ಭೂತವೂ ಅಲ್ಲ, ಭವಿಷ್ಯವೂ ಅಲ್ಲ ವರ್ತಮಾನವೇ ಮುಖ್ಯ
ಹೆಚ್ಚು ಹೊಂದಿರುವುದು ಖಂಡಿತವಾಗಿಯೂ ಒಂದು ಸಾಧನೆ ಹೌದು. ಆದರೆ ಅದು ನಿಜವಾಗಿಯೂ ಆವಶ್ಯಕವೇ? ನಶ್ವರವಾದ ಬದುಕಿನಲ್ಲಿ ಆವಶ್ಯಕತೆಗಿಂತ ಮಿತಿಮೀರಿ ಹಣ ಸಂಪಾದಿಸುವುದನ್ನೇ ಶ್ಲಾಘಿಸುವುದು ಎಷ್ಟು ಸರಿ? ಹಾಗಾದರೆ ನಾವು ಲೋಕದಲ್ಲಿರುವ ಅತೀ ಸ್ಥೂಲಕಾಯದವರನ್ನೂ ಶ್ಲಾಘಿಸಬೇಕು. ಏಕೆಂದರೆ ಸಾಧಾರಣ ಮನುಷ್ಯನಲ್ಲಿ ಇರುವುದಕ್ಕಿಂತ ಹೆಚ್ಚು ತಿಂದು ಜೀರ್ಣಿಸಿಕೊಳ್ಳುವ ಶಕ್ತಿ ಅವರಲ್ಲಿರುತ್ತದೆ.
ನಾವು ಎಷ್ಟು ಆನಂದದಿಂದ ಇದ್ದೇವೆ ಎಂಬುದು ಶ್ರೀಮಂತಿಕೆಯ ಅಳತೆಗೋಲಾಗಬೇಕೇ ವಿನಾ ನಮ್ಮ ಬಳಿ ಇರುವ ಆಸ್ತಿಯಿಂದಲ್ಲ. ನಾವು ನಮ್ಮಲ್ಲಿರುವ ಹಣದಿಂದ ಐಷಾರಾಮಿ ವಸ್ತುಗಳನ್ನು ಕೊಂಡುಕೊಳ್ಳಬಹುದು. ಆದರೆ ಆನಂದವನ್ನಲ್ಲ. ವಿಶಾಲವಾದ ಮಂಚ, ಮೆತ್ತನೆಯ ಹಾಸಿಗೆಯನ್ನು ನಾವು ಕೊಂಡುಕೊಳ್ಳಬಹುದು, ನಿದ್ರೆಯನ್ನು ಕೊಳ್ಳಲು ಸಾಧ್ಯವೇ? ಹಂಸತೂಲಿಕಾತಲ್ಪವಿದ್ದರೂ ನಿದ್ರೆಗಾಗಿ ಕಷ್ಟಪಡುವ ಜನ ಎಷ್ಟಿಲ್ಲ? ಮತ್ತೊಂದು ವಿಷಯವೆಂದರೆ ನಮ್ಮ ಅವಶ್ಯಕತೆಗಳೆಲ್ಲ ಪೂರೈಸಿ, ನಮಗೆ ಬೇಕಾದುದನ್ನೆಲ್ಲ ಕೊಂಡುಕೊಳ್ಳುವ ಅರ್ಹತೆ ಬಂದಾಗ, ಒಂದು ಮಟ್ಟದ ಮೇಲೆ ನಮ್ಮ ಆನಂದ ಹೆಚ್ಚಾಗುವುದಿಲ್ಲ. ಒಂದು ಮಿತಿಯ ನಂತರ, ಹೆಚ್ಚಿನ ಹಣ ಕ್ಷಣಕಾಲ ನಮ್ಮ ಮನದಲ್ಲಿ ಸುಖದ ಒಂದು ಛಾಯೆಯನ್ನು ಮೂಡಿಸಬಹುದು ಅಷ್ಟೇ. ನಮ್ಮ ಅವಶ್ಯಕತೆಗಿಂತ ಹೆಚ್ಚಾಗಿ, ನಮಗೆ 'ಬೇಕು' ಎಂಬ ಬಯಕೆಯ ಪರಿಣಾಮದಿಂದ ನಾವು ಹೆಚ್ಚು ಕೂಡಿ ಹಾಕುತ್ತೇವೆ. ಹೆಚ್ಚಿನದಕ್ಕಾಗಿ ಹಪಹಪಿಸುವುದು ನಮ್ಮ ಮನಸ್ಸಿನ ಹಸಿವೆಗಾಗಿಯೇ ವಿನಾ ದೇಹದ ಹಸಿವೆಗಾಗಿ ಅಲ್ಲ. ಜೀವನದಲ್ಲಿ ಬದುಕಲು ಅನಿವಾರ್ಯವಾದವುಗಳನ್ನು ಪಡೆದಾದ ನಂತರ ಉಳಿದವುಗಳನ್ನು ನಮ್ಮ ಮನಸ್ಸಿನಲ್ಲಿ ಕೂಡಿ ಹಾಕುತ್ತಿರುತ್ತೇವೆ. ಹಣವಾಗಲಿ, ಆಸ್ತಿಯಾಗಲಿ ನಮ್ಮ ಮನಸ್ಸಿಗೆ ಅತ್ಯಂತ ಪ್ರಿಯವಾಗಿಬಿಡುತ್ತದೆ.
ಎರಡೂ ಕಾಲಿಲ್ಲದ ಒಬ್ಬ ಶ್ರೀಮಂತ ವ್ಯಕ್ತಿಗೆ ವಿಧವಿಧದ ಪ್ಯಾಂಟುಗಳನ್ನು ಕಲೆಹಾಕುವ ಹವ್ಯಾಸವಿತ್ತು. ಯಾವುದನ್ನು ಆತ ಬಳಸಲು ಸಾಧ್ಯವಿಲ್ಲವೋ ಅಥವಾ ಯಾವುದರಿಂದ ಆತನಿಗೆ ಪ್ರಯೋಜನವಿಲ್ಲವೋ ಅದನ್ನು ಅವನು ಕೂಡಿಡುತ್ತಿದ್ದ. ಪ್ಯಾಂಟುಗಳನ್ನು ಕೂಡಿ ಹಾಕುತ್ತಿದ್ದ ಕಾಲಿಲ್ಲದ ಪುರುಷ ಎಷ್ಟೇ ಶ್ರೀಮಂತನಾದರೂ ಜನರು ಅವನನ್ನು ಮೂರ್ಖ ಎಂದೇ ಪರಿಗಣಿಸುತ್ತಿದ್ದರು. ಹಾಗೆಯೇ ಆವಶ್ಯಕತೆ ಇಲ್ಲದ್ದನ್ನು ಅಥವಾ ಆವಶ್ಯಕತೆಗಿಂತ ಹೆಚ್ಚು ಕಲೆ ಹಾಕಬೇಕೆನ್ನುವುದು ನಮ್ಮ ಮನಸ್ಸಿನ ಭ್ರಾಂತಿ.
'ನಾವು ಹಿಂದಿನದನ್ನು ನೆನೆಸುತ್ತಾ, ಮುಂದಿನ ಕನಸು ಕಾಣುತ್ತಾ ನಮ್ಮಲ್ಲಿ ಇಲ್ಲವಾದುದಕ್ಕಾಗಿ ಕೊರಗುತ್ತೇವೆ' ಎಂದಿದ್ದಾನೆ ಪಿ.ಬಿ. ಶೆಲ್ಲಿ. ನಾವು ಆನಂದದಿಂದ ಇರಬೇಕೆಂದರೆ ವರ್ತಮಾನದಲ್ಲಿ ಬದುಕುವುದು ಅವಶ್ಯಕ, ಏಕೆಂದರೆ ಬದುಕು ಘಟಿಸುವುದೇ ವರ್ತಮಾನದಲ್ಲಿ. ಎಕಾಟರ್ ಟೊಲ್ಲ ಹೇಳುವಂತೆ- 'ನಮ್ಮ ಜೀವನದಲ್ಲಿ ಯಾವುದೇ ಕ್ಷಣಗಳು ಎಂದು ಇದ್ದರೆ, ಅದು ಈಗಿನ ಅಥವಾ ವರ್ತಮಾನದ ಕ್ಷಣಗಳು ಮಾತ್ರ. ಜೀವನವನ್ನು ನಾವು ವರ್ತಮಾನದಲ್ಲಿ ಮಾತ್ರ ಅನುಭವಿಸುತ್ತೇವೆಯೇ ವಿನಾ ಭೂತಕಾಲದಲ್ಲಿಯೂ ಅಲ್ಲ, ಭವಿಷ್ಯತ್ತಿನಲ್ಲಿಯೂ ಅಲ್ಲ. ವರ್ತಮಾನದ ಅನುಭವಗಳು ಮತ್ತು ಕ್ಷಣಗಳೇ ನಮ್ಮ ಭೂತಕಾಲವನ್ನು ನಿರ್ಮಿಸುತ್ತವೆ. ವರ್ತಮಾನವಿಲ್ಲದಿದ್ದರೆ ಭೂತಕಾಲವೂ ಇಲ್ಲ. ನಾವು ಏನನ್ನಾದರೂ ಅನುಭವಿಸದಿದ್ದರೆ ಅದು ನೆನಪಾಗಿ ಮಾರ್ಪಡಲು ಸಾಧ್ಯವಿಲ್ಲ. ನಿನ್ನೆಯ ಗಾಢವಾದ ಅನುಭವವೇ ಆದರೂ ಅದು ಇಂದು ನೆನಪಾಗಿ, ಇಂದಿನ ಅನುಭವ ನಾಳೆ ಪುನಃ ನೆನಪುಗಳಾಗಿ ಮಾರ್ಪಡಲೇಬೇಕು. ನಮ್ಮ ಹಿಂದಿನ ಅನುಭವ ಮತ್ತು ನಾಳಿನ ನಿರೀಕ್ಷೆಯಲ್ಲಿ ನಾವು ಪಡೆಯಬೇಕೆಂದಿರುವುದು ಒಂದು ರೀತಿಯ ಕನಸು ಅಥವಾ ಕಲ್ಪನೆ. ಈ ರೀತಿಯಾಗಿ ಆಲೋಚಿಸಿದರೆ, ನಾವು ವರ್ತಮಾನದಲ್ಲಿ ಏನನ್ನು ಹೊಂದಿದ್ದೇವೆಯೋ, ಏನನ್ನು ಉಪಯೋಗಿಸುತ್ತಿದ್ದೇವೆಯೋ ಅದು ಮಾತ್ರ ನಿಜವಾದ ಆಸ್ತಿ. ಉಳಿದವುಗಳು ಅನುಭವದ ನೆನಪುಗಳೆಂದು ಹೇಳಬಹುದು' ನಮ್ಮ ಜೀವನ ಒಂದು ಕಡೆ ಸ್ಥಿರವಾಗಿ ನಿಲ್ಲದೇ ಆಗಾಗ ಬೇರೆ ಬೇರೆಯ ಅನುಭವಗಳನ್ನು ನೀಡುತ್ತಾ ಮುಂದುವರಿಯುತ್ತಿರುತ್ತದೆ.
-ಕಿರಣ್ ಉಪಾಧ್ಯಾಯ
keyrun1970@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

