ಇದೇ ಮಾದರಿ
ಯಾವುದೋ ಹಾದಿಯಲ್ಲಿ ಸಾಗುತ್ತಿದ್ದೀರಿ. ಅಲ್ಲಿ ಈ ಹಿಂದೆ ಸಾವಿರಾರು ಮಂದಿ ಸಾಗಿ ಹೋಗಿದ್ದಾರೆ. ಆದರೆ, ಅವರ್ಯಾರ ಹೆಜ್ಜೆ ಗುರುತುಗಳೂ ಕಾಣಿಸುತ್ತಿಲ್ಲ. ಆದರೆ, ನಿಮ್ಮ ತಲೆಯಲ್ಲೊಬ್ಬರು ಎದುರು ನಿಂತಿದ್ದಾರೆ. ಅವರಿಂದ ನೀವು ಪ್ರಭಾವಿತರಾಗಿದ್ದೀರಿ. ಅವರ ಅಷ್ಟೂ ಸ್ವಭಾವಗಳು, ನಡಿಗೆ ಗುಣಗಳನ್ನು ನಿಮ್ಮೊಳಗೇ ಭಟ್ಟಿ ಇಳಿಸಿಕೊಂಡಿದ್ದೀರಿ. ಈಗ ಅದೇ ಹಾದಿಯಲ್ಲಿ ಅವರಂತೆಯೇ ನಡೆಯಲೆತ್ನಿಸುತ್ತಿದ್ದೀರಿ. ಅಳಿಸಿಹೋದ ಅವರ ಹೆಜ್ಜೆಗಳ ಮೇಲೆ ನಿಮ್ಮ ಒಂದೊಂದೇ ಹೆಜ್ಜೆಗಳು ಮೂಡಿವೆ.
ಇದಕ್ಕೇನನ್ನಬಹುದು? ಅನುಕರಣೆ ಅಂತಲೋ, ಮಾದರಿ ಅಂತಲೋ? ಹಲವು ಬಾರಿ ಹಾಗೆಯೇ ಆಗುವುದಿದೆ. ತಲೆಯಲ್ಲಿ ಹೂತು ಹೋದ ಹುತಾತ್ಮನ ಪ್ರಭಾವಕ್ಕೆ ವಿನಾಕಾರಣ ಸಿಲುಕಿರುತ್ತೀವಿ, ಅವನೇ ಸರಿ ಎನ್ನುವಷ್ಟರ ಮಟ್ಟಿಗೆ. ಅವನಂತೆಯೇ ಸಾಗಬೇಕೆಂಬ ಕನಸಿನಲ್ಲಿ, ಅವನಂತೆಯೇ ಆಗಲೆತ್ನಿಸಿ, ನಮ್ಮ ತನವನ್ನು ಎಲ್ಲೋ ಹಿಂದೆ ಮೈಲಿಯಾಚೆಗೆ ಕಳಚಿ, ಪರಾವಲಂಬಿ ಆಗಿರುತ್ತೇವೆ.
ಆಗ ನಮ್ಮೊಳಗೆ ನಮ್ಮನ್ನು ನಾವೇ ಹುಡುಕುವುದು ಕಷ್ಟವಾಗುತ್ತದೆ. ಸಮಾಜ ಆಗ ದೂಷಿಸುತ್ತದೆ, 'ಲೇ, ಕಾಪಿ ಹೊಡೀತ್ತಿದ್ದೀಯ', 'ಅನುಕರಣೆ ಮಾಡುತ್ತಿದ್ದೀಯ'. ಆ ಸಂದರ್ಭದಲ್ಲಿ ನಮ್ಮತನ ಉತ್ತರಿಸಲು ಒದ್ದಾಡಿಬಿಡುತ್ತದೆ. ಕಳೆದುಹೋದ ಸ್ವಭಾವವನ್ನು ನೆನೆದು ಕಣ್ಣೀರಾಗುತ್ತದೆ. ಮಾದರಿ ಅಥವಾ ಆದರ್ಶ ಎನ್ನುವುದು ಅತಿಮುಖ್ಯ. ಗಾಂಧಿಯೇ ಆಗಬೇಕೆಂದು, ಮುಖ್ಯವಾಗಿ ಅವರ ಥರ ಕಾಣಿಸಿಕೊಳ್ಳಬೇಕೆಂದು ತಲೆಬೋಳಿಸಿಕೊಂಡು, ಅರೆಬಟ್ಟೆಯ ರೀತಿಯೇ ಧರಿಸಿಕೊಂಡರೆ ಅದು ಪಾತ್ರವಾಗುತ್ತದಷ್ಟೇ. ನಟಿಸಲು ಯಾವ ಅಡ್ಡಿಯೂ ಆಗದು. ಆದರೆ, ಅಂಥದ್ದೇ ಚಿಂತನೆಗಳನ್ನೂ ಹೊರಹಾಕಿದರೆ ಅವರಿಗೂ ನಮಗೂ ವ್ಯತ್ಯಾಸವೇ ಇಲ್ಲದಂತಾಗುತ್ತದೆ. ಆದರ್ಶವಾದ ಪಾಲಿಸುವ ಅಬ್ಬರದಲ್ಲಿ ವಿವೇಚನೆ ಪ್ರಯೋಗಿಸುವುದೂ ಅತಿಮುಖ್ಯ. ಆ ನೆರಳಿನಲ್ಲಿ ಕರಗಿಹೋಗುವ ವ್ಯಕ್ತಿತ್ವ ನಾವಾಗಬಾರದು.
ನಮ್ಮತನ ಎನ್ನುವುದೂ ಒಂದಿರುತ್ತದಲ್ಲ, ಅದಕ್ಕೊಂದು ಆಕಾರ ಕೊಡುವ ಯತ್ನ ನಮ್ಮೊಳಗೇ ನಡೆಯಬೇಕು. ಚಿಂತನೆಗಳಲ್ಲಿ, ಅಭಿಪ್ರಾಯಗಳಲ್ಲಿ, ನಟನೆಯಲ್ಲಿ, ಬರವಣಿಗೆಯಲ್ಲಿ, ನಿರ್ಧಾರಗಳಲ್ಲಿ ಅವು ಪ್ರಕಟಗೊಂಡರಷ್ಟೇ ನಮ್ಮತನದ ದರ್ಶನ ಸಮಾಜಕ್ಕಾಗುತ್ತದೆ. ಈ ಹಂತಕ್ಕೇರಲು ಮಾದರಿಯಾಗಿ ಯಾವುದಾದರೂ ಮಹಾಪುರುಷನನ್ನು ಇಟ್ಟುಕೊಳ್ಳಬೇಕೇ ಹೊರತು, ಯಾವುದೇ ಕಾರಣಕ್ಕೂ ಸ್ವಂತಿಕೆಯನ್ನೇ ಮಾರಾಟಕ್ಕೀಡಬಾರದು. 'ಮಾದರಿ'ಯ ವ್ಯಾಖ್ಯಾನವೇ ಇಷ್ಟು. ನಮ್ಮ ಕನಸನ್ನು ಬೆನ್ನಟ್ಟಲು ಬೇಕಾಗುವ ನಕ್ಷೆಯೇ 'ಮಾದರಿ'. ಇದೊಂದು ಗೊತ್ತಿದ್ದರೆ ಅನುಕರಣೆಯ ರಾಗ ನಿಮ್ಮಿಂದ ಖಂಡಿತಾ ಹೊರಡದು.
-ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

