ಬೈಟುಕಾಫಿ

ಅರೆ ಮನಸ್ಸು ಬೇಡ

Published On :

ಮನಸ್ಸು ಯಾವತ್ತೂ ಸುಮ್ಮನೆ ಕುಳಿತಿರುವುದಿಲ್ಲ. ನಾವು ಮಲಗಿದರೂ ಅದು ಮಲಗುವುದಿಲ್ಲ. ಏನಾದರೊಂದು ಹೇಳುತ್ತಲೇ ಇರುತ್ತದೆ. ಆದರೆ ಅದನ್ನು ಗ್ರಹಿಸುವ, ಅರ್ಥೈಸಿಕೊಳ್ಳುವ ವ್ಯವಧಾನ ಮತ್ತು ಸಾಮರ್ಥ್ಯ ಎರಡೂ ನಮಗಿರುವುದಿಲ್ಲ. ಸಿಕ್ಸ್ ್ತಸೆನ್ಸ್ ಅಂತ ಕರೆಯುವುದು ಇದನ್ನೇ ಇರಬಹುದೇನೋ. ಸ್ವಲ್ಪ ಅದಕ್ಕೆ ಕಿವಿಗೊಟ್ಟರೆ ಜೀವನದಲ್ಲಿ ಅದೆಷ್ಟೋ ಅವಾಂತರಗಳನ್ನು ತಪ್ಪಿಸಿಕೊಳ್ಳಬಹುದು. ನೀವೇ ನೋಡಿ, ಕೆಲವರು ಮಾತಿಗೆ ಹೇಳುವುದನ್ನು ಕೇಳಿರಬಹುದು- ಅಂದ್ಕೊಂಡಿದ್ದೆ ಮಾರಾಯ, ಸ್ವಲ್ಪ ಯಡವಟ್ಟಾಯಿತು. ಹೀಗಾಗಿ ತಪ್ಪಿ ಹೋಯಿತು... ಇಂಥ ಮಾತಿನ ಹಿಂದೆ ಅವನ ಜಾಗೃತ ಮನಸ್ಸಿನ ಹಾಗೂ ಅವನ ನಿರ್ಲಕ್ಷ್ಯ ಧೋರಣೆಯ ಎರಡೂ ಪರಿಚಯ ನಮಗಾಗುತ್ತದೆ. ಇದಕ್ಕೆ ಕಾರಣ ನಮ್ಮಲ್ಲಿನ ಇಚ್ಛಾಶಕ್ತಿಯ ಕೊರತೆ. ದೃಢ ನಿರ್ಧಾರದ ಅಭಾವ. ಮನಸ್ಸು ಜಾಗೃತವಾಗಿದ್ದರಷ್ಟೇ ಸಾಲದು, ನಾವೂ ಅದಕ್ಕೆ ಸ್ಪಂದಿಸುವುದು ಅಗತ್ಯ. ಅಯ್ಯೋ ಬಿಡು, ಮಾಡಿದರಾಯಿತು. ಆದದ್ದಾಗುತ್ತದೆ, ಅದೇನು ಮಹಾ...ಎಂಬಿತ್ಯಾದಿ ನಮ್ಮ ಧೋರಣೆಯಿರುತ್ತದಲ್ಲಾ, ಅದೇ ಕೈಕೊಡುವುದು. ಅಂದರೆ ನಮಗೆ ನಾವೇ ಅನ್ಯಾಯವನ್ನು ಮಾಡಿಕೊಂಡಂತೆ. ಇಂಥವರು ಜೀವನದಲ್ಲಿ ಏನನ್ನೂ ಮಾಡುವುದೇ ಇಲ್ಲ. ಒಮ್ಮೆ ತಲೆಯಲ್ಲಿ ಬಂದ ಆಲೋಚನೆಯನ್ನು ಶತಾಯ ಗತಾಯ ಅನುಷ್ಠಾನಗೊಳಿಸಲೇಬೇಕು ಎಂಬ ನಿರ್ಧಾರದಿಂದ ಮುನ್ನುಗ್ಗಿದರೆ ಮಾತ್ರ ಸಾಧನೆ ಆಗುತ್ತದೆ. ಇಲ್ಲದಿದ್ದರೆ ಬರೀ ಕನಸುಗಳಲ್ಲೇ ಜೀವನ ಮುಗಿದು ಹೋಗುತ್ತದೆ. ಇನ್ನು ಅರೆ ಮನಸ್ಸು ಎಂಬುದೂ ಅಪಾಯಕಾರಿಯೇ. ಹಾಗೋ, ಹೀಗೋ..ಎಂದು ಯೋಚಿಸುತ್ತಾ ಕುಳಿತರೂ ಅದರಲ್ಲೇ ಕಾಲಹರಣವಾಗುತ್ತದೆ. ಅಂದರೆ ಒಂದು ನಿರ್ಧಾರಕ್ಕೆ ಬರುವ ಸಾಮರ್ಥ್ಯವಿಲ್ಲದವರಲ್ಲಿ ಮಾತ್ರ ಹೀಗಾಗುತ್ತದೆ. ಹಾಗೆಂದು ಗೊಂದಲವೇ ಇರಬಾರದಂತಲೂ ಅಲ್ಲ. ಅಂಥ ಸಂದರ್ಭದಲ್ಲಿ ನಾವೇ ಯೋಚಿಸುತ್ತ ಕುಳಿತುಕೊಳ್ಳುವ ಬದಲು ಒಂದಿಬ್ಬರು ಅನುಭವಸ್ಥರೊಂದಿಗೆ ಚರ್ಚಿಸಿದರೆ ಸೂಕ್ತ ಸಲಹೆ ಸಿಗುತ್ತದೆ. ಅಥವಾ ಆ ಚರ್ಚೆಯ ಸಂದರ್ಭದಲ್ಲಿ ನಮಗೇ ಒಂದು ದಾರಿ ತೋಚುವ ಸಾಧ್ಯತೆಯೂ ಇದೆ. ಮೊದಲು ಎದ್ದು ಹೊರಡಿ. ಆಮೇಲೆ ಉಳಿದದ್ದು ತಂತಾನೇ ಆಗುತ್ತದೆ.

-  ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.