ನನ್ನ ನಾನೇ ಗೆದ್ದಾಗ
ನಾಗರಿಕತೆಯ ಆರಂಭದಿಂದ ಇಂದಿನವರೆಗೂ, ನಾವು ಕಂಡುಕೊಂಡ ಸಂತರು ಮತ್ತು ಮಹಾತ್ಮರು, ಒಂದು ಮಾತನ್ನು ಹೇಳುತ್ತಲೇ ಬಂದಿದ್ದಾರೆ- ಎಲ್ಲವೂ ನಮ್ಮ ಮನಸ್ಸಿನಲ್ಲೇ ಇದೆ ಎಂಬುದೇ ಆ ಮಾತು. ಕೇಳಲು ಅತ್ಯಂತ ಸರಳವಾಗಿ, ಅಂಥ ಯಾವ ಮಹಾನ್ ವಿಷಯವೂ ಇದರಲ್ಲಿಲ್ಲವೆಂಬಂತೆ ಹೇಳಿರುವ ಈ ಮಾತಿನ ಬಗ್ಗೆ ನಾವು ಸರಳವಾಗಿ ಯೋಚಿಸಿದರೂ ಸಾಕು- ಸಾಕಷ್ಟು ಗಹನವಾದ ಅರ್ಥಗಳನ್ನೂ ಕಾಣಬಹುದು.
ಬುದ್ಧ ಹೇಳುತ್ತಾನೆ- ನಾವು ನಮ್ಮ ಯೋಚನೆಗಳಿಂದ ರೂಪಿಸಲ್ಪಡುತ್ತೇವೆ. ಯೋಚನೆಗಳು ನಮ್ಮ ಕ್ರಿಯೆಗಳನ್ನು ನಿರ್ದೇಶಿಸುತ್ತವೆ. ಕ್ರಿಯೆಗಳು ನಮ್ಮ ವ್ಯಕ್ತಿತ್ವವನ್ನು, ವ್ಯಕ್ತಿತ್ವ ನಮ್ಮ ಜೀವನವನ್ನು ರೂಪಿಸುತ್ತದೆ. ಆತ ಮುಂದುವರಿದು ಇನ್ನೂ ಒಂದು ಅಚ್ಚರಿಗೊಳಿಸುವಂಥ ಮಾತು ಹೇಳುತ್ತಾನೆ- ಸಾವಿರಾರು ಯುದ್ಧಗಳನ್ನು ಗೆಲ್ಲುವುದಕ್ಕಿಂತ, ನಿನ್ನನ್ನು ನೀನು ಗೆದ್ದುಕೊಳ್ಳುವುದೇ ಮಿಗಿಲಾದದ್ದು. ಅಂಥ ವಿಜಯವನ್ನು ಯಾರೂ ಕಿತ್ತುಕೊಳ್ಳಲಾರರು, ಸಾವೂ ಕೂಡ. ಇದು ಮಾತ್ರ ಬುದ್ಧನಂಥ ಮಹಾಜ್ಞಾನಿಯಷ್ಟೇ ಆಡಬಹುದಾದ ಮಾತು. ಆ ಮಾತಿನ ಅರ್ಥ ಆಗಬೇಕಾದರೆ ನಾವು ಕೂಡ ಸ್ವಲ್ಪವಾದರೂ ನಮ್ಮನ್ನೇ ಗೆಲ್ಲುವ ಹಾದಿಯಲ್ಲಿ ನಡೆಯುವ ಯತ್ನ ಮಾಡಬೇಕು. ನಮ್ಮನ್ನು ನಾವು ಗೆಲ್ಲುವುದೆಷ್ಟು ಕಷ್ಟ ಎಂಬುದು ನಮಗೆ ಸ್ವಲ್ಪವಾದರೂ ಆರಿವಾಗಬೇಕು.
ನಮಗೆ ಯಾವುದಾದರೂ ಚಟ ಅಂಟಿಕೊಂಡುಬಿಟ್ಟರೆ ಅದರಿಂದ ಬಿಡಿಸಿಕೊಳ್ಳಲು ಎಷ್ಟು ಕಷ್ಟವಾಗುತ್ತದೆ? ಚಟವನ್ನು ಮುಂದುವರಿಸಲು ಮನಸ್ಸು ನೂರಾರು ಕಾರಣ ಕೊಟ್ಟುಕೊಳ್ಳುತ್ತದೆ. ಆತ್ಮವಂಚನೆ ಶುರುವಾಗುತ್ತದೆ. ತನಗೆ ತಾನೇ ವಂಚಿಸಿಕೊಳ್ಳುತ್ತಿದ್ದೇನೆಂದು ನಿಮ್ಮ ಆತ್ಮಕ್ಕೆ ಗೊತ್ತಿರುತ್ತದೆ. ಆದರೆ ಬದಲಾಗಲು ಆತ್ಮಶಕ್ತಿ ಸಿದ್ಧವಾಗುವುದಿಲ್ಲ. ತನ್ನ ಒಂದೇ ಒಂದು ನಿರ್ಧಾರದಿಂದ ಬದುಕು ನೇರ್ಪುಗೊಳ್ಳುತ್ತದೆ ಎಂದು ಗೊತ್ತಿರುತ್ತದೆ. ಆದರೆ ಅಂಥ ನಿರ್ಧಾರಕ್ಕೆ ಕಾಲವನ್ನು ಮುಂದೂಡುತ್ತಲೇ ಹೋಗುತ್ತೇವೆ. ಕೊನೆಗೊಂದು ದಿನ ಸಾವು ನಮ್ಮ ಬದುಕಿನ ಹೊಸ್ತಿಲ ಬಳಿ ಬಂದು ನಿಂತಿರುತ್ತದೆ.
ಯೋಚಿಸಿ, ಸುಖದ ಬದುಕನ್ನು ಅತ್ತ ಒಗೆದು ಅರಮನೆಯನ್ನು ತೊರೆಯಲು ಗೌತಮ ನಿರ್ಧರಿಸದಿದ್ದರೆ ಜ್ಞಾನದ ಬೆಳಕನ್ನು ಆತ ಕಾಣುತ್ತಿದ್ದನೆ? ಬಿಳಿಯನ ದಬ್ಬಾಳಿಕೆಗೆ ಮಣಿಯದೆ ಮೋಹನದಾಸ ರೈಲುಬೋಗಿಯಲ್ಲಿ ಪಟ್ಟಾಗಿ ಕುಳಿತಿರದಿದ್ದರೆ ಮಹಾತ್ಮ ಗಾಂಧಿ ರೂಪುಗೊಳ್ಳುತ್ತಿದ್ದರೆ? ಎಲ್ಲ ಮಹಾತ್ಮರ ಹಿಂದೆ ಇಂಥ ದೃಢನಿರ್ಧಾರದ ಕತೆಗಳಿವೆ.
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

