ಬೈಟುಕಾಫಿ

ಭಿಕ್ಷೆ ಬೇಡಿ ಶಾಲೆಗೆ ಹೋಗುವ ಅಣ್ಣ ತಂಗಿ

ಭಿಕ್ಷೆ ಬೇಡಿ ಶಾಲೆಗೆ ಹೋಗುವ ಅಣ್ಣ ತಂಗಿ
Published On :

ಅವರಿವರ ಬಳಿ ಭಿಕ್ಷೆ ಎತ್ತಿ ಮಕ್ಕಳಿಬ್ಬರು ಶಿಕ್ಷಣ ಪಡೆಯುತ್ತಿರುವ ಕಥೆ ಇದು. ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಪುರ ಗ್ರಾಮದ ಅಣ್ಣ, ತಂಗಿ ಪ್ರತಿ ದಿನ ಅವರಿವರ ಮನೆಯಲ್ಲಿ ಭಿಕ್ಷೆ ಎತ್ತಿ ಬುದ್ಧಿಮಾಂದ್ಯ ತಾಯಿಯನ್ನು ಸಲಹಿ ಶಾಲೆಗೆ ಹೋಗುತ್ತಿದ್ದಾರೆ.
ಪುರ ಗ್ರಾಮದ ರತ್ನಮ್ಮ ಅವರಿಗೆ ಮೂವರು ಮಕ್ಕಳು. ಗಂಡ ಶಂಕರಪ್ಪ ಮನೆ ಬಿಟ್ಟು ಹೋಗಿದ್ದಾರೆ. ಇದ್ದ ಮೂವರು ಮಕ್ಕಳಲ್ಲಿ ಒಬ್ಬ ಮಗನನ್ನು ಯಾರೋ ದುಷ್ಕರ್ಮಿಗಳು ಅಪಹರಿಸಿದ್ದರಿಂದ ಈಕೆ ಬುದ್ಧಿಮಾಂದ್ಯಳಾದಳು. ಮಾತು ಬಿಟ್ಟು, ಮೌನಕ್ಕೆ ಶರಣಾದ ರತ್ನಮ್ಮ ಊಟಕ್ಕೂ ಬೇರೆಯವರನ್ನು ಆಶ್ರಯಿಸಬೇಕಾಯಿತು. ಈ ಮಧ್ಯೆ ಆಕೆಯ ಮಕ್ಕಳಿಬ್ಬರು (ಅಣ್ಣ, ತಂಗಿ) ಅಕ್ಷರಶಃ ಅನಾಥರೇ ಆದರು. ದುಡಿದು ಅಮ್ಮನನ್ನು ಸಾಕಲು ಇನ್ನೂ ಚಿಕ್ಕ ವಯಸ್ಸು. ಹಾಗಾಗಿ ಪುರ ಸೇರಿದಂತೆ ಅಕ್ಕಪಕ್ಕದ ಊರಿನಲ್ಲಿ ಭಿಕ್ಷಾಟನೆಗೆ ಇಳಿದರು. ಬೆಳಗ್ಗೆ 6 ಗಂಟೆಗೆ ಎದ್ದು ಭಿಕ್ಷೆ ಎತ್ತಿ ಅಮ್ಮನಿಗೂ ಆರೈಕೆ ಮಾಡಿ ಶಾಲೆಗೆ ಹೋಗುತ್ತಾರೆ. ಮತ್ತೆ ಸಂಜೆ ಮನೆಗೆ ಬಂದ ಕೂಡಲೇ ಮತ್ತೆ ಭಿಕ್ಷೆ ಎತ್ತಿ ಊಟ ಮಾಡಿ ಪಾಠಗಳನ್ನು ಓದಿಕೊಳ್ಳುತ್ತಾರೆ.

ಶಾಲೆ ಮುಂಭಾಗದಲ್ಲೇ
ಸದ್ಯ 6ನೇ ತರಗತಿಯಲ್ಲಿ ಓದುತ್ತಿರುವ ಮೂರ್ತಿ(12), 3ನೇ ತರಗತಿಯಲ್ಲಿ ಓದುತ್ತಿರುವ ಕೀರ್ತಿ(9) ಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು. ಗುಡಿಸಿಲಿನಲ್ಲಿ ವಾಸ್ತವ್ಯ. ಕೊನೆಯ ಮಗನನ್ನು ಕಳೆದುಕೊಂಡ ತಾಯಿ ರತ್ನಮ್ಮ, ಎಲ್ಲಿ ತನ್ನ ಮಕ್ಕಳಿಬ್ಬರನ್ನು ಅಪಹರಿಸುತ್ತಾರೋ ಎಂಬ ಭೀತಿಯಲ್ಲಿ ಮಕ್ಕಳು ಶಾಲೆ ಮುಗಿಸಿಕೊಂಡು ಮನೆಗೆ ಬರುವ ತನಕ ಶಾಲೆ ಮುಂಭಾಗವೇ ಕುಳಿತಿರುತ್ತಾಳೆ.
ಬೆಳಗ್ಗೆ ತಿಂಡಿ, ಸಂಜೆ ಊಟಕ್ಕೆ ಭಿಕ್ಷೆಯನ್ನು ಅವಲಂಬಿಸಿರುವ ಈ ಮಕ್ಕಳು ಮಧ್ಯಾಹ್ನ ಶಾಲೆಯಲ್ಲಿ ಬಿಸಿಯೂಟದ ಪ್ರಯೋಜನ ಪಡೆಯುತ್ತಾರೆ. ಕಷ್ಟಪಟ್ಟಾದರೂ ಶಿಕ್ಷಣ ಪಡೆಯಬೇಕು ಎಂಬ ಹಠ ತೊಟ್ಟಿದ್ದಾರೆ. ಅಮ್ಮನ ಆರೋಗ್ಯ ಕಾಳಜಿ ಮಾಡುವುದರ ಜತೆಗೆ ಆಕೆಯ ಸ್ನಾನ ಇತ್ಯಾದಿ ಕಾರ್ಯವನ್ನು ನಿರ್ವಹಿಸುತ್ತಾರೆ.
ಕಳೆದ ಮೂರು ವರ್ಷದಿಂದ ಈ ಮಕ್ಕಳು ಹೀಗೆ ಜೀವನದ ನೊಗ ಹೊತ್ತಿದ್ದಾರೆ. ಮುಂದೆ ದುಡಿದು ತಂಗಿಯನ್ನು ಓದಿಸಿ ತಾನೂ ಓದುವ ಅಭಿಲಾಷೆ ಅಣ್ಣ ಮೂರ್ತಿಗೆ. ಚೆನ್ನಾಗಿಯೇ ವ್ಯಾಸಂಗ ಮಾಡುತ್ತಿರುವ ಈ ಮಕ್ಕಳು ಎಷ್ಟೇ ಕಷ್ಟ ಬಂದರೂ ಓದುವುದನ್ನು ನಿಲ್ಲಿಸುವುದಿಲ್ಲವೆಂದು ಶಪಥ ತೊಟ್ಟಿದ್ದಾರೆ.

- ಉಗಮ ಶ್ರೀನಿವಾಸ್
ಫೋನ್: 9986375670

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.