ಸಾರ್ಥಕ ವರ್ಷ
ಬೈಟು ಕಾಫಿಗೆ ಒಂದು ವರ್ಷ ತುಂಬಿದ ಸಂಭ್ರಮದಲ್ಲಿ ಗಣ್ಯರಿಂದ, ಓದುಗರಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಿದ್ದೆವು. ಕಾಫಿಯ ಬಣ್ಣ, ರುಚಿ, ಪರಿಮಳ...
ಬೈಟು ಕಾಫಿಗೆ ಒಂದು ವರ್ಷ ತುಂಬಿದ ಸಂಭ್ರಮದಲ್ಲಿ ಗಣ್ಯರಿಂದ, ಓದುಗರಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಿದ್ದೆವು. ಕಾಫಿಯ ಬಣ್ಣ, ರುಚಿ, ಪರಿಮಳಗಳನ್ನು ಆಸ್ವಾದಿಸಿದ ಇವರೆಲ್ಲ ತಮ್ಮ ಅಭಿಮತ ಹಂಚಿಕೊಂಡಿದ್ದು ಹೀಗೆ. ನೀವೂ ನಿಮ್ಮ ಪ್ರತಿಕ್ರಿಯೆಗಳನ್ನು ಕಳುಹಿಸಬಹುದು. ಅವುಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು...
anekaby2@gmail.com
ಕನ್ನಡಪ್ರಭ ಆರಂಭದಿಂದಲೂ ಸಾಹಿತ್ಯಕ್ಕೆ ಹೆಚ್ಚು ಒತ್ತುಕೊಡುವ ಪತ್ರಿಕೆಗಳಲ್ಲಿ ಮೊದಲನೇ ಸ್ಥಾನದಲ್ಲಿ ಇರುವಂಥದ್ದು. ಸಾಹಿತ್ಯ, ಕಲೆ, ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ನೀಡುವಂಥದ್ದು ಕನ್ನಡಪ್ರಭದ ಜಾಯಮಾನ. ಅದರಲ್ಲೂ ಕಳೆದ ವರ್ಷದಿಂದ ಅದು ಆರಂಭಿಸಿರುವ 'ಬೈಟು ಕಾಫಿ' ಪುರವಣಿ ವೈವಿಧ್ಯಮಯ ವಿಷಯಗಳಿಗೆ ಮತ್ತಷ್ಟು ಅವಕಾಶ ಸಿಗುವಂತೆ ಮಾಡಿದೆ. ಅಂತಹ ಪುರವಣಿ ನಿರಂತರ ಮುಂದುವರಿಯುತ್ತಿರಲಿ.
- ಪ್ರೊ.ಜಿ.ವೆಂಕಟಸುಬ್ಬಯ್ಯ, ನಿಘಂಟು ತಜ್ಞ
'ಬೈಟು ಕಾಫಿ' ಪುರವಣಿ ಬಹಳ ಆಸಕ್ತಿದಾಯಕವಾಗಿದೆ. ವಿವಿಧ ವಿಷಯಗಳ ಕುರಿತ ಉತ್ತಮ ಲೇಖನಗಳು ಅದರಲ್ಲಿ ಪ್ರಕಟವಾಗುತ್ತಿರುವುದರಿಂದ ಅದನ್ನು ಪ್ರತಿದಿನ ಓದುತ್ತೇನೆ.
- ಡಾ.ಎಸ್.ಎಲ್.ಭೈರಪ್ಪ, ಸಾಹಿತಿ.
'ಬೈಟು ಕಾಫಿ' ಎಂಬ ಐಡಿಯಾವೇ ವಿಶೇಷವಾದದ್ದು. ಬೆಳಗ್ಗೆ ಕಾಫಿ ಕುಡಿಯುವಾಗ ಹಲವಾರು ವಿಷಯಗಳು ಚರ್ಚೆಗೆ ಬರುವಂತೆ 'ಬೈಟು ಕಾಫಿ' ಓದುವಾಗಲೂ ಸಾಕಷ್ಟು ವಿಚಾರಗಳು ಅರಿವಿಗೆ ಬರುತ್ತವೆ. ಅದರಲ್ಲೂ ವಿಶೇಷವಾಗಿ ಯುವಜನರನ್ನು ಆಕರ್ಷಿಸುವಲ್ಲಿ 'ಬೈಟು ಕಾಫಿ' ಹೆಚ್ಚು ಪ್ರಸ್ತುತವಾಗಿದೆ. ಅದೀಗ ಒಂದು ವರ್ಷ ಪೂರೈಸುತ್ತಿರುವುದು ಸಂತೋಷ. ಇನ್ನೂ ಮುಂದುವರಿಯಲಿ ಹಾಗೂ ಹೆಚ್ಚು ಹೆಚ್ಚು ಯುವಜನರನ್ನು ಕನ್ನಡ ಸಂಸ್ಕೃತಿಯತ್ತ ಆಕರ್ಷಿಸಲಿ.
- ಬಿ.ಆರ್.ಲಕ್ಷ್ಮಣರಾವ್, ಕವಿ.
ನಾನು ರೆಗ್ಯುಲರ್ ಕಾಫಿ ಜತೆಗೆ ದಿನಾ 'ಬೈಟು ಕಾಫಿ'ಯನ್ನೂ ಹೀರುತ್ತಿದ್ದೇನೆ. ಕನ್ನಡಪ್ರಭ ಪತ್ರಿಕೆಯಲ್ಲಿ ನಾನು ಮೊದಲು ಕೈಗೆತ್ತಿಕೊಳ್ಳುವುದೇ 'ಬೈಟು ಕಾಫಿ'. ಹೆಸರು 'ಬೈಟು' ಎಂದಾದರೂ ಇದು ಸಾಕಷ್ಟು ವಿಷಯಗಳಿಂದ 'ಫುಲ್' ಆಗಿರುತ್ತದೆ. ವೈವಿಧ್ಯಮಯ ವಿಷಯ, ಮಹತ್ವಪೂರ್ಣ ಮಾಹಿತಿ ಹಾಗೂ ಆಕರ್ಷಕ ಶೀರ್ಷಿಕೆಗಳಿರುವ 'ಬೈಟು ಕಾಫಿ' ಸ್ವಾರಸ್ಯಕರವಾಗಿ ಮೂಡಿ ಬರುತ್ತಿದೆ.
- ಡುಂಡಿರಾಜ್, ಹನಿಗವಿ.
'ಬೈಟು ಕಾಫಿ' ಬಹಳ ಚೆನ್ನಾಗಿದೆ. ಅದು ಒಂದು ಬಾರಿ ಓದಿ ಬದಿಗೆ ಸರಿಸುವಂಥದ್ದಲ್ಲ, ಬದಲಿಗೆ ಸಂಗ್ರಹಯೋಗ್ಯ ಪುರವಣಿ. ನನ್ನ ಹಾಸ್ಯ ಭಾಷಣಗಳಿಗೆ 'ಬೈಟು ಕಾಫಿ' ಸಾಕಷ್ಟು ಮಾಹಿತಿ ನೀಡಿದೆ. ಅದರಿಂದಾಗಿ ನನ್ನ ವೃತ್ತಿಗೆ ಸಾಕಷ್ಟು ಅನುಕೂಲ ಆಗಿದೆ. ಹಾಗಾಗಿ, ನಾನು 'ಬೈಟು ಕಾಫಿ'ಯ ಪ್ರತಿಗಳನ್ನು ಬೈಂಡ್ ಮಾಡಿಸಿ ಇಟ್ಟುಕೊಂಡಿದ್ದೇನೆ.
- ಪ್ರಾಣೇಶ್ ಗಂಗಾವತಿ, ಹಾಸ್ಯ ಭಾಷಣಕಾರ
ಸಾಧಕರ ಬಗ್ಗೆ 'ಬೈಟು ಕಾಫಿ'ಯಲ್ಲಿ ಬರುವ ಲೇಖನಗಳು ನನ್ನ ಮನಸಿಗೆ ತುಂಬಾ ಹಿಡಿಸಿದವು. ಯಾವುದೋ ಒಂದು ಮೂಲೆಯಲ್ಲಿರುವ ಸಾಧಕನನ್ನು ಮಾತನಾಡಿಸಿ ಆತನ ಸಾಧನೆಯನ್ನು ಜಗಜ್ಜಾಹೀರು ಮಾಡುವಂತಹುದು ನಾನು 'ಬೈಟು ಕಾಫಿ'ಯಲ್ಲಿ ಬಹಳ ಇಷ್ಟಪಡುವಂಥ ವಿಷಯ. ಸುದ್ದಿಯ ಹೊರತಾಗಿ ಮಾಹಿತಿ-ಮನರಂಜನೆ ಎಲ್ಲವನ್ನೂ ನೀಡುವ 'ಬೈಟು ಕಾಫಿ' ನಿಜಕ್ಕೂ ವೈವಿಧ್ಯಮಯ ಪುರವಣಿ. ಅದರ ಹೂರಣ ಮತ್ತು ಅದನ್ನು ಪ್ರಸ್ತುತಪಡಿಸುವ ಪರಿ ವಿನೂತನ ಹಾಗೂ ಆಕರ್ಷಕ.
- ಡಾ. ಬಿ.ಟಿ.ರುದ್ರೇಶ್, ಅಧ್ಯಕ್ಷ, ಕರ್ನಾಟಕ ಹೋಮಿಯೋಪತಿ ಮಂಡಳಿ.
'ಬೈಟು ಕಾಫಿ' ಪುರವಣಿ ಚೆನ್ನಾಗಿದೆ. ವೈವಿಧ್ಯಮಯ ವಿಚಾರಗಳು ಜನಸಾಮಾನ್ಯರಿಗೆ ಮನದಟ್ಟಾಗುವ ರೀತಿಯಲ್ಲಿ ಅದರಲ್ಲಿ ಪ್ರಕಟವಾಗುತ್ತಿದೆ. ಆಹಾರ ಹಾಗೂ ಆರೋಗ್ಯ ಸಂಬಂಧಿತ ವಿಚಾರಗಳು ಅದರಲ್ಲಿ ಇನ್ನೂ ಹೆಚ್ಚು ಹೆಚ್ಚು ಪ್ರಕಟಗೊಳ್ಳಲಿ.
- ಡಾ.ಸಿ.ಎನ್.ಮಂಜುನಾಥ್,
ನಿರ್ದೇಶಕ, ಜಯದೇವ ಆಸ್ಪತ್ರೆ.
ಬೆಳಗ್ಗಿನ ಕಾಫಿ-ಟೀ ಹೇಗೆ ದೈನಂದಿನ ಅಗತ್ಯವಾಗಿದೆಯೋ ಹಾಗೆಯೇ ಕನ್ನಡಪ್ರಭದ 'ಬೈಟು ಕಾಫಿ' ಕೂಡ ಪ್ರತಿನಿತ್ಯದ ಅಗತ್ಯವಾಗಿದೆ. ಇದರಲ್ಲಿ ಹಲವು ವಿಶಿಷ್ಠ ವ್ಯಕ್ತಿಗಳ ವಿಶೇಷ ಅಭಿರುಚಿಗಳನ್ನು ಪರಿಚಯಿಸುತ್ತಿರುವುದರಿಂದ ಇದೊಂದು ಕುತೂಹಲಕಾರಿ ಪುರವಣಿ. ಇದರಿಂದಾಗಿಯೇ ನಾವು ಹಲವು ವಿಷಯಗಳನ್ನು ತಿಳಿಯುವಂತಾಗಿದೆ. ಓದುಗರ ಕುತೂಹಲ ತಣಿಸಿ, ಸಂತಸ ನೀಡುವ ಈ ಪುರವಣಿ ಹೀಗೇ ಮುಂದುವರಿಯಲಿ.
- ಡಾ.ಸಿದ್ಧಲಿಂಗಯ್ಯ, ಬಂಡಾಯ ಕವಿ.
ಪ್ರತಿದಿನ ಬೈಟು ಕಾಫಿಗೆ ಎದುರು ನೋಡುವಷ್ಟೇ ಆಸಕ್ತಿಯಿಂದ 'ಬೈಟು ಕಾಫಿ' ಪುರವಣಿಗೂ ಎದುರು ನೋಡುತ್ತಿರುತ್ತೇನೆ. ಕೇವಲ ಸುದ್ದಿ ಮಾತ್ರ ಪತ್ರಿಕೆಯ ಗುಣವಲ್ಲ. ಸುದ್ದಿಯ ಹೊರತಾಗಿ ಮನಸ್ಸನ್ನು ವಿವಿಧ ರೀತಿಯಲ್ಲಿ ತಲ್ಲೀನಗೊಳಿಸುವಂತಹ ಕೆಲಸವನ್ನು ಬೈಟು ಕಾಫಿ ಮಾಡುತ್ತಿದೆ. ಎಲ್ಲ ವಿಚಾರ ತಿಳಿದ ಒಬ್ಬ ಸ್ನೇಹಿತನ ಜತೆ ಬೈಟು ಕಾಫಿ ಹೀರಿದಷ್ಟೇ ಸಂತೋಷ ಬೈಟು ಕಾಫಿ ಪುರವಣಿ ಓದಿದಾಗ ಲಭಿಸುತ್ತಿದೆ.
- ಟಿ.ಎನ್.ಸೀತಾರಾಂ, ಕಿರುತೆರೆ ನಿರ್ದೇಶಕ
ಯಾರ್ ಅನ್ನು ಎಷ್ಟು ಬೇಕಾದ್ರೂ 'ಬೈ'ಯು
ಯಾರ್ ಬಳಿ ಯಾವಾಗ್ಬೇಕಿದ್ರೂ 'ಟೂ' ಬಿಡು,
ಯಾರ್ ಗೆ ಏನೂ ಆಗದು 'ಕಾ'ಲೆಳೆದರೂ
ಯಾರ್ ಗೆ ಆಗಿಹರು 'ಫಿ'ದಾ ಎಲ್ಲರೂ !
(ಯಾರ್ಫ್ರೆಂಡ್, ಫಿದಾಲವ್)
- ಶ್ರೀವತ್ಸ ಜೋಶಿ, ಅಂಕಣಕಾರ
'ಬೈಟು ಕಾಫಿ'ಯನ್ನು ಬಹಳ ದಿನಗಳಿಂದ ಗಮನಿಸುತ್ತಿದ್ದೇನೆ. ವೈವಿಧ್ಯಮಯ ವಿಷಯಗಳ ಮೇಲೆ ಅದು ಬೆಳಕು ಚೆಲ್ಲುತ್ತಿದೆ. ಅದರಲ್ಲಿನ ವಿಡಂಬನಾತ್ಮಕ ಲೇಖನಗಳು ನಿಜಕ್ಕೂ ಸಂತೋಷ ಕೊಡುವಂತದ್ದು. ಬೆಳಗ್ಗೆ ಎದ್ದು ಅರ್ಧ ಕಪ್ ಕಾಫಿ ಸವಿದಾಗ ಆಗುವಷ್ಟೇ ಸಂತೋಷ 'ಬೈಟು ಕಾಫಿ' ಕಾಲಂಗಳನ್ನು ಓದಿದಾಗ ಆಗುತ್ತಿದೆ.
- ಪುಂಡಲೀಕ ಹಾಲಂಬಿ,
ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು.
'ಬೈಟು ಕಾಫಿ' ವಿವಿಧ ಬಗೆಯ ಓದುಗರನ್ನು ಸರಳವಾಗಿ ತಲುಪುವಂತಹ ಒಂದು ಅಪರೂಪದ ಪುರವಣಿ. ತುಂಬ ದೀರ್ಘವಲ್ಲದ ಪುಟ್ಟ ಪುಟ್ಟ ಬರಹಗಳ ಮುಖಾಂತರ ವಿಭಿನ್ನ ಮಾಹಿತಿ ಕೊಡುವಂತಹ ಪುರವಣಿ ಅದು. ಬೈಟು ಕಾಫಿ ಕುಡಿಯುತ್ತ ಹೇಗೆ ಸವಿಯಬಹುದೋ ಹಾಗೆ ಸವಿಯಬಹುದಾದ ಬರಹಗಳನ್ನು ಕೂಡ 'ಬೈಟು ಕಾಫಿ' ಪುರವಣಿ ಒದಗಿಸುತ್ತಿದೆ. ಒಂದು ವರ್ಷ ಪೂರೈಸಿರುವ 'ಬೈಟು ಕಾಫಿ'ಗೆ ನನ್ನ ಶುಭಾಶಯಗಳು.
- ಪ್ರೊ.ಬರಗೂರು ರಾಮಚಂದ್ರಪ್ಪ, ಸಾಹಿತಿ.
'ಬೈಟು ಕಾಫಿ' ಒಂದು ವಿನೂತನ ಪ್ರಯೋಗ. ಸ್ನೇಹಿತ ವಿಶ್ವೇಶ್ವರ ಭಟ್ ಅವರ ಮೆದುಳು ಅಲೆಗೆ ಅಭಿನಂದನೆಗಳು. 'ಬೈಟು ಕಾಫಿ' 'ಪುಲ್ ಹಾಟ್', 'ಫುಲ್ ಸ್ವಾದ'.. ಮಧ್ಯ ಮಧ್ಯ 'ಫುಲ್ ಸ್ಟ್ರಾಂಗ್' ! ನಮ್ಮ ಬೆಂಗಳೂರು ಮತ್ತು ಕರ್ನಾಟಕದ ಜನಜೀವನದ ಬಗ್ಗೆ ಒಳನೋಟ, ಸೀಳ್ನೋಟ ಕೊಡುವಂತಹ ಒಂದು ವಿನೂತನ ಪುರವಣಿಯಾದ 'ಬೈಟು ಕಾಫಿ' ಟೆಲಿಸ್ಕೋಪ್, ಮೈಕ್ರೋಸ್ಕೋಪ್.. ಮಧ್ಯ ಮಧ್ಯ ಎಕ್ಸ್ ರೇ ಮತ್ತು ಲೇಸರ್ ! ವಿನೂತನ ಪ್ರಯೋಗ ನಿರಂತರ ನಡೆಯಲಿ, 'ಬೈಟು ಕಾಫಿ' ಯಾವಾಗಲೂ ಸಿಗಲಿ.
- ಅನಂತಕುಮಾರ್, ಸಂಸದ.
'ಬೈಟು ಕಾಫಿ' ವೈವಿಧ್ಯಮಯ ಮಾತ್ರವಲ್ಲ, ಜನರ ಸದಭಿರುಚಿಗೆ ಪೂರಕವಾಗಿದೆ. ಎಲ್ಲ ವಯೋವಾನ ಹಾಗೂ ಜಾಯಮಾನದ ವಾಚಕರಿಗೆ ಬೇಕಾಗುವ ಬಹುತೇಕ ಎಲ್ಲ ಮಾಹಿತಿಗಳೂ ಅದರಲ್ಲಿರುತ್ತವೆ. 'ಬೈಟು ಕಾಫಿ' ಕೈಗೆತ್ತಿಕೊಂಡ ಬಳಿಕವೇ ನಾನು ಕನ್ನಡಪ್ರಭದ ಉಳಿದ ಪುಟಗಳನ್ನು ತಿರುವಿ ಹಾಕುವುದು.
- ಕುಂ.ವೀರಭದ್ರಪ್ಪ, ಸಾಹಿತಿ.
'ಬೈಟು ಕಾಫಿ' ಎಂದರೆ ಹಂಚಿಕೊಳ್ಳುವುದು. ಬಹಳಷ್ಟು ಜನರಿಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಆಗಿರುವುದಿಲ್ಲ. ಅಂಥವರಿಗೆ ತಮ್ಮ ಭಾವನೆ ಹಂಚಿಕೊಳ್ಳಲು 'ಬೈಟು ಕಾಫಿ' ವೇದಿಕೆ ಒದಗಿಸುತ್ತಿದೆ. ನಾನೂ ಕೂಡ ಜಾನಪದ ಬಗ್ಗೆ ನನ್ನ ಭಾವನೆಗಳನ್ನು 'ಬೈಟು ಕಾಫಿ' ಮೂಲಕ ಹಂಚಿಕೊಂಡಿದ್ದೇನೆ. ಕನ್ನಡಪ್ರಭ ಪತ್ರಿಕೆ ಮನೆಗೆ ಬರುತ್ತಿದ್ದಂತೆ ನಾನು ಮೊದಲು ಕೈಗೆತ್ತಿಕೊಳ್ಳುವುದು 'ಬೈಟು ಕಾಫಿ' ಪುರವಣಿ. ಅಂತಹ ಪುರವಣಿ 1 ವರ್ಷ ಪೂರೈಸಿದ್ದು ಸಂಭ್ರಮದ ವಿಷಯ. ಅದು ಇನ್ನೂ ಮುಂದುವರಿಯಲಿ.
- ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ.
ಪ್ರತಿ ದಿನ ಅಲ್ಲದಿದ್ದರೂ 'ಬೈಟು ಕಾಫಿ'ಯಲ್ಲಿ ಸಿನಿಮಾ ಸುದ್ದಿ ಬಂದಾಗ ಓದುತ್ತಿದ್ದೆ. ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಮೈನ್ ಪೇಜ್ಗಳ ರೆಗ್ಯೂಲರ್ ನ್ಯೂಸ್ ಜೊತೆಯಲ್ಲಿ ಒಂದು ಚೂರು ಭಿನ್ನವಾದ ಲೇಖನಗಳನ್ನು ಓದುವ ಅವಕಾಶ ಹೀಗೆ ಮುಂದುವರೆಯಲಿ.
- ಸೂರಪ್ಪಬಾಬು, ನಿರ್ಮಾಪಕರು
ವೈವಿಧ್ಯಮಯ ಮತ್ತು ಆಸಕ್ತಿಯಿಂದ ಕೂಡಿದ ಹಲವಾರು ಮಾಹಿತಿ ಮತ್ತು ವಿಷಯಗಳನ್ನು ಕುತೂಹಲ ಮೂಡುವ ರೀತಿಯಲ್ಲಿ ಕೊಡುವ ಹೊಸ ಪ್ರಯೋಗ. 'ಬೈಟು ಕಾಫಿ' ಎಂಬ ತಲೆಬರಹವೇ ಕುತೂಹಲಕಾರಿ. ವಿಷಯಗಳು ವಿಭಿನ್ನ ಹಾಗೂ ವೈವಿಧ್ಯತೆಯಿಂದ ಕೂಡಿರುವುದು ಪ್ಲಸ್ ಪಾಯಿಂಟ್.
- ಬಿ.ಎಲ್.ಶಂಕರ್, ಉಪಾಧ್ಯಕ್ಷ, ಕೆಪಿಸಿಸಿ
'ಬೈಟು ಕಾಫಿ' ತುಂಬಾನೇ ಒಳ್ಳೆಯ ಪುರವಣಿ. ಏಕೆಂದರೆ, ಅದರಲ್ಲಿನ ಬರಹಗಳೆಲ್ಲ ಚಿಕ್ಕದಾಗಿ ಹಾಗೂ ವೈವಿಧ್ಯಮಯವಾಗಿರುತ್ತವೆ. ವಿಶೇಷವೆಂದರೆ ಜಾಹೀರಾತು ತೀರಾ ಕಡಿಮೆ. ಆರೋಗ್ಯ, ಪುರಾಣ, ಕ್ರೀಡೆ, ಸಾಧನೆ ಎಲ್ಲವೂ ಅದರಲ್ಲಿದೆ. ಇದರಲ್ಲಿನ ಎಲ್ಲ ಅಂಕಣಗಳು ಓದಿಸಿಕೊಂಡು ಹೋಗುತ್ತವೆ. 'ಪದಯಾತ್ರೆ', 'ಲೆಕ್ಕ ರಾಜ ರಾಣಿ', 'ಬೆಳ್ಳಿತಟ್ಟೆ' ಅಂಕಣಗಳು ಕಟ್ ಮಾಡಿ ಇಟ್ಟುಕೊಳ್ಳುವಂಥವು. ಸಾಹಿತ್ಯಿಕ ವಿಷಯಗಳು ಹೆಚ್ಚಾಗಿರುವುದು ಖುಷಿಯ ಸಂಗತಿ. 'ಬೈಟು ಕಾಫಿ' ಎಂಬ ಹೆಸರೇ ಕ್ಯಾಚಿ ಆಗಿದೆ. ಆ ಮೂಲಕ ಕನ್ನಡಪ್ರಭ ಬಳಗ ಅಂಗೈಯಲ್ಲಿ ಆನೆ ದರ್ಶನ ಮಾಡಿಸುತ್ತಿದೆ.
- ಎಂ.ಎಸ್.ನರಸಿಂಹಮೂರ್ತಿ, ಚಿತ್ರ ಸಾಹಿತಿ.
ಬೈಟು ಕಾಫಿ ಎನ್ನುವ ಹೆಸರು ತುಂಬಾ ಪ್ರಸಿದ್ಧವಾದದ್ದು. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ. 'ಬೈಟು ಕಾಫಿ' ಎಲ್ಲ ಕಡೆ ಸಿಗುತ್ತದೆ. ನಾವು ಕುಡಿಯುವ ಬೈಟು ಕಾಫಿನಷ್ಟೇ ನಿಮ್ಮ 'ಬೈಟು ಕಾಫಿ' ಪುರವಾಣಿ ಯಶಸ್ವಿಯಾಗುತ್ತಿದೆ. ಅದನ್ನ ಹಾಗೆ ಮುಂದುವರೆಸಿಕೊಂಡು ಹೋಗಿ. ಬೆಸ್ಟ್ ಆಫ್ ಲಕ್.
- ರಾಘವೇಂದ್ರ ರಾಜ್ಕುಮಾರ್,
ನಟ ಮತ್ತು ನಿರ್ಮಾಪಕರು
ಮೊದಲನೆದಾಯಗಿ ಮೊದಲ ವರ್ಷದ ಸಂಭ್ರಮಕ್ಕೆ ಶುಭಾಷಯಗಳು. ಮತ್ತಷ್ಟು ಯಶಸ್ವಿಯಾಗಲಿ. ಹೊಸ ಸಿನಿಮಾ ನಟಿಯರ ಜೊತೆಗೆ ಚಿತ್ರರಂಗದ ಇತರೆ ವಿಭಾಗದವರ ಬಗ್ಗೆಯೂ ಒಂದಷ್ಟು ಬರೆಯಿರಿ. ಕಾಣದ ಪ್ರತಿಭೆಗಳು ನಿಮ್ಮ ಮೂಲಕ ಬೆಳಕಿಗೆ ಬರಲಿ.
- ಅಶೋಕ್ ವಿ.ರಾಮನ್, ಛಾಯಾಗ್ರಾಹಕ
ಹೋ... ಒಂದ್ ವರ್ಷ ಆಯ್ತಾ? ಸೂಪರ್, ಗುಡ್. 'ಬೈಟು ಕಾಫಿ' ಅಂದ ಕೂಡಲೇ ಹಂಚಿಕೊಳ್ಳುವುದು ಎಂದರ್ಥ. ಫುಲ್ ಕಾಫಿ ಕುಡಿಯುವುದು 'ಬೈಟು' ಮಾಡಿಕೊಂಡು ಕುಡಿಯುವುದಕ್ಕೂ ತುಂಬಾ ವ್ಯತ್ಯಾಸ ಇದೆ. ಕೇವಲ ಸುದ್ದಿ ಮಾತ್ರವಲ್ಲ, ಭಾವನೆಗಳ ವಿನಿಮಯಕ್ಕೆ ಅದ್ಭುತವಾದ ಪ್ಲಾಟ್ ಫಾರಂ ಇದು.
- ರಮೇಶ್ ಅರವಿಂದ್, ನಟ, ನಿರ್ದೇಶಕ
ಹೌದೇ? ನನಗೆ 'ಬೈಟು ಕಾಫಿ' ಅಂದ ಕೂಡಲೇ ವಿಶೇಷ ಪ್ರೀತಿ ಸಾರ್. ಯಾಕ್ ಗೊತ್ತಾ ನನ್ನ ಪಯಣದ ಕುರಿತು 'ಕಲ್ಯಾಣ sing' ಶೀರ್ಷಿಕೆಯಡಿ ಪ್ರಕಟವಾದ ವಿಶೇಷವಾದ ನಾನು, ನನ್ನ ಪತ್ನಿ ಮತ್ತು ಅಮ್ಮ ಮೂವರು ನೆಲದಲ್ಲಿ ಕೂತು ರಾಗಿ ಮುದ್ದೆ ಊಟ ಮಾಡುತ್ತಿರುವ ಫೋಟೋ ನೋಡಿಯೇ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಆ ಫೋಟೋ ನೋಡಿದಾಗಲೆಲ್ಲ ಬೈಟು ಕಾಫಿ ನೆನಪಾಗುತ್ತದೆ. ಈಗ ಒಂದು ವರ್ಷ ಪೂರೈಸಿದೆ ಅಂದರೆ ಗ್ರೇಟ್. ಹೀಗೆ ಯಶಸ್ವಿಯಾಗಲಿ.
- ಕೆ. ಕಲ್ಯಾಣ್,
ಸಂಗೀತ ನಿರ್ದೇಶಕ
'ಬೈಟು ಕಾಫಿ'ಯಲ್ಲಿ ನನ್ನ ಕುರಿತ ಲೇಖನಗಳು ಸಾಕಷ್ಟು ಬಂದಿವೆ. ಒಳ್ಳೆಯ ಸ್ಪೈಸಿ ಫೋಟೋಗಳನ್ನೂ ಹಾಕಿದ್ದೀರಿ. ನನ್ನ ಹಾಗೆ ಬೇರೆಯವರಿಗೂ 'ಬೈಟು ಕಾಫಿ' ಒಳ್ಳೆಯ ಪ್ಲಾಟ್ ಫಾರಂ ಆಗಲಿ. ಇಂಥ 'ಒಂದು ವರ್ಷದ' ಸಂಭ್ರಮಗಳನ್ನು ನೂರರಷ್ಟು ಆಗಲಿ.
- ಶುಭಾಪೂಂಜಾ, ನಟಿ
ಮೊದಲನೆದಾಗಿ ಆಲ್ ದಿ ಬೆಸ್ಟ್. ಬೇರೆ ಬೇರೆ ಲೇಖನಗಳ ಜೊತೆಗೆ ಚಿತ್ರರಂಗದವರ ಬಗ್ಗೆಯೂ ಅದೇ ರೀತಿ ಅಪರೂಪದ ವಿಷಯಗಳ ಬಗ್ಗೆಯೂ ಬರಹಗಳು ಹೆಚ್ಚಾಗಲಿ.
- ನೆನಪಿರಲಿ ಪ್ರೇಮ್, ನಟ
'ಬೈಟು ಕಾಫಿ' ಮೊದಲ ವರ್ಷದ ಸಂಭ್ರಮದಿಂದ ನೂರು ವರ್ಷಗಳ ಸಂಭ್ರಮಕ್ಕೆ ಕಾಲಿಡಲಿ. ಪ್ರದಿ ದಿನ ಹೊಸ ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಿದ್ದೀರಿ. ಇದರಿಂದ ಹೊಸ ನಟ, ನಟಿಯರಿಗೆ ಸಾಕಷ್ಟು ಅನುಕೂಲವಾಗಿದೆ. ಇದು ಹೀಗೆ ಮುಂದುವರೆಯಲಿ.
- ಮಮತಾ ರಾಹುತ್, ನಟಿ
'ಬೈಟು ಕಾಫಿ' ಎಲ್ಲರ ಮನಸ್ಸಿಗೆ ಮುದ ಮತ್ತು ಕಚಗುಳಿ ನೀಡುವ ಪುರವಣಿ. ಕನ್ನಡಪ್ರಭದ ಗಂಭೀರ ವಿಷಯಗಳ ಜತೆಗೆ 'ಬೈಟು ಕಾಫಿ'ಯಲ್ಲಿನ ವೈವಿಧ್ಯಮಯ ಲೇಖನಗಳು ಸೇರಿ ಒಟ್ಟಾರೆ ಒಂದು ರೀತಿಯ ಫ್ಯೂಷನ್ ಮ್ಯೂಸಿಕ್ ಎಂಬಂತೆ ಭಾಸವಾಗುತ್ತಿದೆ. ತೀವ್ರವಾದ ಅರಿವನ್ನು ಕೂಡ 'ಬೈಟು ಕಾಫಿ'ಯಲ್ಲಿ ಲಾಲಿತ್ಯಮಯವಾಗಿ ಹೇಳುತ್ತಿರುವುದರಿಂದ ಜನ ಅದನ್ನು ಒಪ್ಪಿದ್ದಾರೆ, ಅಪ್ಪಿದ್ದಾರೆ.
- ಪ್ರೊ.ಕೆ.ಇ.ರಾಧಾಕೃಷ್ಣ,
ಅಧ್ಯಕ್ಷರು, ಸಿದ್ಧಾಂತ-ಸಂಶೋಧನೆ ಮತ್ತು ತರಬೇತಿ ವಿಭಾಗ, ಕೆಪಿಸಿಸಿ.
ನಿಮ್ಮ 'ಕನ್ನಡಪ್ರಭ'ದ 'ಬೈಟು ಕಾಫಿ' ಪ್ರತಿ ನಿತ್ಯ ಮತ್ತಷ್ಟು ಅಚ್ಚುಕಟ್ಟಾಗಿ ಮೂಡಿ ಬರಲಿ.ಚಿತ್ರರಂಗದ ಸುದ್ದಿಗಳಿಗೆ ಮತ್ತಷ್ಟು ಜಾಗ ಕೊಡಲಿ. ಆಲ್ ದಿ ಬೆಸ್ಟ್.
- ವಿಜಯ್ಕುಮಾರ್, ಅಧ್ಯಕ್ಷರು,
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ
ಬೈಟು ಕಾಫಿಯ ಮೊದಲ ವರ್ಷದ ಯಶಸ್ವಿ ಪಯಣಕ್ಕೆ ಆಲ್ ದಿ ಬೆಸ್ಟ್. ಇತರೆ ವಿಷಯಗಳ ಜೊತೆಗೆ ಚಿತ್ರರಂಗದ ಸುದ್ದಿಗಳಿಗೆ ಇಷ್ಟು ಹೆಚ್ಚು ಜಾಗ ಕೊಡಿ.
- ಪಟ್ರೆ ಅಜಿತ್, ನಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

