ಬೈಟುಕಾಫಿ

ಹಣ, ಮಿಠಾಯಿ ಎದುರು ಮಗುವಿನ ಆಯ್ಕೆ ಮಿಠಾಯಿಯೇ!

ನಮ್ಮಲ್ಲಿ ಬಯಕೆ ಮೂಡುವುದು ನಾವು ಏನನ್ನಾದರೂ ಕಂಡಾಗ, ಕೇಳಿದಾಗ ಅಥವಾ ಅನುಭವಿಸಿದಾಗ ಮಾತ್ರ. ನಮ್ಮ ಬಳಿ ಇಲ್ಲವಾದದ್ದನ್ನು ಅಥವಾ...

Published On :

ನಮ್ಮಲ್ಲಿ ಬಯಕೆ ಮೂಡುವುದು ನಾವು ಏನನ್ನಾದರೂ ಕಂಡಾಗ, ಕೇಳಿದಾಗ ಅಥವಾ ಅನುಭವಿಸಿದಾಗ ಮಾತ್ರ. ನಮ್ಮ ಬಳಿ ಇಲ್ಲವಾದದ್ದನ್ನು ಅಥವಾ ಬೇರೆಯವರ ಬಳಿ ಇದ್ದದ್ದನ್ನು ಕಂಡಾಗ, ಕೇಳಿದಾಗ ಮಾತ್ರ ನಮ್ಮ ಮನದಲ್ಲಿ ಬಯಕೆಗಳು ಮೂಡಲು ಆರಂಭಿಸುತ್ತವೆ. ನಾವು ಅದಕ್ಕೊಂದು ಬೆಲೆ ಕಟ್ಟಲು ಆರಂಭಿಸುತ್ತೇವೆ. ಉದಾಹರಣೆಗೆ, ಸ್ತ್ರೀಗೆ ಇನ್ನೊಂದು ಸ್ತ್ರೀಯ ಕಡೆ ಇರುವ ಒಲವಿಗಿಂತ ಪುರುಷನಿಗೆ ಸ್ತ್ರೀಯೆಡೆಗೆ ಒಲವು ಹೆಚ್ಚಾಗಿರುತ್ತದೆ. ಅದೇ ರೀತಿ ಪುರುಷ-ಪುರುಷರಿಗಿಂತ, ಪುರುಷ-ಸ್ತ್ರೀ ಎಡೆಗೆ. ಸ್ತ್ರೀಯಲ್ಲಿ ವಿಶೇಷವಾದ ಗುಣ ಏನೂ ಇಲ್ಲದಿದ್ದರೂ ಪುರುಷನ ಕಲ್ಪನೆ ಅಥವಾ ದೃಷ್ಟಿಕೋನ ಅವಳನ್ನು ಆಕರ್ಷಕಳನ್ನಾಗಿಸುತ್ತದೆ. ವೃದ್ಧಾಪ್ಯದಲ್ಲಿ ಸ್ತ್ರೀಯರೆಡೆಗೆ ಒಲವು ಕಡಿಮೆ ಆಯಿತೆಂದರೆ ಅವಳಲ್ಲಿ ಆಕರ್ಷಣೆ ಕ್ಷೀಣಿಸಿತು ಎಂದರ್ಥವಲ್ಲ, ಬದಲಾಗಿ ವೃದ್ಧಾಪ್ಯದಲ್ಲಿ ಪುರುಷನ ದೃಷ್ಟಿಕೋನ ಬದಲಾಯಿತು ಎಂದಷ್ಟೇ ಅರ್ಥ. ಏಕೆಂದರೆ ಯೌವನದಲ್ಲಿ ಸ್ತ್ರೀ ಪುರುಷರ ಪರಸ್ಪರ ಆಕರ್ಷಣೆ ಸಹಜ. ವ್ಯಕ್ತಿ ಬದಲಾಗದಿದ್ದರೂ, ಲಿಂಗ ಬದಲಾಗದಿದ್ದರೂ, ವಯಸ್ಸಿಗೆ ಅನುಗುಣವಾಗಿ ದೃಷ್ಟಿಕೋನ ಬದಲಾಗುತ್ತದೆ. ಹಾಗೆಯೇ ಮದ್ಯಪಾನವಾಗಲೀ, ಧೂಮಪಾನವಾಗಲೀ ಎಲ್ಲರಿಗೂ ಖುಷಿ ಕೊಡುವುದಿಲ್ಲ. ಆ ವಸ್ತುವಿನಲ್ಲಿರುವ ಗುಣಕ್ಕಿಂತಲೂ ಅದರಲ್ಲಿ ವ್ಯಕ್ತಿಗೆ ಇರುವ ಆಸಕ್ತಿ ಅಥವಾ ಅದರ ಬಗೆಗಿನ ಕಲ್ಪನೆ ಮತ್ತು ಅದರೆಡೆಗಿನ ದೃಷ್ಟಿಕೋನ ವ್ಯಕ್ತಿಯ ಮನ ತಣಿಸುತ್ತದೆ.
ಚಿಕ್ಕ ಮಗುವೊಂದಕ್ಕೆ ಚಿನ್ನಾಭರಣವಾಗಲೀ, ಹಣವಾಗಲೀ ಅಷ್ಟು ಆಕರ್ಷಕ ಎಂದು ಅನಿಸುವುದಿಲ್ಲ. ಮಿಠಾಯಿ, ಆಟಿಕೆಯ ವಸ್ತು, ಹಣ, ಆಭರಣ ಎಲ್ಲವನ್ನೂ ಅಕ್ಕಪಕ್ಕದಲ್ಲಿಟ್ಟರೆ ಮಗು ಮಿಠಾಯಿಯನ್ನೋ ಅಥವಾ ಆಟಿಕೆಯ ವಸ್ತುವನ್ನೋ ಆರಿಸಿಕೊಳ್ಳುತ್ತದೆ. ಮನೆ ಇಲ್ಲದವನಿಗೆ ಮನೆಯೂ, ಹಸಿದವನಿಗೂ ಊಟವೂ, ಬಟ್ಟೆ ಇಲ್ಲದವನಿಗೆ ಬಟ್ಟೆಯೂ ಉಳಿದೆಲ್ಲವುಗಳಿಗಿಂತ ಹೆಚ್ಚಿನ ಮೌಲ್ಯದ್ದಾಗಿ ಕಾಣುತ್ತದೆ. ಯಾವುದೇ ಒಂದು ವಸ್ತು ನಮಗೆ ಕುತೂಹಲಕಾರಿಯಾಗಿಯೋ, ಆಕರ್ಷಣೀಯವಾಗಿಯೋ ಕಾಣಲು ಕಾರಣ ನಮ್ಮ ದೃಷ್ಟಿಕೋನ ಮತ್ತು ಕಲ್ಪನೆ.
ಪ್ರತಿಯೊಬ್ಬನ ಕಲ್ಪನೆಯೂ, ದೃಷ್ಟಿಕೋನವೂ ಬೇರೆಬೇರೆಯಾಗಿರುವುದರಿಂದಲೇ ಪ್ರಪಂಚ ಇಷ್ಟು ಕುತೂಹಲಕಾರಿಯಾಗಿದೆ. ಆದ್ದರಿಂದಲೇ ಒಬ್ಬ ನಾಟಕಕಾರನಾದರೆ ಒಬ್ಬ ಗಾಯಕ, ಒಬ್ಬ ರಾಜಕಾರಣಿ, ಒಬ್ಬ ಕ್ರೀಡಾಪಟು, ಒಬ್ಬ ಬರಹಗಾರ, ಒಬ್ಬ ಸಮಾಜ ಸೇವಕ, ಮತ್ತೊಬ್ಬ ಸನ್ಯಾಸಿ. ಕೆಲವರು ತಮ್ಮ ಉದ್ಯೋಗಕ್ಕೆ ಮಹತ್ವ ಕೊಟ್ಟರೆ ಕೆಲವರು ತಮ್ಮ ಸಂಸಾರಕ್ಕೆ, ಮತ್ತೆ ಕೆಲವರು ಸಮಾಜಕ್ಕೆ ಮಹತ್ವ ಕೊಡುತ್ತಾರೆ.
ಈ ಪ್ರಪಂಚದಲ್ಲಿ ಖಾಲಿ ನಿವೇಶನವಾಗಲೀ, ಗೋದಾಮಾಗಲೀ, ಅದರೊಳಗೆ ಶೇಖರಿಸಿ ಇಟ್ಟಿರುವ ಕಚ್ಚಾ ಸಾಮಗ್ರಿಯಾಗಲೀ, ಕಾರ್ಖಾನೆಯಾಗಲೀ ಆಕರ್ಷಕವೆಂದೆನಿಸುವುದಿಲ್ಲ. ಒಬ್ಬ ಉದ್ಯಮಿಗೆ ಆಕರ್ಷಕ ಎನಿಸುವುದು ಕಾಗದದ ಮೇಲೆ ಇವುಗಳ ಮೌಲ್ಯ. ಮಾರುಕಟ್ಟೆಯಲ್ಲಿ ಇವುಗಳು ಮೌಲ್ಯ ಕಳೆದುಕೊಂಡರೆ ಇವುಗಳಲ್ಲಿ ಯಾವುದೂ ಆಸಕ್ತಿಯ ವಿಷಯವಲ್ಲ. ಏಕೆಂದರೆ ಇವುಗಳಲ್ಲಿ ಯಾವುದೂ ಬದುಕಲು ಅವಶ್ಯಕವಾದ ವಸ್ತುವಲ್ಲ.
(ಮುಂದುವರಿಯುವುದು)

-ಕಿರಣ್ ಉಪಾಧ್ಯಾಯ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.