ಬದಲಾಗಲಿ ದಿನಚರಿ

ಅದೇ ಆಫೀಸು, ಅದೇ ಕೆಲಸ, ಅದೇ ಫೈಲುಗಳು. ದಿನದ ಕೆಲಸ ಮಾಡುತ್ತ ಮಾಡುತ್ತ ಈ ಕೆಲಸದಲ್ಲೆಲ್ಲಾದರೂ ನಾನು ಇದೀನಾ ಅನಿಸಿಬಿಡುತ್ತದೆ. ಬದಲಾವಣೆ ಬೇಕು ಅನಿಸುತ್ತದೆ. ಏಕತಾನದ ದಿನಚರಿಯಿಂದ ಮನಸ್ಸು ಜಡ್ಡುಗಟ್ಟಿ ಹೋಗಿದೆ. ಸ್ವಲ್ಪ ದಿನ ಎಲ್ಲಾದರೂ ಹೋಗಿದ್ದು ಬರಬೇಕು ಅಂದುಕೊಳ್ಳುತ್ತೇವೆ. ಹಾಗೆ ಹೊರಟುಬಿಡುವುದು ಅಂದಕೂಡಲೇ ಮನಸು ಗರಿಗೆದರಿಬಿಡುತ್ತದೆ. ಉಲ್ಲಾಸದ ಹಕ್ಕಿಯಾಗುತ್ತದೆ. ಸುಂದರ ಗಿರಿಧಾಮದಲ್ಲಿ ಟೆಂಟ್ ಹಾಕುತ್ತೇವೆ. ಒಂದೆರಡು ದಿನ ಕಳೆಯುವಷ್ಟರಲ್ಲೇ ಮನಸ್ಸು ಮತ್ತೊಂದೇನನ್ನೋ ಹುಡುಕಲು ಶುರುಮಾಡುತ್ತದೆ. ಹಿಂದೆ ಬಿಟ್ಟು ಬಂದಿರುವ ಮನೆ, ಆಫೀಸು, ಕೆಲಸಗಳು ಮನಸ್ಸಿನಲ್ಲಿ ಟುಕುಟುಕು ಮಾಡಲು ಶುರುಮಾಡುತ್ತವೆ. ಆ ಫೈಲು ಇವತ್ತು ಮುಗಿಸಬೇಕಾಗಿತ್ತು. ಈ ಗಿರಾಕಿ ಇಂದು ಆಫೀಸಿಗೆ ಬಂದಿದ್ದನೋ ಏನೋ ಎಂದೆಲ್ಲ ಯೋಚಿಸಲಾರಂಭಿಸುತ್ತೇವೆ. ಅಂಥ ಯೋಚನೆಗಳಲ್ಲೇ ನಿಮ್ಮ ಕಣ್ಣೆದುರು ಇರುವ ಸುಂದರ ದೃಶ್ಯಗಳು, ನಿಮ್ಮ ಕೈಯಳತೆಯಲ್ಲಿರುವ ಕಾಲ ಸದ್ದಿಲ್ಲದೆ ಸರಿಯುತ್ತಿರುತ್ತದೆ. ಅದು ಸಂಪೂರ್ಣ ಸರಿದು ಹೋಗುವವರೆಗೂ ಅರಿವೇ ಆಗುವುದಿಲ್ಲ. ಭೂತಕಾಲವನ್ನೂ, ಭವಿಷ್ಯವನ್ನೂ ತೊರೆದು ಕೇವಲ ವರ್ತಮಾನದಲ್ಲಿ ಇರುವುದು ಎಷ್ಟು ಕಷ್ಟ! ಹಾಗೆಯೇ ಸಾಮಾನ್ಯ ದಿನಚರಿಯನ್ನು ಮನಸ್ಸಿನಿಂದ ಪೂರ್ಣವಾಗಿ ತೊಡೆದುಹಾಕುವುದೂ ಕಷ್ಟ. ಬದಲಾವಣೆ ಮನಕ್ಕೆ ಹಿತವನ್ನು ಕೊಡಬಹುದು, ಆದರೆ ಅದೇ ರೀತಿ ಅದು ಸಾಮಾನ್ಯ ದಿನಚರಿಯಿಂದ ಪ್ರತ್ಯೇಕಿತಗೊಂಡ ಅಪರಿಚಿತ ಮನಸ್ಥಿತಿಯನ್ನೂ ಉಂಟುಮಾಡುತ್ತದೆ. ಇದನ್ನು ಮೀರಲು ಏನು ಮಾಡಬೇಕು? ಸಾಮಾನ್ಯ ದಿನಚರಿಯಲ್ಲೇ ಬದಲಾವಣೆಯ ಸೊಗಸನ್ನು ಕಾಣುವ ಸಾಧ್ಯತೆಯೊಂದನ್ನು ಇಟ್ಟುಕೊಳ್ಳಬೇಕು. ಬದಲಾವಣೆಗಳಿಗೆ ಮುಕ್ತವಾಗಿ ಸ್ಪಂದಿಸಬೇಕು. ನಮ್ಮ ಕೆಲಸಗಳಲ್ಲೇ ಬದಲಾವಣೆಗಳನ್ನು ತರಲು ಸಾಧ್ಯವಾಗುತ್ತದಾ ನೋಡಬೇಕು. ಆಗ ಮನಸ್ಸು ಕಚೇರಿಯಲ್ಲಿದ್ದರೂ ನಿತ್ಯ ಹೊಸದಾಗಿರಲು ಸಾಧ್ಯ.
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


