ಬೈಟುಕಾಫಿ

ಎರಡು ತಲೆಮಾರು

ಯಾವುದೇ ಕ್ಷೇತ್ರ ತೆಗೆದುಕೊಳ್ಳಿ- ಅನುಭವದಿಂದ ಮಾಗಿದ ಹಳೆ ತಲೆಮಾರೂ, ಹೊಸತನದಿಂದ ನಳನಳಿಸುವ ನೂತನ ತಲೆಮಾರೂ ಕಾಣಿಸುತ್ತವೆ...

Published On :

ಯಾವುದೇ ಕ್ಷೇತ್ರ ತೆಗೆದುಕೊಳ್ಳಿ- ಅನುಭವದಿಂದ ಮಾಗಿದ ಹಳೆ ತಲೆಮಾರೂ, ಹೊಸತನದಿಂದ ನಳನಳಿಸುವ ನೂತನ ತಲೆಮಾರೂ ಕಾಣಿಸುತ್ತವೆ. ಎರಡೂ ಕೂಡ ತಮ್ಮ ಕ್ಷೇತ್ರಗಳನ್ನು ಸಂಪನ್ನಗೊಳಿಸುವ ಕರ್ತವ್ಯದಲ್ಲೇ ಮಗ್ನವಾಗಿರುತ್ತವೆ. ಅಂಥ ಹಳೆ- ಹೊಸ ತಲೆಮಾರುಗಳ ಸಂಗಮವಿದು. ಆಯ್ದ ಕ್ಷೇತ್ರಗಳ ಎರಡೂ ತಲೆಮಾರಿನ ಒಬ್ಬೊಬ್ಬರು ಇಲ್ಲಿದ್ದಾರೆ.


ಅಭಿನವ ಓಬವ್ವ


ಪ್ರೇರಣೆ ಅಂಥದ್ದೇನೂ ಇಲ್ಲ. ನಾನು ಇಷ್ಟಪಟ್ಟು ಈ ಕ್ಷೇತ್ರಕ್ಕೆ ಬಂದಿದ್ದೇನೂ ಅಲ್ಲ. ಬರೀ ಆಕಸ್ಮಿಕ. ನೃತ್ಯ ಪಟುವಾಗಬೇಕೆಂಬುದು ನನ್ನಾಸೆಯಾಗಿತ್ತು. ಹೀಗಾಗಿ, ಚೆನ್ನೈನಲ್ಲಿ ನೃತ್ಯ ಕಲಿಯುವುದಕ್ಕೆ ಸೇರಿಕೊಂಡಿದ್ದೆ. ಆಗ ನಮ್ಮ ನೃತ್ಯ ಶಾಲೆಗೆ ವೈ.ಆರ್. ಸ್ವಾಮಿ ಬಂದಿದ್ದರು. ಅವರು ನನ್ನನ್ನು ನೋಡಿ 'ಜೇನುಗೂಡು' ಚಿತ್ರದಲ್ಲಿ ಮೂರನೇ ನಾಯಕಿಯಾಗಿ ಅಭಿನಯಿಸುವಂತೆ ಕೇಳಿದ್ದರು. ನಮ್ಮ ಟೀಚರ್ ಕೂಡ ಇದನ್ನೇ ಸೂಚಿಸಿದರು. ಆಗ ಸಿನಿಮಾ ಅಂದ್ರೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ಮಂಡಿವಂತಿಕೆಯಿಂದಲೇ ನೋಡುತ್ತಿದ್ದರು. ಹೀಗಾಗಿ ಚಿತ್ರರಂಗಕ್ಕೆ ಕಳುಹಿಸಿಕೊಡಲು ಮನೆಯಲ್ಲಿ ಒಪ್ಪಲಿಲ್ಲ. ನನಗೂ ಇಷ್ಟ ಇರಲಿಲ್ಲ. ಆದರೆ, ಸ್ವಾಮಿ ಅವರು ಮನೆವರೆಗೂ ಬಂದು ಕೇಳಿಕೊಂಡರು. 'ಏನೂ ತೊಂದರೆ ಆಗಲ್ಲ. ನಾನು ಇರುತ್ತೇನೆ. ನನ್ನ ಮಗಳ ಹಾಗೆ ನೋಡಿಕೊಳ್ಳುತ್ತೇನೆ' ಎಂದು ಕೇಳಿಕೊಂಡ ಮೇಲೆ ಅರೆ ಮನಸ್ಸಿನಿಂದಲೇ ಮುಖಕ್ಕೆ ಬಣ್ಣ ಹಚ್ಚಿದೆ. ಸರಿ, ಇನ್ನೇನು ಬೇಡ ಬೇಡ ಅಂದುಕೊಂಡೆ ಕಾಲಿಟ್ಟಾಯಿತು. ಮತ್ತೆ ಯಾಕೆ ವಾಪಸು ಹೋಗುವುದು ಅಂತ ಚಿತ್ರರಂಗದಲ್ಲೇ ಮುಂದುವರಿದೆ.

-ಜಯಂತಿ, ಚಿತ್ರನಟಿ



ನಿಧಿ ಲೀಲೆ

ನನಗೆ ಎಂಜಿನಿಯರಿಗ್ ಫೀಲ್ಡಲ್ಲೇ ತುಂಬಾ
ಇಂಟ್ರೆಸ್ಟ್ ಇತ್ತು. ಮಾಡೆಲಿಂಗ್ ಮಾಡ್ತಾ ಇದ್ದೆ. ಜಾಹೀರಾತುಗಳಲ್ಲಿ ತುಂಬಾ ಚಾನ್ಸ್ ಸಿಕ್ಕಿತ್ತು. ಅಲ್ಲಿಂದ
ಸಿನಿಮಾದವರಿಂದಲೂ ಆಫರ್ಸ್ ಬರೋದಕ್ಕೆ ಶುರುವಾಯ್ತು. ಮನೆಯವರೆಲ್ಲರೂ ತುಂಬಾ ಸಪೋರ್ಟ್ ಮಾಡಿದ್ರು. ಹೀಗಾಗಿ ನಾವೀಗ ಇಲ್ಲಿ!

-ನಿಧಿ ಸುಬ್ಬಯ್ಯ, ಚಿತ್ರನಟಿ


ಹಿರಿಯ ಜೀವಿ

ಮೂಲ ಪ್ರೇರಣೆ ನನ್ನ ಗುರುಗಳೇ... ಎ.ಆರ್. ಕೃಷ್ಣಶಾಸ್ತ್ರಿ. ಅವರು ನನಗೆ ಯಾಸ್ಕನ 'ನಿರುಕ್ತ' ಮತ್ತು 'ವೈದಿಕ ನಿಘಂಟು' ಎಂಬ ಪುಸ್ತಕಗಳೆರಡನ್ನು ಪರಿಚಯಿಸಿ ದರು. ಅವರ ಕೊನೆಗಾಲದಲ್ಲಿ ನನಗೆ ಕನ್ನಡ ನಿಘಂಟೊಂದನ್ನು ರಚಿಸುವ ಹೊಣೆ ವಹಿಸಿದರು. ಇದನ್ನು ನಾನು ಪ್ರೀತಿಯಿಂದ ಸ್ವೀಕರಿಸಿ ಯಶಸ್ವಿಯೂ ಆದೆ. 1943-1991ರ ಮಧ್ಯೆಯಲ್ಲಿ ನಿರಂತರ ಪದಕೃಷಿ ನಡೆಸಿ, ಬಹು ನಿರೀಕ್ಷಿತ ಏಕಭಾಷಿಕ ಪದಮೂಲ ವ್ಯಾಸಂಗದ ಐತಿಹಾಸಿಕ (monolingual etymological historical dictionary) ನಿಘಂಟನ್ನು ರಚಿಸಿದೆ. ನಂತರ 'ನಿಘಂಟು ಪರಿವಾರ' ಮತ್ತು ಇತರೆ 11 ನಿಘಂಟುಗಳನ್ನು ಇಲ್ಲಿಯವರೆಗೆ ರಚಿಸಿದ್ದೇನೆ. 'ಇಗೊ ಕನ್ನಡ' ಎಂಬ ಅಂಕಣವನ್ನು 'ಪ್ರಜಾವಾಣಿ'ಯಲ್ಲಿ ಸತತ 18 ವರ್ಷಗಳ ವರೆಗೆ ಬರೆದೆ.

-ಜಿ. ವೆಂಕಟಸುಬ್ಬಯ್ಯ, ಭಾಷಾ ಸಂಶೋಧಕ



ಸಾಹಿತ್ಯ ಪರ್ವತ

ಬಡತನದಲ್ಲೇ ಹುಟ್ಟಿ ಬೆಳೆದ ನನಗೆ ಜೀವನದಲ್ಲಿ ಕಷ್ಟಗಳನ್ನೆದುರಿಸಲು ಪ್ರೇರಣೆ ನೀಡಿದ್ದು ನನ್ನ ಪರಿಸರ ಮತ್ತು ಪರಿಸ್ಥಿತಿ. ಶಾಲೆಯಲ್ಲಿದ್ದಾಗ ಒಳ್ಳೆಯ ಭಾಷಣಕಾರನೆಂದು ಗುರುತಿಸಿಕೊಂಡಿದ್ದೆ. ಚರ್ಚಾಕೂಟಗಳಲ್ಲೂ ಭಾಗವಹಿಸುತ್ತಿದ್ದೆ. ಇನ್ನೂ ಕಲಿಯಬೇಕೆಂಬ ಹಂಬಲ ನನ್ನಲ್ಲಿ ಬೆಳೆಯುತ್ತಲೇ ಹೋಯಿತು. ಮೊದಲಿನಿಂದಲೂ ನನಗೆ ಬರವಣಿಗೆಯಲ್ಲಿ ಆಸಕ್ತಿಯಿತ್ತು. ಗುಜರಾತ್‌ನ ಸರ್ದಾರ್ ಪಟೇಲ್ ಯುನಿವರ್ಸಿಟಿಯಲ್ಲಿದ್ದಾಗ 'ಸತ್ಯ ಮತ್ತು ಸೌಂದರ್ಯ' ಎಂಬ ವಿಷಯದ ಮೇಲೆ ಡಾಕ್ಟರೇಟ್ ಮಾಡಿದೆ. ಅದೇ ಸಮಯದಲ್ಲಿ ನನ್ನ ಕೃತಿ 'ಧರ್ಮಶ್ರೀ' ಪ್ರಕಟವಾಗಿತ್ತು. ನನ್ನ ಡಾಕ್ಟರೇಟ್ ವಿಷಯದ ಮಾರ್ಗದರ್ಶಕರಿಗೆ ನಾನು ಸೌಂದರ್ಯಶಾಸ್ತ್ರದಲ್ಲೇ ಸಂಶೋಧನೆ ಮುಂದುವರಿಸಬೇಕೆಂಬ ಇಚ್ಛೆಯಿತ್ತು. ಆದರೆ, ಅದಾಗಲೇ ನನ್ನ ಒಲವು ಸಾಹಿತ್ಯದೆಡೆಗೆ ವಾಲಿತ್ತು. ಸಂಶೋಧನೆಯನ್ನು ಕೈಬಿಟ್ಟು, ಬರಹಕ್ಕೆ ಹೆಚ್ಚು ಒತ್ತು ಕೊಟ್ಟೆ. ನನ್ನ ಬರಹಗಳಲ್ಲಿ ಸಂಶೋಧನೆ ಇದ್ದೇ ಇದೆ.  

-ಎಸ್.ಎಲ್. ಭೈರಪ್ಪ, ಕಾದಂಬರಿಕಾರ



ಕುಂವೀ ಕ್ಲಾಸು

ಸಾಮಾಜಿಕ ಅವಮಾನವನ್ನು ಮೀರಬೇಕೆಂಬ ಛಲ ಇರದಿದ್ದಲ್ಲಿ, ನಾನು ಬರಹಕ್ಕೆ ಕೈ ಹಾಕುತ್ತಿರಲಿಲ್ಲವೇನೊ? ಹಾಗೆಯೇ ನನ್ನ ಬಾಲ್ಯದ ದಿನಗಳಲ್ಲಿ ನನಗೆ ಪಾಠ ಹೇಳಿದ ಗುರುಗಳು ನನ್ನ ಮೇಲೆ ಪ್ರಭಾವ ಬೀರದಿದ್ದಲ್ಲಿ ನಾನು ಪ್ರಾಥಮಿಕ ಶಾಲೆಯ ಮೇಷ್ಟ್ರು ಆಗುತ್ತಿರಲಿಲ್ಲವೇನೋ? ನನ್ನನ್ನು ಸೃಜನಶೀಲವಾಗಿ ರೂಪಿಸಿದ್ದು ಕೆಲವು ದಶಕಗಳ ಹಿಂದೆ ನಾಡಿನ ಹಲವು ಕಡೆಗಳಲ್ಲಿ ಸಂಭವಿಸಿದ ಜನಮುಖಿ ಚಳುವಳಿಗಳು.
ಕುಂ. ವೀರಭದ್ರಪ್ಪ, ಕಾದಂಬರಿಕಾರ


ಗಣೇಶ್ ಮಹಿಮೆ ಅಪಾರ

ಹೊರಗಿನ ಪ್ರೇರಣೆಯೇನಿಲ್ಲ. ನನ್ನ
ಆಸಕ್ತಿ- ಅಧ್ಯಯನ- ಆಲೋಚನೆಗಳೇ ಕಾರಣ. ಎಳವೆಯಿಂದ ನನ್ನನ್ನು ರೂಪಿಸಿದ ಬದುಕು, ನಾನು ಹಾಗೂ ನನ್ನ ಪರಿಸರಗಳ
ಅನುದಿನದ ಬದುಕೇ ವಿವರಗಳು.

ಶತಾವಧಾನಿ ಆರ್. ಗಣೇಶ್, ಭಾಷಾ ಸಂಶೋಧಕರು



ಮಾಯಾ ಮಯೂರಿ

ನಾನು ಚಿಕ್ಕವಳಿರುವಾಗ ಒಮ್ಮೆ ಉದಯ ಶಂಕರ ಅವರ ಕಥಕ್ ನೃತ್ಯ ನೋಡಲು ಹೋಗಿದ್ದೆ. ಅದು ನನ್ನನ್ನು ಬಹುವಾಗಿ ಆಕರ್ಷಿಸಿತು. ಅಂದಿನ ಕಾಲದಲ್ಲಿ ನಾವು, ಅದರಲ್ಲೂ ಸಂಪ್ರದಾಯದ ಮನೆತನದ ಹುಡುಗಿಯರು ಡ್ಯಾನ್ಸ್ ಮಾಡುವುದನ್ನು ಊಹಿಸಲೂ ಸಾಧ್ಯವಿರದ ಸನ್ನಿವೇಶ. ಆದರೂ ನನ್ನ ತಂದೆ ನನಗೆ ಕಥಕ್ ಕಲಿಸಲು ಮುಂದಾದರು. ಗುರು ಸೋಹನ್‌ಲಾಲ್ ನನ್ನ ಮೊದಲ ಗುರು. ಅವರ ಮನೆಯಲ್ಲಿ ನನಗೆ ಡ್ಯಾನ್ಸ್ ಹೇಳಿಕೊಡುತ್ತಿದ್ದರು. ಕೊನೆಗೆ ನನ್ನ ಮೊದಲ ನೃತ್ಯ ಪ್ರದರ್ಶನ ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಪ್ರದರ್ಶನಗೊಂಡಿತು.

ಮಾಯಾರಾವ್, ಕಥಕ್ ಹಿರಿಯ ಕಲಾವಿದೆ


ಮಧು ನಾಟ್ಯರಾಜ್



ತಾಯಿಗಿಂತ (ಮಾಯಾರಾವ್) ಪ್ರೇರಣಾ ಶಕ್ತಿ ನನಗೆ ಮತ್ತ್ಯಾರಿರಲು ಸಾಧ್ಯ? ನನಗೆ ಅವರಿಂದಲೇ ನೃತ್ಯ ಸಂಸ್ಕಾರ ದೊರಕಿತು. ನನ್ನ ವಾತಾವರಣವೇ ಕಥಕ್‌ಮಯವಾಗಿತ್ತು. ಕೆಲವು ಸಲ ನನ್ನನ್ನು ಅವರ ಕಾರ್ಯಕ್ರಮಗಳಿಗೆ ಕರೆದೊಯ್ಯುತ್ತಿದ್ದರು. ನನಗೆ ಚಿಕ್ಕವಳಿರುವಾಗಲಿಂದಲೂ ಕಾಂಟೆಂಪರರಿ ಡಾನ್ಸ ಮೇಲೆಯೇ ಹೆಚ್ಚಿನ ಆಸಕ್ತಿ. ಕೊನೆಗೆ ಅದನ್ನೇ ಕಲಿತು ಕಥಕ್ ಜೊತೆ ಹೊಸ ಪ್ರಯೋಗಗಳನ್ನು ಮಾಡುತ್ತಾ ಸಾಗಿದೆ.
ಮಧು ನಟರಾಜ್, ಕಥಕ್ ಕಲಾವಿದೆ


ಚಂದ್ರಕಲಾ


ನಾನು ಚಿಕ್ಕಂದಿನಿಂದಲೇ ಚಿತ್ರ ಬರೀತಿದ್ದೆ. ಪ್ರಶಂಸೆಗಳೂ ಬಂದವು. ನನಗೂ ಚಿತ್ರಕಲೆಯ ಮೇಲೆ ಅತಿಯಾದ ಆತ್ಮವಿಶ್ವಾಸ ಮೂಡಿತು. ನನ್ನೊಳಗಿನ ನನ್ನನ್ನು ನಾನು ಒಬ್ಬ ಕಲಾವಿದ ಎಂದೇ ಗುರುತಿಸಿಕೊಂಡಿದ್ದೆ. ಹೀಗಾಗಿ ನನಗೆ ನನ್ನ ಗುರಿ ಸ್ಪಷ್ಟವಾಗಿ ಗೊತ್ತಿತ್ತು. ನಾನೊಬ್ಬ ಕಲಾವಿದ ಆಗ್ತೇನೆ ಇಲ್ಲಾ ಒಬ್ಬ ಡಾಕ್ಟರ್ ಆಗ್ತೇನೆ ಎಂಬ ವಿಶ್ವಾಸ ಇತ್ತು. ಆದರೆ, ಡಾಕ್ಟರ್ ಆಗುವ ಚೈತನ್ಯ ನಂಗಿಲ್ಲ ಅಂತ ತಿಳಿಯುತ್ತಿದ್ದಂತೆಯೇ ನನ್ನ ಕಲಾವಿದನಾಗುವ ಕನಸು ಬೆಳೆಯುತ್ತಾ ಹೋಯ್ತು. ಶಿವರಾಮ ಕಾರಂತರ ಮನೆಗೆ ಆಗಾಗ್ಗೆ ಹೋಗುತ್ತಿದ್ದೆ. ಅವರ ಮನೆಯಲ್ಲಿ ಒಂದು ಪೇಂಟಿಂಗ್ ಇತ್ತು. ಅದನ್ನು ನೋಡ್ತಾ ನಿಂತಿರ್ತಿದ್ದೆ. ನನಗೂ ಇದೇ ಥರ ಚಿತ್ರ ಬಿಡಿಸಬೇಕು ಅನ್ನಿಸ್ತಿತ್ತು.
ಚಂದ್ರನಾಥ ಆಚಾರ್ಯ, ಚಿತ್ರಕಲಾವಿದ


ಜ್ಯೋತ್ಸ್ನಾಲಯ

ಚಿಕ್ಕವಳಿರುವಾಗ ನನ್ನ ಅಮ್ಮ ಕುನ್ನುಕುಡಿ ವೈದ್ಯನಾಥ ಅವರ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದರು. ಅವರ ವಯೋಲಿನ್ ವಾದನ ತುಂಬಾ ಇಷ್ಟವಾಯ್ತು. ಮನೆಯಲ್ಲಿ ಎರಡು ಪೊರಕೆ ಕಡ್ಡಿ ಹಿಡಿದು ನುಡಿಸೋದಿಕ್ಕೆ ಶುರುಮಾಡಿದೆ. ಅಮ್ಮ ಅದನ್ನು ನೋಡಿ ನನಗೆ ವಯೋಲಿನ್ ಕ್ಲಾಸ್‌ಗೆ ಸೇರಿಸಿದ್ರು. ಹಲವು ಅಡಚಣೆಗಳ ನಡುವೆ ನನ್ನ ಅಭ್ಯಾಸ ಸಾಗುತ್ತಾ ಹೋಯ್ತು. ನಮ್ಮ ದೇಶದಲ್ಲಿ ತಂತಿ ವಾದ್ಯಗಳಿಗೆ ಅಷ್ಟಾಗಿ ಪ್ರಾಮುಖ್ಯ ಇಲ್ಲ. ಅದು ಪಕ್ಕವಾದ್ಯ ಅನ್ನುವ ಭಾವನೆ. ನನಗೆ ಗಾಡ್‌ಫಾದರ್ ಇರಲಿಲ್ಲ. ಆಗ ಬೆಂಗಳೂರಿನವರಿಗಿಂತ ಹೊರ ರಾಜ್ಯದ ಕಲಾವಿದರಿಗೇ ಹೆಚ್ಚಿನ ಪ್ರಾಮುಖ್ಯ ಇತ್ತು. ನಂತರ ನಾನು ಪಾಶ್ಚಾತ್ಯ ಪದ್ಧತಿಯಲ್ಲಿಯೂ ವಯೋಲಿನ್ ಕಲಿತು ನನ್ನದೇ ಫ್ಯೂಜನ್ ಸಂಗೀತ ಕಲಿತು 'ಫ್ಯೂಜನ್ ಮ್ಯೂಸಿಕ್ ಗ್ರೂಫ್‌' ಪ್ರಾರಂಭಿಸಿದೆ.

ಜ್ಯೋತ್ಸ್ನಾ ಶ್ರೀಕಂಠನ್, ವಯೋಲಿನ್ ವಾದಕಿ




ಆರ್ಕೆ ವಾಯ್ಸ್

ನನ್ನ ಮನೆತನವೇ ಸಂಗೀತ ಸಾಹಿತ್ಯದ ಅಧ್ಯಯನಕ್ಕೆ ಹೆಸರುವಾಸಿ. ಕಾವೇರಿ ತೀರದ ನಮ್ಮೂರೇ ಸಂಸ್ಕೃತ, ಸಾಹಿತ್ಯಕ್ಕೆ ಹೆಸರುವಾಸಿ. ಕರ್ನಾಟಕದ ತಂಜಾವೂರು ಅದು. ನಮ್ಮ ತಾತ ಬಹಳ ದೊಡ್ಡ ಸಂಸ್ಕೃತ ವಿದ್ವಾಂಸರು. ನಮ್ಮ ತಂದೆ ಸಂಸ್ಕೃತ ಸಾಹಿತ್ಯ ಹಾಗೂ ಹರಿಕಥಾ ವಿದ್ವಾಂಸರಾಗಿದ್ದರು. ಅವರ ಸಂಗೀತ ಹಾಡುಗಾರಿಕೆ ಸಹಜವಾಗಿ ನನ್ನಲ್ಲಿ ಆಸಕ್ತಿ ಮೂಡಿಸಿತು. ನಮ್ಮ ಮನೆಯಲ್ಲಿ ಸಂಗೀತ ಹೇಳಿಕೊಡುವುದು ಕಚೇರಿಗಳಿಗೆ ಹೋಗುವುದು- ಹೀಗೆ ಇಂಥ ವಿಷಯಗಳೆಲ್ಲ ನನ್ನನ್ನು ಸಂಗೀತ ಪ್ರಪಂಚಕ್ಕೆ ಕರೆತಂದವು. ಹಾಗಾಗಿ ನನ್ನ ಪರಿಸರ, ಮನೆಯ ಸಂಸ್ಕಾರವೇ ಪ್ರೇರಣೆಯಾಯಿತು.
ಆರ್.ಕೆ. ಶ್ರೀಕಂಠನ್, ಹಿರಿಯ ಸಂಗೀತಗಾರ



ಕಲಾಮೂರ್ತಿ

ಚಿತ್ರಕಲೆ ತುಂಬಾ ಖಾಸಗಿ ಅಭಿವ್ಯಕ್ತಿ ಮಾಧ್ಯಮ. ಯಾರೋ ಹೀಗಿರಲೇಬೇಕು ಅನ್ನುವುದಿಲ್ಲ. ಕಲಾವಿದನಿಗೆ ಸ್ವಾತಂತ್ರ್ಯ ಇದೆ- ಈ ಎಲ್ಲ ಅಂಶಗಳೂ ಕಲಾರಂಗಕ್ಕೆ ಬರಲು ಕಾರಣವಾದವು. ಇದಕ್ಕೆ ಸಂಬಂಧಿಸಿದ ಡಿಪ್ಲೋಮಾ ಮಾಡಿದೆ. ಇದರಲ್ಲಿ ನೆಲೆ ನಿಲ್ಲಬಲ್ಲೆನಾ ಎನ್ನುವ ಆತಂಕವಿತ್ತು. ಕಲೆಯನ್ನೇ ನೆಚ್ಚಿಕೊಂಡು ಬದುಕುವಾಗ ತುಸು ಕಷ್ಟವಾದರೂ ಇಷ್ಟದ ವಿಷಯವಾದ್ದರಿಂದ ನಿಲ್ಲದೇ ಮುಂದುವರಿದೆ. ಮೈಸೂರಿನಲ್ಲಿ ನನ್ನ ಮೊದಲ ಚಿತ್ರಕಲಾ ಪ್ರದರ್ಶನ ಹಾಗೂ ಅಲ್ಲಿಯೇ ನನ್ನ ಪೇಂಟಿಂಗ್ ಸೇಲ್ ಆದಾಗ ಭವಿಷ್ಯದ ಬಗೆಗೆ ಸ್ವಲ್ಪ ಧೈರ್ಯ ಬಂತು.
ಎಂ.ಎಸ್. ಮೂರ್ತಿ, ಚಿತ್ರಕಲಾವಿದ



ದೇವರ ವಿವರ

ಸಿದ್ಧಗಂಗೆಯ ಉದ್ದಾನ ಶಿವಯೋಗಿಗಳ ದಾಸೋಹ ಕೀರ್ತಿಯಿಂದ ಆಕರ್ಷಿತರಾದೆವು. ಉದ್ದಾನ ಶಿವಯೋಗಿಗಳು ನಮಗೆ ಶ್ರೀ ಮಠದಲ್ಲೇ ಆಶ್ರಯ ನೀಡಿದರು.  ಅಲ್ಲದೆ, ಮೊದಲಿನಿಂದಲೂ ಶ್ರೀ ಮಠದ ಬಗ್ಗೆ ಅಪಾರವಾದ ಗೌರವಗಳನ್ನು ಇಟ್ಟುಕೊಂಡಿದ್ದೆವು. ಆ ಸಂದರ್ಭದಲ್ಲಿ ಉದ್ದಾನ ಶಿವಯೋಗಿಗಳ ಉತ್ತರಾಧಿಕಾರಿಯಾಗಿ ನಿಯೋಜಿತರಾಗಿದ್ದ ಮರುಳಾರಾಧ್ಯರು ಅಕಾಲ ಮರಣಕ್ಕೆ ತುತ್ತಾದರು.
 ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ್ದ ನಮ್ಮತ್ತ ಉದ್ದಾನ ಶಿವಯೋಗಿಗಳ ಕೃಪಾದೃಷ್ಟಿ ಹರಿಯಿತು. ಸಿದ್ಧಗಂಗಾ ಮಠದ ಭಕ್ತರ ಅಭಿಲಾಷೆಯೂ ಸೇರಿತು. ಶ್ರೀ ಮಠದ ಜವಾಬ್ದಾರಿಗೆ ನಾವೂ ಒಪ್ಪಿಕೊಂಡೆವು. ಮನೆಯಲ್ಲಿ ಇದಕ್ಕೆ ಅಡ್ಡಿಗಳು ಬಂದರೂ ಶ್ರೀಮಠದ ಮೇಲಿನ ಅಪಾರ ಗೌರವದಿಂದ ನಾವು ಜವಾಬ್ದಾರಿಯಿಂದ ವಿಮುಖರಾಗಲಿಲ್ಲ.

-ಶಿವಕುಮಾರ ಸ್ವಾಮೀಜಿ, ಸಿದ್ಧಗಂಗಾ




ಇಮ್ಮಡಿ ಶ್ರೀ ನುಡಿ

ನಮ್ಮ ಗುರುಗಳ ತತ್ವ, ಆದರ್ಶಗಳನ್ನು ಪಾಲಿಸಿ, ಅದೇ ಹಾದಿಯಲ್ಲಿ ಮುನ್ನಡೆಯಬೇಕೆಂಬ ಸಂಕಲ್ಪವೇ ನಾವು ಸ್ವಾಮೀಜಿಯಾಗಲು ಕಾರಣವಾಯಿತು. ನಮ್ಮ ಗುರುಗಳು, ಅವರು ಒಬ್ಬರೇ ಇಲ್ಲಿ ತರಕಾರಿ ಬೆಳೆದು, ಹಸು ಕಟ್ಟಿ, ಹಾಲು ಮಾರಿ ಈ ಕ್ಷೇತ್ರವನ್ನು ಸ್ಥಾಪಿಸಿದರು. ಅವರ ಕಷ್ಟ-ನಷ್ಟ, ತೊಂದರೆಗಳನ್ನು, ಸಮಸ್ಯೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ಮನುಷ್ಯ ಸಾಧಿಸಬೇಕು ಅಂತ ಹೊರಟರೆ ಏನು ಬೇಕಾದರೂ ಮಾಡಬಹುದು. 'ಘಟ್ಟದಿಂದ ಮಠ ಬೆಳೀಬೇಕು' ಅಂತಾರೆ. ಅದನ್ನು ಮಾಡಿ ತೋರಿಸಿದರು ನಮ್ಮ ಗುರುಗಳು. ನಾವು ಚಿಕ್ಕಂದಿನಿಂದ ಯಾರನ್ನು ನೋಡಿ ಬೆಳೆಯುತ್ತೇವೋ, ಅವರೇ ನಮ್ಮ ದಾರಿಯ ಕನಸಾಗುತ್ತಾರೆ. ಹೀಗಾಗಿ, ನಮಗೆ ನಮ್ಮ ಗುರುಗಳೇ ಪ್ರೇರಣೆ.
ಇಮ್ಮಡಿ ನಿಜಗುಣ ಸ್ವಾಮೀಜಿ, ಕಿರಿಯ ಶ್ರೀಗಳು.


ವಾಯುಪಡೆಯಿಂದ ರಂಗದತ್ತ


ಹುಟ್ಟಿದ್ದು ಚಿತ್ರದುರ್ಗದ ಒಂದು ಹಳ್ಳಿಯಲ್ಲಿ. ಬೇರೆಯವರು ನಡೆಯುತ್ತಿದ್ದ ರೀತಿ ಮತ್ತು ಅವರ ಹಾವ ಭಾವಗಳನ್ನು ನೋಡಿ ಮಿಮಿಕ್ರಿ ಮಾಡುತ್ತಿದ್ದೆ. ನಾಟಕ ವೃತ್ತಿಯಾಗಿ ಶುರುವಾದದ್ದು ಕಂಪನಿ ನಾಟಕಗಳಿಂದ(ನನ್ನ ರುಕ್ಕು ಎನ್ನುವ ಹೆಣ್ಣಿನ ಪಾತ್ರ ಈಗಲೂ ಪ್ರಸಿದ್ಧ). ಆದರೆ ನಾನು ಇದ್ದದ್ದು ಭಾರತೀಯ ವಾಯುಪಡೆಯಲ್ಲಿ. ಮಹೋನ್ನತ ದರ್ಜೆಯಲ್ಲಿದ್ದು ನಿವೃತ್ತನಾದವನು. ವೃತ್ತಿಗಾಗಿ ಕೆಲ ವರ್ಷ ದೆಹಲಿಯಲ್ಲಿರಬೇಕಾಯಿತು. ಆಗಲೂ ನಾಟಕದ ಮೇಲಿನ ವ್ಯಾಮೋಹ ಕಡಿಮೆಯಾಗಲಿಲ್ಲ. ಆಗ ನಾಟಕಗಳನ್ನು ಜಾಸ್ತಿ ಮಾಡಲಾಗದ ಕಾರಣ ಹೆಚ್ಚು ವೀಕ್ಷಿಸುತ್ತಿದ್ದೆ. ಆದಾದ ಮೇಲೆ ಬೆಂಗಳೂರಿಗೆ ವರ್ಗವಾಯಿತು. ಇಲ್ಲಿ ಚಿತ್ರರಂಗದವರ ಪರಿಚಯವಾಯಿತು. ಹಾಗೇ ಅಲ್ಲಿಂದ ಕಿರುತೆರೆಗೆ ಬಂದೆ. ಅದರೆ ನಾನು ನನ್ನನ್ನು ಹೆಚ್ಚು ತೊಡಗಿಸಿಕೊಂಡಿರುವುದು ನಾಟಕರಂಗದಲ್ಲಿ.

-ಎಚ್.ಜಿ. ದತ್ತಾತ್ರೇಯ, ಹಿರಿಯ ನಟ


ಕೀರ್ತಿಯೂ ದೊಡ್ಡದು


ನಾನು ಹುಟ್ಟಿದ್ದು ಚಿಕ್ಕಬಳ್ಳಾಪುರದಲ್ಲಿ. ಚಿಕ್ಕವಯಸ್ಸಿನಿಂದಲೂ ನಾಟಕದಲ್ಲಿ ಪಾತ್ರ ಮಾಡುತ್ತಿದ್ದೆ. 7 ವರ್ಷದವನಿದ್ದಾಗ ನಮ್ಮ ಊರಿನಲ್ಲಿ ನಾಟಕ ಮಾಡಿದ್ದೆ. ಅದಕ್ಕೆ ನಮ್ಮ ತಂದೆಯವರೇ ಅತಿಥಿಯಾಗಿ ಬಂದಿದ್ದರು. ಪಾತ್ರ ಚೆನ್ನಾಗಿ ನಿರ್ವಹಿಸಿದರಿಂದ ಮೆಚ್ಚುಗೆಯ ಜೊತೆ ಪ್ರೋತ್ಸಾಹ ದೊರಕಿತು. ನನ್ನ ಶಾಲಾ ಗುರುಗಳಾದ ನಾರಾಯಣಪ್ಪನವರಿಂದಲೂ ಸಹ. ಅದಾದ ನಂತರ ಸಿನಿಮಾ ನೋಡುವ ಅಭ್ಯಾಸ ಬೆಳೆಯಿತು. ಸಿನಿಮಾ ನಟನಾಗುವ ಆಸೆಯಿಂದ .600 ಕದ್ದು ಮನೆ ಬಿಟ್ಟು ಓಡಿಬಂದು ಬೆಂಗಳೂರು ಸೇರಿದೆ. ತಕ್ಷಣವೇ ಸಿನಿಮಾದಲ್ಲಿ ಅವಕಾಶ ಸಿಗದ ಕಾರಣ ಅಲ್ಲಿ ಇಲ್ಲಿ ಕೆಲಸ ಮಾಡುತ್ತಿದ್ದೆ. ಕೊನೆಗೆ 'ಹುತ್ತವ ಬಡಿದರೆ' ಎಂಬ ನಾಟಕದಲ್ಲಿ ನನ್ನ ನಟನಾ ಪ್ರತಿಭೆ ನೋಡಿ ಸಿದ್ಧಲಿಂಗಯ್ಯನವರು ನನ್ನನ್ನು 'ಹೇಮಾವತಿ' ಚಿತ್ರಕ್ಕೆ ನಾಯಕ ನಟನನ್ನಾಗಿ ಮಾಡಿದರು. ಅದಾದ ನಂತರ ನನ್ನನ್ನು ನೀವೇ ನೋಡಿದ್ದೀರಿ.
ಶ್ರೀನಿವಾಸಮೂರ್ತಿ, ಹಿರಿಯ ಪೋಷಕ ನಟ



ಶರತ್ ಋತು


ನನ್ನ ತಂದೆ ರಂಗಭೂಮಿ ಕಲಾವಿದರು. ನಾಟಕಗಳ ಪ್ರದರ್ಶನವಿದ್ದಾಗ ನನ್ನನ್ನೂ ಕರೆದೊಯ್ಯುತ್ತಿದ್ದರು. ಹೀಗಾಗಿ, ಆಗಿನಿಂದಲೇ ನಂಗೆ ರಂಗಭೂಮಿ ಹಾಗೂ ನಟನೆ ಬಗ್ಗೆ ಆಸಕ್ತಿ ಮೂಡಿತು. ಶಾಲೆಯ ದಿನಗಳಲ್ಲಿ ಸ್ನೇಹಿತರನ್ನೆಲ್ಲ ಒಗ್ಗೂಡಿಸಿ ನಾಟಕ ಬರೆದು, ನಟಿಸುತ್ತಿದ್ದೆ, ನಿರ್ದೇಶಿಸುತ್ತಿದ್ದೆ. ಐದನೇ ತರಗತಿಯಲ್ಲಿದ್ದಾಗ ಭಗತ್‌ಸಿಂಗ್‌ರ ಜೀವನ ಆಧರಿಸಿ ನಾಟಕ ಬರೆದು ನಿರ್ದೇಶಿಸಿದ್ದೆ. ಅದಕ್ಕಾಗಿ ಬಹುಮಾನವೂ ಸಿಕ್ಕಿತ್ತು. ನನ್ನ ಮೊದಲ ಚಿತ್ರ 'ಹುಲಿಯಾ'. ಆದರೆ, ಹೆಚ್ಚು ಹೆಸರು ತಂದುಕೊಟ್ಟ ಚಿತ್ರ 'ಆ ದಿನಗಳು'.
ಶರತ್ ಲೋಹಿತಾಶ್ವ, ಕಿರಿಯ ಪೋಷಕ ನಟ


ಗುರಿಯಲ್ಲಿ ರಾಜಿ ಇಲ್ಲ


ಕಾಲೇಜ್‌ನಲ್ಲಿದ್ದಾಗ ನಮ್ಮದೇ ಒಂದು ಟ್ರೆಕ್ಕಿಂಗ್ ಟೀಂ ಇತ್ತು. ಕುಮಾರಪರ್ವತಕ್ಕೆ ಹೋದೆವು. ಸಂಜೆ ಆರು ಗಂಟೆಯಾಯಿತು. ಆ ದಟ್ಟ ಕಾಡಿನಲ್ಲಿ ಕತ್ತಲು. ಮುಂದಕ್ಕೆ ದಾರಿ ಕಾಣದಾಯಿತು. ಹೋಗಿದ್ದ ಎಂಟೂ ಜನ ಅಲ್ಲೇ ಬೆಂಕಿ ಹಾಕಿ ಕುಳಿತೆವು. ಆ ರಾತ್ರಿಯೆಲ್ಲ ಅಲ್ಲೇ. ಬೆಳಗ್ಗೆ ಹನ್ನೊಂದಾದರೂ ಯಾವ ನರ ಪಿಳ್ಳೆಯೂ ಸಿಗಲಿಲ್ಲ. ಭಯ ಶುರುವಿಟ್ಟುಕೊಂಡದ್ದು ಆಗಲೇ. ಆದರೆ ಬಿಡದೆ ಮುಂದೆ ಸಾಗಿದೆವು. ಅಷ್ಟು ಹೊತ್ತಿಗಾಗಲೇ ಸ್ನೇಹಿತರು ನನ್ನನ್ನು ಬೈಯ್ಯಹತ್ತಿದರು. ಸುತ್ತಮುತ್ತಲ ಬೆಟ್ಟದ ಹೊರತು ಏನೂ ಕಾಣಿಸಲಿಲ್ಲ. ನಾನು ಮತ್ತು ನನ್ನ ಸ್ನೇಹಿತ ಶಶಿ ಅಲ್ಲಿಂದ ಮತ್ತೂ ಒಂದು ಗಂಟೆಯ ಕಾಲ ಮುಂದೆ ಸಾಗಿದಾಗ ಕೊನೆಗೂ ಒಂದು ಪುಟ್ಟ ಹಳ್ಳಿ ಕಾಣಿಸಿತು. ಆ ಕ್ಷಣದ ನನ್ನ ಭಾವನೆಗಳನ್ನು ಹಂಚಿಕೊಳ್ಳಲು ಪದಗಳೇ ಸಿಗುತ್ತಿಲ್ಲ. ನನ್ನ ಸ್ನೇಹಿತ ಹಿಂತಿರುಗಿ ಹೋಗಿ ಮಿಕ್ಕವರನ್ನು ಕರೆದುಕೊಂಡು ಬಂದ. ಹೇಗೋ ದಾರಿಮಾಡಿಕೊಂಡು ಆ ಹಳ್ಳಿ ಸೇರಿಕೊಂಡೆವು. ಅದು ಯಾವ ಮುಟ್ಹಾಳತನವೊ ಗೊತ್ತಿಲ್ಲ ಆ ಹಳ್ಳಿ ನಾವು ಟ್ರೆಕ್ಕಿಂಗ್ ಶುರು ಮಾಡಿದ ಜಾಗವೇ ಆಗಿತ್ತು.

ರಾಜೇಶ್, ನಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.