ಕಣಿಲೆ ಕಾಣಿ

ಮಳೆಗಾಲ ಆರಂಭವಾದರೆ ಸಾಕು. ಮಳೆಗಾಲಕ್ಕೆ ಮೀಸಲಾದ ಬಗೆ ಬಗೆಯ ತಿನಿಸುಗಳ ಸರದಿಯೇ ಆರಂಭವಾಗುತ್ತದೆ. ಕಣಿಲೆ ಕೂಡ ಅಂತಹ ಆಹಾರ ಪದಾರ್ಥಗಳಲ್ಲೊಂದು. ಹೊರಗೆ ಜಡಿಮಳೆ ಸುರಿಯುತ್ತಿದ್ದರೆ, ಮನೆಯೊಳಗೆ ಕೂತು ಕಣಿಲೆ ಸಾರು, ಪಲ್ಯಗಳನ್ನು ಸವಿಯುವ ಮಜಾ ಸವಿದವರಿಗಷ್ಟೇ ಗೊತ್ತು.
ಏನಿದು ಕಣಿಲೆ?
ಬಿದಿರಿನ ಮೊಳಕೆ ಅಥವ ಎಳೆ ಬಿದಿರನ್ನು ಕಣಿಲೆ ಎನ್ನುತ್ತಾರೆ. ಮಳೆಗಾಲದ ಆರಂಭದಲ್ಲಿ ಅಂದರೆ ಜೂನ್ ತಿಂಗಳಲ್ಲಿ ಬಿದಿರು ಮೆಳೆಗಳ ಬುಡದಲ್ಲಿ ಕಣಿಲೆ ಮೊಳಕೆಯೊಡೆಯುತ್ತದೆ. ಇದನ್ನು ಕಡಿದು ತಂದು, ಹೆಚ್ಚಿ ಕನಿಷ್ಠ ಮೂರು ದಿನ ನೀರಿನಲ್ಲಿ ನೆನೆಸಿಡಲಾಗುತ್ತದೆ. ಕಹಿ ಹೋದ ನಂತರ ಕಣಿಲೆಯ ಸಾರು, ಪಲ್ಯ, ಉಪ್ಪಿನಕಾಯಿ ಹೀಗೆ ವಿವಿಧ ತಿನಿಸುಗಳನ್ನು ತಯಾರಿಸಬಹುದು. ನೀರಿನಲ್ಲಿಯೇ ನೆನೆಸಿಡುವುದರಿಂದ ಕಣಿಲೆಯನ್ನು ತಿಂಗಳುಗಳ ಕಾಲ ಸಂರಕ್ಷಿಸಿಡಬಹುದು. ಮಲೆನಾಡು, ಕರಾವಳಿಗಳಲ್ಲಿ ಕಣಿಲೆ ಜನಪ್ರಿಯ ಆಹಾರ. ವಿಶೇಷ ಅತಿಥಿಗಳು ಬಂದಾಗ ಕಣಿಲೆಯ ಪದಾರ್ಥಗಳನ್ನು ಮಾಡಿ ಬಡಿಸುವ ಪರಿಪಾಠ.
ದುಬಾರಿಯಾಯ್ತು ಬಿದಿರು
ಕಳೆದ ಒಂದೆರಡು ವರ್ಷಗಳಿಂದ ಕಟ್ಟೆರೋಗದಿಂದ ಅಪಾರ ಪ್ರಮಾಣದಲ್ಲಿ ಬಿದಿರು ನಶಿಸಿದೆ. ಇದರಿಂದ ಮಾರುಕಟ್ಟೆಯಲ್ಲಿ ಕಣಿಲೆಯ ಬೆಲೆಯೂ ಗಗನಕ್ಕೇರಿದೆ. ಈ ಹಿಂದೆ ರು. 10ಗೆ 1ಕೆ.ಜಿ. ಸಿಗುತ್ತಿದ್ದ ಕಣಿಲೆಯ ಬೆಲೆ ಈಗ 200 ಗ್ರಾಂ. ಪ್ಯಾಕೆಟ್ಗೆ ರು. 50. ಬಿದಿರು ಮೆಳೆ ಒಮ್ಮೆ ಕಟ್ಟೆರೋಗದಿಂದ ನಾಶವಾದರೆ ಮತ್ತೆ ಅದು ಮೊದಲಿನಂತೆ ಬೆಳೆದು ನಿಲ್ಲಲು 60 ವರ್ಷಗಳೇ ಬೇಕು.
ಹೀಗೊಬ್ಬ ಬಿದಿರು ಬೆಳೆಗಾರ
ಬಿದಿರು ಒಂದು ಬೆಳೆಯೆಂದು ಇದುವರೆಗೆ ಪರಿಗಣಿತವಾಗಿಲ್ಲ. ಅದು ಕಾಡಿನಲ್ಲೆ ಬೆಳೆಯುವ ಸಸ್ಯ. ಆದರೂ ಕಣಿಲೆಯ ಉಪಯೋಗವನ್ನು ಅರಿತ ಕೆಲವರು ಬಿದಿರನ್ನು ತೊಟದಲ್ಲಿ ನೆಟ್ಟು ಬೆಳೆಸುತ್ತಿದ್ದಾರೆ.
ರಾಜ್ಯ ವೈಲ್ಡ್ ಲೈಫ್ ಫೆಸ್ಟ್ ಅಧ್ಯಕ್ಷ ಕೆ.ಎಂ. ಚಿಣ್ಣಪ್ಪ ಅವರೂ ಶ್ರೀಮಂಗಲ ಸಮೀಪದ ಕುಮಟೂರಿನ ತಮ್ಮ ಕಾಫಿ ತೋಟದಲ್ಲಿ 14 ತಳಿಯ ಬಿದಿರುಗಳನ್ನು ಬೆಳೆದಿದ್ದಾರೆ. ತೋಟದಲ್ಲಿಯೇ ಬಿದಿರು ಬೆಳೆದಿರುವುದರಿಂದ ಕಣಿಲೆಗಾಗಿ ಕಾಡು ಮೇಡು ಅಲೆಯುವ ಅವಶ್ಯಕತೆ ಇಲ್ಲ ಎಂದು 73 ವರ್ಷದ ಚಿಣ್ಣಪ್ಪ ಹೇಳುತ್ತಾರೆ.
ಇಂಡೋನೇಶಿಯಾ ತಳಿಗಳಾದ ಡೆಂಡ್ರೋಕಲಮಸ್ ಜೈಜಾಂಟಿಕಸ್, ಬ್ಯಾಂಬೂಸಾ ಅಟ್ರೋವಿಲಾಸಿಯಾ ಎಂಬ ಕಪ್ಪು ಬಿದಿರೂ ಅಲ್ಲದೇ, 50 ವರ್ಷಕ್ಕೊಮ್ಮೆ ಕಾಯಿ ಬಿಡುವ ಬಿದಿರು ಮೆಲ್ಕಾನಾ ಬ್ಯಾಸಿಪೆರಾ ಎಂಬ ಅಪರೂಪದ ಬಿದಿರು ತಳಿಯನ್ನೂ ಇವರ ತೋಟದಲ್ಲಿ ಕಾಣಬಹುದು. ನೀವೂ ಬಿದಿರನ್ನು ಬೆಳೆಯಲು ಆಸಕ್ತರಾಗಿದ್ದರೆ ಅವರ ದೂರವಾಣಿ ಸಂಖ್ಯೆ 9880995788ಗೆ ಕರೆ ಮಾಡಿ ವಿವರಗಳನ್ನು ಪಡೆದುಕೊಳ್ಳಬಹುದು.
- ಟಿ.ಎಲ್. ಶ್ರೀನಿವಾಸ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


