ಗ್ರಹಿಕೆಗೆ ಅಡ್ಡಿಯಾಗುವ ತುಲನೆ
ಮನಸ್ಸು ಯಾವಾಗಲೂ ಹಾಗೆಯೇ, ಅದೊಂದು ತುಲನೆ ಮಾಡುವ ಉಪಕರಣ. ಒಂದಿಲ್ಲೊಂದು ತುಲನೆಯಲ್ಲಿ ಅದು ಸದಾ ತೊಡಗಿರುತ್ತದೆ. ಯಾವುದನ್ನೂ ಇದೇ ಸರ್ವಶ್ರೇಷ್ಠವೆಂದು ಒಪ್ಪಿಕೊಳ್ಳುವುದೇ ಇಲ್ಲ. ಯಾವುದನ್ನು ನೋಡಿದರೂ ಇನ್ನೊಂದರೊಂದಿಗೆ ಅದು ಹೋಲಿಸಿ ನೋಡುತ್ತದೆ. ಇವತ್ತಿಗೆ ಕಂಡ ವಸ್ತು, ವಿಷಯ, ವ್ಯಕ್ತಿಗಳನ್ನು ಇನ್ನಾವಾಗಲೋ ಕಂಡಿದ್ದರೊಡನೆ ಹೋಲಿಕೆ ಮಾಡುತ್ತದೆ. ಇದಕ್ಕಿಂತ ಅದು ಚೆನ್ನಾಗಿತ್ತು. ಅವರೇ ಇವರಿಗಿಂತ ಒಳ್ಳೆಯವರು. ಅದೇ ಸುಂದರವಾಗಿತ್ತು... ಹೀಗೆ ಅಳೆದು- ತೂಗಿ ಮಾಡುತ್ತದೆ. ಇವತ್ತಿನ ನಮ್ಮ ಸಾಧನೆಯನ್ನು ಹಿಂದಿನ ನಮ್ಮ ಯಾವುದೋ ಸಾಧನೆಯೊಂದಿಗೆ ಇಟ್ಟು ನೋಡುತ್ತದೆ. ಎಷ್ಟೋ ಬಾರಿ ನಮ್ಮ ಸಾಧನೆ ಇನ್ನೊಬ್ಬರ ಸಾಧನೆಯೊಂದಿಗೆ ಪೈಪೋಟಿ ನಡೆಸುತ್ತದೆ.
ಇಂಥ ಹೋಲಿಕೆಯೇ ಮನಸ್ಸಿನಲ್ಲಿ ಅತೃಪ್ತಿಯನ್ನು ಹುಟ್ಟು ಹಾಕುವುದು. ಆಗಲೇ ಮನಸ್ಸು ಕದಡಿ ಹೋಗುತ್ತದೆ. ಕೀಳರಿಮೆಯನ್ನು ಉದ್ದೀಪಿಸುತ್ತದೆ. ಚೈತನ್ಯ ಕಳೆದುಹೋಗುತ್ತದೆ. ವ್ಯಕ್ತಿ ಮುದುಡಲಾರಂಭಿಸುತ್ತಾನೆ. ನಾವು ಎಷ್ಟೋ ಬಾರಿ ಅಂದುಕೊಳ್ಳುವುದಿದೆ. ಇಂಥ ಹೋಲಿಕೆಗಳು ನಮ್ಮನ್ನು ಚುರುಕಾಗಿಸುತ್ತದೆ, ಇನ್ನಷ್ಟು ಉತ್ತಮ ಸಾಧನೆಗೆ ಪ್ರೇರಣೆ ದೊರೆಯುತ್ತದೆ, ಗುರಿ ಇನ್ನಷ್ಟು ಎತ್ತರಕ್ಕೆ ಏರುತ್ತದೆ... ಎಂಬಿತ್ಯಾದಿಗಳೆಲ್ಲ ಕೇವಲ ಭ್ರಮೆ. ಏಕೆಂದರೆ ಮನಸ್ಸು ಹೋಲಿಕೆಯಲ್ಲಿ ತೊಡಗುತ್ತಾ ಕುಳಿತು ಬಿಡುವುದರಿಂದ ಒಂದೆಡೆ ಬೇರೆ ಯಾವುದರತ್ತ ಗಮನ ಹರಿಸುವುದನ್ನೇ ಮರೆತು ಬಿಡುತ್ತೇವೆ. ಇದಕ್ಕಿಂತ ಮುಖ್ಯ ಅಂಶವೆಂದರೆ ಕಣ್ಣೆದುರಿಗಿರುವ ಎಷ್ಟೋ ಉತ್ತಮ ಸಂಗತಿಗಳನ್ನು ಗಮನಿಸುವುದೇ ಇಲ್ಲ. ಮಾತ್ರವಲ್ಲ ಹೋಲಿಕೆಯೆಂಬುದು ವಿಷಯವನ್ನು ಇಡಿಯಾಗಿ ನೋಡುವುದಕ್ಕೆ ಅಡ್ಡಿಯಾಗಿಬಿಡುತ್ತದೆ. ಇದಕ್ಕಿಂತ ನಮ್ಮ ಪಾಡಿಗೆ ನಮ್ಮೆದುರು ಇರುವುದರ ಉತ್ತಮ ಅಂಶಗಳನ್ನು ಗ್ರಹಿಸಿಕೊಂಡು ಅದರಲ್ಲೇ ಬದುಕನ್ನು ಕಟ್ಟಿಕೊಳ್ಳುವುದು ಲೇಸು.
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

