ರುಚಿಗೆ ತಕ್ಕಷ್ಟು ಉಪ್ಪುತೊಂದರೆ ಉಂಟುಮಾಡದು
ಉಪ್ಪು ನಮ್ಮ ದೇಹಕ್ಕೆ ಹೇಗೆ ಸ್ಪಂದಿಸುತ್ತದೆ ಎನ್ನುವುದನ್ನು ನಾವೇ ಅರಿತುಕೊಳ್ಳಬಹುದು. ಆ ವಿಧಾನ ನಿಮಗೆ ಈಗಾಗಲೇ ತಿಳಿದಿದೆ. ಅಧಿಕ ರಕ್ತದೊತ್ತಡ ಇರುವವರು ಉಪ್ಪಿನ ಬಳಕೆ ವಿಚಾರದಲ್ಲಿ ಜಾಗರೂಕರಾಗಿರಬೇಕು. ತಮ್ಮ ಶರೀರದ ಜೈವಿಕ ಪ್ರತಿಕ್ರಿಯೆ ಆಧರಿಸಿ ಉಪ್ಪಿನ ಪಥ್ಯದ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಏಕೆಂದರೆ ಕೆಲವರಲ್ಲಿ ಸೋಡಿಯಂ ಕೊರತೆಯಿಂದಲೂ ರಕ್ತದೊತ್ತಡ ಹೆಚ್ಚಬಹುದು. ನ್ಯೂಯಾರ್ಕ್ನ ಅಲ್ಬರ್ಟ್ ಐನ್ಸ್ಟೀನ್ ಕಾಲೇಜ್ ಆಫ್ ಮೆಡಿಸಿನ್ನ ಡಾ.ಬರ್ನಾರ್ಡ್ ಲ್ಯಾಂಪೋರ್ಟ್ ಈ ಕುರಿತಂತೆ ಅಧಿಕೃತವಾಗಿ ಮಾತನಾಡಬಲ್ಲ ವ್ಯಕ್ತಿಗಳಲ್ಲಿ ಒಬ್ಬರು. ಸೋಡಿಯಂ ಹೆಚ್ಚಾದರೆ ಹೇಗೆ ರಕ್ತದೊತ್ತಡ ಹೆಚ್ಚುತ್ತದೆಯೋ, ಕಡಿಮೆಯಾದರೂ ಅಧಿಕ ರಕ್ತದೊತ್ತಡದ ತೊಂದರೆ ಕಾಣಿಸಿಕೊಳ್ಳಬಲ್ಲದು ಎನ್ನುವುದನ್ನು ತಮ್ಮ ಪ್ರಯೋಗಗಳ ಪುರಾವೆ ಸಮೇತ ಮಂಡಿಸಿದವರು ಅವರು. ಅವರ ಪ್ರಯೋಗಕ್ಕೆ ಒಳಗಾದ ಶೇ 85ರಷ್ಟು ಮಂದಿಯಲ್ಲಿ ಸಾಲ್ಟ್ ಡಯಟ್ನಿಂದ ಅಧಿಕ ರಕ್ತದೊತ್ತಡ ಗಣನೀಯವಾಗಿ ಕಡಿಮೆಯಾಗಿತ್ತು. ಅದಕ್ಕೆ ತದ್ವಿರುದ್ಧವಾಗಿ ಶೇ. 15ರಷ್ಟು ವ್ಯಕ್ತಿಗಳಲ್ಲಿ ರಕ್ತದೊತ್ತಡ ಮತ್ತಷ್ಟು ಜಾಸ್ತಿಯಾಗಿತ್ತು. ಅಂದರೆ ಅವರಲ್ಲಿ ಸೋಡಿಯಂ ಕೊರತೆಯಿಂದಲೇ ರಕ್ತದೊತ್ತಡ ಜಾಸ್ತಿಯಾಗಿತ್ತು. ಸಾಲ್ಟ್ ಡಯಟ್ನವರಿಗೆ ಲ್ಯಾಂಪೋರ್ಟ್ರ ಸಲಹೆ ಎಂದರೆ, 'ನೀವು ಏನೇ ಮಾಡಿ. ಅದನ್ನು ವೈದ್ಯರ ನಿಗಾದಲ್ಲಿ ಮಾಡಿ!' ಬಿ.ಪಿ. ಜಾಸ್ತಿಯಾಗುತ್ತಿರುವ ಅಥವಾ ಲೋ ಬಿ.ಪಿ. ಲಕ್ಷಣಗಳು ಕಂಡುಬಂದ ತಕ್ಷಣ ಪಥ್ಯ ನಿಲ್ಲಿಸಿಬಿಡಬೇಕು ಎನ್ನುವುದು ಅವರ ಕಿವಿಮಾತು.
ಉಪ್ಪಿನ ಚರ್ಚೆ ಆರಂಭದಲ್ಲಿ ಹೇಳಿದ್ದೆ, ಆರೋಗ್ಯವಂತರು ಕೂಡ ಉಪ್ಪನ್ನು ಕಡಿಮೆ ಸೇವಿಸುವುದು ಒಳಿತು ಎಂದು. ಅಧಿಕ ಸೋಡಿಯಂ ರಕ್ತನಾಳಗಳಿಗೆ ಮಾತ್ರವಲ್ಲ, ಮೆದುಳಿಗೂ ಹಾನಿ ಮಾಡಬಹುದು. ಕೆಲವೊಮ್ಮೆ ಅದುವೇ ಪಾರ್ಶ್ವವಾಯುವಿಗೂ ಕಾರಣವಾಗಬಹುದು. ಇನ್ನು, 'ಹೈ ಬಿ.ಪಿ. ಜತೆಗೆ ಮೂತ್ರಕೋಶ ಅಥವಾ ಹೃದಯದ ತೊಂದರೆ ಇದ್ದವರು ಸಾಲ್ಟ್ ಡಯಟ್ನಿಂದ ಮತ್ತಷ್ಟು ತೊಂದರೆಗಳು ಎದುರಾಗುವುದನ್ನು ತಪ್ಪಿಸಿಕೊಳ್ಳಬಹುದು' ಎನ್ನುತ್ತಾರೆ ಯೂನಿವರ್ಸಿಟಿ ಆಫ್ ಮಿನ್ನೆಸೋಟಾ ತಜ್ಞ ಲೂಯಿಸ್ ಟೊಬಿಯಾನ್.
ಆರೋಗ್ಯವಂತ ವ್ಯಕ್ತಿ ದಿನಕ್ಕೆ ಸರಾಸರಿ ಎಷ್ಟು ಉಪ್ಪು ಸೇವಿಸಬೇಕು? ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಮಾನದಂಡದ ಪ್ರಕಾರ, ನಿತ್ಯ ಆರು ಗ್ರಾಂಗಿಂತ ಅಧಿಕ ಸೋಡಿಯಂ ಅನ್ನು ಸೇವಿಸಕೂಡದು. ಆರು ಗ್ರಾಂ ಸೋಡಿಯಂ ಅಂದರೆ ಸುಮಾರು ಮೂರು ಚಹಾ ಚಮಚದಷ್ಟು. ಊಟಕ್ಕೆ ಜಾಸ್ತಿ ಮೇಲುಪ್ಪು ಹಾಕಿಕೊಳ್ಳುವ ಅಭ್ಯಾಸ ಉಳ್ಳವರು ಇದನ್ನು ನೆನಪಿಟ್ಟುಕೊಳ್ಳುವುದು ಒಳಿತು. ಅಡುಗೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಬಳಸುವುದುರಿಂದ ಯಾವುದೇ ಅಪಾಯವಿಲ್ಲ. ಹಾಗೆಯೇ ಉಪ್ಪಿನ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುವುದೂ ಒಳ್ಳೆಯದಲ್ಲ ಎನ್ನುವುದನ್ನೂ ಮರೆಯಬಾರದು!
-ಡಾ. ಪಿ. ಸದಾನಂದ ಮೈಯ್ಯ
ಮೊ.9900113699 (ಎಸ್ಎಂಎಸ್ಗೆ ಮಾತ್ರ)
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

