ಮೊಲೊಡಿ ಕಿಂಗ್
ರಾಜಗುರುಗಳ ಗಾಯನವೆಂದರೆ ನಿಂತ ನೀರಲ್ಲ, ಹರಿಯುವ ಝರಿ. ಗ್ವಾಲಿಯರ್, ಪಟಿಯಾಲಾ...

ಬಿಳಿ ಕಚ್ಚೆ ಪಂಚೆ, ಮೇಲೊಂದು ನೆಹರು ಶರ್ಟ್, ಅದರ ಮೇಲೊಂದು ಕಪ್ಪು ಕೋಟ್, ತಲೆಯ ಮೇಲೆ ಕರಿ ಟೋಪಿ, ಹಣೆಯ ಮೇಲೊಂದು ತಿಲಕ, ಬಂಗಾರ ಬಣ್ಣದ ಕೋಲುಮುಖ, ಮೇಲ್ನೋಟಕ್ಕೆ ಒಬ್ಬ ಶ್ರೀಸಾಮಾನ್ಯ. ಆದರೆ ಅಂತರಂಗದಲ್ಲೊಬ್ಬ ಅಚ್ಚ ಶರಣ. ಅವರದು ನಾದಸ್ವರಗಳ ಸದನ. ವೇದಿಕೆ ಏರಿ ತಂಬೂರಿ ಮಧ್ಯೆ ಕುಳಿತು ಗಾಯಕಿ ಪ್ರಾರಂಭಿಸಿದರೆ ವಾಗ್ದೇವಿ ಸರಸ್ವತಿಯ ದರ್ಶನ. ಅವರ ಸುರೀಲಿ ಕಂಠದಿಂದ ಹರಿದು ಬರುವ ಲಾಲಿತ್ಯಪೂರ್ಣ ಸ್ವರಗಳಿಗೆ ಸುಮಧುರ ಸ್ವರದ ಗುಂಗು. ಮೂರು ಘರಾಣೆಗಳ ವೈವಿಧ್ಯಮಯ ಗಾಯಕಿಗೆ ವಿದ್ವತ್ಪೂರ್ಣ ಗಾಯನದ ರಂಗು. ಇವೆಲ್ಲ ವಿಶೇಷಣಗಳಿಂದ ಮೂಡುವ ಚಿತ್ರಣ ಕಿಂಗ್ ಆಫ್ ಮೆಲೊಡಿ ಪಂ. ಬಸವರಾಜ ರಾಜಗುರು ಅವರದು.
ರಾಜಗುರುಗಳ ಗಾಯನವೆಂದರೆ ನಿಂತ ನೀರಲ್ಲ ಹರಿಯುವ ಝರಿ. ಗ್ವಾಲಿಯರ್, ಪಟಿಯಾಲಾ ಹಾಗೂ ಕಿರಾನಾ ಘರಾಣೆಗಳ ಅಪೂರ್ವ ಸಮಾಗಮ. ಮೂರು ಘರಾಣೆಗಳ ವಿಶೇಷ ಗುಣಲಕ್ಷಣಗಳನ್ನು ಸಮ್ಮಿಳಿತಗೊಳಿಸಿ ತಮ್ಮ ಸುಮಧುರ ಕಂಠದ ಗಾಯಕಿಯಿಂದ ಶ್ರೋತೃಗಳ ಮನಕ್ಕೆ ರಸ-ಭಾವಗಳ ಬಣ್ಣ ಬಳಿದು, ಅದನ್ನು ಅವರ ಅಂತರಂಗದಲ್ಲಿ ಬೆಳಗುವಂತೆ ಮೋಡಿ ಮಾಡಿದ ಗಾಯನ ಪಂ. ರಾಜಗುರುಗಳದ್ದು.
ತಂದೆ ಮಹಾಂತಯ್ಯನವರಿಂದ ಆರಂಭವಾದ ಪಂ. ರಾಜಗುರುಗಳ ಕಲಾವಿಹಾರ, ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳಿಂದ ಪುಷ್ಟಿಗೊಂಡು, ಹಲವು ದಿಕ್ಕುಗಳಿಂದ ಹರಿದು ಬಂದ ಪೋಷಕಾಂಶಗಳನ್ನು ಹೀರಿ ಶ್ರೀಮಂತವಾಯಿತು. ರಾಗದ ಪರಿಶುದ್ಧತೆ, ಸೂಕ್ಷ್ಮತೆ, ಕೋಮಲತೆ ಹಾಗೂ ಸುಂದರತೆಗಳಿಂದ ಅಂಗ-ಪ್ರತ್ಯಂಗಗಳನ್ನು ಶೃಂಗರಿಸಿ, ಸ್ವರಗಳನ್ನು ಕಮಲದ ದಳಗಳಂತೆ ಎಳೆ ಎಳೆಯಾಗಿ ಬಿಡಿಸಿ ಪ್ರಸ್ತುಪಡಿಸುತ್ತಿದ್ದ ಪಂ. ರಾಜಗುರುಗಳ ಗಾಯಕಿ ಅನಿರ್ವಚನೀಯ. ಅವಿಸ್ಮರಣೀಯ.
ಇಂದು ಸಮ್ಮಾನ
ಆಗಸ್ಟ್ 24ರಂದು ಗಾನ ಗಂಧರ್ವ ರಾಜಗುರುಗಳ ಜನ್ಮದಿನ. ಅಂದು ಸಂಗೀತದಲ್ಲಿ ಅತ್ಯಮೂಲ್ಯ ಸೇವೆ ಸಲ್ಲಿಸಿರುವವರಿಗೆ ಸಂಗೀತ ಸಾಮ್ರಾಟ್ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಪುರಸ್ಕಾರ ಹಾಗೂ ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ಗಂಭೀರವಾಗಿ ತೊಡಗಿಸಿಕೊಂಡು ಸಾಧನೆ ಮಾಡುತ್ತಿರುವ ಉದಯೋನ್ಮುಖ ಕಲಾವಿದರಿಗೆ ಯುವ ಪುರಸ್ಕಾರ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನ ಪಂ. ರಾಜಗುರು ರಾಷ್ಟ್ರೀಯ ಸಮ್ಮಾನ್ ಸುವಿಖ್ಯಾತ ಸರೋದ್ ವಾದಕ ಮೈಸೂರಿನ ಪಂ. ರಾಜೀವ ತಾರಾನಾಥ ಅವರಿಗೆ ನೀಡಲಾಗುತ್ತಿದ್ದು, ಕೋಲ್ಕತ್ತಾದ ಯುವ ತಬಲಾ ಪಟು ಅನುಭ್ರತ್ ಚಟರ್ಜಿ ಹಾಗೂ ಬೆಂಗಳೂರಿನ ಉದಯೋನ್ಮುಖ ಗಾಯಕ ಕೌಶಿಕ್ ಐತಾಳ್ ಅವರಿಗೆ ಯುವ ಪುರಸ್ಕಾರ ನೀಡಿ ಗೌರವಿಸುತ್ತಿದೆ. ಆಗಸ್ಟ್ 24, 2013ರಂದು ಧಾರವಾಡದ ಡಾ. ಅಣ್ಣಾಜಿರಾವ್ ಸರೂರ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಲಿದೆ.
- ರವೀಂದ್ರ ಕವಠೇಕರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


