ಕಾರ್ಯೋನ್ಮುಖರಾಗಿ....

ಕಾರ್ಯೋನ್ಮುಖರಾಗಿ....
Updated on: 

ನಾವು ಗಳಿಸುವ ಆದಾಯ, ಬಳಸುವ ವಸ್ತುಗಳು ಮತ್ತು ಜೀವನ ಅವಲಂಬಿಸಿರುವುದು ನಮ್ಮ ಕ್ರಿಯಾಶಕ್ತಿಯನ್ನು; ಕಾರ್ಯತತ್ಪರತೆಯನ್ನು. ನಮ್ಮಲ್ಲಿ ಅನಂತ ಶಕ್ತಿಯಿದ್ದರೂ ಅದು ಕಾರ್ಯಗತಗೊಳ್ಳದಿದ್ದರೆ ಎಲ್ಲವೂ ನಿಷ್ಫಲ. ಆದ್ದರಿಂದ ಕಾರ್ಯೋನ್ಮುಖರಾಗಿ ಯಶಸ್ವಿ ಜೀವನ ನಿಮ್ಮದಾಗಿಸಿಕೊಳ್ಳಿ.
'ಅಮಿತ ಶಕ್ತಿಯಿಂದ ಕಾರ್ಯರಂಗಕ್ಕೆ ಬನ್ನಿ. ಅಸೂಯೆ, ಅಹಂಕಾರ ಹೊರದೂಡಿ. ಎಲ್ಲರ ಸಹಾನುಭೂತಿ ಗಳಿಸಿ ಕೆಲಸ ಮಾಡಿ. ಫಲ ಸಿದ್ಧಿಸುವುದು. ದುಡಿತವೇ ಗುರಿಯಾಗಲಿ.' ಕೆಚ್ಚೆದೆಯಿಂದ ಕೆಲಸ ಮಾಡಿ. ನಕಾರದ ನುಡಿಯೇ ಬೇಡ; ಕಡಲನ್ನು ದಾಟಲು ಉಕ್ಕಿನಂತಹ ಸ್ಥೈರ್ಯ ಇರಬೇಕು. ಅನಂತ ಶಕ್ತಿಯುಳ್ಳ ಭಗವಂತನು ನಿನ್ನ ಹೃದಯದಲ್ಲಿ ಮಂಡಿಸುವನು. ಜಗತ್ತೇ ವಿಸ್ಮಯಗೊಳ್ಳುವ ಅದ್ಭುತ ಕಾರ್ಯಗಳನ್ನು ನೀನು ಮಾಡುವೆ.
ಎಲ್ಲ ಒಳ್ಳೆಯ ಕಾರ್ಯಗಳಿಗೂ ವಿಘ್ನಗಳು ಹೆಚ್ಚು. ಆದರೂ ನಿನ್ನ ಉದ್ದೇಶಕ್ಕಾಗಿ ಶಕ್ತಿಮೀರಿ ಹೋರಾಡಬೇಕು. ಹೇ ವೀರನೇ, ಟೊಂಕಕಟ್ಟಿ ನಿಲ್ಲು. ಏಕೆಂದರೆ ನಿನ್ನ ಮುಂದೆಯೇ ನಿನ್ನ ವೈರಿಯ ಸೇನೆ ನಿಂತಿದೆ.
ನಿರ್ಭಯರಾಗಿ ನಮ್ಮ ಆದರ್ಶವನ್ನು ಕಾರ್ಯರೂಪಕ್ಕೆ ತನ್ನಿ. ಮಹಾಕಾರ್ಯಗಳು ಮಹಾತ್ಯಾಗದಿಂದ ಮಾತ್ರ ಸಿದ್ಧಿಸುವುವು. ಸ್ವಾರ್ಥ, ಹೆಸರು, ಕೀರ್ತಿ ಬೇಡ. ಸ್ವಾರ್ಥವನ್ನು ಸಂಪೂರ್ಣ ತ್ಯಾಗ ಮಾಡಿ. ಹಲವು ಹುಲ್ಲಿನೆಸಳುಗಳನ್ನು ಸೇರಿಸಿ ಮಾಡಿದ ಹಗ್ಗದಿಂದ ಮದಿಸಿದ ಆನೆಯನ್ನಾದರೂ ಕಟ್ಟಿಹಾಕಬಹುದು ಎಂಬುದನ್ನು ನೆನಪಿನಲ್ಲಿಡಿ.
ಜಗತ್ತಿಗೆ ಬೆಳಕು ಬೇಕಾಗಿದೆ. ನನ್ನ ಧೀರ ಪುತ್ರರೇ, ನೀವೆಲ್ಲ ಮಹತ್ಕಾರ್ಯಗಳನ್ನು ಸಾಧಿಸಲು ಜನ್ಮವೆತ್ತಿದವರೆಂಬುದರಲ್ಲಿ ಶ್ರದ್ಧೆಯಿಡಿ. ನಾಯಿಕುನ್ನಿಗಳ ಕೂಗಾಟ ನಿಮ್ಮನ್ನು ಅಂಜಿಸದಿರಲಿ. ಅಷ್ಟೇಕೆ, ಮುಗಿಲಿನಿಂದ ಬೀಳುವ ಸಿಡಿಲಿಗೂ ಹೆದರದಿರಿ. ಎದ್ದು ನಿಂತು ಕಾರ್ಯೋನ್ಮುಖರಾಗಿ...

-ಆನಂದ ಎಸ್.ಎನ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com