ಅದು ಸ್ವಾರ್ಥವೇ ಇರಬಹುದು, ಅಥವಾ ಕೆಲವರು ಅದನ್ನು ಹಾಗೆ ವ್ಯಾಖ್ಯಾನಿಸಬಹುದು. ಅಥವಾ ಚಾಣಾಕ್ಷತನ ಎಂದು ಬೇಕಾದರೂ ಕರೆಯಬಹುದು. ನಿಮ್ಮ ಪಾಲಿಗೆ ಅದು ಬುದ್ಧಿವಂತಿಕೆಯ ನಡೆ ಮತ್ತು ವಾಸ್ತವದ ಅರಿವಿನಿಂದ ಮೂಡಿದ ವರ್ತನೆ ಆಗಿರುತ್ತದೆ. ಜೀವನದಲ್ಲಿ ಒಮ್ಮೊಮ್ಮೆ ಅಂಥದ್ದು ಅನಿವಾರ್ಯವಾಗಿರುತ್ತದೆ. ಮುಳುಗುತ್ತಿರುವ ಕೋತಿ ತನ್ನ ಮರಿಯನ್ನೇ ಕೆಳಗೆ ಹಾಕಿ ಅದರ ಮೇಲೆ ನಿಂತಿತಂತೆ. ಇದೊಂದು ದೃಷ್ಟಾಂತ. ಹಾಗೇ ನಾವೂ ಕ್ರೂರವಾಗಬೇಕೆಂದಲ್ಲ ನನ್ನ ಮಾತಿನ ಅರ್ಥ. ಸಂದರ್ಭಕ್ಕೆ ಸರಿಯಾಗಿ ವರ್ತಿಸಬೇಕು ಎಂಬುದಷ್ಟೇ.
ಬಹುತೇಕ ಸಂದರ್ಭದಲ್ಲಿ ಮುಂಬರುವ ನೋವನ್ನು, ಸಂದಿಗ್ಧವನ್ನು ನಿರೀಕ್ಷಿಸಬಲ್ಲವರಾಗಿರುತ್ತೇವೆ. ಹಾಗೆ ನೋಡಿದರೆ ಖಂಡಿತಾ ಅದು ನಮಗೆ ನೋವು ಕೊಡುತ್ತದೆ ಎಂಬುದು ಖಚಿತವಾಗಿರುತ್ತದೆ. ಆದರೂ ಸಹ ಯಾವುದೋ ಹಠಕ್ಕೆ ಬಿದ್ದು ನಾವು ಅಂಥ ಸಂದರ್ಭವನ್ನು ತಂದುಕೊಳ್ಳುತ್ತೇವೆ. ಕೊನೆಗೊಮ್ಮೆ ಅದರ ಫಲ ದೊರೆತಾಗ ನೋಯುತ್ತೇವೆ. ಅದರಿಂದ ಸಾಧಿಸುವುದೇನೂ ಇಲ್ಲ. ಸಂದರ್ಭಕ್ಕಾಗಿ, ಮುಂದಿನ ದೊಡ್ಡ ಸಮಸ್ಯೆಯನ್ನು ತಪ್ಪಿಸುವುದಕ್ಕಾಗಿ, ಇಡೀ ಜೀವನದಲ್ಲಿ ಎದುರಾಗಬಹುದಾದ ಕೊರಗನ್ನು ಇಲ್ಲವಾಗಿಸಿಕೊಳ್ಳುವುದಕ್ಕಾಗಿ ಪುಟ್ಟದೊಂದು ಸುಳ್ಳು ಹೇಳಿ ಬಚಾವಾಗುವುದು ಅಥವಾ ಅದು ನ್ಯಾಯವೋ ಅನ್ಯಾಯವೋ ಆ ಕ್ಷಣದಿಂದ ತಪ್ಪಿಸಿಕೊಳ್ಳುವುದು ನಿಜವಾಗಲೂ ವಿಹಿತ.
ಆತ್ಮ ಧರ್ಮ ಎನ್ನುವುದು ಅದನ್ನೇ. ನಾವು ಸತ್ಯಸಂಧರು, ಪ್ರಾಮಾಣಿಕರು ಎಂಬ ಹಮ್ಮಿನೊಂದಿಗೆ ಗೊತ್ತಿದ್ದೂ ಗೊತ್ತಿದ್ದೂ ಸಮಸ್ಯೆಯನ್ನು ತಂದುಕೊಳ್ಳುವುದಕ್ಕಿಂತ ಆತ್ಮ ಸುಖಕ್ಕೆ ಅನುಗುಣವಾಗಿ ನಡೆದುಕೊಳ್ಳುವುದೇ ಯುಕ್ತ. ಅದರಿಂದ ಯಾವ ಪ್ರಪಂಚವೂ ಮುಳುಗಿಹೋಗುವುದಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಈ ಜಗತ್ತಿನಲ್ಲಿ ಇನ್ನೊಂದು ಜೀವಿಗೆ ಅನ್ಯಾಯವಾಗದಿದ್ದರೆ, ಇನ್ನೊಂದು ವ್ಯಕ್ತಿಗೆ ನೋವು ತಾರದಿದ್ದರೆ ನಮ್ಮ ಯಾವುದೇ ನಡೆಯೂ ಅನ್ಯಾಯ-ಅಧರ್ಮ ಎನ್ನಿಸಿಕೊಳ್ಳುವುದಿಲ್ಲ. ಬದಲಾಗಿ ನಮ್ಮ ಆತ್ಮವನ್ನು ನೋಯಿಸಿಕೊಳ್ಳುವುದೇ ಹೆಚ್ಚು ಅನ್ಯಾಯವಾಗಿರುತ್ತದೆ. ನಿಮ್ಮ ನಡೆ ನೈತಿಕವಾಗಿದ್ದರೆ, ನೀವೇನು ಮಾಡಿದರೂ ಸರಿ. ಅದಕ್ಕಾಗಿ ಆಮೇಲೆ ಕೊರಗಬೇಕಿಲ್ಲ. <
- ಸಹನೆ