶರೀರದ ಮೇಲೆ ಬಿದ್ದಾಗ ಮುಪ್ಪು ಅಡರಿಕೊಳ್ಳುತ್ತದೆ. ಈಗೀಗಂತೂ ಯೋಗ ಕಲಿಸುವ ಎಷ್ಟೋ ಸ್ವಾಮೀಜಿಗಳು, ಅದರಲ್ಲೂ ಕಾರ್ಪೋರೆಟ್ ಯೋಗ ಸಂಸ್ಥೆಗಳು ಮುಪ್ಪು ಮುಂದೂಡುವ ತಂತ್ರಗಳನ್ನು ಯೋಗದ ಮೂಲಕ ಕಲಿಸಿಕೊಡುವುದಾಗಿ ಭಾರಿ ಪ್ರಚಾರ ಮಾಡುತ್ತಿವೆ;ಅದಕ್ಕೆ ತಕ್ಕಂತೆ ಹಣವನ್ನೂ ಪಡೆಯುತ್ತಿವೆ ಎಂದು ಕೇಳಿದ್ದೇನೆ. ನಮ್ಮ ಹಿಂದಿನವರೆಲ್ಲ ಎಷ್ಟು ಗಟ್ಟಿಮುಟ್ಟಾಗಿರುತ್ತಿದ್ದರು? 80-90 ದಾಟಿದರೂ ಆರೋಗ್ಯವಂತರಾಗಿ, ಚಟುವಟಿಕೆಯಿಂದ ಇರುತ್ತಿದ್ದರು. ಅವರಿಗೆಲ್ಲ ಯಾರಾದರೂ ಇಂಥ ತಂತ್ರಗಳನ್ನು ಕಲಿಸಿಕೊಟ್ಟಿದ್ದರಾ? ಇಲ್ಲ ತಾನೆ? ಅವರ ಗುಟ್ಟು ತಿನ್ನುವ ಆಹಾರ ಮತ್ತು ಸೋಮಾರಿಗಳಾಗದೆ ಸದಾ ಕ್ರಿಯಾಶೀಲತೆಯಿಂದ ಕೂಡಿರುವುದರಲ್ಲಿ ಇತ್ತು. ಮುಪ್ಪು ಮುಂದೂಡುವ ಮಾಂತ್ರಿಕ ಶಕ್ತಿ ಆಹಾರಕ್ಕೆ ಇದೆ ಎನ್ನುವುದನ್ನು ಇದರಿಂದಲೇ ಅರ್ಥ ಮಾಡಿಕೊಳ್ಳಬಹುದಲ್ಲವೆ?

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com