ಬೈಟುಕಾಫಿ

ಪವಾಡಗಳಿಗೆ ಕಣ್ಣಾಗಿ

ಪವಾಡಗಳಿಗೆ ಕಣ್ಣಾಗಿ
Published On :

ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ವೈಚಾರಿಕವಾಗಿ ಯೋಚಿಸಲು ಯತ್ನಿಸುತ್ತೇವೆ. ಎಲ್ಲದರಲ್ಲೂ ಕಾರ್ಯ- ಕಾರಣ ಸಂಬಂಧವನ್ನು ಕಾಣುತ್ತೇವೆ, ಊಹಿಸುತ್ತೇವೆ. ಇಲ್ಲವೆಂದೆನಿಸಿದರೆ ಕಾರಣವನ್ನು ಕಲ್ಪಿಸುತ್ತೇವೆ. ತುಂಬಾ ಧಾರ್ಮಿಕರು ಎಂದೆನಿಸಿಕೊಂಡವರೂ ಕೂಡ ಪವಾಡಗಳನ್ನು ನಂಬುವುದಿಲ್ಲ. ಹಾಗೆ ಪವಾಡಗಳಲ್ಲಿ ನಂಬಿಕೆ ಇಟ್ಟುಕೊಂಡವರನ್ನು ಮೂಢರೆಂದು ಜರೆಯುತ್ತೇವೆ.
ಆದರೆ ಯೋಚಿಸಿ ನೋಡಿ. ನಾವು ದಿನನಿತ್ಯವೂ ಒಂದಲ್ಲ ಒಂದು ಪವಾಡವನ್ನು ಎದುರಾಗುತ್ತೇವೆ.  ಆದರೆ ಯೋಚಿಸಿ ನೋಡಿ. ನಾವು ದಿನನಿತ್ಯವೂ ಒಂದಲ್ಲ ಒಂದು ಪವಾಡವನ್ನು ಎದುರಾಗುತ್ತೇವೆ. ನಿನ್ನೆ ರಾತ್ರಿ ಮಲಗಿದ ನಾವು ಇವತ್ತು ಬೆಳಗಿನ ಸೂರ್ಯನನ್ನು ನೋಡುತ್ತಿದ್ದೇವಲ್ಲ! ಈ ದಿನದ ಸೊಗಸನ್ನು ಆಸ್ವಾದಿಸಲು ನಮ್ಮ ಜೀವ ಆರೋಗ್ಯಯುತವಾಗಿ ಉಳಿದಿದೆ ಎಂಬುದೇ ಒಂದು ಪವಾಡವಲ್ಲವೆ?
ಹೂವಿನ ಮೊಗ್ಗನ್ನು ನೋಡಿ. ಮರುದಿನ ಅಲ್ಲಿ ಸುಂದರವಾದ ಹೂವಿರುತ್ತದೆ. ಆ ಸಣ್ಣ ಮೊಗ್ಗಿನೊಳಗೆ ಅದು ಹೇಗೆ ಅಡಗಿ ಇತ್ತು? ಕೋಳಿ ಮರಿ, ಅಷ್ಟು ಸಣ್ಣ ಮೊಟ್ಟೆಯೊಳಗೆ ಉಸಿರುಗಟ್ಟದೆ ಹೇಗೆ ಬದುಕಿದೆ? ಪುಟ್ಟ ಬೀಜದೊಳಗೆ ಅಷ್ಟು ದೊಡ್ಡ ಮರ ಹೇಗೆ ಅಡಗಿತ್ತು? ನಾವು ನೋಡುವುದೆಲ್ಲ ನಮ್ಮ ಪುಟ್ಟ ಮೆದುಳಿನಲ್ಲಿ ರೆಕಾರ್ಡ್ ಆಗಿ ವರ್ಷಗಟ್ಟಲೆ ಅದ್ಹೇಗೆ ಇರುತ್ತದೆ? ನಾವು ಬದುಕಿರುವ ಭೂಮಿಯಲ್ಲಿ ಮಾತ್ರ ಮನುಷ್ಯನಿಗೆ ಹಿತಕರವಾದ ವಾತಾವರಣ ಯಾಕೆ ಇದೆ? ನೋಡುತ್ತ ಹೋದರೆ ಇವೆಲ್ಲ ಒಂದು ಬಗೆಯ ಪವಾಡಗಳೇ ತಾನೆ! ಪವಾಡಗಳು ಹೊರಗೆ ಸಂಭವಿಸುವುದಷ್ಟೇ ಅಲ್ಲ. ಅವು ಮನುಷ್ಯನ ಮನಸ್ಸಿನಲ್ಲೂ ಸಂಭವಿಸುತ್ತವೆ. ಸೋಮಾರಿಯಾಗಿದ್ದವನು ಇದ್ದಕ್ಕಿದ್ದಂತೆ ಎದ್ದು ಕುಳಿತು ಯಶಸ್ಸಿನೆಡೆಗೆ ಯಾತ್ರೆ ಹೊರಡುವುದನ್ನೂ, ಯೂಸ್‌ಲೆಸ್ ಎಂದು ನಾವು ತಿಳಿದ ವ್ಯಕ್ತಿ ಜೀವನದಲ್ಲಿ ಸಾಧನೆಯ ಮೆಟ್ಟಲೇರುವುದನ್ನೂ ನಾವು ಕಂಡಿರುತ್ತೇವೆ. ಇದೆಲ್ಲ ಹೇಗೆ ಸಾಧ್ಯವಾಯ್ತು? ಅದು ಆ ವ್ಯಕ್ತಿಯೊಳಗೆ ಸಂಭವಿಸಿದ ಪವಾಡದಿಂದಲೇ.
ಮಹಾಭಾರತದಲ್ಲಿ ಬರುವ 'ಯಕ್ಷಪ್ರಶ್ನೆ'ಯಲ್ಲಿ ಯಕ್ಷನು ಯುಧಿಷ್ಠಿರನನ್ನು 'ಯಾವುದು ಅಚ್ಚರಿ?' ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಧರ್ಮರಾಯ 'ಪ್ರತಿದಿನವೂ ಕಣ್ಣ ಮುಂದೆಯೇ ನೂರಾರು ಜೀವಿಗಳು ಯಮಪುರಿ ಸೇರುತ್ತಿದ್ದರೂ ತಾನು ಅಮರ ಎಂದುಕೊಳ್ಳುತ್ತಾನಲ್ಲ ಮನುಷ್ಯ, ಇದೇ ಅಚ್ಚರಿ' ಎನ್ನುತ್ತಾನೆ. ಹಾಗೆಂದು ನಾವು ನಮ್ಮನ್ನು ಕ್ಷಣಿಕ ವಸ್ತು ಅಂದುಕೊಳ್ಳುವುದೇನೂ ಬೇಕಿಲ್ಲ. ದಿನನಿತ್ಯದ ಸೊಗಸನ್ನು, ಪವಾಡವನ್ನು ನೋಡುವ ಕಂಗಳನ್ನು ಉಳಿಸಿಕೊಂಡರಾಯಿತು ಅಷ್ಟೇ.

- ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.