ಬೈಟುಕಾಫಿ

ಶುದ್ಧ ಕಲ್ಯಾಣಿ

ಅವಳು ಸುಕೋಮಲೆ, ಮೃದುಭಾಷಿ, ಮಂದಸ್ಮಿತೆ, ಹೆಸರು ಕಲ್ಯಾಣಿ. ಮಾರುದ್ದ ಜಡೆ, ತುಂಬಾ ಮಲ್ಲಿಗೆ ಮುಡಿದು,...

ಶುದ್ಧ ಕಲ್ಯಾಣಿ
Published On :

ಅವಳು ಸುಕೋಮಲೆ, ಮೃದುಭಾಷಿ, ಮಂದಸ್ಮಿತೆ, ಹೆಸರು ಕಲ್ಯಾಣಿ. ಮಾರುದ್ದ ಜಡೆ, ತುಂಬಾ ಮಲ್ಲಿಗೆ ಮುಡಿದು, ಹೊಸ ಸೀರೆಯನ್ನುಟ್ಟು ಶೃಂಗಾರಗೊಂಡು, ಮಂಟಪ ಮುಹೂರ್ತಕ್ಕೆ ಕಾಯುತ್ತಾ, ನಲ್ಲನ ಬರವಿಗಾಗಿ ಕಾತರಿಸುತ್ತಿದ್ದವಳು.
ಕಾಲ ಸರಿಯಿತು. ಕಲ್ಯಾಣಿಯ ವಯಸ್ಸೂ ಏರುತ್ತಿದ್ದಂತೆಯೇ, ತಾತ್ಸಾರದ ನೋಟಗಳು ಇರಿಯತೊಡಗಿದವು. ಯೌವನದ ಆಕರ್ಷಣೆಯಲ್ಲ ತಿಳಿಯುತ್ತಾ, ಕಾಲನ ತೀಕ್ಷ್ಣ ನೋಟದಿಂದ ಕೆನ್ನೆಯ ರಂಗು ಮಾಸಿತು. ಸೀರೆಯ ಜರಿಯೆಲ್ಲ ಸುಕ್ಕಾಗಿ ಸುರುಟಿ ಬಂಗಾರದ ಜರಿಯ ದಾರಗಳು ಮಬ್ಬಾಗಿ, ಸೆರಗಿನ ಜರಿಯೆಲ್ಲ ಜೌಳಾಗಿ ಜೊಳ್ಳಾಗತೊಡಗಿದವು.
ಶಾಂತವಾಗಿದ್ದ ಮುಗುದೆಯಂಗಳ- ಮನದಂಗಳವೆಲ್ಲ ಪಡ್ಡೆಗಳ, ಆಟದ ಅಡ್ಡೆಗಳ, ಮೈದಾನವಾಯಿತು. ಕಸಕಡ್ಡಿ, ತೊಪ್ಪೆ ಹರಿದ ಮುರಿದ ಆಟಿಕೆ, ಹಳೆಯ ಟೈರು, ಗಾಡಿ ಚಕ್ರಗಳ ತುಂಡುಗಳು, ಪ್ಲಾಸ್ಟಿಕ್ ತುಂಡು, ಖಾಲಿ ಸೀಸಗಳು, ಬೀರ್ ಬಾಟಲಿಗಳು, ಸಾರಾಯಿ ತೊಟ್ಟೆಗಳು, ಪ್ಲಾಸ್ಟಿಕ್ ಲೋಟ, ಹಳೆ ಬಟ್ಟೆ ಇವುಗಳೆಲ್ಲ ಸೇರಿ 'ಕಸದ ತೊಟ್ಟಿ'ಯಾಯಿತು. ತಂಗಳಿಗಾಗಿ, ಎಂಜಲಿಗಾಗಿ ಎಗರಾಡುವ ನಾಯಿಗಳ 'ಜಗಳ ಕೇಂದ್ರ'ವಾಯಿತು. ಕೋಳಿಗಳ, ಹಂದಿಗಳ 'ಕೆದಡುವ ಕೇಂದ್ರ'ವಾಯಿತು.
ಈಕೆಯ ಅಸ್ತಿತ್ವಕ್ಕೆ ಕಾರಣಳಾದ ಶರಣಮ್ಮ ಮುಪ್ಪಿಂದ ಮರಣವನ್ನಪ್ಪಿದಳು. ಚೆಲುವಿನ ಕಲ್ಯಾಣಿಯನ್ನು ಶೋಷಿಸುವವರ, ಹಿಂಸಿಸಿ ಸುಖ ಪಡುವವರ ಸಂಖ್ಯೆ ಹೆಚ್ಚಾಯಿತು. ನಿರ್ಮಲ ಪಾರದರ್ಶಕ ಸ್ಥಿತಿಯಿಂದ, ವಿಷಯುಕ್ತ, ರೋಗಿಷ್ಠ ನರಳಾಟದ ಗೂಡಾದಳು, ಶಾಪಗ್ರಸ್ತ ಅಹಲ್ಯೆಯಂತೆ ಮುಕ್ತಿಗಾಗಿ ಕಾಯತೊಡಗಿದಳು. ಮಹಾ ನಿರೀಕ್ಷೆಯ ಗಳಿಗೆ ಕೂಡಿ ಬಂತು... ಡಿಸೆಂಬರ್ 2012ರಲ್ಲಿ.
ಹದಿನಾರು ಹದಿನೇಳರ ಹರೆಯದ, ಉತ್ಸಾಹದ ಚಿಲುಮೆಗಳು, ಭರವಸೆಯ ನವಯುವಕರು ಹಾಳು ಕೊಂಪೆಯಾಗಿದ್ದ 'ಕಲ್ಯಾಣಿ'ಯನ್ನು ಕಂಡು ಮರುಗಿದರು. ಉದ್ಧಾರದ ದೀಕ್ಷೆ ತೊಟ್ಟರು. ಕಲ್ಯಾಣಿಯ ಪವಿತ್ರತೆಯನ್ನು ಮರಳಿ ದೊರಕಿಸುವ ಕೈಂಕರ್ಯಕ್ಕೆ ಕೈಯಿಟ್ಟು ಪಾವನರಾದರು. ಕಸಕಡ್ಡಿ ತೆಗೆದು, ಇಪ್ಪತ್ತಡಿ ಆಳದಿಂದ ಗೋಡನ್ನು ತೆಗೆದು, ಕೊಳೆತು ನಾರುತ್ತಿದ್ದ, ಕಾಯಿಲೆಯ ತವರಾಗಿದ್ದ 'ಕಲ್ಯಾಣಿ'ಗೆ ನವಚೇತನ ತುಂಬಿದರು. ಜಲ ಸಮೃದ್ಧಿಯ ಸಂಪತ್ತನ್ನು ಮರಳಿ ಪಡೆವಲ್ಲಿ ಯಶಸ್ವಿಯಾದರು. ಕಲ್ಲಿನ ಮೆಟ್ಟಿಲುಗಳನ್ನೆಲ್ಲ ಶುಚಿಯಾಗಿಸಿ, ಸಾರಿಸಿ, ರಂಗವಲ್ಲಿಯನ್ನಿಕ್ಕಿದರು.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಸರಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ಯುವಕ ಯುವತಿಯರು ವಾರವಿಡೀ ಕೆಸರಲ್ಲಿ ಹೂತುಕೊಂಡು, ಕೊಳೆತು ನಾರುತ್ತಿದ್ದ 'ತೆಂಡೇ ಕೆರೆಯ ಕಲ್ಯಾಣಿ'ಯನ್ನು ಶುಚಿಗೊಳಿಸಿ ಗ್ರಾಮಸ್ಥರ ಮತ್ತು ಜಿಲ್ಲಾಡಳಿತದ ಪ್ರಶಂಸೆಗೆ ಪಾತ್ರರಾದರು. ಚಿನಕುರುಳಿ - ಕೆ.ಆರ್.ಪೇಟೆ ಮಾರ್ಗ ಮಧ್ಯದ 'ತೆಂಡೇ ಕೆರೆ'ಯೆಂಬ ಹಳ್ಳಿಯಲ್ಲಿನ ಕೊಳವನ್ನು ನಿರ್ಮಲಗೊಳಿಸುವ ಯೋಜನೆಯ ಮುಖಂಡರು ಪ್ರಾಂಶುಪಾಲ ಶಾಂತಮ್ಮ, ಕಾರ್ಯಕ್ರಮದ ಜವಾಬ್ದಾರಿ- ಯೋಜನಾಧಿಕಾರಿ ಪ್ರಕಾಶ್ ಚೌಗುತಿ, ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿಯದು ಸರ್ವರೀತಿಯ ಸಹಕಾರ. ಗ್ರಾಮಸ್ಥರಿಗೆ 'ಕಲ್ಯಾಣಿ'ಯ ಮೌಲ್ಯದ ಅರಿವಾಗಿ, ವಿನಾಯಕ ಗೆಳೆಯರ ಬಳಗ ಕೊಳದ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಸುಣ್ಣ ಬಣ್ಣ ಶೃಂಗಾರಗೊಳಿಸಿ ದೀಪೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಿದ ಗ್ರಾಮಸ್ಥರು ಜೀವದ ಹಂಗು ತೊರೆದು ಕೆಸರನ್ನೆತ್ತಿದ ಹುಡುಗರನ್ನು ಮರೆತಿಲ್ಲ. 'ಕಲ್ಯಾಣಿಯ ಪವಿತ್ರತೆಯನ್ನು ಕಾಪಾಡುವೆವು' ಎಂದು ಭರವಸೆಯಿತ್ತಿದ್ದಾರೆ.
ಮತ್ತೆ ಹಿಂದಿನ ಒನಪು, ವೈಯ್ಯಾರ, ಬೆಡಗು ಬಿನ್ನಾಣಗಳಿಂದ ಮಂದಸ್ಮಿತೆಯಾಗಿ ಕಣ್ ಮಿಟುಕಿಸುವ ಚೆಲುವೆಯನ್ನೊಮ್ಮೆ ಕಂಡು 'ಹಾಯ್‌' ಎಂದು ಹೇಳಬೇಕೆನ್ನಿಸಿತಾ?

- ನಳಿನಿಕೃಷ್ಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.