ಬೈಟುಕಾಫಿ

ವೈದ್ಯ ಚಿಕಿತ್ಸೆಯಲ್ಲೂ ಈರುಳ್ಳಿ (ಬೆಳ್ಳಿ ತಟ್ಟೆ 135)

Published On :

ಕಡುಗೆಂಪಿನ ಈರುಳ್ಳಿ ತುಂಬಾ ಖಾರ ಹಾಗೂ ಘಾಟು ಕೂಡ ಹೆಚ್ಚಿರುತ್ತದೆ. ಇದನ್ನು ಹೆಚ್ಚಿದಾಗ ಬಿಳಿಯ ರಸ ಕೂಡ ಬರುತ್ತದೆ. ಈ ರಸ ಕೈಗೆ ತಾಗಿದರೆ ಒಂಥರ ಅಂಟಂಟಾಗಿರುತ್ತದೆ. ಇದನ್ನು ಸಾಮಾನ್ಯವಾಗಿ ಮಾಂಸಾಹಾರಿ ಅಡುಗೆಗಳಲ್ಲಿ ಬಳಸುತ್ತಾರೆ. ನಸುಗೆಂಪಿನ ಈರುಳ್ಳಿಯಲ್ಲಿ ಖಾರ, ಘಾಟು ಕಡಿಮೆ. ಇದನ್ನು ಹಸಿಯಾಗಿಯೇ ತಿನ್ನಬಹುದು. ಕಡುಗೆಂಪು ಈರುಳ್ಳಿಯನ್ನು ರಫ್ತುಮಾಡುವುದರಿಂದ ನಸುಗೆಂಪಿನ ಈರುಳ್ಳಿಯನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇನ್ನೊಂದು ಬಿಳಿ ಈರುಳ್ಳಿ. ಇದನ್ನು ಸಾಮಾನ್ಯವಾಗಿ ಆಯುರ್ವೇದ ಔಷಧಗಳಲ್ಲಿ ಬಳಸಲಾಗುತ್ತದೆ. ಇನ್ನು ಚಿಕ್ಕ ಸಾಂಬಾರ್ ಈರುಳ್ಳಿಯನ್ನು ಉಪ್ಪಿನಕಾಯಿಯಲ್ಲಿ, ಸಾಂಬಾರ್ನಲ್ಲಿ ಬಳಸಲಾಗುತ್ತದೆ.
ಒಣಗಿಸಿದ ಈರುಳ್ಳಿ ಮತ್ತು ಈರುಳ್ಳಿ ಪುಡಿ ತಯಾರಿಸಲು ಬೇಕಾದ ಗುಣವಿರುವುದು ಬಿಳಿ ಈರುಳ್ಳಿಯಲ್ಲಿ. ಒಣಗಿಸಿದ ಈರುಳ್ಳಿ, ಈರುಳ್ಳಿ ಬಿಲ್ಲೆಗಳು, ಈರುಳ್ಳಿ ತರಿ ಮತ್ತು ಪುಡಿಗಳನ್ನು ಕೆಚಪ್, ಗೊಜ್ಜು ಮುಂತಾದವುಗಳಲ್ಲಿ ರುಚಿಕಾರಕವಾಗಿ ಬಳಸುತ್ತಾರೆ.
ಒಣಗಿಸಿದ ಈರುಳ್ಳಿಯನ್ನು ಹ್ಯಾಮರ್ಮಿಲ್ ಯಂತ್ರಕ್ಕೆ ಹಾಕಿ ಪುಡಿ ಮಾಡಲಾಗುತ್ತದೆ. ಇದು ಬೇಗ ನೀರನ್ನು ಹೀರಿಕೊಳ್ಳುವುದರಿಂದ ಗಾಳಿ ಸೇರದಂತೆ ಡಬ್ಬಗಳಲ್ಲಿ ಹಾಕಿ ಸೀಲ್ ಮಾಡಲಾಗುತ್ತದೆ. ತೇವ ಸೇರಿದರೆ ಈರುಳ್ಳಿ ಪುಡಿ ಉಂಡೆಯಾಗಿ ನಂತರ ಗಂಜಿಯಂತಾಗಿ ಬೂಷ್ಟು ಬೆಳೆದುಕೊಳ್ಳುತ್ತದೆ.
ಈರುಳ್ಳಿಯಲ್ಲಿ ಹಲವು ಗಂಧಕದ ಸಂಯುಕ್ತಗಳಿರುವುದರಿಂದ ಇದಕ್ಕೆ ಪೂತಿನಾಶಕ ಗುಣಗಳಿವೆ. ಈರುಳ್ಳಿಗೆ ಉತ್ತೇಜಕ ಗುಣವಿದೆ. ಇದರಲ್ಲಿ ಮೂತ್ರವರ್ಧಕ, ಕಫ ನಿವಾರಕ ಗುಣಗಳಿವೆ. ಇದನ್ನು ವಾತ ಮತ್ತು ರಕ್ತಬೇಧಿ ಚಿಕಿತ್ಸೆಯಲ್ಲಿ ಬಳಸುವುದು ಪ್ರಯೋಜನಕಾರಿ ಎಂದು ತಿಳಿಯಲಾಗಿದೆ. ತಾಜಾ ಈರುಳ್ಳಿ ರಸಕ್ಕೆ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ ಗುಣವಿದೆ.
ಮಕ್ಕಳು ಅತಿಯಾಗಿ ಕೆಮ್ಮುತ್ತಿದ್ದರೆ ಈರುಳ್ಳಿಯನ್ನು ಕೆಂಡದ ಮೇಲಿಟ್ಟು ಸುಟ್ಟು, ಅದರಿಂದ ತೆಗೆದ ರಸಕ್ಕೆ ಒಂದು ಪ್ರಮಾಣದ ಜೇನುತುಪ್ಪ ಸೇರಿಸಿ ಕುಡಿಸುವ ಪದ್ಧತಿ ಇಂದಿಗೂ ಹಳ್ಳಿಗಳಲ್ಲಿ ರೂಢಿಯಲ್ಲಿದೆ. ಇದು ಹೆಚ್ಚು ಪರಿಣಾಮಕಾರಿ ಕೂಡ ಹೌದು.


-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

ಮೊ.9900113699 (ಎಸ್ಎಂಎಸ್ಗೆ ಮಾತ್ರ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.