ಬೈಟುಕಾಫಿ

ನಾಟ್ಯ ಪ್ರವೀಣೆ

ನಾಟ್ಯ ಪ್ರವೀಣೆ
Published On :

ವರ್ಷಗಟ್ಟಲೆ ತರಬೇತಿ ಪಡೆದರೂ ಭರತನಾಟ್ಯ ಕರಗತ ಮಾಡಿಕೊಳ್ಳುವುದು ಕಷ್ಟ. ಆದರೆ ಇಲ್ಲೊಬ್ಬ ಮಹಿಳೆ ಕೇವಲ 15 ತಿಂಗಳಲ್ಲಿ ಅಲರಿಪುವಿಂದ ತಿಲ್ಲಾನದವರೆಗೆ ನೃತ್ಯ ಪ್ರಕಾರವನ್ನು ಕಲಿತಿದ್ದಾರೆ. ಇದೇನು ಮಹಾ ಅಂತೀರಾ? ಈಕೆ ಭಾರತೀಯಳಲ್ಲ. ಯುರೋಪ್ ದೇಶದ ಹಂಗೇರಿಯವಳು!
ಹೆಸರು ಅಲೆಕ್ಸಾಂಡ್ರ ಸುಝೋಕ್, 33 ವರ್ಷ. ಮಂಗಳೂರು ಬಲ್ಲಾಳ್‌ಬಾಗ್‌ನ ಸನಾತನ ನಾಟ್ಯಾಲಯದ ವಿದ್ಯಾರ್ಥಿನಿ. ಗಂಡ ಇಯಾನ್ ಕೂಕ್‌ರೊಂದಿಗೆ ಸಂಶೋಧನೆಗಾಗಿ ಭಾರತಕ್ಕೆ ಬಂದಿದ್ದು, ಕದ್ರಿಯಲ್ಲಿ ನೆಲೆಸಿದ್ದಾರೆ. ವಿದ್ಯಾರ್ಥಿ ವೀಸಾದಲ್ಲಿ ಭಾರತಕ್ಕೆ ಬಂದಿರುವ ಇವರು ಭರತನಾಟ್ಯದ ಆರಾಧಕರು.
ಜೂ. 30ಕ್ಕೆ ಯುರೋಪಿಗೆ ತೆರಳುತ್ತಿದ್ದು, ಜೂ. 22ರಂದು ಸನಾತನ ನಾಟ್ಯಾಲಯದಲ್ಲಿ ತಾನು ಕಲಿತಿರುವ ಭರತನಾಟ್ಯದ ಪ್ರದರ್ಶನ ನೀಡಿದ್ದಾರೆ. ಭಾರತೀಯ ಉಡುಗೆಯಲ್ಲಿ ಮಿಂಚಿದ ಇವರು, ನಾಟ್ಯದಲ್ಲಿ ತೋರ್ಪಡಿಸಿದ ಹಾವಭಾವ, ಕಣ್ಣಸನ್ನೆಗಳು ನಿಜಕ್ಕೂ ನಿಬ್ಬೆರಗಾಗಿಸಿತು. ಅಲರಿಪು, ಪುಷ್ಪಾಂಜಲಿ, ದೇವರನಾಮ, ಶಿವಸ್ತುತಿ, ನರಸಿಂಹಕೌತುಕಂ, ತಿಲ್ಲಾನ ಪ್ರಸ್ತುತಪಡಿಸಿದರು.
ಸಾಮಾನ್ಯವಾಗಿ ಭರತನಾಟ್ಯದಲ್ಲಿ ಏಕವ್ಯಕ್ತಿ ಪ್ರದರ್ಶನ ನೀಡಬೇಕಾದರೆ 4 ವರ್ಷ ಅಭ್ಯಾಸ ಮಾಡಬೇಕಾಗುತ್ತದೆ. ಆದರೆ ಅಲೆಕ್ಸಾಂಡ್ರಾ ಕೇವಲ 1 ವರ್ಷದಲ್ಲಿ ಕಲಿತಿರುವುದು ಅಚ್ಚರಿಯೇ ಸರಿ. ಪ್ರತಿದಿನ ಸಂಜೆ ಮತ್ತು ಬೆಳಗ್ಗೆ ಒಂದೊಂದು ಗಂಟೆ ಅಭ್ಯಾಸ. ಪ್ರಾರಂಭದಲ್ಲಿ 6 ವರ್ಷದ ಮಕ್ಕಳೊಂದಿಗೆ ಹೆಜ್ಜೆ ಹಾಕಿದರು. ನಾಟ್ಯಾಲಯದಲ್ಲಿ ನಡೆದಿರುವ ಎರಡು ಕಾರ್ಯಕ್ರಮದಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ  ಭರತನಾಟ್ಯ ಪ್ರದರ್ಶಿಸಿದ್ದಾರೆ.
ನಾಟ್ಯಾಲಯಕ್ಕೆ ಆಗಮಿಸುವಾಗ ಸೀರೆಯೇ ಇವರ ಉಡುಪು. ಇಯಾನ್ ಕೂಕ್ ಪಂಚೆ, ಶರ್ಟ್‌ಧಾರಿ. ಭರತನಾಟ್ಯ ಕಲೆಯನ್ನು ತನ್ನೂರಿನಲ್ಲಿ ಪ್ರದರ್ಶಿಸಬೇಕು, ಮುಂದುವರಿಸಬೇಕು ಎಂಬುದು ಇವರ ಉದ್ದೇಶ. ಸುಝೋಕ್ ಹಂಗೇರಿಯ ಬುಡಾಪೆಸ್ಟ್‌ನ ಸೆಂಟ್ರಲ್ ಯುರೋಪಿಯನ್ ಯುನಿವರ್ಸಿಟಿ ಮತ್ತು ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ವಿದ್ಯಾಸಂಸ್ಥೆಯಲ್ಲಿ ಸಮಾಜದ ಜನಮನ ವಿಷಯದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.

ನಮ್ಮ ಮಕ್ಕಳೇ ನಾಟ್ಯ ಕಲಿಯಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಅಲೆಗ್ಸಾಂಡ್ರ ಮಾತ್ರ ತರಗತಿಯಲ್ಲಿ ಹೇಳಿಕೊಡುತ್ತಿದ್ದ ನೃತ್ಯವನ್ನು ಮನೆಯಲ್ಲಿ ಅಭ್ಯಾಸ ಮಾಡಿ ಮರುದಿನ ತಪ್ಪಿಲ್ಲದೆ ಮಾಡಿ ತೋರಿಸುತ್ತಿದ್ದರು. ಇದು ಅವರ ಆಸಕ್ತಿಯನ್ನು ತೋರ್ಪಡಿಸುತ್ತದೆ.
- ಶ್ರೀಲತಾ, ನೃತ್ಯಗುರು

ಅವಳನ್ನು ಆರತಿ ಎಂದು ಕರೀತಾ ಇದ್ದೆ. ಅವಳ ಭಾಷೆ ಮೊದಮೊದಲು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿತ್ತು. ಈಗ ಕಲಿತಿದ್ದಾರೆ. ಅವರ ಗಂಡ ಕೂಕ್ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ.
- ಶಾರದಾಮಣಿ ಶೇಖರ್, ಸಂಸ್ಥೆಯ ಮುಖ್ಯಗುರು

ನನಗೆ ಕನ್ನಡ ಕಲಿಸಿದ ಗುರು ಕೊಂಚಾಡಿ ಸೀತಾರಾಮ ಭಟ್. ನಾನು ಜನಜೀವನದ ಬಗ್ಗೆ ಸಂಶೋಧನೆ ನಡೆಸುತ್ತಿದ್ದೇನೆ. ಹಾಗಾಗಿ ಕನ್ನಡ ಕಲಿಯಬೇಕಾಯಿತು. ಜನರೊಂದಿಗೆ ಮಾತನಾಡಿ, ಅರ್ಥ ಮಾಡಿಕೊಂಡು ಕನ್ನಡ ಕಲಿತಿದ್ದೇನೆ. ಮಂಗಳೂರು ಜನ ಒಳ್ಳೆಯವರು. ಕಿರಿಕಿರಿ ಇಲ್ಲ.
- ಇಯಾನ್ ಕೂಕ್

- ವಜ್ರಾಕ್ಷಿ ಬಂಟ್ವಾಳ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.