ಬೈಟುಕಾಫಿ

ವಂಶವೃಕ್ಷ

ಅಪ್ಪ, ಅಮ್ಮ, ಅಕ್ಕ, ತಂಗಿ, ಅಣ್ಣ, ತಮ್ಮ, ಹೆಚ್ಚೆಂದರೆ ಅಜ್ಜ, ಅಜ್ಜಿ ಇಲ್ಲಿಗೆ ಮುಗೀತು. ಇನ್ನು ಚಿಕ್ಕಪ್ಪ, ಚಿಕ್ಕಮ್ಮ, ಅತ್ತೆ ಮಾವ...

ವಂಶವೃಕ್ಷ
Published On :

ಅಪ್ಪ, ಅಮ್ಮ, ಅಕ್ಕ, ತಂಗಿ, ಅಣ್ಣ, ತಮ್ಮ, ಹೆಚ್ಚೆಂದರೆ ಅಜ್ಜ, ಅಜ್ಜಿ ಇಲ್ಲಿಗೆ ಮುಗೀತು. ಇನ್ನು ಚಿಕ್ಕಪ್ಪ, ಚಿಕ್ಕಮ್ಮ, ಅತ್ತೆ ಮಾವ ಇವರೆಲ್ಲರೂ ಆಂಟಿ, ಅಂಕಲ್‌ಗಳಾಗಿ ಆಗಾಗ ಕಾಣಿಸಿಕೊಳ್ಳುವುದು. ಇದು ಇಂದಿನ ವಿಭಕ್ತ ಕುಟುಂಬದ ಸ್ಥಿತಿ. ಹಿಂದೆ ಇದ್ದ ದೊಡ್ಡ ಅವಿಭಕ್ತ ಕುಟುಂಬಗಳು ಒಡೆದು ಚೂರಾಗುತ್ತಿವೆ. ಸಂಬಂಧಗಳು ದೂರಾಗುತ್ತಿವೆ. ಈ ಸಂದರ್ಭ ಅಜ್ಜ, ಮುತ್ತಜ್ಜ... ಹೀಗೆ ಹಳೆಯ ಕೊಂಡಿಗಳನ್ನು ನೆನೆಸಿಕೊಂಡರೆ ಎಷ್ಟು ಜನ ಸಿಗಬಹುದು? ಹೆಚ್ಚೆಂದರೆ ಎರಡು, ಮೂರು, ತಲೆಮಾರಿನ ಒಂದೈದಾರು ಮಾಹಿತಿ ಸಿಗಬಹುದು ಅಷ್ಟೇ.
ಆದರೆ ಇಲ್ಲೊಬ್ಬ ನಿವೃತ್ತ ಸರ್ಕಾರಿ ಉದ್ಯೋಗಿಯ ಹತ್ತಿರ ಒಂದೇ ಕುಟುಂಬದ 9 ತಲೆಮಾರಿನ ವಂಶವೃಕ್ಷ ಸಿಗುತ್ತದೆ. ಚಿಕ್ಕಮಗಳೂರು ಜಿಲ್ಲೆ, ಶೃಂಗೇರಿ ತಾಲೂಕು ಬೆಳಂದೂರು ಕುಟುಂಬದ ಸುಮಾರು 385 ಮಂದಿಯ ಹೆಸರು, ವಯಸ್ಸು, ಉದ್ಯೋಗ ಇವರಲ್ಲಿ ಲಭ್ಯ. ಅಂಚೆ ಇಲಾಖೆಯಲ್ಲಿ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಬಿ.ವಿ. ಸುಬ್ಬರಾವ್, ನಿವೃತ್ತಿಯ ನಂತರ ಕುಟುಂ ಬದ ವಂಶವೃಕ್ಷ ತಯಾರಿಕೆಯಲ್ಲಿ ನಿರತರಾದರು.

ಏನಿದು ವಂಶವೃಕ್ಷ?
ವಂಶವೃಕ್ಷವೆಂದರೆ ತಮ್ಮ ವಂಶದ ಮೂಲ, ಅದರ ಬೆಳವಣಿಗೆ, ಅಲ್ಲಿನ ಕವಲುಗಳು ಹೀಗೆ ಕುಟುಂಬದಲ್ಲಿ ಹುಟ್ಟಿದ, ಮೃತಪಟ್ಟವರ ಎಲ್ಲರ ಹೆಸರುಗಳನ್ನೂ ಅನುಕ್ರಮವಾಗಿ ಪಟ್ಟಿ ಮಾಡುತ್ತಾ ಹೋಗುವುದು. ಇಂದು ಈ ಕಾರ್ಯ ಮಾಡುವವರು ಅಪರೂಪ.
ಸುಬ್ಬರಾವ್ ಅವರ ಮೂಲ ಶೃಂಗೇರಿಯ ಸಮೀಪದ ಬೆಳಂದೂರು ಮನೆತನ. ಈ ಮನೆತನದಲ್ಲಿಯೇ ಹೆಗ್ಗದ್ದೆ, ಹಾಲಗಾರು, ಹಂಚಿಲಿ ಕುಟುಂಬವೂ ಬರುತ್ತದೆ. ಭಾರ್ಗವ ಗೋತ್ರದ ಈ ಮನೆತನದವರು ಹಲವು ಕವಲಾಗಿ ಇಂದು ದೇಶ, ವಿದೇಶಗಳಲ್ಲೂ ನೆಲೆಸಿದ್ದಾರೆ ಎನ್ನುತ್ತಾರೆ ಸುಬ್ಬರಾವ್. ಸುಬ್ಬರಾವ್ ತಯಾರಿಸಿರುವ ವಂಶವೃಕ್ಷ ಪ್ರಾರಂಭವಾಗುವುದು ಅಂದಾಜು 1770ರಲ್ಲಿದ್ದ ಶಂಕರಯ್ಯ ಎಂಬವರ ಹೆಸರಿನಿಂದ. ಅವರ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಹೀಗೆ ಮುಂದುವರಿದು 2010ರಲ್ಲಿ ಜನಿಸಿದ ಮಗುವಿನವರೆಗೂ ಮಾಹಿತಿ ಇರುವ ಈ ವಂಶವೃಕ್ಷ ಪ್ರಸ್ತುತ 75 ಪುಟಗಳ ಒಂದು ಪುಸ್ತಕವೇ ಆಗಿದೆ. 230 ವರ್ಷ ಹಿಂದೆ ನಮ್ಮನ್ನು ಕೊಂಡೊಯ್ಯುತ್ತದೆ. ವ್ಯಕ್ತಿಯ ಹೆಸರಿನೊಂದಿಗೆ ಹುಟ್ಟಿದ ದಿನ, ವಿದ್ಯಾರ್ಹತೆ, ಉದ್ಯೋಗ, ಮೃತ ದಿನಾಂಕ, ಇತ್ಯಾದಿ ಮಾಹಿತಿ ಇವರಲ್ಲಿದೆ.

ವೃಕ್ಷ ಹುಟ್ಟಲು ಕಾರಣ
ಅಜ್ಜ, ಅಜ್ಜಿ, ತಂದೆ, ತಾಯಿ ಹಿಂದಿನ ತಲೆಮಾರಿನವರ ಬಗ್ಗೆ ಹೇಳುತ್ತಿದ್ದರು. ಮುಂದೆ ನಮ್ಮ ಮಕ್ಕಳು, ಮೊಮ್ಮಕ್ಕಳು, ಕೇಳಿದಾಗ ಅವರ ವಂಶದ ಪರಿಚಯ ಮಾಡಿಸುವುದು ನಮ್ಮ ಕರ್ತವ್ಯ ಎಂದೆನಿಸಿದಾಗ ಹುಟ್ಟಿದ್ದೇ ಈ ವಂಶವೃಕ್ಷ ಎಂದು ಸುಬ್ಬರಾಯರು ಹೇಳುತ್ತಾರೆ. 1995ರಲ್ಲಿ ಪ್ರಥಮ ಬಾರಿಗೆ ವಂಶವೃಕ್ಷಕ್ಕೆ ಮಾಹಿತಿ ಸಂಗ್ರಹಿಸಿದ ಸುಬ್ಬರಾಯರಿಗೆ ಸಿಕ್ಕಿದ್ದು 95 ಮಂದಿಯಷ್ಟೆ. ಕುಟುಂಬದ ಹೆಚ್ಚಿನವರ ಪ್ರೋತ್ಸಾಹದಿಂದ ಕೆಲಸ ಸುಲಭವಾಯಿತು. 15 ವರ್ಷದ ನಂತರ ಮತ್ತೊಮ್ಮೆ ಮಾಹಿತಿ ಅಪ್‌ಡೇಟ್ ಮಾಡಲು ಮುಂದಾದಾಗ ಪ್ರೋತ್ಸಾಹದೊಂದಿಗೆ ಮತ್ತಷ್ಟು ಮಾಹಿತಿಯೂ ಲಭ್ಯವಾಯಿತು. ಹೀಗಾಗಿ 2010ರಲ್ಲಿ ಇವರ ವಂಶವೃಕ್ಷ ಹಲವು ಕವಲೊಡೆದು 385 ಮಂದಿಯಾಗಿದ್ದರು. ಇದರಲ್ಲಿ ಇನ್ನೊಂದು 20 ಮಂದಿಯ ಮಾಹಿತಿ ಇನ್ನೂ ಸಿಗಬೇಕಾಗಿದೆ ಎನ್ನುವ ಸುಬ್ಬರಾಯರು 3ನೇ ಬಾರಿಗೆ ತಲೆಮಾರಿನ ಜಾಡು ಹಿಡಿದು ಹೊರಟಿದ್ದಾರೆ.
ಒಟ್ಟಿನಲ್ಲಿ ಈ ವಂಶದಲ್ಲಿ ಆಗ ತಾನೇ ಹುಟ್ಟಿದ ಮಗುವಿಗೂ ತನ್ನ ಹಿಂದಿನ ಹತ್ತಾರು ತಲೆಮಾರಿನವರನ್ನು ಪರಿಚಯಿಸಲು ಹೊರಟು ತಮ್ಮ ನಿವೃತ್ತ ಬದುಕಿನಲ್ಲೊಂದು ಸಾಧನೆ ಮಾಡುತ್ತಿರುವ ಸುಬ್ಬರಾವ್ ಅವರನ್ನು ಅಭಿನಂದಿಸಲೇಬೇಕು. ಮೊ. 9448237880

- ಸುಧೀಂದ್ರ ಜಮ್ಮಟಿಗೆ
sudheeja@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.