ಬೈಟುಕಾಫಿ

ಆಗಾಗ ಜೀರ್ಣಾಂಗಗಳ ಸರ್ವಿಸ್ ಮಾಡಿಸುತ್ತಿರಿ

Published On :

ನನಗೊಂದು ತಮಾಷೆಯ ಪ್ರಸಂಗ ನೆನಪಾಗುತ್ತಿದೆ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ಈಗಲೂ ಆ ಘಟನೆ ನೆನಪಾದರೆ ನನಗೆ ನಗೆ ಉಕ್ಕುವುದುಂಟು. ಯಾವಾಗಲಾದರೂ ನನ್ನಷ್ಟಕ್ಕೆ ಸುಮ್ಮನೆ ನಗುತ್ತಿದ್ದರೆ ಪತ್ನಿ ರೇಗಿಸುತ್ತಾಳೆ, 'ನಿಮಗಿಂದು ಉಪವಾಸವೇ ಗತಿ' ಎಂದು! ನಾನು ಆಗ ಪ್ರೌಢಶಾಲೆಯಲ್ಲಿ ಓದುತ್ತಿದ್ದೆ ಎಂದು ತೋರುತ್ತದೆ. ಭಾಷಣ, ಆಶುಭಾಷಣ ಸ್ಪರ್ಧೆಗಳಲ್ಲಿ ಆಸಕ್ತಿ ಕೊಂಚ ಮಟ್ಟಿಗೆ ಇತ್ತು. ಒಮ್ಮೆ ಆಶುಭಾಷಣ ಸ್ಪರ್ಧೆ. ನನಗೆ ಬಂದ ವಿಷಯ- 'ಲಂಘನೌ ಪರಮೌಷಧಂ'! ನಮಗೆ ಆಗ ಗೊತ್ತಿದ್ದ ಲಂಘನ ಎಂದರೆ ನೆಗೆಯುವುದು. ಚೀಟಿಯಲ್ಲಿ ವಿಷಯ ನೋಡಿದ ತಕ್ಷಣ ಹನುಮಂತನ ಸಮುದ್ರೋಲ್ಲಂಘನ ನೆನಪಿಗೆ ಬಂತು. ಐದು ನಿಮಿಷದ ಅವಧಿ ಮುಗಿದು ತೀರ್ಪುಗಾರರು ಬೆಲ್ ಬಾರಿಸಿದರೂ ಮತ್ತೊಂದು ನಿಮಿಷ ನಿರರ್ಗಳವಾಗಿ ಮಾತನಾಡಿದೆ. ಕಡೇಪಕ್ಷ ತೀರ್ಪುಗಾರರ ಮುಖವನ್ನಾದರೂ ನೋಡಿದ್ದರೆ ಪರಿಸ್ಥಿತಿ ಬೇರೆ ಆಗುತ್ತಿತ್ತೇನೋ. ಆವೇಶ ಬಂದವನಂತೆ ಮಾತನಾಡುತ್ತಲೇ ಇದ್ದೆ. ಚಪ್ಪಾಳೆಗಳ ಮೇಲೆ ಚಪ್ಪಾಳೆ! ಬಹುಮಾನ ಮಾತ್ರ ನನಗೆ ಬರಲಿಲ್ಲ. 'ಲಂಘನೌ ಪರಮೌಷಧಂ ಕುರಿತು ಹುಡುಗ ಬಹಳ ಚೆನ್ನಾಗಿ ಮಾತನಾಡಿದ್ದಾನೆ. ಆದರೆ ಆತನಿಗೆ ತನಗೆ ಸಿಕ್ಕ ವಿಷಯ ಏನು ಎನ್ನುವುದೇ ಗೊತ್ತಾಗಲಿಲ್ಲ. ಸಂಸ್ಕೃತದಲ್ಲಿ ಲಂಘನ ಎಂದರೆ ಉಪವಾಸ ಎಂದರ್ಥ. ಲಂಘನೌ ಪರಮೌಷಧಂ ಎಂದರೆ ಉಪವಾಸಕ್ಕಿಂತ ಬೇರೆ ಮದ್ದು ಇಲ್ಲ ಎಂದು! ಪರವಾಗಿಲ್ಲ, ಹುಡುಗನಲ್ಲಿ ಮಾತನಾಡುವ ಕಲೆಯಂತೂ ಇದೆ' ಎಂದು ತೀರ್ಪುಗಾರರು ಮೆಚ್ಚುಗೆ ವ್ಯಕ್ತಪಡಿಸಿದರು. ನನ್ನ ವಾಕ್ಪಟುತ್ವವನ್ನು ತೀರ್ಪುಗಾರರ ಹೊಗಳಿದರೂ ತಲೆ ಎತ್ತಲು ನನ್ನಿಂದ ಸಾಧ್ಯವಾಗಲೇ ಇಲ್ಲ. ಅಂತೂ ಆ ಘಟನೆಯಿಂದ ನಾನು ಹೈಸ್ಕೂಲ್‌ನಲ್ಲಿ 'ಹೀರೋ' ಆಗಿದ್ದಂತೂ ನಿಜ.
ನಮ್ಮ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಕಾಡಿದರೆ, ಅದರಲ್ಲೂ ಬೇಧಿ, ಹೊಟ್ಟೆನೋವು, ಅಜೀರ್ಣ ಮೊದಲಾದ ತೊಂದರೆಗಳು ಬಂದರೆ ಅಪ್ಪ ಹೇಳುತ್ತಿದ್ದರು, 'ಇವತ್ತು ಇಡೀ ದಿನ ತಿನ್ನಲು ಏನೂ ಕೊಡಬೇಡಿ. ದ್ರವಾಹಾರವನ್ನು ಆಗಾಗ ಕೊಡುತ್ತಿರಿ. ತಂತಾನೇ ಸರಿ ಹೋಗುತ್ತದೆ'. ಎಷ್ಟು ಸುಲಭದ ಪರಿಹಾರ! ಜೀರ್ಣಾಂಗವೊಂದು ಸರಿಯಾಗಿ ಕೆಲಸ ಮಾಡಿದರೆ ನಮ್ಮ ಇಡೀ ದಿನದ ವ್ಯವಹಾರ ಸಲೀಸು. ಬೆಳ್ಳಂಬೆಳಗ್ಗೆ ಮಲವಿಸರ್ಜನೆಯಿಂದಲೇ ತೆಗೆದುಕೊಳ್ಳಿ. ಮಲಬದ್ಧತೆ ಕಾಡಿದರಂತೂ ಮುಗಿದೇ ಹೋಯಿತು. ಅವಸರವಸರದಲ್ಲಿ ಕೆಲಸ ಮುಗಿಸಬೇಕಾಗಿದೆ ಎಂದಾದಾಗ ಎಂದಿನ ಸಮಾಧಾನ ಇರುವುದಿಲ್ಲ. ಹೀಗಾಗಿ ಉದರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಜಾಗೃತೆ ವಹಿಸಿದಷ್ಟೂ ಸಾಲದು. ಹೊಟ್ಟೆ ತುಂಬಿಸಿಕೊಳ್ಳುವುದಷ್ಟೇ ಅಲ್ಲ, ಅದನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲೂ ನಾವು ಗಮನ ಕೊಡುವುದು ಅತ್ಯಗತ್ಯ. ಉಪವಾಸ ವ್ರತಗಳ ಹಿಂದೆ ಇದ್ದದ್ದು ಇದೇ ಕಲ್ಪನೆ. ಏಕಾದಶಿಯಂದೊ, ವ್ರತಾಚರಣೆ ವೇಳೆಯಲ್ಲಿಯೋ ನಮ್ಮ ಹೊಟ್ಟೆಗೆ ಒಂದಷ್ಟು ವಿಶ್ರಾಂತಿ. ಜೀರ್ಣಾಂಗ ವ್ಯೂಹ ಈ ಸಂದರ್ಭವನ್ನು 'ಸರ್ವಿಸಿಂಗ್‌'ಗೆ ಬಳಸಿಕೊಳ್ಳುತ್ತಿತ್ತು. <

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.