ಬೈಟುಕಾಫಿ

ನಕ್ಕು ನೋಡಿ

Published On :

ದಿವಸದ ಎಲ್ಲ ಕೆಲಸಗಳನ್ನೂ ಮುಗಿಸಿ ದಣಿದು ಕುಳಿತ ಮೇಲೂ ಹೊಟ್ಟೆ ತುಂಬಾ ನಗಬಲ್ಲವನೇ ಸುಖಿ. ಹಾಗೆ ನಗಿಸಬಲ್ಲವನು ಇನ್ನೂ ಸುಖಿ. ನಕ್ಕರದೇ ಸ್ವರ್ಗ ಎಂಬ ಗಾದೆಯನ್ನೂ, ನಗುವು ಸಹಜ ಧರ್ಮ ನಗಿಸುವುದು ಪರಧರ್ಮ ಎಂಬ ಡಿವಿಜಿ ವಾಕ್ಯವನ್ನೂ ನೀವು ಕೇಳಿರಬೇಕು. ಮುಖ ಗಂಟಿಕ್ಕಿಕೊಂಡಿರುವದರಿಂದೇನು ಫಲವಿದೆ? ಅದರಿಂದ ಯಾವ ಕೆಲಸವೂ ಆಗುವುದಿಲ್ಲ, ಲಾಭವೂ ಇಲ್ಲ. ನಷ್ಟವಂತೂ ಖಂಡಿತ ಇದ್ದೇ ಇದೆ. ನಗುವಿನಿಂದ ನಷ್ಟ ತಿಲಮಾತ್ರವೂ ಇಲ್ಲ. ಅದು ನಿಮ್ಮ ಕಷ್ಟಗಳನ್ನು ಹಗುರ ಮಾಡುತ್ತದೆ, ನಿಮ್ಮ ಆರೋಗ್ಯವನ್ನು ಸದಾ ಚೆನ್ನಾಗಿಡುತ್ತದೆ.
ತಮ್ಮ ಶತ್ರುಗಳನ್ನೂ ನಗುನಗುತ್ತಾ ಎದುರಿಸುತ್ತಿದ್ದ ಗಾಂಧೀಜಿ ನೆನಪಾಗುತ್ತಾರೆ. ಅವರೆಂದೂ ಬ್ರಿಟಿಷರ ವಿರುದ್ಧ ಹಾರಾಡಿ ಚೀರಾಡಲಿಲ್ಲ. ತಮ್ಮ ನಿರ್ಧಾರಗಳನ್ನು ಸ್ಪಷ್ಟವಾಗಿ ಹೇಳಿದರು. ನಗುಮುಖದಿಂದಲೇ ಎದುರಿಸಿದರು. ಆದ್ದರಿಂದಲೇ ಅವರಿಗೆ ಶತ್ರುಗಳೂ ಮಿತ್ರರಾದರು. ಎಲ್ಲರಿಗೂ ಇನ್ನೊಬ್ಬರೊಂದಿಗೆ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಭಿನ್ನಮತವನ್ನೂ ಮನದಟ್ಟು ಮಾಡಿಸಬಲ್ಲ ಶಕ್ತಿ ಮುಗುಳ್ನಗೆಗೆ ಇದೆ, ಕ್ರೋಧಕ್ಕೆ ಇಲ್ಲ. ತಿಳಿನಗೆಗೆ, ವಾತಾವರಣದಲ್ಲಿ ಹಬ್ಬಿರುವ ತ್ವೇಷಮಯ ವಾತಾವರಣವನ್ನೂ ತಿಳಿಗೊಳಿಸಬಲ್ಲ ಶಕ್ತಿ ಇದೆ. ಬ್ಯಾಂಕ್‌ನ ಎರಡು ಕೌಂಟರ್‌ಗಳಲ್ಲಿ ಒಬ್ಬ ಸಿಡುಕ, ಇನ್ನೊಬ್ಬ ನಗುಮುಖಿ ಇದ್ದರೆ ನೀವು ಯಾವ ಕಡೆ ಹೋಗುತ್ತೀರಿ? ಅದೇ ನಿಯಮ ನಿಮಗೂ ಅನ್ವಯವಾಗುತ್ತದೆ ಎಂದು ನೆನಪಿಟ್ಟುಕೊಂಡರಾಯಿತು. ನಗೆಗಾರನಿಗೆ ಊರೆಲ್ಲಾ ಗೆಳೆಯರು, ಸಿಡುಕನಿಗೆ ಎಲ್ಲರೂ ಶತ್ರುಗಳೇ.

-  ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.