ಬೈಟುಕಾಫಿ

ಈಳಿಗೆಯ ಏಳಿಗೆ

ಈಳಿಗೆಯ ಏಳಿಗೆ
Published On :

ಗದಗ ಜಿಲ್ಲೆಯ ಮುಂಡರಗಿಯಲ್ಲಿನ ಕಮ್ಮಾರರು ತಯಾರಿಸುವ ಉಕ್ಕಿನ ಈಳಿಗೆಗೆ ಈಗ ರಾಜ್ಯದ ಬಹುತೇಕ ಜಿಲ್ಲೆಗಳ ಮಾರುಕಟ್ಟೆಗಳಲ್ಲಿ ಎಲ್ಲಿಲ್ಲದ ಬೇಡಿಕೆಯಿದೆ. ವಿನೂತನ ಹಾಗೂ ವಿಶಿಷ್ಟ ರೀತಿಯ ಈಳಿಗೆಯನ್ನು ತಯಾರಿಸುವುದರಲ್ಲಿ ಇಲ್ಲಿನ ಕಮ್ಮಾರರು ಎತ್ತಿದ ಕೈ.
ಪಟ್ಟಣದಲ್ಲಿರುವ ಕೆಲವೇ ಕಮ್ಮಾರ ಮನೆತನದವರು ನೂರಾರು ವರ್ಷಗಳಿಂದ ಈ ಈಳಿಗೆ ತಯಾರಿಸುವ ಕಾಯಕದಲ್ಲಿ ನಿರತರು. ಒಂದು ಈಳಿಗೆಗೆ ಇವರ ಬೆಲೆ ರು. 80ರಿಂದ 175. ಅದೇ ಈಳಿಗೆಗೆ ಅಂಗಡಿಯಲ್ಲಿ ರು. 300-500 ಬೆಲೆ. ಮಾರುಕಟ್ಟೆಯಲ್ಲಿ ಕಬ್ಬಿಣದ ಬೆಲೆ ಗಗನಕ್ಕೇರಿ, ಈಳಿಗೆಗೆ ಮಾತ್ರ ಬೆಲೆ ಏರದಿದ್ದರೂ, ದ್ಯಾಮಣ್ಣ ಕಮ್ಮಾರ, ಮೌನೇಶ ಕಮ್ಮಾರ, ಮಾನಪ್ಪ ಕಮ್ಮಾರ, ದೇವಣ್ಣ ಪತ್ತಾರ, ಮಂಜುನಾಥ ಕಮ್ಮಾರ ಎಂಬ 5 ಮನೆತನದವರು ವಂಶಪಾರಂಪರಿಕ ಕಸಬು ಮುಂದುವರಿಸಿದ್ದಾರೆ.
ಆಧುನಿಕ ಭರಾಟೆಗೆ ಸವಾಲು
ಆಧುನಿಕ ಮಾರುಕಟ್ಟೆಯಲ್ಲಿ ಸ್ಟೀಲ್, ಅಲ್ಯೂಮಿನಿಯಂ, ಹಿತ್ತಾಳೆ, ಫೈಬರ್ ಈಳಿಗೆಗಳು ದೊರೆಯುತ್ತಿವೆ. ಆದರೆ, ಮುಂಡರಗಿಯ ಈಳಿಗೆಗಳು ಗ್ರಾಹಕರಲ್ಲಿ ತನ್ನದೇ ಛಾಪು ಮೂಡಿಸಿವೆ. ಇಲ್ಲಿ 5 ಮಾದರಿಯ ಈಳಿಗೆ ತಯಾರಿಸಲಾಗುತ್ತಿದೆ. ಪ್ರತಿದಿನ ಒಂದು ಮನೆತನದವರು 30 ಈಳಿಗೆ ತಯಾರಿಸುತ್ತಾರೆ. ತಿಂಗಳಿಗೆ 5 ಮನೆಯವರಿಂದ ಸುಮಾರು 5ರಿಂದ 6 ಸಾವಿರ ಈಳಿಗೆ ತಯಾರಾಗುತ್ತವೆ.
ಪ್ರಸಿದ್ಧಿ ಪಡೆದ ಈಳಿಗೆ
ಕಮ್ಮಾರರು ಹೇಳುವಂತೆ ತಮ್ಮ ವೃತ್ತಿ ಬದುಕಿನಲ್ಲಿ ಒಮ್ಮೆಯೂ ಈಳಿಗೆ ಮಾರಾಟವಾಗದೇ ಉಳಿದಿಲ್ಲ. ತಯಾರಾಗುತ್ತಿದ್ದಂತೆ ಗ್ರಾಹಕರು, ವ್ಯಾಪಾರಸ್ಥರು ಬಂದು ತೆಗೆದುಕೊಂಡು ಹೋಗುತ್ತಾರೆ. ಮಾನ್ವಿ, ಬಳ್ಳಾರಿ, ಗಂಗಾವತಿ, ಹೊಸಪೇಟೆ, ಕೊಪ್ಪಳ, ರಾಯಚೂರು, ಬಿಜಾಪುರ, ಬಾಗಲಕೋಟ, ಬೆಂಗಳೂರಿನಲ್ಲಿಯೂ ಈ ಈಳಿಗೆಗೆ ಸಾಕಷ್ಟು ಬೇಡಿಕೆಯಿದೆ. ನೆರೆ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಆಂಧ್ರದಲ್ಲಿಯೂ ಇಲ್ಲಿನ ಈಳಿಗೆ ಪರಿಚಿತ.  
ನಾವು ಕಷ್ಟಪಟ್ಟು ಈಳಿಗೆ ತಯಾರಿಸುತ್ತೇವೆ. ಹೊಟ್ಟೆ ಬಟ್ಟೆಗೆ ಕೊರತೆಯಿಲ್ಲ. ಆದರೆ, ಕಚ್ಚಾ ವಸ್ತುಗಳ ದರ ಹೆಚ್ಚಾಗಿದೆ. ಇದೇ ವೃತ್ತಿಯಲ್ಲಿ ನಮ್ಮ ತಂದೆ ಕಷ್ಟದಿಂದ ಜೀವನ ಮಾಡಿದರು. ಶ್ರಮಪಟ್ಟರೆ ಈಳಿಗೆ ತಯಾರಿಕೆಯಲ್ಲಿ ನಷ್ಟವಿಲ್ಲ. ಆದರೆ, ಆಧುನಿಕ ಯಂತ್ರಗಳ ಮೂಲಕ ಇನ್ನೂ ಹೆಚ್ಚಿನ ಉತ್ಪಾದನೆ ಮಾಡಬೇಕೆಂದರೆ ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ.
- ಮೌನೇಶ ಕಮ್ಮಾರ, ಈಳಿಗೆ ತಯಾರಕ

ಇಲ್ಲಿನ ಈಳಿಗೆ ಇತರ ಕಡೆಯವುಗಳಂತೆ ಸವಕಳಿ ಬರುವುದಿಲ್ಲ. ಬಳಸಿದಷ್ಟು ಹೆಚ್ಚು ಹರಿತವಾಗುವುದರ ಜತೆಗೆ ಬಾಳಿಕೆ ಬರುತ್ತದೆ. 25ರಿಂದ 30 ವರ್ಷ ಬಾಳುತ್ತದೆ. ಇವರಿಗೆ ವಾಸಿಸಲು ಸ್ವಂತ ಮನೆಗಳಿಲ್ಲ. ಖಾಲಿ ಜಾಗೆಯೂ ಇಲ್ಲ. ಕಡ್ಲಿಪೇಟೆಯಲ್ಲಿರುವ ತೋಂಟದ ಸಿದ್ಧಲಿಂಗ ಶ್ರೀಗಳ ಜಾಗೆಯಲ್ಲಿ ಇವರ ಕುಟುಂಬದವರು ವಾಸವಾಗಿದ್ದಾರೆ. ಇವರಿಗೆ ಸರ್ಕಾರ ಸ್ಪಂದಿಸಿ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು.
- ವಿಜಯಕುಮಾರ ರಾಟಿ, ಪುರಸಭೆ ಮಾಜಿ ಸದಸ್ಯ

-ಶರಣು ಸೊಲಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.