ಬೈಟುಕಾಫಿ

ಭಾರತೀಯರಾಗಿ ಹುಟ್ಟಿದ್ದೇವೆ, ಭಾರತೀಯರಾಗಿ ಬದುಕೋಣ!

Published On :

ನಮ್ಮದು ರಾಮ ರಾಜ್ಯ
ನೋಡಿ ಸ್ವಾಮೀ, ನಮ್ಮದು ರಾಮ ರಾಜ್ಯ. ನಮ್ಮ ದೇಶ ಸಂಪ್ರದಾಯಕ್ಕೆ ಹೆಸರುವಾಸಿ. ನಮ್ಮ ಪೂರ್ವಿಕರು ಎಲ್ಲದಕ್ಕೂ ಒಂದೊಂದು ಸಮಯ, ಸಂದರ್ಭ ಅಂತ ಮಾಡಿದ್ದಾರೆ. ಲೈಂಗಿಕತೆಗೂ ಅಷ್ಟೇ. ಮದುವೆಯ ನಂತರವೇ ಅದು ಶಾಸ್ತ್ರೋಕ್ತವಾಗಿ ಆಗಬೇಕು. ಅದಕ್ಕೂ ದಿನ ನಿಶ್ಚಯಿಸಬೇಕು. ನಮ್ಮ ಹಿರಿಯರು ಏನೇ ಸಂಪ್ರದಾಯ ಮಾಡಿದರೂ ಕಾರಣ ಇಲ್ಲದೇ ಮಾಡಿಲ್ಲ. ಅಂದಮೇಲೆ ಮದುವೆ ಅದ ನಂತರ ಶೋಭನದ ಶಾಸ್ತ್ರಕ್ಕೂ ಏನೋ ಕಾರಣ ಇರಬೇಕಲ್ಲವೆ? ಮದುವೆಯ ನಂತರ '3 ತಿಂಗಳಾದರೆ' ಸಂಭ್ರಮದ ಆರತಿ. ಮದುವೆಯ ಮೊದಲೇ '3 ತಿಂಗಳಾದರೆ' ಮುಖಕ್ಕೆ ಮಂಗಳಾರತಿ. ಆದ ಕಾರಣ ವಿವಾಹಪೂರ್ವ ಲೈಂಗಿಕತೆ ಒಳ್ಳೆಯದಲ್ಲ ನೆನಪಿರಲಿ.
-ಖಂಡೋಬಾ ವಿ., ಕಾದರವಳ್ಳಿ ಗ್ರಾಮ

ಮಸಿ ಬಳಿದುಕೊಳ್ಳಬೇಕೆ?
ಊಹುಂ, ಸರಿಯಲ್ಲ. ನಮ್ಮದು ಸುಸಂಸ್ಕೃತಿಗೆ ಹೆಸರಾದ ಭಾರತ. ಇದಕ್ಕೆ ತನ್ನದೇ ಆದ ವಿಶಿಷ್ಟ ಸಂಸ್ಕೃತಿ, ಆಚರಣೆ, ನಂಬಿಕೆಗಳಿವೆ. ಹುಟ್ಟಿನಿಂದ ಯೌವ್ವನ, ಮದುವೆ, ಮಕ್ಕಳು ಸಂಸಾರ-ಸಂಸ್ಕಾರ ಇವೆಲ್ಲವೂ ಹೇಗೇಗೆ ಆಚರಣೆಗೊಳ್ಳಬೇಕೆಂದು ಅಚ್ಚುಕಟ್ಟಾಗಿ ರೂಪಿಸಲಾಗಿದೆ. ಇಂತಹ ರಾಷ್ಟ್ರದಲ್ಲಿ ಮದುವೆಗೂ ಮುನ್ನವೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ನಮ್ಮ ಮೌಲ್ಯಗಳಿಗೆ, ಸಂಸ್ಕೃತಿಗೆ ಮಸಿ ಬಳಿದುಕೊಳ್ಳುವಂತಹ ಕೆಲಸ. ಪರಸ್ಪರ ಒಪ್ಪಿಗೆ ಇದ್ದರೂ ವಿವಾಹದ ಮುನ್ನವೇ ಲೈಂಗಿಕವಾಗಿ ಸೇರುವುದು ತಪ್ಪು. ಹೆಣ್ಣನ್ನು ಪೂಜನೀಯ ಸ್ಥಾನದಲ್ಲಿ ಕಾಣುವ ರಾಷ್ಟ್ರದಲ್ಲಿಯೇ ವಿವಾಹಪೂರ್ವ ಸೆಕ್ಸ್‌ಗಳಂತಹ ಅಸಹ್ಯಕರವಾದ ಘಟನೆಗಳು ಜರುಗಿದರೆ ನಮ್ಮ ಭವ್ಯ ಸಂಸ್ಕೃತಿ ಗತಿಯೇನು? 'ಭಾರತೀಯರಾಗಿ ಹುಟ್ಟಿದ್ದೇವೆ. ಭಾರತೀಯರಾಗಿಯೇ ಬದುಕೋಣ'.
ಟಮಹೇಶ್ ಎಂ.ಸಿ., ದಾವಣಗೆರೆ

ಭ್ರೂಣಹತ್ಯೆಗೆ ಕಾರಣರು...
ಹಿಂದೆಲ್ಲಾ ತಾಳಿ ಕಟ್ಟುವ ಕ್ಷಣದವರೆಗೂ ಗಂಡು-ಹೆಣ್ಣು ಪರಸ್ಪರರನ್ನು ನೋಡಲು ಅವಕಾಶವೇ ಇರಲಿಲ್ಲ. ಇನ್ನು ಮದುವೆ ನಂತರ ಗಂಡು ಹೆಣ್ಣು ಕೂಡುವುದಕ್ಕೂ ಒಂದು ದಿನ, ಸಮಯವನ್ನು ನಿಗದಿಪಡಿಸುತ್ತಿದ್ದರು. ಅಂದಿನ ಸಂಪ್ರದಾಯಕ್ಕೂ ಮಹತ್ವ ಇತ್ತು. ಆಧುನಿಕತೆ ಬೆಳೆದಂತೆಲ್ಲಾ ಇಂತಹ ಸಂಪ್ರದಾಯಗಳನ್ನು ಗಾಳಿಗೆ ತೂರುವುದಲ್ಲದೇ ಪ್ರೀತಿ-ಪ್ರೇಮದ ನೆಪದಲ್ಲಿ ಅದೆಷ್ಟೊ ಯುವಕ, ಯುವತಿಯರು ವಿವಾಹ ಮುನ್ನವೇ ಸಿನಿಮಾ, ಹೋಟೆಲ್, ಪಾರ್ಕ್‌ನೊಳಗೆ ಸೇರಿಕೊಂಡು ಹರೆಯದ ಹುಚ್ಚನ್ನು ಅತಿರೇಕ ಮಾಡಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡು ಭ್ರೂಣ ಹತ್ಯೆಗೂ ಕಾರಣರಾಗುತ್ತಿದ್ದಾರೆ. ಹೆತ್ತವರ ಗೌರವವನ್ನೂ ಹಾಳು ಮಾಡಿ ಸಮಾಜದ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಆದ್ದರಿಂದ ವಿವಾಹಪೂರ್ವ ಲೈಂಗಿಕ ಕ್ರಿಯೆಯಿಂದ ದೂರ ಇರುವುದೇ ವಾಸಿ.
-ಬರ್ಕಲಿ ರಮೇಶ್, ಮಂಡ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.