ಕೃಷಿ ಮೇಳ
ಕೃಷಿ ಇಂದು ಕೇವಲ ನಮ್ಮ ದೇಶದ ಸಂಸ್ಕೃತಿ ಅಲ್ಲ. ಇದು ಈಗ ಉದ್ಯಮವೂ ಕೂಡ. ಭಾರತದ ಜಿಡಿಪಿ ದರದ ಶೇಕಡಾ 25 ಕೃಷಿ...

ಕೃಷಿ ಇಂದು ಕೇವಲ ನಮ್ಮ ದೇಶದ ಸಂಸ್ಕೃತಿ ಅಲ್ಲ. ಇದು ಈಗ ಉದ್ಯಮವೂ ಕೂಡ. ಭಾರತದ ಜಿಡಿಪಿ ದರದ ಶೇಕಡಾ 25 ಕೃಷಿ ಕ್ಷೇತ್ರದಿಂದ ಬರುತ್ತದೆ. ಕೃಷಿ ಸಚಿವಾಲಯವೂ ಕೂಡ ಕೃಷಿ ಉತ್ಪನ್ನಗಳ ವಾಣಿಜ್ಯೀಕರಣಕ್ಕೆ ಒತ್ತು ನೀಡುತ್ತಿದೆ. ಸಾಕಷ್ಟು ಪ್ರಮಾಣದ ಉತ್ಪಾದನೆ ಮತ್ತು ವಿತರಣೆ ಈಗಿನ ಅಗತ್ಯಗಳು.
ಕೃಷಿ ಬೆಳವಣಿಗೆ ತಿಳಿಯಲು ಮಹಾ ಪ್ರದರ್ಶನ: ಈ ನಿಟ್ಟಿನಲ್ಲಿ ಕೃಷಿ ವ್ಯವಹಾರಗಳಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಮತ್ತು ಸಮ್ಮೇಳನಗಳನ್ನು ನಡೆಸುವುದರಲ್ಲಿ ದಾಖಲೆ ಹೊಂದಿರುವ ಮೀಡಿಯಾ
ಟುಡೆ ಗ್ರೂಪ್, 5ನೇ ಅಗ್ರಿಟೆಕ್ ಇಂಡಿಯಾ 2013 ಎಂಬ ಕೃಷಿ ಮತ್ತು ಆಹಾರ ಸಂಬಂಧಿ ವಸ್ತು ಪ್ರದರ್ಶನವನ್ನು (www.agritechindia.com) ಬೆಂಗಳೂರಿನಲ್ಲಿ ಆಯೋಜಿಸುತ್ತಿದೆ. ಭಾರತ ಸರ್ಕಾರದ ಕೃಷಿ ಮಂತ್ರಾಲಯದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಪ್ರದರ್ಶನಕ್ಕೆ ರಾಜ್ಯದ ಎಲ್ಲಾ ಭಾಗಗಳ ರೈತರು, ರೈತ ನಿಯೋಗಗಳು, ರೈತ ಸಂಘಟನೆಗಳು, ವಿದ್ಯಾರ್ಥಿಗಳು ಆಗಮಿಸಲಿದ್ದಾರೆ. ಆಹಾರ ಮತ್ತು ಕೃಷಿ ಕ್ಷೇತ್ರಗಳ ಪ್ರಗತಿಯನ್ನು ಪರಿಶೀಲಿಸುವ ಮೂಲಕ ಇನ್ನಷ್ಟು ಬೆಳವಣಿಗೆ ಸಾಧಿಸಲು ಪೂರಕ ವಾತಾವರಣ ನಿರ್ಮಿಸಲು ಈ ಮೇಳ ಸಹಕಾರಿಯಾಗಲಿದೆ.
ಈ ಮೇಳದಲ್ಲಿ ಡೈರಿಟೆಕ್ ಇಂಡಿಯಾ (ಹೈನುಗಾರಿಕೆ), ಪೌಲ್ಟ್ರಿ (ಕೋಳಿ ಸಾಕಾಣಿಕೆ) ಮತ್ತು ಲೈವ್ಸ್ಟಾಕ್ (ಜಾನುವಾರು) ಎಕ್ಸಪೊ ಎಂಬ ಹೆಸರಿನಡಿಯಲ್ಲಿ ವೈವಿಧ್ಯಮಯ ಕೃಷಿ ಜಗತ್ತಿನ ಅನಾವರಣ ಆಗಲಿದೆ. ಆಗಸ್ಟ್ 23ರಿಂದ 25ರ ವರೆಗೆ ಮೂರು ದಿನ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ)ದಲ್ಲಿ ಕೃಷಿ, ಕೃಷಿ ಯಂತ್ರೋಪಕಣಗಳು, ಹೈನುಗಾರಿಕೆ, ಕೋಳಿ, ಜಾನುವಾರು, ಧಾನ್ಯ ಉದ್ದಿಮೆ, ಆಹಾರ ಉತ್ಪನ್ನಗಳು, ಸಂಸ್ಕರಣೆ ಮತ್ತು ಚಿಲ್ಲರೆ ವ್ಯಾಪಾರ ಇತ್ಯಾದಿಗಳ ಕುರಿತು ಅಂತಾರಾಷ್ಟ್ರೀಯ ಸರಣಿ ಪ್ರದರ್ಶನಗಳು ನಡೆಯಲಿದೆ.
ಪ್ರದರ್ಶನದಲ್ಲಿ ಆಹಾರ, ಕೃಷಿ ಕ್ಷೇತ್ರಗಳ ನೂತನ ಸಾಧನೆಗಳನ್ನು ಪ್ರದರ್ಶಿಸಲಾಗುವುದು. 250 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರದರ್ಶಕರು ಫುಡೆಕ್ಸ್ ಇಂಡಿಯಾ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ನೆದರ್ಲ್ಯಾಂಡ್ನಿಂದ 25 ಕಂಪನಿಗಳು, ಟರ್ಕಿಯಿಂದ 23 ಕಂಪನಿಗಳು, ಇಟಲಿಯಿಂದ 11 ಕಂಪನಿಗಳು ನೂತನ ಕೃಷಿ ಉಪಕರಣಗಳನ್ನು ಪ್ರದರ್ಶಿಸಲಿದ್ದಾರೆ. ಇದಲ್ಲದೆ, ಜರ್ಮನಿ, ಫ್ರಾನ್ಸ್, ಸ್ಪೇನ್, ತೈವಾನ್, ಬೆಲ್ಜಿಯಂ, ಥೈಲೆಂಡ್, ಇರಾನ್, ಕೆನಡಾ ಮುಂತಾದ ರಾಷ್ಟ್ರಗಳಿಂದ ಪ್ರದರ್ಶಕರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ, ಭಾರತದ 15 ರಾಜ್ಯಗಳಿಂದ ರೈತರ ನಿಯೋಗಗಳು ಆಗಮಿಸಲಿದ್ದು ಜಗತ್ತಿನ ಆಹಾರ ಮತ್ತು ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಗತಿ ಮತ್ತು ಮುಂದಿನ ಸವಾಲುಗಳ ಕುರಿತು ತಿಳಿಯಲಿದ್ದಾರೆ. ಆಯಾ ಕ್ಷೇತ್ರದ ತಜ್ಞರಿಂದ ಮಾಹಿತಿ ಸಂಗ್ರಹಿಸಲಿದ್ದಾರೆ.
'ಅಗ್ರಿ ಟೆಕ್ ಇಂಡಿಯಾ ಸರಣಿ ಕೃಷಿ ಮೇಳದಲ್ಲಿ ದೊಡ್ಡ ರೈತರಿಗೆ ಮತ್ತು ಒಟ್ಟಾರೆಯಾಗಿ ಇಡೀ ಕೃಷಿ ಕ್ಷೇತ್ರಕ್ಕೆ ಪ್ರಯೋಜನವಾಗುವಂತಹ ಯಂತ್ರೋಪಕರಣಗಳು ಪ್ರದರ್ಶನಗೊಳ್ಳುತ್ತವೆ. ಇವುಗಳ ಬಳಕೆ, ಬಿಡಿ ಭಾಗಗಳ ದೊರೆಯುವಿಕೆ, ದೇಶದ ವಿವಿಧ ರಾಜ್ಯಗಳ ಸ್ಥಳೀಯ ವಾತಾವರಣಕ್ಕೆ ಅನುಗುಣವಾಗಿ ಈ ಯಂತ್ರೋಪಕರಣಗಳ ಬಳಕೆಯ ಕುರಿತು ಸಂಪೂರ್ಣ ಮಾಹಿತಿ ಮೇಳದಲ್ಲಿ ದೊರೆಯುತ್ತದೆ' ಎಂದು ಪ್ರದರ್ಶನದ ಮುಖ್ಯ ಸಂಯೋಜಕ ಜಾಫರ್ ನಕ್ವಿ ಅಭಿಪ್ರಾಯಪಡುತ್ತಾರೆ.
ಕೃಷಿ ಕ್ಷೇತ್ರ, ಈ ಕ್ಷೇತ್ರ ಅಳವಡಿಸಿಕೊಳ್ಳುತ್ತಿರುವ ಆಧುನಿಕತೆ ಹಾಗೂ ಇಲ್ಲಿನ ಕೃಷಿ ಕ್ಷೇತ್ರ ಜಾಗತಿಕ ಮಾರುಕಟ್ಟೆಗೆ ತೆರೆದುಕೊಳ್ಳುತ್ತಿರುವುದು, ಇವೆಲ್ಲವನ್ನು ಗಮನಿಸಿದಾಗ, ದೇಶ- ವಿದೇಶದಿಂದ ಬರುವ ಪ್ರದರ್ಶಕರಿಗೆ ಭಾರತವು ಪ್ರಮುಖ ಮಾರುಕಟ್ಟೆ ಎಂಬುದು ಮನವರಿಕೆಯಾಗಿರುವುದು ಗೊತ್ತಾಗುತ್ತದೆ. ಈ ಪ್ರದರ್ಶನ ಇವೆಲ್ಲ ಕಾರಣಗಳಿಗಾಗಿ ಪ್ರಮುಖವಾಗಿದೆ. ಇದರಲ್ಲಿ ಭಾಗವಹಿಸುವ ಹೊರ ರಾಷ್ಟ್ರಗಳ ವರ್ತಕರ ಪೈಕಿ ಬಹುತೇಕರು ಯುರೋಪ್, ಆಫ್ರಿಕಾ, ಗಲ್ಫ್ ರಾಷ್ಟ್ರಗಳಿಗೆ ಸೇರಿದವರಾಗಿದ್ದಾರೆ.
- ಕಿರಣ್ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


