ನಿಮ್ಮ ಪ್ರತಿಬಿಂಬದೊಳಗ್ಯಾರಿದ್ದಾರೆ? (ರನ್ ವೇ)
ನೇರವಾಗಿ ಕನ್ನಡಿಯ ಮುಂದೆ ನೀವು ಹೋಗಿ ನಿಂತುಕೊಳ್ಳಿ. ಎದುರಿಗೆ ಯಾರು ಕಾಣುತ್ತಾರೆ ಎಂಬುದನ್ನು ಗಮನಿಸಿ. ಇದೇನು ವಿಚಿತ್ರ ಎನ್ನಬಹುದು. ಕನ್ನಡಿಯೆದುರು ನಿಂತಾಗ ನಮ್ಮ ಪ್ರತಿಬಿಂಬವಲ್ಲದೇ ಬೇರಾರು ಕಾಣಲು ಸಾಧ್ಯ? ಹೆಚ್ಚೆಂದರೆ ಅಕ್ಕಪಕ್ಕದ ವಸ್ತುಗಳು, ನಮ್ಮ ಹಿಂದೆ ನಿಂತಿರಬಹುದಾದ ವ್ಯಕ್ತಿಗಳು ಕಾಣಬಹುದು, ಅಷ್ಟೇ. ಭೌತಿಕವಾಗಿ ಇದು ಸರಿಯೇ. ಅದರೆ ಕನ್ನಡಿಯೊಳಗೆ ಕಾಣುತ್ತಿರುವ ನಿಮ್ಮ ಪ್ರತಿಬಿಂಬದಲ್ಲಿ ನೀವು ಇನ್ನೇನನ್ನು ಕಾಣಬಹುದು ಎಂಬುದನ್ನು ಯೋಚಿಸಿ. ಅಲ್ಲೊಬ್ಬ ಧೀಮಂತ ವ್ಯಕ್ತಿಯನ್ನು ನಿವು ಕಂಡುಕೊಳ್ಳಲು ಸಾಧ್ಯವಾದರೆ ನಿಮ್ಮ ಬಗ್ಗೆ ನೀವು ಹೆಮ್ಮೆಪಟ್ಟುಕೊಳ್ಳಬಹುದು. ಹೌದು. ಕನ್ನಡಿ ಎದುರಿದ್ದುದಷ್ಟನ್ನೇ ಪ್ರತಿಬಿಂಬಿಸುವುದಿಲ್ಲ. ಬದಲಾಗಿ ಅದರ ಒಳಗೇನಿದೆ ಎಂಬುದನ್ನು ಖಂಡಿತಾ ಪ್ರತಿಫಲಿಸುತ್ತಿರುತ್ತದೆ. ಅದನ್ನು ಬಹಳಷ್ಟು ಮಂದಿ ಗಮನಿಸುವುದೇ ಇಲ್ಲ. ಸೂಕ್ಷ್ಮ ಅವಲೋಕನ ಇಂಥ ಸತ್ಯವನ್ನು ತೆರೆದಿಡುತ್ತದೆ. ಇದೇ ಕಾರಣಕ್ಕೆ ನೀವು ತುಂಬ ಬೇಸರದಲ್ಲಿದ್ದಾಗ, ದುಃಖದಲ್ಲಿದ್ದಾಗ ಕನ್ನಡಿಯೆದುರು ಹೋಗಿ ನಿಂತುಕೊಳ್ಳುವುದಿಲ್ಲ. ಯಾರೊಬ್ಬ ವ್ಯಕ್ತಿಗೂ ತನ್ನನ್ನು ತಾನು ದುಃಖಿತನನ್ನಾಗಿಯೋ, ಕನಿಷ್ಠತಮನನ್ನಾಗಿಯೋ ನೋಡಿಕೊಳ್ಳುವುದು ಬೇಕಿರುವುದಿಲ್ಲ. ಹಾಗೆಯೇ ಸಿಕ್ಕಾಪಟ್ಟೆ ಕೋಪಬಂದಾಗ, ಖಿನ್ನರಾಗಿದ್ದಾಗ ಇತ್ಯಾದಿ ಸಂದರ್ಭಗಳಲ್ಲಿಯೂ ನಿಮ್ಮ ಪ್ರತಿಬಿಂಬವನ್ನು ನೀವು ದಿಟ್ಟಿಸುವುದೇ ಇಲ್ಲ. ನಿಮಗೆ ವಯಸ್ಸಾಗುತ್ತಿದೆ ಎಂಬ ಸತ್ಯವನ್ನು ಕನ್ನಡಿ ಸಾರಿದರೆ ನಿಮ್ಮ ಅಸಮಾಧಾನ ಹೆಚ್ಚುತ್ತದೆ. ಮತ್ತೆ ಮತ್ತೆ ಕನ್ನಡಿಯೊಳಕ್ಕೆ ಇಣುಕಿಣುಕಿ ಬಿಳಿ ಕೂದಲು ಹೆಚ್ಚುತ್ತಿರುವುದನ್ನು ದೃಢಪಡಿಸಿಕೊಳ್ಳುತ್ತೀರಿ. ಅದೇ ಕ್ಷಣದಲ್ಲಿ ನೀವಿವತ್ತು ತುಂಬ ಸುಂದರವಾಗಿ ಕಾಣುತ್ತಿರ ಅಂತಲೂ, ತುಂಬ ಯಂಗ್ಲುಕಿಂಗ್ ಇದೆ ಅಂತಲೂ ಯಾರಾದರೂ ಕಾಂಪ್ಲಿಮೆಂಟ್ ಕೊಟ್ಟರೆ ಮತ್ತೆ ಮತ್ತೆ ಕನ್ನಡಿಯೆದುರು ಹೋಗಿ ನಿಂತು ನಿಮ್ಮನ್ನೇ ನೀವು ಹೆಮ್ಮೆಯಿಂದ ನೋಡಿಕೊಳ್ಳುತ್ತೀರಿ. ಅಂದರೆ ಕನ್ನಡಿಯಲ್ಲಿ ನಿಮ್ಮ ಸುಂದರ ರೂಪವನ್ನು ಮಾತ್ರವೇ ನೋಡಲು ಇಷ್ಟಪಡುತ್ತೀರಿ ಎಂದಾಯಿತು. ಹಾಗೆ ಕನ್ನಡಿ ನಿಮ್ಮನ್ನು ಸುಂದರವಾಗಿ ತೋರಿಸಲೇಬೇಕೆಂದಿದ್ದರೆ ಮೊದಲು ನಿಮ್ಮ ವ್ಯಕ್ತಿತ್ವವನ್ನು ಸುಂದರಗೊಳ್ಳಿಸಿಕೊಳ್ಳಬೇಕು. ಸರಳ, ಪ್ರಾಮಾಣಿಕ ಮನಸಿನ ವ್ಯಕ್ತಿಗಳನ್ನು ಮಾತ್ರವೇ ಕನ್ನಡಿ ಸುಂದರವಾಗಿ ಬಿಂಬಿಸಲು ಸಾಧ್ಯ. ತತ್ವ, ಆದರ್ಶಗಳು ನಿಮ್ಮೊಳಗೆ ಪಾಲನೆಯಾಗುತ್ತಿದ್ದರೆ ಖಂಡಿತಾ ನಿಮ್ಮ ಮುಖ ಅದನ್ನು ಪ್ರತಿಬಿಂಬಿಸುತ್ತದೆ. ಕನ್ನಡಿಯೆದುರು ನೀವು ಹೋಗಿ ನಿಂತಾಗ ನಿಮ್ಮ ಮನಸ್ಸಿನ ಕನ್ನಡಿಯಾದ ಮುಖದಲ್ಲಿ ಇಂಥ ಧೀಮಂತತೆ ಸದಾ ಇರುವಂತೆ ನೋಡಿಕೊಂಡಿರಾದರೆ ಅದಕ್ಕಿಂತ ಹೆಮ್ಮೆಯ ಸಂಗತಿ ಮತ್ತೊಂದಿಲ್ಲ.
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

