ಬಣ್ಣದ ಕೋಟೆ

ಮೊದಲ ತರಗತಿಯಲ್ಲಿ ಮೂರೇ ಮೂರು ಜನ! ಮಹತ್ವಾಕಾಂಕ್ಷೆಯಿಂದ ಶಾಲೆ ಶುರು ಮಾಡಿದವರಿಗೆ ಹೇಗಾಗಿರಬೇಡ? ಮನದಲ್ಲಿ ಡುಕುಡುಕಿ. 'ಇದು ನನ್ನಿಂದ ಆಗೊಲ್ಲವಾ' ಎನ್ನುವ ಅಳಕು. ಅದೇನು ಮ್ಯಾಜಿಕ್ ಆಯ್ತೊ. ಎರಡು ತಿಂಗಳಲ್ಲಿ 12 ಮಂದಿ ಹೆಸರು ನೋಂದಾಯಿಸಿಕೊಂಡರು!
ನಾಗರಾಜ ಕೋಟೆ ಎನ್ನುವ ಸಣಕಲು ಶರೀರದ ದೈತ್ಯ ಪ್ರತಿಭೆಯ 'ಬಣ್ಣ' ಕೇವಲ ಎರಡು ವರ್ಷದಲ್ಲಿ ಯಾವ ಪರಿ ಬೆಳೆದಿದೆ ಎಂದರೆ 'ಅಡ್ಮಿಶನ್ ಮುಗಿದಿದೆ' ಬೋರ್ಡ್ ತಗುಲಿ ಹಾಕಿದರೂ ಪ್ರವೇಶ ಬಯಸಿ ಅಭ್ಯರ್ಥಿಗಳು ದೌಡಾಯಿಸುತ್ತಲೇ ಇರುತ್ತಾರೆ.
'ಬಣ್ಣ' ಕೇವಲ ಅಭಿನಯ ಕಲಿಸುವ ಶಾಲೆ ಎಂದರೆ ತಪ್ಪು. ಸಿನಿಮಾ, ರಂಗಭೂಮಿ ಮತ್ತು ಕಿರುತೆರೆ ಈ ಮೂರು ಕ್ಷೇತ್ರಗಳ ಯಾವುದೇ ವಿಭಾಗದಲ್ಲಿ ಮುಂದುವರಿಯಲು ಏನು ಬೇಕೋ ಅಷ್ಟನ್ನೂ ಹೇಳಿಕೊಡುವ ಪರಿಪೂರ್ಣ ರಂಗಶಾಲೆ. ಇಲ್ಲಿ ಆರು ತಿಂಗಳ ಕೋರ್ಸ್ ಮುಗಿಸಿ ಹೊರಬಂದವರು ಕ್ಯಾಮೆರಾ ಹಿಂದೆ ಅಥವಾ ಮುಂದೆ ಎಲ್ಲಾದರೂ ಮಿನುಗಬಹುದು.
ಹದಿನೈದೇ ಮಂದಿಗೆ ಅವಕಾಶ
2011ರ ಏಪ್ರಿಲ್ನಲ್ಲಿ ಶುರುವಾದ 'ಬಣ್ಣ'ದ ಮೊದಲ ಬ್ಯಾಚ್ನಲ್ಲಿ 50 ವರ್ಷ ದಾಟಿದವರಿದ್ದರು; ಕನ್ನಡವೇ ಬಾರದ ಒಬ್ಬ ನೇಪಾಳಿ ಹುಡುಗ ಕೂಡ ಇದ್ದ. ಆರು ತಿಂಗಳಲ್ಲಿ ಆತ ಕನ್ನಡ ಕಲಿತು ಎಚ್ಚಮ ನಾಯಕನ ಪಾತ್ರ ಮಾಡಿದ್ದ. ಯಶಸ್ವಿ ಆರು ಬ್ಯಾಚ್ಗಳು ಮುಗಿದಿವೆ. ಏಳನೇ ಬ್ಯಾಚ್ಗೆ ಪ್ರವೇಶ ಸದ್ಯದಲ್ಲೇ ಶುರುವಾಗಲಿದೆ. ಒಂದು ಬ್ಯಾಚ್ನಲ್ಲಿ ಗರಿಷ್ಠ 15 ಕಲಿಕಾರ್ಥಿಗಳಿಗೆ ಅವಕಾಶ. ಆರು ತಿಂಗಳ ಕೋರ್ಸ್. 50 ವಿಷಯಗಳು, 10 ಪ್ರಾಯೋಗಿಕ ತರಗತಿಗಳು.
ಭಾಷಾ ಉಚ್ಚಾರಣೆ, ಧ್ವನಿ ಬಳಕೆ, ಆಂಗಿಕ ಭಾಷೆ, ಕ್ರಿಯೆ-ಪ್ರತಿಕ್ರಿಯೆ-ಅಭಿವ್ಯಕ್ತಿ, ದೈಹಿಕ ಮತ್ತು ಮಾನಸಿಕ ತಯಾರಿ, ಸಂಭಾಷಣೆ ನೆನಪಿಟ್ಟಿಕೊಳ್ಳುವ ತಂತ್ರಗಳು, ನೃತ್ಯ, ಕ್ಯಾಮೆರ ಎದುರಿಸುವ ಸಿದ್ಧತೆ ಎಲ್ಲವನ್ನೂ ಕಲಿಸಲಾಗುತ್ತದೆ. ಪ್ರತಿ ಅಭ್ಯರ್ಥಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಬ್ಯಾಚ್ ಕೊನೆಯಲ್ಲಿ ನಾಟಕವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಬೇಕು. 'ತಾತಾ ಬಂದ್ರು', 'ಕನಸು', 'ಸಾಯೋ ಆಟ', 'ಮುದ್ದಣ್ಣನ ಪ್ರಮೋಶನ್ ಪ್ರಸಂಗ', 'ಗದ್ದಿಗೆ ಪುರಾಣ', 'ಡಾಕ್ಟರ್ ತಿಪ್ಪೇಶಿ' ರಂಗವೇರಿದ್ದು ಹೀಗೆಯೇ. ಪರೀಕ್ಷೆ ನಡೆಸಿ ಗ್ರೇಡ್ ನೀಡಲಾಗುತ್ತದೆ. ತಿಂಗಳಿಗೊಮ್ಮೆ 'ಅನುಭವ ಮಂಟಪ'ದಲ್ಲಿ ಹಿರಿಯ ಕಲಾವಿದರು, ತಂತ್ರಜ್ಞರನ್ನು ಕರೆಸಿ ಸಂವಾದ ನಡೆಸಲಾಗುತ್ತದೆ.
ಪೆಟ್ರೋಲ್ ಬಂಕ್ ಮತ್ತು ಹೋಟೆಲ್ ಕಾರ್ಮಿಕರು, ಶ್ರೀಮಂತರು, ಸಾಫ್ಟ್ವೇರ್ ಉದ್ಯೋಗಿಗಳು, ಗೃಹಿಣಿಯರು... ವಿವಿಧ ವರ್ಗ, ವಯೋವಾನದವರು ಇಲ್ಲಿನ ವಿದ್ಯಾರ್ಥಿಗಳು. ಎಲ್ಲರಿಗೂ ಒಂದೇ ತೆರನಾದ ಟ್ರೀಟ್ಮೆಂಟ್. ಮಾಸ್ಟರ್ ಹಿರಣ್ಣಯ್ಯ ಅತಿಥಿ ಉಪನ್ಯಾಸಕರು. ನಾಟಕ ವಿಭಾಗದಲ್ಲಿ ನೀನಾಸಂ ಅರುಣಮೂರ್ತಿ, ನಾಗರಾಜ ಕೋಟೆ, ಶಿವಕುಮಾರ ಆರಾಧ್ಯ, ನೊಣವಿನಕೆರೆ ರಾಮಕೃಷ್ಣಯ್ಯ; ಸಿನಿಮಾ ವಿಭಾಗದಲ್ಲಿ ನಿರ್ದೇಶಕ ಸ್ನೇಹಪ್ರಕಾಶ್; ಕಿರುತೆರೆ ವಿಭಾಗದಲ್ಲಿ ಪ್ರದೀಪ್, ಯಶಸ್ವಿನಿ, ಕೋಟೆ; ಮಕ್ಕಳ ವಿಭಾಗದಲ್ಲಿ ಕುಮಾರ್, ಬಿ.ಜಿ.ದೇವರಾಜ್ ಕಾಯಂ ಉಪನ್ಯಾಸಕರು. ಪುಟ್ಟಪ್ಪ (ಯೋಗ), ಶಿವಾನಂದ (ಗಿಟಾರ್, ಕೀಬೋರ್ಡ್), ವಿಜಯ್ ಶೆಟ್ಟಿ (ನೃತ್ಯ) ಕೂಡ 'ಬಣ್ಣ'ದ ಗುರುಗಳು.
ಶೂಟಿಂಗ್ಗಳಿಗೆ ಹೋದಾಗ ಹೊಸಬರು ಕ್ಯಾಮೆರಾ ಎದುರಿಸುವಾಗ ಫಜೀತಿ ಅನುಭವಿಸಿ ನಗೆಪಾಟಲಿಗೆ ಈಡಾಗುವುದನ್ನು ಕೋಟೆ ಅನೇಕ ಸಲ ನೋಡಿದ್ದರು. ಆಸಕ್ತಿ ಇದ್ದವರಿಗೆ ತರಬೇತಿ ಕೊಡಬೇಕು ಎನ್ನುವ ಕಲ್ಪನೆ ಮೊಳೆತದ್ದು ಅವನ್ನು ನೋಡಿದಾಗಲೇ. ಹತ್ತಾರು ವರ್ಷ ಇಂಥದ್ದೊಂದು ಶಾಲೆಯ ಕನಸು ಮನಸ್ಸಿನಲ್ಲೇ ಬೆಚ್ಚಗೆ ಅಡಗಿ ಕುಳಿತಿತ್ತು. ಬೆಂಗಳೂರಿನ ಕೆಲವು ಅಭಿನಯ ಶಾಲೆಗಳು ಮುಗ್ಗರಿಸಿದ್ದೂ ಗೊತ್ತಿತ್ತು. ಆದರೂ ಪರಿಶ್ರಮ ಪಟ್ಟರೆ ಗೆಲ್ಲಬಹುದು ಎನ್ನುವ ವಿಶ್ವಾಸವೂ ಇತ್ತು. ಈವರೆಗೆ 80 ಜನ ಇಲ್ಲಿ ಶಿಕ್ಷಣ ಪಡೆದಿದ್ದಾರೆ. ಅವರಲ್ಲಿ 50-60 ಜನ ಕಿರುತೆರೆಯಲ್ಲಿ ತೊಡಗಿಕೊಂಡಿದ್ದಾರೆ. ಪ್ರೊಡಕ್ಷನ್ ಮ್ಯಾನೇಜರ್ಗಳು, ನಿರ್ದೇಶಕರಿಗೆ ಅವರ ಬಗ್ಗೆ ಮೆಚ್ಚುಗೆ. 'ಬಣ್ಣ'ದಿಂದ ಬಂದವರನ್ನು ಅವಕಾಶಗಳು ಕರೆಯುತ್ತಿವೆ.
'ಬಣ್ಣದ ಮೋಹಕ್ಕೆ ಏಕಾಏಕಿ ಮರುಳಾಗಬೇಡಿ. ಮೊದಲು ನಟನೆಯ ಪ್ರಾಥಮಿಕ ಸಂಗತಿಗಳನ್ನಾದರೂ ಕಲಿತು ಬನ್ನಿ' ಎನ್ನುವ ಕೋಟೆಯವರ ಈಗಿನ ಕನಸು- 'ಮುಂದಿನ ಐದು ವರ್ಷಗಳಲ್ಲಿ ಬಣ್ಣವನ್ನು ಕರ್ನಾಟಕದ ನಂ.1 ಅಭಿನಯ ಶಾಲೆಯಾಗಿ ರೂಪಿಸಬೇಕು' ಎನ್ನುವುದು.
ಉದ್ಯೋಗಸ್ಥರೂ ಕಲಿಯಬಹುದು
ಎರಡು ರೀತಿಯ ತರಗತಿಗಳಿವೆ. ಒಂದು- ಸೋಮವಾರ, ಬುಧವಾರ, ಶುಕ್ರವಾರ. ಸಂಜೆ 6ರಿಂದ 8. ಎರಡು- ಶನಿವಾರ, ಭಾನುವಾರ. ಬೆಳಗ್ಗೆ 8ರಿಂದ 10. 15 ವರ್ಷ ಮೇಲ್ಪಟ್ಟವರು ಈ ತರಗತಿಗಳಿಗೆ ಸೇರಿಕೊಳ್ಳಬಹುದು. 15 ವರ್ಷದೊಳಗಿನ ಮಕ್ಕಳಿಗೆ 'ಮಕ್ಕಳ ರಂಗಶಾಲೆ'ಯಲ್ಲಿ ಶನಿವಾರ, ಭಾನುವಾರಗಳಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1, ಮಧ್ಯಾಹ್ನ 3ರಿಂದ ಸಂಜೆ 5 ತರಗತಿ.
ವಿಳಾಸ: ಬಣ್ಣ, ನಂ.586, ಕುಸುಮ ಸದನ, ಹೊಸಕೆರೆಹಳ್ಳಿ ಕ್ರಾಸ್, ಕರ್ನಾಟಕ ಬ್ಯಾಂಕ್ ಎದುರು, ಬನಶಂಕರಿ 3ನೇ ಹಂತ, ಬೆಂಗಳೂರು- 560085. ಮೊಬೈಲ್: 9880200606/ 9448106217.
- ರಾಜೇಶ ಮುಂಡಿಗೇಸರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


