ಉಘೇ ಉಜ್ಜಯಿನಿ!
ಸಂಸ್ಕೃತ ಭಾಷೆಯಲ್ಲಿ ಹುದುಗಿರುವ ಅಪಾರ ಭಾರತೀಯ ಜ್ಞಾನ ಭಂಡಾರವನ್ನು...

ಸಂಸ್ಕೃತ ಭಾಷೆಯಲ್ಲಿ ಹುದುಗಿರುವ ಅಪಾರ ಭಾರತೀಯ ಜ್ಞಾನ ಭಂಡಾರವನ್ನು ಹುಡುಕುವ ಕಾರ್ಯ ಪ್ರಾರಂಭಗೊಂಡಿದೆ. ಸಂಸ್ಕೃತ ಮೃತ ಭಾಷೆಯಲ್ಲ, ಅಮರ ಎಂಬುದನ್ನು ಸಾಬೀತುಗೊಳಿಸಿ ಸಂಸ್ಕೃತ ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಜ್ಞಾನ ಯಜ್ಞಕ್ಕೆ ಇನ್ನು ಕೆಲವೇ ದಿನಗಳು ಬಾಕಿ. ನೀವೂ ಜ್ಞಾನ ಯಜ್ಞದಲ್ಲಿ ಕೈ ಜೋಡಿಸಬೇಕಿದ್ದರೆ ದೂರದ ಉಜ್ಜಯಿನಿಯತ್ತ ಪಯಣಿಸಬೇಕು.
ಹೌದು, ಕಾಳಿದಾಸನ ನಲಿದಾಡಿದ ನೆಲ ಉಜ್ಜಯಿನಿಯಲ್ಲಿ ಸಂಸ್ಕೃತ ಕಲರವಕ್ಕೆ ದಿನಗಣನೆಯಷ್ಟೇ ಬಾಕಿ. ದೇಶದ ಪ್ರಥಮ 'ಸಂಸ್ಕೃತ ಸಾಹಿತ್ಯೋತ್ಸವ' ಫೆ.22, 23, 24ರಂದು ಮಧ್ಯಪ್ರದೇಶದ ಉಜ್ಜಯಿನಿಯ ಕಾಳಿದಾಸ ಅಕಾಡೆಮಿಯಲ್ಲಿ ನಡೆಯಲಿದ್ದು, ಮಹಾ ನಗರಿ ಸಿದ್ಧವಾಗಿದೆ. ಪಂಡಿತರಿಂದ ಹಿಡಿದು ಪಾಮರರೂ ಪಾಲ್ಗೊಳ್ಳಬಹುದಾದ ಸಂಸ್ಕೃತ ಜಾತ್ರೆಯಿದು.
ಮಧ್ಯಪ್ರದೇಶ ಸರ್ಕಾರ, ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ, ದೇಶದ ಎಲ್ಲ ಸಂಸ್ಕೃತ ವಿವಿಗಳು, ಸಂಸ್ಕೃತ ಅಕಾಡೆಮಿಗಳು, ಸಂಸ್ಕೃತ ಭಾರತಿ ಹಾಗೂ ಮಹರ್ಷಿ ಪತಂಜಲಿ ಸಂಸ್ಕೃತ ಸಂಸ್ಥಾನ ಇವುಗಳ ಆಶ್ರಯದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಸಾಹಿತ್ಯೋತ್ಸವ ನಡೆಯುತ್ತಿದೆ. ಕಳೆದ ವರ್ಷ ಬೆಂಗಳೂರಲ್ಲಿ ಸಂಸ್ಕೃತ 'ಪುಸ್ತಕ ಪರಿಷೆ' ನಡೆದಿತ್ತಾದರೂ, ಸಾಹಿತ್ಯೋತ್ಸವ ನಡೆಯುತ್ತಿರುವುದು ಇದು ಪ್ರಥಮ ಪ್ರಯೋಗ.
ಏನೆಲ್ಲ ಇದೆ?
ಅಲ್ಲಿ ವಿಜ್ಞಾನಿಗಳು, ನ್ಯಾಯಾಧೀಶರು, ಮ್ಯಾನೇಜ್ಮೆಂಟ್ ಗುರುಗಳು, ಐಐಟಿ, ಐಐಎಂ ಹಾಗೂ ಇಸ್ರೋದ ಪ್ರತಿನಿಧಿಗಳು, ವಿವಿಧ ವಿವಿಯ ಕುಲಪತಿಗಳು, ಲೇಖಕರು, ಪ್ರಖಂಡ ಪಂಡಿತರಿಂದ ಹಿಡಿದು, ಹೊಸ ತಲೆಮಾರಿನ ಸಾಹಿತಿಗಳು ಹೀಗೇ 3000 ಪ್ರತಿನಿಧಿಗಳು ಪಾಲ್ಗೊಳ್ಳುವರು. ಲಕ್ಷ ಜನರು ಉತ್ಸವ ನೋಡಲು ಬರಲಿದ್ದಾರೆ. 200 ಸಂಸ್ಕೃತ ಪುಸ್ತಗಳು, ವಿಧ ವಿಧ ಸೀಡಿ, ಆಡಿಯೋಗಳೂ ಮೂರು ದಿನಗಳ ಸಾಹಿತ್ಯೋತ್ಸವದಲ್ಲಿ ತೆರೆಕಾಣಲಿವೆ. ಅಂದು ಕರ್ನಾಟಕ ಸಂಸ್ಕೃತ ವಿವಿ ಪ್ರಕಟಿಸುವ 'ಕರ್ನಾಟಕ ಸಂಸ್ಕೃತ ಉಪಾಸಕರು' ಮಾಲಿಕೆಯ 6 ಕೃತಿಗಳೂ ಈ ಸಂದರ್ಭದಲ್ಲೇ ಬಿಡುಗಡೆಗೊಳ್ಳಲಿವೆ. ಸಾಹಿತ್ಯೋತ್ಸವದಲ್ಲಿ ಮಂಗಳೂರಿನ ಡಾ. ವಿಶ್ವಾಸ್ ಅವರು ಬರೆದ 'ಜಗ್ಗು ಶಿಂಗಾರಾರ್ಯ' ಹಾಗೂ 'ವಿಲಪತಿ ಗಂಗಾ' ಕಥಾಪುಸ್ತಕ, ಡಾ. ಶಾಂತಲಾ ವಿಶ್ವಾಸ್ ಅವರ 'ಉಷಾಹರಣ' ಕೃತಿ ಅನಾವರಣಗೊಳ್ಳಲಿದೆ. ಬಿಡುಗಡೆಯಾದ ಪುಸ್ತಕಗಳೂ ಸೇರಿದಂತೆ ಇತರ ಸಂಸ್ಕೃತ ಪುಸ್ತಕಗಳ ಮೇಳವನ್ನು ಇಲ್ಲಿ ಆಯೋಜಿಸಲಾಗಿದ್ದು, 75ಕ್ಕೂ ಅಧಿಕ ಪ್ರಕಾಶಕರು ಪಾಲ್ಗೊಳ್ಳುತ್ತಿರುವುದು ವಿಶೇಷ.
ಅಷ್ಟಲ್ಲದೇ ವಿಜ್ಞಾನ ಪ್ರದರ್ಶಿನಿಯಿದೆ. ಸಂಸ್ಕೃತ ಗ್ರಾಮ, ಸಂಸ್ಕೃತ ಕ್ರೀಡಾಂಗಣ, ಸಂಸ್ಕೃತ ಬಜಾರ್ ಇಲ್ಲಿ ತೆರೆದುಕೊಳ್ಳಲಿದೆ. ಹೀಗೆ ನೂರೆಂಟು ವಿವಿಧತೆಗಳು ಇಲ್ಲಿ ಏಕೀಕೃತಗೊಳ್ಳಲಿವೆ. ಅರ್ಥಶಾಸ್ತ್ರ, ಮ್ಯಾನೇಜ್ಮೆಂಟ್, ಪ್ರಾಚೀನ ಭಾರತ ವಿಜ್ಞಾನ ಕುರಿತು ತಜ್ಞರಿಂದ ಕಾರ್ಯಾಗಾರವೂ ನಡೆಯಲಿದೆ. ಒಟ್ಟಿನಲ್ಲಿ ಉಜ್ಜಯಿನಿ ಹಿಂದೆ ಕಾಳಿದಾಸ, ಭಾಸ್ಕರಾಚಾರ್ಯ, ಬ್ರಹ್ಮಗುಪ್ತನ ಕಾಲದಲ್ಲಿ ಹೇಗೆ ಸಂಸ್ಕೃತದ ರಾಜಧಾನಿಯಾಗಿ ಮೆರೆದಿತ್ತೋ ಇಂದೂ ಅದೇ ರೀತಿಯಲ್ಲಿ ಸಂಸ್ಕೃತ ಇಲ್ಲಿ ಮತ್ತೊಮ್ಮೆ ಆವಿರ್ಭಾವಗೊಳ್ಳಲಿದೆ. <
ಭಾಷಾ ಪುನರುಜ್ಜೀವನಕ್ಕಾಗಿ...
'ದೇಶಾದ್ಯಂತ ಸಂಭಾಷಣಾ ಶಿಬಿರಗಳನ್ನು ನಡೆಸಿ ಇದುವರಿಗೆ 80,000 ಸಂಸ್ಕೃತ ಮಾತನಾಡುವ ಜನರನ್ನು ಅಣಿಗೊಳಿಸಿದ್ದೇವೆ. ಮಾತನಾಡುವವರಿಗೆ ಕಲಿಯುವ ಯೋಚನೆ ಬರುತ್ತೆ. ಅದನ್ನೂ ಶಿಬಿರಗಳಲ್ಲಿ ಕಲಿಸಿದ್ದೇವೆ. ಕಲಿತವರು ಓದಲು ಬಯಸುತ್ತಿದ್ದು, ಪ್ರಾಚೀನ ಸಾಹಿತ್ಯ ಬಿಟ್ಟು ಅವರಿಗೆ ಆಧುನಿಕವಾಗಿ ಓದುವುದಕ್ಕೆ ಉತ್ತಮ ಸಾಹಿತ್ಯಗಳು ಸಂಸ್ಕೃತದಲ್ಲಿ ಸೃಷ್ಟಿಯಾಗುತ್ತಿಲ್ಲ. ಅದಕ್ಕಾಗಿ ಎಲ್ಲ ಭಾಷೆಗಳ ಉತ್ತಮ ಪುಸ್ತಕಗಳನ್ನು ಸಂಸ್ಕೃತಕ್ಕೆ ಭಾಷಾಂತರಿಸಿದ್ದೇವೆ. ಉದಾಹರಣೆಗೆ ಭೈರಪ್ಪ ಅವರ 'ಆವರಣ' ಮೂಲಪ್ರತಿಗೆ 175 ರುಪಾಯಿ, ಅದನ್ನು ಸರಳ ಸಂಸ್ಕೃತಕ್ಕೆ ಅನುವಾದಿಸಿ 90 ರುಪಾಯಿಗೆ ಕೈಗೆಟುಕುವ ದರದಲ್ಲಿ ನೀಡಿದ್ದೇವೆ. ಅದು ಈಗ ಎರಡು ಆವೃತ್ತಿಯನ್ನು ಕಂಡಿದ್ದು, ಮೂರನೇ ಆವೃತ್ತಿ ಶೀಘ್ರವೇ ಬಿಡುಗಡೆಗೊಳ್ಳಲಿದೆ. ಪುಸ್ತಕಗಳನ್ನು ಕೊಂಡುಕೊಳ್ಳುವವರ ಸೃಷ್ಟಿಗಾಗಿ ಕಳೆದ ಬಾರಿ ಪುಸ್ತಕ ಪರಿಷೆ ಮಾಡಿದ್ದೇವೆ. ಇನ್ನಷ್ಟು ಹೊಸ ಹೊಸ ಲೇಖಕರನ್ನು, ಸಾಹಿತಿಗಳನ್ನು ಸೃಷ್ಟಿಸುವ ಭಾಷಾ ಪುನರುಜ್ಜೀವನ ಉದ್ದೇಶದಿಂದ ಈ ಬಾರಿ ಸಾಹಿತ್ಯೋತ್ಸವ ಆಯೋಜಿಸಿದ್ದೇವೆ' ಎಂಬುದು ಸಂಸ್ಕೃತ ಭಾರತಿಯ ಅಖಿಲ ಭಾರತ ಸಂಘಟನಾ ಮಂತ್ರಿ ದಿನೇಶ್ ಕಾಮತ್ ಅವರ ಅಭಿಪ್ರಾಯ.
ಅನುವಾದಕರ ಕಾರ್ಯಶಾಲೆ
ಸಾಹಿತ್ಯೋತ್ಸವ ಪೂರ್ವಭಾವಿಯಾಗಿ 2-3 ವರ್ಷಗಳಲ್ಲಿ ದೇಶಾದ್ಯಂತ 23 ಕಡೆಗಳಲ್ಲಿ ಲೇಖಕರ, ಅನುವಾದಕರ ಕಾರ್ಯಶಾಲೆಗಳನ್ನು ನಡೆಸಲಾಗಿದೆ. ಉಜ್ಜಯಿನಿಯ ಪರಿಸರದಲ್ಲಿ 51 ಸಂಸ್ಕೃತ ಶಿಬಿರಗಳನ್ನು ನಡೆಸಿ ಸಾಹಿತ್ಯೋತ್ಸವಕ್ಕೆ ಪೂರಕ ವಾತಾವರಣ ನಿರ್ಮಿಸಲಾಗಿದೆ.
- ದಿನೇಶ್ ಕಾಮತ್
- ರಾಘವೇಂದ್ರ ಅಗ್ನಿಹೋತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


