ಭಲೇ ಬಸವ
ಅನಾದಿ ಕಾಲದಿಂದಲೂ ನಂದಿ ಅರ್ಥಾತ್ ಬಸವನಿಗೆ ವಿಶೇಷ ಸ್ಥಾನ.

ಹಿಂದೂ ಧಾರ್ಮಿಕ ಹಾಗೂ ಕೃಷಿ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದಲೂ ನಂದಿ ಅರ್ಥಾತ್ ಬಸವನಿಗೆ ವಿಶೇಷ ಸ್ಥಾನ. ಪುರಾಣ, ಇತಿಹಾಸಗಳಲ್ಲಿ ನಂದಿಯ ಉಲ್ಲೇಖವಿದೆ. ವಿಶ್ವಾದ್ಯಂತ ವಾಣಿಜ್ಯ ವ್ಯವಹಾರಗಳಲ್ಲೂ ಪರೋಕ್ಷವಾಗಿ ನಂದಿಯ ಕನವರಿಕೆ ಇದೆ. ಪರಮೇಶ್ವರನ ವಾಹನವಾಗಿ ಪುರಾಣಗಳಲ್ಲಿ ಬಿಂಬಿತವಾಗಿರುವ ನಂದಿಯ ವಿಗ್ರಹಗಳು ಶಿವನ ದೇಗುಲಗಳಲ್ಲೆಲ್ಲಾ ಇದ್ದೇ ಇರಬೇಕು. ಶರಣ ಸಂಸ್ಕೃತಿಯಲ್ಲಿಯೂ ನಂದಿಗೆ ಅಗ್ರಸ್ಥಾನ. ಬಲದ ಸಂಕೇತವಾಗಿರುವ ಇಂಥ ನಂದಿಯನ್ನು ರಾಜ ಮಹಾರಾಜರು ಆರಾಧಿಸುತ್ತಿದ್ದರು. ಬೃಹತ್ ಬಂಡೆಗಳನ್ನು ಕಟೆದು ನಂದಿಯ ವಿಗ್ರಹಗಳನ್ನೇ ನಿರ್ಮಿಸಿದ್ದರು. ಭಾರತದಲ್ಲಿ ಅಸಂಖ್ಯ ನಂದಿ ವಿಗ್ರಹಗಳಿದ್ದರೂ, ಅವುಗಳಲ್ಲಿ ಅತಿ ದೊಡ್ಡ ಶಿಲಾನಂದಿಗಳ ಕಿರು ಮಾಹಿತಿ ಇಲ್ಲಿದೆ...
ಭಾರತದಲ್ಲಿ ಅಸಂಖ್ಯ ನಂದಿ ವಿಗ್ರಹಗಳಿವೆ. ಆದರೆ ಅವುಗಳಲ್ಲಿ ಬೃಹತ್ ಅನಿಸಿಕೊಂಡವು ಕೆಲವು ಮಾತ್ರ.
ಲೇಪಾಕ್ಷಿ
16ನೇ ಶತಮಾನದಲ್ಲಿ ವಿಜಯನಗರವನ್ನಾಳಿದ ಅರಸರು ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿ ನಿರ್ಮಿಸಿದ 15 ಅಡಿ ಎತ್ತರ, 27 ಅಡಿ ಅಗಲದ ಏಕಶಿಲಾ ನಂದಿ ವಿಶ್ವದಲ್ಲೇ ಅತಿ ದೊಡ್ಡದೆಂಬ ಖ್ಯಾತಿ ಪಡೆದಿದೆ.
ಬೃಹದೇಶ್ವರ ದೇಗುಲ
ತಮಿಳುನಾಡು ತಂಜಾವೂರಿನ ಬೃಹದೇಶ್ವರ ದೇಗುಲದಲ್ಲಿರುವ ನಂದಿ 16 ಅಡಿ ಅಗಲ, 13 ಅಡಿ ಎತ್ತರವಿದೆ. ತಂಜಾವೂರು ಇತಿಹಾಸದನ್ವಯ 18ನೇ ಶತಮಾನದಲ್ಲಿ ನಾಯಕರಿಂದ ನಿರ್ಮಿಸಲ್ಪಟ್ಟಿದೆ. ಇದು ಪ್ರತ್ಯೇಕ ಬುನಾದಿ ಮೇಲೆ ನಿರ್ಮಿತವಾಗಿದ್ದು, ತಂಜಾವೂರು ಶೈಲಿಯ ಚಿತ್ರಕಲೆಗಳ ಛಾವಣಿಯಿಂದ ವಿಶೇಷವೆನಿಸುತ್ತದೆ.
ಬೆಂಗಳೂರು ಬುಲ್ಟೆಂಪಲ್
1537ರಲ್ಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರಿಂದ ನಿರ್ಮಿತವಾದದ್ದೇ ಬೆಂಗಳೂರಿನ ಬುಲ್ಟೆಂಪಲ್ನಲ್ಲಿರುವ ನಂದಿ. 15 ಅಡಿ ಎತ್ತರ ಮತ್ತು 20 ಅಡಿ ಅಗಲವಿರುವ ಈ ನಂದಿಯಿರುವ ಬುಲ್ಟೆಂಪಲ್ನಲ್ಲಿ ಪ್ರತಿ ವರ್ಷ ಕಡಲೆಕಾಯಿ ಪರಿಷೆ ನಡೆಯುವುದು ವಿಶೇಷ.
ಹಳೆಬೀಡು ನಂದಿ
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಳೇಬೀಡು ನಂದಿ ಎಲ್ಲ ನಂದಿಗಳಿಗಿಂತ ವಿಭಿನ್ನ, ವಿಶೇಷತೆ ಹಾಗೂ ಅಂದ ಚಂದದಿಂದ ಕೂಡಿದೆ. ಹೊಯ್ಸಳ ದೊರೆ ವಿಷ್ಣುವರ್ಧನನ ದಂಡಾಧಿಕಾರಿಯಾಗಿದ್ದ ಕೇತುಮಲ್ಲ 1121ರಲ್ಲಿ ನಿರ್ಮಿಸಿದ ಈ ಸಣ್ಣ ನಂದಿ ಇತರೆಡೆಗಳ ನಂದಿಗಿಂತ ಭಿನ್ನವೇ ಸರಿ. ಏಕೆಂದರೆ 8 ಅಡಿ ಎತ್ತರ, 9 ಅಡಿ ಉದ್ದದ ಈ ಏಕಶಿಲಾ ನಂದಿಯ ಅವಯವಗಳ ಅಳತೆಗಳನ್ನು ಪಕ್ಕಾ ಲೆಕ್ಕಾಚಾರದಂತೆ ಕೆತ್ತಿರುವುದು. ಅತಿ ಸೂಕ್ಷ್ಮ ಕೆತ್ತನೆಗೆ ಕನ್ನಡಿಯಂತಿರುವ ಈ ನಂದಿಗೆ ತೊಡಿಸಿರುವ ಹಗ್ಗ, ಗಂಟೆಸರ ಮತ್ತು ಮೂಗುದಾರದ ಕೆತ್ತನೆ ಅತ್ಯದ್ಭುತ. ಕಣ್ಣುಗಳಲ್ಲಿ ಹರಿಯುವ ದೃಷ್ಟಿ, ಮಡಚಿದ ಹಿಂಗಾಲುಗಳ ಮೇಲಿರಿಸಿದ ಬಾಲ ಸೇರಿದಂತೆ ಒಟ್ಟಾರೆ ನಂದಿಯ ಕೆತ್ತನೆ ಮಿರಮಿರ ಮಿಂಚುವ ಜೊತೆಗೆ ಸೂಕ್ಷ್ಮತೆಗೆ ಸಾಣೆ ಹಿಡಿದಂತಿದೆ. ಈ ನಂದಿಯ ಕೊಂಬು ಗಿಡ್ಡವಾಗಿದೆ. ನಿಧಿ ಆಸೆಯಿಂದ ಕೆಲವೆಡೆ ಇಂತಹ ನಂದಿಗಳ ಹೊಟ್ಟೆ, ಕೊಂಬುಗಳನ್ನೂ ಮುರಿದ ಪ್ರಕರಣಗಳೂ ಇರುವುದು ಗಮನಾರ್ಹ ಎನ್ನುತ್ತಾರೆ ಇತಿಹಾಸ ತಜ್ಞ ಶ್ರೀವತ್ಸ.
ಮೈಸೂರು ಚಾಮುಂಡಿಬೆಟ್ಟ
ಮೈಸೂರು ಚಾಮುಂಡಿ ಬೆಟ್ಟದಲ್ಲಿರುವ ನಂದಿಯನ್ನು 1664ರಲ್ಲಿ ದೊಡ್ಡ ದೇವರಾಜ ಒಡೆಯರ್ ಅವರಿಂದ ಸ್ಥಾಪಿಸಲ್ಪಟ್ಟಿದ್ದಾಗಿದೆ. ಇದೇ ಸಂದರ್ಭದಲ್ಲಿ ಬೆಟ್ಟಕ್ಕೆ ಸಾವಿರ ಮೆಟ್ಟಿಲುಗಳನ್ನು ನಿರ್ಮಿಸಲಾಗಿತ್ತು. ಬೆಟ್ಟದ 700ನೇ ಮೆಟ್ಟಿಲ ಬಳಿಯಿರುವ ಈ ನಂದಿ ವಿಗ್ರಹವನ್ನು ಕೃಷ್ಣಶಿಲೆಯಲ್ಲಿ ಕೊರೆಯಲಾಗಿದೆ. 25 ಅಡಿ ಉದ್ದ, 16 ಅಡಿ ಎತ್ತರ. ನಂದಿ ಮೈಮೇಲೆ ಶಿಲ್ಪದಲ್ಲೆ ಹಗ್ಗ, ಸರಪಳಿ, ಗಂಟೆ ಕೊರೆದು ಅಲಂಕರಿಸಲಾಗಿದೆ. ಈ ದೊಡ್ಡ ಬಸವ ಕತ್ತನೆತ್ತಿ ಒಂದು ಕಾಲನ್ನು ಮಡಿಸಿ, ಅರ್ಧ ಕಣ್ಣನ್ನು ತೆರೆದು ಶಾಂತವಾಗಿರುವ ಭಂಗಿಯಲ್ಲಿದೆ. ಧ್ಯಾನ ಮಾಡುತ್ತಿರುವ ಯೋಗಿಯಂತಿದೆ. ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ಗುಡಿಗೆ ಹೋಗುವವರು ನಂದಿ ದರ್ಶನ ಪಡೆಯುವುದನ್ನು ಮರೆಯುವುದಿಲ್ಲ. ಬೃಹತ್ ಶಿಲೆಯಲ್ಲಿ ನಿರ್ಮಾಣವಾಗಿರುವ ಈ ನಂದಿಯು ವಿಶ್ವ ವಿಖ್ಯಾತಿ ಪಡೆದಿದೆ. ಚಾಮುಂಡಿಬೆಟ್ಟಕ್ಕೆ ವಾಕಿಂಗ್ ಹೋಗುತ್ತಿದ್ದವರು ಸೇರಿಕೊಂಡು ಕಟ್ಟಿಕೊಂಡಿರುವ ಬೆಟ್ಟದ ಬಳಗದ ಮೂಲಕ ನಂದಿ ಸಂರಕ್ಷಣೆಗಾಗಿ 7 ವರ್ಷಗಳಿಂದ (2006) ಪ್ರತಿ ಕಾರ್ತಿಕ ಮಾಸದಲ್ಲಿ ಮಹಾಭಿಷೇಕ ಆಯೋಜಿಸುತ್ತಿದ್ದಾರೆ.
- ಶಿವಮೊಗ್ಗ ಗಿರಿಧರ್ / ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


