ರನ್ ವೇ
ನಾವು ಆ ಕಥೆಯನ್ನು ಕೇಳದೇ ಇರಲು ಸಾಧ್ಯವೇ ಇಲ್ಲ. ಅರ್ಧ ಕೊಡದ ನೀರನ್ನು ಬಾಯಾರಿದ ಕಾಗೆಯೊಂದು ಕಲ್ಲುಗಳನ್ನು ತುಂಬಿಸಿ, ಕೊನೆಗೆ ನೀರು ಕುಡಿಯುವುದು.
ಈಗ ಅದೇ ನೀತಿಕತೆಗೆ ವಿಭಿನ್ನತೆಯ ಲೇಪ ಬಳಿಯಲಾಗಿದೆ. ಅದು ಅರ್ಧ ಕೊಡ ನೀರು. ಅದರ ಮೇಲೆ ಬಾಯಾರಿದ ಕಾಗೆ. ಪಕ್ಕದಲ್ಲಿ ನೂರಾರು ಕಲ್ಲುಗಳು ಬಿದ್ದಿವೆ. ಅದನ್ನು ನೋಡುತ್ತಾ ಕ್ಷಣ ಹೊತ್ತು ಯೋಚಿಸಿ, ಪುರ್ರನೆ ಎತ್ತಲೋ ಹಾರಿಹೋಗುತ್ತದೆ. ಜ್ಯೂಸ್ ಅಂಗಡಿಯ ಪಕ್ಕದಲ್ಲಿ ಬಿದ್ದ ಸ್ಟ್ರಾವನ್ನು ಎತ್ತಿತಂದು, ಅದೇ ಕೊಡಕ್ಕೆ ಬಾಯಿಕೊಟ್ಟು ನೀರನ್ನೆಳೆಯುತ್ತದೆ.
ಯಾರಾದರೂ ಹೇಳಬಹುದು. 'ಆಗ ಸ್ಟ್ರಾ ಇರಲಿಲ್ಲ, ಈಗ ಸ್ಟ್ರಾ ಇದೆ' ಅಂತ. ಆದರೆ, ಗಮನಿಸಬೇಕಾದ್ದು ಅದಲ್ಲ. ತಲೆಮಾರಿನ ಸಂಗತಿಗಳನ್ನು. ಅಂದು ಯೋಚಿಸುತ್ತಿದ್ದ ಕಾಗೆಗೂ, ಇಂದಿನ ಕಾಗೆಗೂ ವ್ಯತ್ಯಾಸ ಹುಡುಕುವ ಪ್ರಯತ್ನ ಇದಷ್ಟೇ. ಕೆಲವೊಮ್ಮೆ ಎಲ್ಲ ಸವಲತ್ತುಗಳಿದ್ದರೂ ನಾವು ವೃತ್ತಾಕಾರವಾಗಿಯೇ ಅಂದರೆ ಶ್ರಮಪಟ್ಟೇ ಗುರಿ ಸಾಧಿಸುತ್ತೇವೆ. ಹಾಗೆ ಶ್ರಮ ಸುರಿಯುವುದರಲ್ಲಿಯೇ ನಮ್ಮ ಅರ್ಧ ಆಯುಸ್ಸು ಕರಗಿಹೋಗಿರುತ್ತದೆ. ಒಂದಿಷ್ಟು ಕಸುವು ವ್ಯರ್ಥವಾಗಿರುತ್ತದೆ. ಉತ್ಸಾಹ ಕುಂದಿ ಹೋಗಿರುತ್ತದೆ.
ಅದು ಎಂಥ ಕಷ್ಟವೇ ಇರಲಿ, ಬೆಟ್ಟದಂಥ ಸವಾಲೇ ಇರಲಿ... ದಿಢೀರನೆ ಉತ್ತರಿಸುವ ಧಾವಂತಕ್ಕೆ ಎಂದೂ ಬೀಳಬಾರದು. ಅವಸರದಲ್ಲಿ ನಿರ್ಧಾರಗಳನ್ನೂ ತೆಗೆದುಕೊಳ್ಳಬಾರದು. ಒಂದೈದು ನಿಮಿಷ ತಡವಾದರೂ ಪರ್ವಾಗಿಲ್ಲ. ಯೋಗ್ಯ ನಿರ್ಧಾರದ ಕೈಹಿಡಿಯಬೇಕು. ಸುತ್ತಿಕೊಂಡೇ ಗುರಿ ತಲುಪಬೇಕೆಂಬ ನಿಯಮವೇನೂ ಇಲ್ಲವಲ್ಲ. ಒಳದಾರಿಗಳೂ ಇವೆ. ತುಸು ಯೋಚಿಸಿದರೆ ಅವುಗಳ ಮೂಲಕವೇ ತಲುಪಬೇಕಾದ ಸ್ಥಳ ತಲುಪಬಹುದು.
'ಬುದ್ಧಿಯಿದ್ದರೆ ನೊಣಕ್ಕೂ ಮಾತು ಕಲಿಸಬಹುದು' ಎನ್ನುವುದು ಇದಕ್ಕೇ. ಕೆಲವೊಮ್ಮೆ ಅವಸರ ನಿರ್ಧಾರಗಳು, ಉದ್ವೇಗದಲ್ಲಿ ಕೈಗೊಂಡ ತಪ್ಪು ನಿರ್ಧಾರಗಳು ನಮ್ಮನ್ನು ಅನೇಕ ಬಾರಿ ಸೋಲಿಸುತ್ತವೆ. ಕಾಲ ಮಿಂಚಿ ಹೋದಮೇಲೆ ಮತ್ತೆ ಪಶ್ಚಾತ್ತಾಪ ಪಡುವುದು ಇದ್ದಿದ್ದೇ. ಅಂಥ ಉದಾಹರಣೆಗಳು ನಾವಾಗಬಾರದು.
ಮಹಾನಗರದೊಳಗೆ ಸಾಗಿಯೇ, ಮುಂದೆ ಹೋಗಬೇಕಂತೇನಿಲ್ಲ. ಈಗ ಅದಕ್ಕಾಗಿಯೇ ಬೈಪಾಸ್ ಮಾಡಲಾಗಿದೆ. ರಿಂಗ್ರೋಡ್ಗಳು ಆಗಿವೆ. ಯಾವುದರ ಮೂಲಕ ಹೋದರೆ ಕಡಿಮೆ ಸಮಯ ಸಾಕು ಎಂಬ ವಿವೇಚನೆಯೊಂದಿದ್ದರೆ, ಹತ್ತಾರು ಸೆಕೆಂಡುಗಳು ನಿಮ್ಮ ಖಾತೆಗೆ ಸೇರ್ಪಡೆಗೊಳ್ಳುತ್ತವೆ. ಆ ಸಮಯದಲ್ಲಿ ನೀವು ಮತ್ತೇನನ್ನಾದರೂ ಸಾಧಿಸಿಕೊಳ್ಳಬಹುದು. ಹೀಗಾಗಿ, ಬದುಕಿನ ಪಯಣದಲ್ಲಿ ಬೈಪಾಸ್ ಹುಡುಕಿಕೊಳ್ಳಿ...
-ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

