ಬೈಟುಕಾಫಿ

ಮಂತ್ರಾಕ್ಷರ

ನಿರಂತರ ಸುಖವನ್ನು ಬಯಸಿದ ಮನುಷ್ಯನು ಸಹಜವಾಗಿ ಸುಖವನ್ನು ಹೊಂದಲು...

ಮಂತ್ರಾಕ್ಷರ
Published On :

ನಿರಂತರ ಸುಖವನ್ನು ಬಯಸಿದ ಮನುಷ್ಯನು ಸಹಜವಾಗಿ ಸುಖವನ್ನು ಹೊಂದಲು ಪ್ರಯತ್ನಿಸುತ್ತಾನೆ. ಅದಕ್ಕಾಗಿ ಪಡಬಾರದ ಕಷ್ಟವನ್ನುಪಡುತ್ತಾನೆ. ಆದರೂ ಒಂದೊಂದು ಬಾರಿ ಸುಖದ ಜೊತೆಗೆ ದುಃಖವು, ಸುಖಕ್ಕಿಂತ ಹೆಚ್ಚಾದ ದುಃಖವೂ ಅಥವಾ ಸುಖವೇ ಇಲ್ಲದೆ ದುಃಖವೂ ಬಂದು ಒದಗುವ ಸನ್ನಿವೇಶಗಳು ಎಷ್ಟೋ ಬಾರಿ ಬಂದದ್ದನ್ನು ನಾವು ಕಾಣುತ್ತೇವೆ. ಅದಕ್ಕಾಗಿ ದುಃಖದ ನಿವಾರಣೆಯೊಂದಿಗೆ ಸುಖ ಪ್ರಾಪ್ತಿಗಾಗಿ ಧರ್ಮ, ದೈವ ಮುಂತಾದವುಗಳನ್ನು ನಮ್ಮ ಭಾರತೀಯ ಶಾಸ್ತ್ರದಲ್ಲಿ ತಿಳಿಸಿ ಅದನ್ನು ಅನುಷ್ಠಾನ ಮಾಡುವುದರಿಂದ ನಮ್ಮ ಸಂಕಲ್ಪಿತ ಫಲಗಳನ್ನು ಹೊಂದಬಹುದೆಂದು ಪ್ರಾಚೀನರು ಹೇಳುತ್ತಾರೆ. ಈ ನಿಟ್ಟಿನಲ್ಲಿ ಮನುಷ್ಯನಾದವನು ತನ್ನ ದೈನಂದಿನ ಯಾಂತ್ರಿಕ ಜೀವನದಲ್ಲಿ ಸಿಕ್ಕ ಸ್ವಲ್ಪ ಸಮಯದ ಮಧ್ಯೆ ತಮ್ಮ ತಮ್ಮ
ವರ್ಣಾಶ್ರಮಧರ್ಮಗಳಿಗೆ ಅನುಕೂಲವಾದ ರೀತಿಯಲ್ಲಿ ಕರ್ಮಾನುಷ್ಠಾನವನ್ನಾಗಲಿ, ಜ್ಞಾನಾರ್ಜನೆಯನ್ನಾಗಲಿ ಮಾಡಿ ಜ್ಞಾನಯೋಗ ಅಥವಾ ಕರ್ಮಯೋಗದಿಂದ ಭಗವಂತನನ್ನು ಒಲಿಸಿಕೊಂಡು ತನಗೆ ಆಪೇಕ್ಷಿತವಾದ ಫಲವನ್ನು ಪಡೆಯಲು ಹವಣಿಸುತ್ತಾನೆ. ಶ್ರೀ ವಾದೀಂದ್ರತೀರ್ಥರು ಹೇಳುವಂತೆ- ಅಲ್ಪಮತಿಗಳಾದ ನಾವು
ಜ್ಞಾನಯೋಗದಿಂದ ಪರಮಾತ್ಮನನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೇನೇ ದೃಢವಾದ ಶರೀರವು ಇಲ್ಲದಿರುವುದರಿಂದ ಕರ್ಮಯೋಗವನ್ನು ಮಾಡಲಾರೆವು. ಇನ್ನು ಉಳಿದ ಮಾರ್ಗವೆಂದರೆ ಅದು ಕೇವಲ ಮಂತ್ರಾಲಯ ಗುರುಸಾರ್ವಭೌಮರಲ್ಲಿ ಮಾಡುವ ಭಕ್ತಿಯೋಗ ಒಂದೇ ಎಂಬ ಮಾತಿನಿಂದ ಇಂದು
ನಾವು ಅನನ್ಯ ಶರಣರಾಗಿ, ಜಗದ್ಗುರುಗಳಾದ ಶ್ರೀರಾಘವೇಂದ್ರ ಗುರುಸಾರ್ವಭೌಮರನ್ನು ಸೇವಿಸಿದರೆ ಅವರು ನಮಗೆ ಎಲ್ಲ ರೀತಿಯ ಶಕ್ತಿಯನ್ನು ಕೊಟ್ಟು ನಮ್ಮ ಕಡೆಯಿಂದ ಭಗವದನುಗ್ರಹಕ್ಕೆ ಬೇಕಾದ ಸಾಧನೆಗಳನ್ನು ಮಾಡಿಸುವುದರಲ್ಲಿ ಸಂದೇಹವಿಲ್ಲ. ಹಾಗಾಗಿ ಇಂದಿನ ಪ್ರಪಂಚಕ್ಕೆ ಅಂದರೆ ಪಂಡಿತರಿಂದ ಹಿಡಿದು ಪಾಮರರವರೆಗೆ ಗುರುರಾಜರ ಮಾರ್ಗದರ್ಶನ, ಅನುಗ್ರಹ, ಪ್ರಸಾದ, ದರ್ಶನಾದಿಗಳ ಅವಶ್ಯಕತೆ ಇದೆ ಎಂಬುದು ನಿರ್ವಿವಾದ ತ್ರೈಕಾಲಿಕಸತ್ಯವಾಗಿದೆ.
ಶ್ರೀಗುರುರಾಜರ ಸ್ತೋತ್ರ ಪಾರಾಯಣವಾದ ಅಷ್ಟೋತ್ತರ, ಮೃತ್ತಿಕಾ ಬೃಂದಾವನ ದರ್ಶನ, 'ಶ್ರೀರಾಘವೇಂದ್ರಾಯ ನಮಃ' ಅಷ್ಟಾಕ್ಷರ ಮಂತ್ರ (ಇದಕ್ಕೆ ಧ್ಯಾನಶ್ಲೋಕವನ್ನು ಅಂಗನ್ಯಾಸ ಕರನ್ಯಾಸಾದಿಗಳನ್ನು ಬಲ್ಲವರಿಂದ ತಿಳಿದು ಪುರುಷರಾದರೆ ಪೂರ್ವೋಕ್ತಿಗಳಲ್ಲಿ ಓಂಕಾರ ಸಹಿತವಾಗಿ, ಬೇರೆಯವರು ಶ್ರೀಕಾರಸಹಿತವಾಗಿ ಜಪಿಸಬಹುದಾಗಿದೆ) ಪಠಣಗಳಿಂದ ಗುರುರಾಯರನ್ನು ಒಲಿಸಿಕೊಳ್ಳಬಹುದು. ಮೇಲ್ಕಂಡ ಯಾವುದೇ ಪ್ರಯತ್ನವು ನಮ್ಮಿಂದ ಆಗದು ಎನ್ನುವವರಿಗೆ ಶ್ರೀಗುರುರಾಜರ ಬೃಂದಾವನಕ್ಕೆ ಪ್ರದಕ್ಷಿಣೆ ಮಾಡುವ ಮಾತ್ರದಿಂದಲೇ ಅವರ ಅನುಗ್ರಹವನ್ನು ಪಡೆದು ಬೇಡಿದ ಇಷ್ಟಾರ್ಥಗಳನ್ನು ಪಡೆಯಬಹುದಾಗಿದೆ. ಹಾಗಾಗಿ 'ಸರ್ವಯಾತ್ರ ಫಲಾವಾಪ್ತ್ಯೈ ಯಥಾಶಕ್ತಿ ಪ್ರದಕ್ಷಿಣಂ' ಎಂದು ಹೇಳಿದ್ದಾರೆ ಶ್ರೀ ಅಪ್ಪಣಾಚಾರ್ಯರು.
ಮಂತ್ರಾಲಯ ಪ್ರಭುಗಳು ಸಶರೀರವಾಗಿ ಬೃಂದಾವನದಲ್ಲಿ ಇಂದಿಗೂ ಮಂತ್ರಾಲಯದಲ್ಲಿ ನೆಲೆಸಿ ಭಕ್ತರ ಕೋರಿಕೆಯಂತೆ ಕರೆದಲ್ಲಿಗೆ ಓಡಿ ಬಂದು ಭಕ್ತರನ್ನು ಪೊರೆಯಲು ಒಂದು ರೂಪವನ್ನು ತಾಳಿ ಅನುಗ್ರಹಿಸುತ್ತಿದ್ದಾರೆ. ಈ ವಿಚಾರದಲ್ಲಿ ಬೇರೆಬೇರೆ ಊರುಗಳಲ್ಲಿ, ಮೃತ್ತಿಕೆ ಬೃದಾವನಗಳಲ್ಲಿ, ಮನೆಯಲ್ಲಿ ಇಟ್ಟುಕೊಂಡ ಬೆಳ್ಳಿ
ಬೃಂದಾವನಗಳಲ್ಲಿ, ಚಿತ್ರಪಟಗಳಲ್ಲಿ, ಅಷ್ಟೇಕೆ ಮನೆಯಲ್ಲಿ ಬರೆದ ಶ್ರೀಗುರುರಾಜರ ಹೆಸರುಗಳಿಂದಲೂ ಕೂಡಾ ಭಕ್ತರ ಕೋರಿಕೆಯಂತೆ ನೆಲೆಸಿ ಅನುಗ್ರಹಿಸುತ್ತಿರುವುದು ಎಲ್ಲರ ಅನುಭವ ವೇದ್ಯವಾಗಿದೆ.

ಪಂಚರೂಪವನ್ನು ತೋರಿಸುವ ಪಂಚಾಮೃತ

ಪಂಚಾಮೃತವೆಂದರೆ ಎಲ್ಲರಿಗೂ ಹಾಲು, ಮೊಸರು ಇತ್ಯಾದಿಗಳನ್ನು ಅಭಿಷೇಕ ಮಾಡಿದ ಪ್ರಸಾದವೆಂದು ಅರಿವಾಗುತ್ತದೆ. ಆದರೆ ನಮ್ಮ ದೃಷ್ಟಿಯಲ್ಲಿ ಆ ಪಂಚಾಮೃತವು ಒಂದು ಅಮೃತವೇ. ಅದರ ಜೊತೆಗೆ ಸೇರಿದ ನಾಲ್ಕು ಅಮೃತಗಳಿಂದ ಕೂಡಿದ, ನಾವು ಹೇಳುವ ಪಂಚಾಮೃತವೇ ಬೇರೆ. ಅದು ಪಾದೋದಕ, ಮಂತ್ರಾಕ್ಷತೆ, ಪಂಚಾಮೃತ, ಹಸ್ತೋದಕ, ಮತ್ತು ಪರಿಮಳ ಪ್ರಸಾದ ಈ ಐದು ನಮ್ಮ ದೃಷ್ಟಿಯಲ್ಲಿ ಪಂಚಾಮೃತ. ಇವುಗಳನ್ನು ಯಾರು ಭಕ್ತಿಶ್ರದ್ದೆಗಳಿಂದ ಸ್ವೀಕರಿಸುತ್ತಾರೋ ಅವರಿಗೆ ಶ್ರೀಗುರುರಾಜರು ತಮ್ಮ ಧ್ಯಾನಕ್ಕೆ ವಿಷಯನಾದ ಭಗವಂತನ ಪಂಚರೂಪಗಳನ್ನು ತೋರಿಸುತಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ.

ಪಾದೋದಕ
ರಾಮ-ನರಹರಿ ಇತ್ಯಾದಿ ರೂಪಗಳಿಂದ 700ಕ್ಕೂ ಮಿಗಿಲಾದ ಶ್ರೀಲಕ್ಷ್ಮೀನಾರಾಯಣರ ಸಾಲಿಗ್ರಾಮಗಳಿಂದ ಅಲವಭೋಧಾದಿ ಮಿಕ್ಕಯತಿಗಳಿಂದ ಕಂಗೊಳಿಸುವ ಶ್ರೀಗುರುರಾಜರ ಬೃಂದಾವನವು ಅದು ಕೇವಲ ಶಿಲೆಯಾಗಿರದೆ ಹರಿಮಂದಿರವೆಂದು ಅನೇಕರಿಗೆ ಅನುಭವ ವೇದ್ಯವಾಗಿದೆ. ಅದಕ್ಕೇನೇ ಅಂತಹ ಪವಿತ್ರ ಬೃಂದಾವನಕ್ಕೆ ಪ್ರಾತಃಕಾಲದಲ್ಲಿ ನಿರ್ಮಾಲ್ಯವಿಸರ್ಜನೆಯ ನಂತರ ಮಾಡುವ ಶುದ್ಧೋದಕ ಅಭಿಷೇಕದ ಜಲವನ್ನು ಪಾದೋದಕವೆಂದು ಕರೆಯುತ್ತಾರೆ. (ಇಂತಹ ಪಾದೋದಕ ಪ್ರಾಶನವು ಶಾಸ್ತ್ರವಿಹಿತವಲ್ಲವೆಂದು ಅನೇಕರು ಹೇಳುವುದುಂಟು. ಅಂಥವರು ಸಪ್ರಮಾಣವಾಗಿ ತಿಳಿಸುವ ಗುರುಪಾದೋದಕ ಪ್ರಾಶನ ಎಂಬ ನಮ್ಮ ಶ್ರೀಮಠದಿಂದ ಪ್ರಕಾಶಿತವಾದ ಗ್ರಂಥವನ್ನು ಅವಲೋಕಿಸಬೇಕು) ಇದನ್ನು ಪ್ರಾಶನ ಮಾಡೋಣದಿಂದ, ಪ್ರೋಕ್ಷಣೆ ಮಾಡಿಕೊಳ್ಳುವುದರಿಂದ, ನದಿಯಲ್ಲಿ ಒಂದು ಬಾರಿ ಸ್ನಾನಮಾಡಿ ಸೊಂಟದವರೆಗೂ ನೀರಿನಲ್ಲಿ ನಿಂತು ತಲೆಯ ಮೇಲೆ ಹಾಕಿಕೊಳ್ಳುವುದರಿಂದಲೂ ಅನೇಕ ರೋಗರುಜಿನಗಳು, ದುಃಖದುಮ್ಮಾನಗಳು ಪರಿಹಾರವಾಗುವುದನ್ನು ನಾವು ಇಂದಿಗೂ ಕಾಣುತ್ತಿದ್ದೇವೆ. ಹೀಗಾಗಿ ಇಂತಹ ಸುಲಭ ಉಪಾಯದಿಂದ ಶ್ರೀಗುರುರಾಜರು ಎಲ್ಲರಿಗೂ ಕೈಗೆಟುಕುವಂತೆ ನೆಲೆಸಿದ್ದಾರೆ.

ಮಂತ್ರಾಕ್ಷತೆ

ಶುದ್ಧವಾದ ಅರಿಶಿಣ, ಸುಣ್ಣದಿಂದ ಕಲೆಸಿದ ಅಕ್ಕಿಯನ್ನು ಮಂತ್ರಾಕ್ಷತೆಯೆಂದು ಕರೆಯುತಾರೆ. ಅದನ್ನು ಶ್ರೀಗುರುರಾಜರ ಪಾದುಕೆಗಳ ಮೇಲೆ, ಬೃಂದಾವನದ ಮೇಲೆ ಇರಿಸಿ ತೆಗೆದ ಮಂತ್ರಾಕ್ಷತೆ ಒಂದಾದರೆ, ಇನ್ನೊಂದು ಶ್ರೀಮಠದ ಯತಿಗಳು ಅನೇಕ ವರುಷಗಳಿಂದಲೂ ಖಾಲಿಯಾಗದಲೇ ನಡೆದುಕೊಂಡು ಬರುವ ಮಂತ್ರಾಕ್ಷತೆಯ ಬುಟ್ಟಿಯಿಂದ ಬ್ರಾಹ್ಮಣರ ಕೈಯಲ್ಲಿ ಹಾಕಿಸಿ ಮಂತ್ರೋಪೇತವನ್ನಾಗಿಸಿ ನಂತರ ಮಂತ್ರಾಕ್ಷತೆಯಲ್ಲಿ ಸಂಪ್ರದಾಯದಂತೆ ಶ್ರೀಪೀಠಾಧಿಪತಿಗಳು ಬೀಜಾಕ್ಷರಗಳನ್ನು ಬರೆದು ಅಭಿಮಂತ್ರಿಸಿ ಕೊಡುವ ಮಂತ್ರಾಕ್ಷತೆಯು ಮತ್ತೊಂದು. ಹೀಗೆ ಎರಡು ಬಗೆಯಾಗಿ ಭಕ್ತರಿಗೆ ಲಭ್ಯವಾಗುವ ಮಂತ್ರಾಕ್ಷತೆಯು ಭಕ್ತರ ಕೋರಿಕೆಗಳನ್ನು ಈಡೇರಿಸುವುದರಲ್ಲಿ ಸಮರ್ಥವಾಗಿದೆ. ಆ ಮಂತ್ರಾಕ್ಷತೆಯನ್ನು ತಲೆಮೇಲೆ ಧರಿಸುವುದರಿಂದ, ಬಾಯಲ್ಲಿ ಹಾಕಿಕೊಳ್ಳುವುದರಿಂದ, ಅನೇಕ ಕಷ್ಟಕಾರ್ಪಣ್ಯಗಳು ದೂರವಾಗುತ್ತಿರುವುದು ಎಲ್ಲರಿಗೂ ವೇದ್ಯವಾಗಿದೆ.

ಪಂಚಾಮೃತ
ಶುದ್ಧವಾದ ಗೋವಿನ ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆ ಇವುಗಳನ್ನು ಫಲಗಳ ಜೊತೆಯಲ್ಲಿ ಬೃಂದಾವನಕ್ಕೆ ಅಭಿಷೇಕ ಮಾಡಿದ ನಂತರ ಸಿಗುವ ಪ್ರಸಾದಕ್ಕೆ ಪಂಚಾಮೃತವೆನ್ನುವರು. ಇದನ್ನು ನಿತ್ಯದಲ್ಲೂ ಶ್ರೀಗುರುರಾಜರ ಬೃಂದಾವನಕ್ಕೆ ಸಮರ್ಪಿಸಿ ಎಲ್ಲರಿಗೂ ವಿತರಿಸುತ್ತಾರೆ. ಪಂಚಾಮೃತವನ್ನು ಸ್ವೀಕರಿಸಿ ಎಷ್ಟೋ ಜನ ಮಕ್ಕಳು ಇಲ್ಲದೆ ಇದ್ದವರು ಮಕ್ಕಳನ್ನು, ಅಂಗವಿಕಲರಾದವರು ಸುಂದರವಾದ ಶರೀರವನ್ನು, ತತ್ವಜ್ಞಾನದ ಅಪೇಕ್ಷಿಗಳಿಗೆ ತತ್ವಜ್ಞಾನಾದಿಗಳನ್ನು ಹೊಂದಿ ಗುರುಗಳ ಪೂರ್ಣಾನುಗ್ರಹಕ್ಕೆ ಪಾತ್ರರಾಗಿದ್ದಾರೆ.

ಹಸ್ತೋದಕ

ಪ್ರತಿನಿತ್ಯದಲ್ಲೂ ಭಗವಂತನ ಷೋಡಶೋಪಚಾರಗಳ ಪೂಜೆಯ ನಂತರ ಪರಿವಾರ ದೇವತೆಗಳಿಗೆ ನೈವೇದ್ಯವನ್ನು ಸಮರ್ಪಿಸಿ ನಂತರ ಗುರುಗಳಿಗೆ ಮಾಡುವ ಭಗವನ್ನೈವೇದ್ಯ ಸಮರ್ಪಣೆಯನ್ನು ಹಸ್ತೋದಕ ಎಂದು ಕರೆಯುತ್ತಾರೆ. (ಈ ಹಸ್ತೋದಕ ಪ್ರಾಶನವು ಶಾಸ್ತ್ರವಿಹಿತವೇ ಸಂದೇಹವುಳ್ಳವರು, ನಮ್ಮ ಶ್ರೀಮಠದ ಹಸ್ತೋದಕ ಸ್ವೀಕಾರವು ಶಾಸ್ತ್ರವಿಹಿತವೆಂಬ ವಿಚಾರದಲ್ಲಿ ಬರೆದ 'ಹಸ್ತೋದಕ ಮಹಿಮ ಎಂಬ ಪುಸ್ತಕವನ್ನು ಪರಾಮರ್ಶಿಸಬೇಕು) ಇದನ್ನು ಪ್ರತಿನಿತ್ಯದಲ್ಲೂ ಭಕರ್ತಿಗೆ ಭೋಜನದಲ್ಲಿ ಪ್ರಸಾದರೂಪದಿಂದ ಬೆರೆಸಿಕೊಡುವುದುಂಟು. ಇದರಿಂದ ಅನೇಕ ಇಷ್ಟಾರ್ಥಗಳನ್ನು ಪಡೆದು ಶ್ರೀಗುರುರಾಜರ ಪೂರ್ಣಾನುಗ್ರಹಕ್ಕೆ ಪಾತ್ರರಾಗಿದ್ದನ್ನು ಕಾಣಬಹುದಾಗಿದೆ.
 
ಪರಿಮಳ ಪ್ರಸಾದ
ಪ್ರಾತಃಸ್ಮರಣೀಯರಾದ ನಮ್ಮ ಪರಮೇಷ್ಟಿ ಗುರುಗಳಾದ ಶ್ರೀಸುಜಯೀಂದ್ರತೀರ್ಥ ಶ್ರೀಪಾದಂಗಳವರು ಮಂತ್ರಾಲಯಕ್ಕೆ ಬಂದ ಭಕ್ತರಿಗೆ ಅನುಕೂಲವಾದ ರೀತಿಯಲ್ಲಿ ತಮ್ಮ ತಮ್ಮ ಊರುಗಳಿಗೆ ಕೊಂಡೊಯ್ಯಲು 'ಪರಿಮಳ ಪ್ರಸಾದ'ವೆಂಬ ಒಂದು ಪ್ರಸಾದವನ್ನು ಮಾಡಿಸಿ ಗುರುಗಳಿಗೆ ಸಮರ್ಪಿಸಿ ಭಕ್ತರಿಗೆ ವಿತರಿಸುವ ವ್ಯವಸ್ಥೆಯನ್ನು ಮಾಡಿರುತ್ತಾರೆ. ಶ್ರೀಮಜ್ಜಯತೀರ್ಥರ ಮೇರುಕೃತಿ ಎನಿಸಿದ 'ಶ್ರೀಮನ್ನ್ಯಾಯಸುಧಾ'ಗೆ
ಶ್ರೀಗುರುರಾಜರು ಬರೆದ ವ್ಯಾಖ್ಯಾನಕ್ಕೆ 'ಪರಿಮಳ'ವೆಂದು ಹೆಸರು. ಅದು ಹೇಗೆ ಸುಧೆಯ ಪರಿಮಳವನ್ನು ಹೊರಗೆ ಸೂಸುತ್ತದೆಯೋ, ಅದರಂತೆ ಈ 'ಪರಿಮಳ ಪ್ರಸಾದ'ವೂ ಕೂಡ ಶ್ರೀಗುರುರಾಜರ ವಿಶಿಷ್ಟಮಹಿಮೆ ಎಂಬ ಪರಿಮಳವು ಜಗತ್ತಿನಲ್ಲಿ ಸೂಸುವಂತಾಗಲಿ ಎಂದು ಸಮರ್ಪಿಸಿದ ಈ ಪರಿಮಳ ಪ್ರಸಾದವನ್ನು
ಪರಿಶುದ್ಧವಾದ ಸಜ್ಜಿಗೆ, ತುಪ್ಪ, ಸಕ್ಕರೆ, ಗೋಡಂಬಿ, ದ್ರಾಕ್ಷಿ, ಕೇಸರಿ, ಪಚ್ಚಕರ್ಪೂರ, ಏಲಕ್ಕಿ ಮುಂತಾದ ಸುಗಂಧದ್ರವ್ಯಗಳಿಂದ ತಯಾರಿಸಿ ಗುರುಗಳಿಗೆ ಸಮರ್ಪಿಸಿ ಕೊಡಲಾಗುವುದು. ಇದನ್ನು ಪಡೆದ ಜನರು ಒಂದು ತಿಂಗಳವರೆಗೆ ಮನೆಯಲ್ಲಿ ಇಟ್ಟು ಸ್ವೀಕರಿಸುವಂತಾಗಿದೆ. ಯಾರು ದರುಶನವನ್ನು ಪಡೆದು ಅವಸರದಿಂದ ಊರಿಗೆ ಹೊರಡುವರೊ ಅಂತವರಿಗೆ ಈ ಪ್ರಸಾದವು ಅತ್ಯಂತ ಸುಲಭ ಉಪಾಯ. ಇದನ್ನು
ಸ್ವೀಕರಿಸಿದ ಜನರು ಶ್ರೀರಾಯರ ಅನುಗ್ರಹದ ಅನುಭವವನ್ನು ಮಂತ್ರಾಲಯದಲ್ಲಿಯೂ, ಬೇರೆ ಕಡೆಯಲ್ಲೂ ನಮ್ಮಮುಂದೆ ಹೇಳಿದ್ದುಂಟು. ಹೀಗೆ ಪರಿಮಳ ಪ್ರಸಾದವು ಕೂಡ ಶ್ರೀಗುರುರಾಜರ ಅನುಗ್ರಹಕ್ಕೆ ಒಂದು ಸಾಧನೆಯಾಗಿದೆ.
ಮೇಲ್ಕಂಡ  ಐದು ಪದಾರ್ಥಗಳು 'ಪಂಚಾಮೃತ'ವಿದ್ದಂತೆ. ಅದನ್ನು ಭಕ್ತಿ ಶದ್ಧೆಗಳಿಂದ ಸ್ವೀಕರಿಸಿ ಶ್ರೀಗುರುಸಾರ್ವಭೌಮರ ಅನುಗ್ರಹಕ್ಕೆ ನಾವು ಪಾತ್ರರಾದರೆ ತಪ್ಪದೆಲೆ ಅವರು ಅನಿರುದ್ಧಾದಿ ಪಂಚ ಭಗವದ್ರೂಪಗಳ ದರುಶನವನ್ನು ಮಾಡಿಸಿ ಮಾನವರ ಪುರುಷಾರ್ಥಗಳನ್ನು ಈಡೇರಿಸುವುದರಲ್ಲಿ ಸಂದೇಹವೇ ಇಲ್ಲ.
ಒಬ್ಬ ವಿದ್ವನ್ಮಾನ್ಯರಿಂದ ಆರಂಭಿಸಿ ಸಾಮಾನ್ಯ ಮನುಷ್ಯರಿಗೂ ಕೂಡ ಗುರುಗಳು ಸುಲಭೋಪಾಯಗಳಿಂದ ಲಭ್ಯರು  ಎಂಬುವುದಕ್ಕೆ ನಮ್ಮ ಈ ಮೇಲ್ಕಂಡ ವಿವರಣೆಯು ಬೆಳಕನ್ನು ಚೆಲ್ಲಬಹುದೆಂದು ಆಶಿಸುತ್ತೇವೆ.

- ಶ್ರೀ ಸುಬುಧೇಂದ್ರ ತೀರ್ಥರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.