ತೆಂಗಿನೆಣ್ಣೆಯಿಂದ ಸ್ಟ್ರೋಕ್ ತೀವ್ರತೆ ತಡೆಯಬಹುದೆ?
ಜಾನಪದ ಚಿಕಿತ್ಸಾ ಪದ್ಧತಿಗಳಲ್ಲಿ ಒಂದು ವಿಧಾನವಿದೆ. ಪಾರ್ಶ್ವವಾಯು ಹೊಡೆದಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ತಕ್ಷಣದಲ್ಲಿ ಅವರಿಗೆ ಎಷ್ಟು ಸಾಧ್ಯವೊ ಅಷ್ಟು ತೆಂಗಿನೆಣ್ಣೆ ಕುಡಿಸುತ್ತಾರೆ. ಅದು ಪರಿಶುದ್ಧ ಎಣ್ಣೆಯಾಗಿರಬೇಕು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಲೀಟರ್ಗಟ್ಟಳೆ ತೆಂಗಿನೆಣ್ಣೆ ಇದ್ದೇ ಇರುತ್ತದೆ. ಹೀಗೆ ಮಾಡುವುದರಿಂದ ಸ್ಟ್ರೋಕ್ನ ತೀವ್ರತೆ ಕಡಿಮೆ ಮಾಡಬಹುದು ಮತ್ತು ಅಂಗಾಂಗಳಿಗೆ ಹಾನಿಯಾಗುವುದನ್ನು ತಡೆಯಬಹುದು ಎನ್ನುವ ನಂಬಿಕೆ. ಇದನ್ನು ನಮ್ಮ ಹಿರಿಯರು ಅನುಭವದಿಂದ ಕಂಡುಕೊಂಡದ್ದು. ನನ್ನ ಹತ್ತಿರದ ಬಂಧುವೊಬ್ಬರಿಗೆ ಪಾರ್ಶ್ವವಾಯು ಆದಾಗ ತೆಂಗಿನೆಣ್ಣೆ ಮ್ಯಾಜಿಕ್ ಅನ್ನು ಸ್ವತಃ ಕಂಡಿದ್ದೇನೆ. ಅಲ್ಲಿಗೇ ಚಿಕಿತ್ಸೆ ಮುಗಿಯಿತು ಅಂತಲ್ಲ, ಅದು ಪ್ರಾಥಮಿಕ ಚಿಕಿತ್ಸೆ ಅಷ್ಟೆ. ಆ ನಂತರ ವೈದ್ಯಕೀಯ ಚಿಕಿತ್ಸೆ ಬೇಕೇಬೇಕು. ತೆಂಗಿನೆಣ್ಣೆ ಮಾಡುವ ಮ್ಯಾಜಿಕ್ ಏನು ಅಂದರೆ ರಕ್ತದಲ್ಲಿರುವ ಕೀಟೊನ್ ಎನ್ನುವ ರಾಸಾಯನಿಕವನ್ನು ಅದು ಉದ್ದೀಪಿಸುತ್ತದೆ. ರಕ್ತದ ಅಡೆತಡೆಗಳನ್ನು ಇದು ಸ್ವಲ್ಪಮಟ್ಟಿಗೆ ನಿವಾರಿಸುತ್ತದೆ. ಹೇಳಿಕೇಳಿ ತೆಂಗಿನೆಣ್ಣೆ ಆ್ಯಂಟಿಬ್ಯಾಕ್ಟೀರಿಯಲ್.
ನಾನಿಲ್ಲಿ ವಿವರವಾಗಿ ಹೇಳಹೊರಟಿದ್ದು ತೆಂಗಿನೆಣ್ಣೆ ಬಗ್ಗೆ ಅಲ್ಲ, ಪಾರ್ಶ್ವವಾಯುವಿನ ಕುರಿತು. ಪಾರ್ಶ್ವವಾಯುವಿಗೆ ಮೂಲ ರಕ್ತ ಪರಿಚಲನೆಯಲ್ಲಿನ ತೊಂದರೆ. ಆಮ್ಲಜನಕದ ಪೂರೈಕೆ ಇಲ್ಲದೆ ಮೆದುಳಿನ ಕೋಶಗಳು ನಿಷ್ಕ್ರಿಯವಾಗಿಬಿಡುತ್ತವೆ. ಮೆದುಳು ಮತ್ತು ತಲೆ ಭಾಗಕ್ಕೆ ರಕ್ತ ಪೂರೈಸುವ ನಾಳಗಳಲ್ಲಿ ಅಡೆತಡೆ ಎದುರಾದಾಗ, ಅಪಧಮನಿಗಳಿಗೆ ಹಾನಿಯಾದಾಗ ಮೆದುಳಿಗೆ ರಕ್ತಪೂರೈಕೆಯಲ್ಲಿ ವ್ಯತ್ಯಾಸವಾಗುತ್ತದೆ. ಇದು ಮುಂದುವರಿದಾಗ ಮೆದುಳಿನ ಕೋಳಗಳಲ್ಲಿ ಆಮ್ಲಜನಕದ ಕೊರತೆ ಕಾಣಿಸಿಕೊಂಡು ಒಂದು ಹಂತದಲ್ಲಿ ಅವು ಸತ್ತು ಹೋಗುತ್ತವೆ ಅಥವಾ ನಿಷ್ಕ್ರಿಯವಾಗುತ್ತವೆ. ಅಂದರೆ ಪಾರ್ಶ್ವವಾಯು ಏಕಾಏಕಿ ಉಂಟಾಗುವುದಿಲ್ಲ. ಅದು ಪ್ರಕಟಗೊಳ್ಳುವುದು ಮಾತ್ರ ಅನಿರೀಕ್ಷಿತವಾಗಿ. ಸಾಮಾನ್ಯವಾಗಿ ಯಾವ ಭಾಗಕ್ಕೆ ಸ್ಟ್ರೋಕ್ ಆಗಿದೆಯೊ, ಆ ಭಾಗದ ಅಂಗಾಂಗಗಳು ಸ್ವಾಧೀನ ಕಳೆದುಕೊಳ್ಳುತ್ತವೆ. ತೀರಾ ಅಪರೂಪದ ಪ್ರಕರಣಗಳಲ್ಲಿ ಪಾರ್ಶ್ವವಾಯುವಿನಿಂದ ಸಾವು ಕೂಡ ಸಂಭವಿಸಬಹುದು. ಪಾರ್ಶ್ವವಾಯುವಿನ ಲಕ್ಷಣಗಳು ಕಾಣಿಸಿಕೊಂಡಾಗ ವಿಳಂಬಿಸದೆ ಚಿಕಿತ್ಸೆ ಪಡೆದರೆ ಪಾರ್ಶ್ವವಾಯುವಿಗೆ ತುತ್ತಾಗುವುದನ್ನು ತಡೆಯುವ ಸಾಧ್ಯತೆ ಅಧಿಕವಾಗಿರುತ್ತದೆ.
ವೈದ್ಯಕೀಯ ಲೋಕ ಎರಡು ರೀತಿಯ ಪಾರ್ಶ್ವವಾಯುವನ್ನು ಗುರುತಿಸಿದೆ. ರಕ್ತಕೊರತೆಯಿಂದ ಆಗುವುದು ಮತ್ತು ರಕ್ತಸ್ರಾವದಿಂದ ಆಗುವುದು. ರಕ್ತಕೊರತೆಯಿಂದ ಆಗುವುದು ಎಂದರೆ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದು ಇತ್ಯಾದಿ, ರಕ್ತಸ್ರಾವದಿಂದ ಆಗುವುದು ಎಂದರೆ ರಕ್ತನಾಳಗಳಿಗೆ ಹಾನಿಯಾಗಿ ರಕ್ತಸ್ರಾವವಾಗುವುದು. ಒಮ್ಮೊಮ್ಮೆ ರಕ್ತ ಅಲ್ಲಿಯೇ ಹೆಪ್ಪುಗಟ್ಟಬಹುದು ಕೂಡ.
ಹಳ್ಳಿಗಳಲ್ಲಿ ಪಾರ್ಶ್ವವಾಯುವಿಗೆ ತುತ್ತಾದವರಿಗೆ ತಕ್ಷಣದಲ್ಲಿ ತೆಂಗಿನೆಣ್ಣೆ ಕುಡಿಸುವುದರ ಮರ್ಮ ಏನು ಎನ್ನುವುದು ಅರ್ಥವಾಯಿತು ಎಂದುಕೊಳ್ಳುತ್ತೇನೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

