ವ್ಯಾಪಾರದ ಹಗೆ
ಶಿವಣ್ಣನಿಗೆ ಮನಸ್ಸು ಸ್ಥಿಮಿತದಲ್ಲಿಲ್ಲ. ಕಳೆದ ಎರಡು ದಿನಗಳಿಂದ ಮಗ ಕಾಣಿಸುತ್ತಿಲ್ಲ....

ಮಲ್ಲೇಶನ ಸಾವು ಆದದ್ದು ಹೇಗೆ?
ಶಿವಣ್ಣನಿಗೆ ಮನಸ್ಸು ಸ್ಥಿಮಿತದಲ್ಲಿಲ್ಲ. ಕಳೆದ ಎರಡು ದಿನಗಳಿಂದ ಮಗ ಕಾಣಿಸುತ್ತಿಲ್ಲ. ಹೇಳದೆ ಕೇಳದೆ ಎಂದೂ ಹೀಗೆ ಹೊರಗೆ ಹೋಗದ ಮಲ್ಲೇಶ ಎರಡು ದಿನಗಳಿಂದ ನಾಪತ್ತೆ. ಇದು ಮಾತ್ರ ಶಿವಣ್ಣನ ದುಗುಡಕ್ಕೆ ಕಾರಣವಲ್ಲ. ಅಮೃತಮಹಲ್ ಕಾವಲು ಅರಣ್ಯ ಪ್ರದೇಶದಲ್ಲಿ ಯಾರೋ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಹೆಣ ಕೊಳೆತು ವಾಸನೆ ಬರುತ್ತಿದೆ ಎಂದು ದನ ಕಾಯುವವರು ಬಂದು ಹೇಳಿದ್ದು ಶಿವಣ್ಣ ಮತ್ತು ಆತನ ಹೆಂಡತಿ ಪಾರ್ವತಮ್ಮನ ದುಗುಡ ಹೆಚ್ಚಾಗಲು ಕಾರಣವಾಗಿತ್ತು.
ಅರಣ್ಯಕ್ಕೆ ಹೋಗಿ ನೋಡಿ ಬರಲು ಕತ್ತಲಾಗುತ್ತಿತ್ತು. ಮನೆಯಲ್ಲಿ ಎಂದೂ ಜಗಳವಾಡದ ಸೌಮ್ಯ ಸ್ವಭಾವದ ಮಲ್ಲೇಶ ಏನಾದ, ಅರಣ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಮಲ್ಲೇಶನೇ ಆದರೆ ಅದಕ್ಕೆ ಕಾರಣವೇನು, ಬೆಳೆದು ನಿಂತ ಏಕೈಕ ಮಗ ಕೈ ತಪ್ಪಿ ಹೋದನೆ ಎಂಬ ಆತಂಕಗಳು ಶಿವಣ್ಣನ ತಲೆ ತುಂಬಿ ನಿದ್ದೆ ಹತ್ತಲಿಲ್ಲ. ಬೆಳಗಾಗುವುದನ್ನೇ ಕಾಯುತ್ತಿದ್ದ ಆತ ಇನ್ನೂ ಮಸುಕು ಮಬ್ಬು ಇರುವಾಗಲೇ ಎದ್ದು ದನ ಕಾಯುವ ಹುಡುಗ ರುದ್ರೇಶನನ್ನು ಕರೆದುಕೊಂಡು ಅರಣ್ಯಕ್ಕೆ ಹೊರಟ.
ಅಮೃತ ಮಹಲ್ ಕಾವಲು ಅರಣ್ಯ ಹಾಲ್ಕೆರೆ ಗ್ರಾಮದಿಂದ ಐದು ಕಿಲೋಮೀಟರ್ ದೂರದಲ್ಲಿದೆ. ಇದು ಬೃಹತ್ ಅರಣ್ಯವಲ್ಲ. ಕುರುಚಲು ಕಾಡು ಅಷ್ಟೆ. ಕುರಿ ಮೇಕೆ ಮೇಯಿಸುವವರು, ದನ ಕಾಯುವವರು ಈ ಕಾಡಿಗೆ ಪ್ರತಿನಿತ್ಯ ಬರುತ್ತಾರೆ. ಅಂದೂ ಕೂಡ ದನ ಕಾಯುವವರು ಆ ಪ್ರದೇಶಕ್ಕೆ ಬಂದಿದ್ದವರು ಕೆಟ್ಟ ವಾಸನೆ ತಾಕಿ ಅದಕ್ಕೆ ಕಾರಣವೇನು ಎಂದು ಹುಡುಕತೊಡಗಿದರು. ಹಾಗೆ ಹುಡುಕುವಾಗ ಒಂದು ಹೊಂಗೆ ಮರಕ್ಕೆ ನೇತಾಡುತ್ತಿರುವ ಹೆಣ ಕಂಡು ಹೆದರಿ ಓಡಿ ಬಂದಿದ್ದರು.
....
ಮಸುಕಿನಲ್ಲಿಯೇ ಕಾಡಿಗೆ ಹೋದ ಶಿವಣ್ಣ ಹೊಂಗೆ ಮರಕ್ಕೆ ನೇತಾಡುತ್ತಿರುವ ಹೆಣದ ಮೇಲಿನ ಬಟ್ಟೆ ನೋಡಿದ ಕೂಡಲೇ ಅಳಲಾರಂಭಿಸಿದ. ಅದು ಕಳೆದ ಎರಡು ದಿನಗಳ ಹಿಂದೆ ಮಲ್ಲೇಶ ಧರಿಸಿದ್ದ ಬಟ್ಟೆ ಎಂಬುದು ಖಚಿತವಾಗಿತ್ತು. ಕಾರಣವೇ ಇಲ್ಲದೆ ಸಾವನ್ನಪ್ಪಿದ ಮಲ್ಲೇಶನ ಬಗ್ಗೆ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯಿತು. ಪೊಲೀಸರು ಮಧ್ಯಾಹ್ನ 12 ಗಂಟೆಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ನೇಣು ಹಾಕಿಕೊಂಡಿರುವ ದೇಹದ ಕಾಲುಗಳು ನೆಲಕ್ಕೆ ತಾಕಿದ್ದವು. ಬಲಗಾಲಿನ ಮೇಲೆ ದೊಡ್ಡ ಗಾಯವಾಗಿತ್ತು. ಶರೀರದ ಅಲ್ಲಲ್ಲಿ ತರಚಿದ ಗಾಯಗಳಾಗಿತ್ತು.
ಹೆಣ ನೇತಾಡುತ್ತಿರುವ ಮರದ ಕೆಳಗೆ ಒಂದು ರಶೀದಿ ಬಿದ್ದಿದ್ದು, ಅದರಲ್ಲಿ ಮಲ್ಲೇಶ, ಶಾಮಿಯಾನ ಅಂಗಡಿ ಎಂದು ಬರೆದಿತ್ತು. ಒಂದು ಚಿನ್ನದ ಸರ ತುಂಡಾಗಿ ಬಿದ್ದಿತ್ತು. ಇನ್ನೂ ಸ್ವಲ್ಪ ದೂರದಲ್ಲಿ ಒಂದು ಟೋಪಿ ಬಿದ್ದಿದ್ದರೆ ಪಕ್ಕದಲ್ಲೇ ಇದ್ದ ಹಳ್ಳದಲ್ಲಿ ಒಂದು ಮರದ ಬುಡಕ್ಕೆ ಸೈಕಲ್ ಒರಗಿಸಿ ನಿಲ್ಲಿಸಲಾಗಿತ್ತು. ಹೆಣದ ತಳಭಾಗದಲ್ಲಿ ಯಾರೋ ಓಡಾಡಿದ ಹೆಜ್ಜೆಗುರುತು ಕಾಣುತ್ತಿತ್ತು. ಪರಿಶೀಲನೆ ನಡೆಸಿದ ಪೊಲೀಸರಿಗೆ ಇದು ಆತ್ಮತ್ಯೆಯಲ್ಲ ಕೊಲೆ ಎಂಬುದು ಮೇಲ್ನೋಟಕ್ಕೇ ಕಂಡುಬಂದಿತ್ತು. ಆದರೆ ಕೊಲೆ ಮಾಡಿದವರು ಯಾರು ಎಂಬುದು ತನಿಖೆಯಿಂದ ಹೊರಬರಬೇಕಿತ್ತು. ಸ್ಥಳಪರಿಶೀಲನೆ, ಶವದ ಪಂಚನಾಮೆ ಮುಗಿಸಿದ ಪೊಲೀಸರು ಶವವನ್ನು ವಾರಸುದಾರರಿಗೆ ನೀಡಿದರು.
.....
ಕಾಣೆಯಾದ ದಿನ, ತಮ್ಮಡಿ ಹಳ್ಳಿಯಿಂದ ಇಬ್ಬರು ಶಾಮಿಯಾನ ಬೇಕು ಎಂದು ಕೇಳುತ್ತಿದ್ದಾರೆ. ಈ ಬಗ್ಗೆ ನೋಡಿ ಬರುತ್ತೇನೆಂದು ಹೋಗಿದ್ದ ಎಂದು ಮಲ್ಲೇಶನ ತಾಯಿ ಪಾರ್ವತಮ್ಮ ಮಾಹಿತಿ ನೀಡಿದರು. ಮಲ್ಲೇಶ ಹೋಗುವಾಗ ದಾರಿಯಲ್ಲಿ ಯಾರಾದರೂ ಕಂಡಿರಬಹುದೇ ಎಂದು ವಿಚಾರ ಮಾಡುತ್ತಿರುವಾಗ ಸರ್ಕಲ್ನಲ್ಲಿ ಬೀಡಿ ಅಂಗಡಿ ಇಟ್ಟಿಕೊಂಡಿರುವ ರಾಜಣ್ಣ ಎಂಬಾತ ಮುಂದೆ ಬಂದು 'ಸಾರ್ ಮೊನ್ನೆ ಮಲ್ಲೇಶ ಸೈಕಲ್ನಲ್ಲಿ ಬಂದು ನನ್ನನ್ನ ಮಾತನಾಡಿಸಿದ. ಆತನ ಸೈಕಲ್ ಹಿಂಬದಿಯಲ್ಲಿ ಯಾರೋ ಮುಖ ಕಾಣದಂತೆ ಟೋಪಿ ಹಾಕಿಕೊಂಡು ಕುಳಿತಿದ್ದರು. ನಾನು ಹೆಚ್ಚಿಗೆ ಗಮನಿಸಲಿಲ್ಲ. ಅಂದಿನಿಂದಲೇ ಮಲ್ಲೇಶ ನಾಪತ್ತೆಯಾದ' ಎಂದು ವಿವರಿಸಿದ.
ಹೆಣದ ಬಳಿ ಟೋಪಿ ಸಿಕ್ಕಿರುವ ಕಾರಣ ಹಂತಕ ಯಾರೋ ಪರಿಚಿತನೇ ಆಗಿದ್ದು, ನಂಬಿಸಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ ಎಂಬ ಸುಳಿವು ಪೊಲೀಸರಿಗೆ ದೊರೆಯಿತು. ಆದರೆ ಆತ ಯಾರು ಎಂಬುದೇ ಪ್ರಶ್ನೆಯಾಗಿತ್ತು. ಕಾಡಿನಲ್ಲಿ ದನ ಮೇಯಿಸುವ ರುದ್ರೇಶ ಎಂಬ ಹುಡುಗನೇ ಅಂದು ಹೆಣ ನೋಡಿದವನಾಗಿದ್ದ. ಆತ ಎರಡು ದಿನಗಳ ಹಿಂದೆ ಕಾಡಿನಲ್ಲಿ ಏನಾದರೂ ವಿಶೇಷವಾದುದನ್ನು ಕಂಡಿರುವನೇ ಎಂಬ ಬಗ್ಗೆ ತನಿಖೆ ಮಾಡಿದರು.
'ಅಂದು ಮಧ್ಯಾಹ್ನ 12 ಗಂಟೆಯಾಗಿತ್ತು. ಆ ಕಡೆಯಿಂದ ಅಯ್ಯಯ್ಯಪ್ಪೋ ನನ್ನ ಕಾಪಾಡಿ, ಹೊಡೀಬೇಡಿ ನಿಮ್ಮ ದಮ್ಮಯ್ಯ ಅಂತೀನಿ, ಎಂಬ ಆರ್ತನಾದ ಕೇಳಿಸಿತು. ಅಷ್ಟು ಬಿಟ್ಟರೆ ಮತ್ತೇನೂ ಇಲ್ಲ. ಆ ಶಬ್ದ ಕೇಳಿದ ನಂತರ ಸ್ವಲ್ಪ ಸಮಯಕ್ಕೆ ನಮ್ಮ ಊರಿನ ಕಲ್ಲೇಶಪ್ಪ ಮೈಮೇಲಿನ ಧೂಳು ಕೆಡವಿಕೊಂಡು ಆತುರವಾಗಿ ಊರಿನ ಕಡೆ ಹೋಗುತ್ತಿರುವುದನ್ನು ಕಂಡೆ' ಎಂದು ರುದ್ರೇಶ ಹೇಳಿದ. ತನಿಖೆಯ ಜಾಡು ಸರಿಯಾದ ರೀತಿಯಲ್ಲೇ ಸಾಗುತ್ತಿದೆ ಎಂಬ ಸುಳಿವು ಪೊಲೀಸರಿಗೆ ಲಭಿಸಿತು.
ರುದ್ರೇಶನ ಊರು ಹಾಲಿನಕೆರೆ. ಕುರುಚಲು ಕಾಡಿನ ನಡುವೆ ದನ ಮತ್ತು ಜನರು ಓಡಾಡುವಂಥ ಕಾಲುದಾರಿಯೊಂದು ಹಾಲ್ಕೆರೆ ಗ್ರಾಮಕ್ಕೆ ಹೋಗುತ್ತಿತ್ತು. ಅದೇ ದಾರಿಯಲ್ಲಿ ಕಲ್ಲೇಶ ನಡೆದು ಹೋದ ಎಂಬ ಸುಳಿವನ್ನು ರುದ್ರೇಶ ನೀಡಿದ. ಪೊಲೀಸರು ಅದೇ ದಾರಿಯಲ್ಲಿ ನಡೆದು ಗ್ರಾಮದ ಕಡೆ ಹೊರಟರು. ದಾರಿ ಮಧ್ಯೆ ಒಬ್ಬ ರೈತ ಹೊಸದಾಗಿ ಬೋರ್ವೆಲ್ ಕೊರೆದು ಈರುಳ್ಳಿ ಬೆಳೆ ಹಾಕಿದ್ದ. ಮಧ್ಯಾಹ್ನ ವೇಳೆ ಕಾಡಿನ ದಾರಿಯಲ್ಲಿ ನಡೆದು ಬಂದ ಇನ್ಸ್ಪೆಕ್ಟರ್ಗೆ ಸಹಜವಾಗಿಯೇ ದಣಿವಾಗಿತ್ತು. ನೀರು ಹೊಡೆಯುತ್ತಿದ್ದ ಜಾಗಕ್ಕೆ ಹೋಗಿ ಮುಖ ತೊಳೆದು ದಾಹ ತೀರುವವರೆಗೆ ನೀರು ಕುಡಿದರು.
ಸಮವಸ್ತ್ರ ಧರಿಸಿದ ಪೊಲೀಸರು ಕಾಡಿನ ದಾರಿಯಲ್ಲಿ ಪ್ರತ್ಯಕ್ಷವಾಗಿದ್ದು ಕಂಡ ರೈತ 'ಏನ್ ಸ್ವಾಮಿ ಮಲ್ಲೇಶ ನೇಣು ಹಾಕಿಕೊಂಡ ಸ್ಥಳಕ್ಕೆ ಹೋಗಿ ಬರುತ್ತಿರುವಿರಾ?'
ಎಂದು ಪ್ರಶ್ನಿಸಿದ. ಕೂಡಲೇ ಇನ್ಸ್ಪೆಕ್ಟರ್ ತಲೆಯಲ್ಲಿ ಮಿಂಚು ಹೊಳೆಯಿತು. 'ಹೌದು' ಎಂದು ಹೇಳಿ ರೈತನ ಮುಂದಿನ ಉತ್ತರಕ್ಕಾಗಿ ಕಾದರು. 'ಪಾಪ ಒಳ್ಳೆಯ ಹುಡುಗ. ಮದುವೆ ಆಗಬೇಕಿದ್ದವನು. ನೇಣು ಹಾಕಿಕೊಳ್ಳುವ ಪರಿಸ್ಥಿತಿ ಅವನಿಗೆ ಏನು ಬಂದಿತ್ತೋ' ಎಂದು ಸಿಂಪತಿ ವ್ಯಕ್ತಪಡಿಸಿದ.
'ಅದ್ಸರಿ ಈ ದಾರಿಯಲ್ಲಿ ಯಾರೇ ಬರಲಿ ಇಲ್ಲಿ ನೀರು ಕುಡಿದೇ ಹೋಗುತ್ತಾರೆ ಅಷ್ಟು ಸಿಹಿಯಾಗಿದೆ ನಿನ್ನ ನೆಲದ ನೀರು' ಎಂದು ಇನ್ಸ್ಪೆಕ್ಟರ್ ರೈತನನ್ನು ಮಾತಿಗೆಳೆದರು. 'ಹೌದು ಸ್ವಾಮಿ ಮರಳು ನೆಲದ ನೀರು ತುಂಬಾ ರುಚಿಯಾಗಿದೆ' ಎಂದ. 'ಇತ್ತೀಚೆಗೆ ಈ ದಾರಿಯಲ್ಲಿ ಬಂದು ಯಾರಾದರೂ ನೀರು ಕುಡಿದರೆ?' ಎಂದು ಇನ್ಸ್ಪೆಕ್ಟರ್ ಪ್ರಶ್ನಿಸಿದ. 'ಇತ್ತೀಚೆಗೆ ಅಂದ್ರೆ ಎರಡು ದಿನದ ಹಿಂದೆ ನಮ್ಮೂರಿನವನೇ ಕಲ್ಲೇಶ ಬಂದು ಇಲ್ಲಿಯೇ ಸ್ನಾನ ಮಾಡಿ ನೀರು ಕುಡಿದು ಹೋದ. ಅವನು ಬಿಟ್ಟರೆ ಮತ್ಯಾರು ಬರಲಿಲ್ಲ. ಯಾಕೆ ಸ್ವಾಮಿ?' ಎಂದು ಅಮಾಯಕವಾಗಿ ಕೇಳಿದ.
'ಏನಿಲ್ಲ ಅಂದು ಇಲ್ಲಿ ಸ್ನಾನ ಮಾಡಿದ ಕಲ್ಲೇಶನೇ ಮಲ್ಲೇಶನನ್ನು ಕೊಲೆ ಮಾಡಿದ್ದಾನೆ, ಅದಕ್ಕೆ ಕೇಳಿದೆ' ಎಂದು ಇನ್ಸ್ಪೆಕ್ಟರ್ ಹೇಳುತ್ತಿದ್ದರೆ ಏನೂ ಅರ್ಥವಾಗದ ರೈತ ಪಿಳಿ ಪಿಳಿ ಕಣ್ಣು ಬಿಡುತ್ತಿದ್ದ. ಕೂಡಲೇ ಪೇದೆಗಳನ್ನು ಕಳುಹಿಸಿದ ಇನ್ಸ್ಪೆಕ್ಟರ್ ಕಲ್ಲೇಶನನ್ನು ಕರೆತರಲು ಹೇಳಿದರು. ಆರಂಭದಲ್ಲಿ ತನಗೇನೂ ತಿಳಿದಿಲ್ಲ ಎಂದು ಹೇಳಿದ ಕಲ್ಲೇಶ ಕೊನೆಗೂ ಮಲ್ಲೇಶನನ್ನು ಕೊಲೆ ಮಾಡಿದ್ದು ತಾನೇ ಎಂದು ಒಪ್ಪಿಕೊಂಡ. ಕಾರಣ ಮತ್ತು ಕೊಲೆ ಮಾಡಿದ ರೀತಿಯನ್ನು ವಿವರಿಸಿದ.
ಕಲ್ಲೇಶನಿಗೆ ಚಿಕ್ಕಂದಿನಿಂದಲೇ ಓದು ಹತ್ತಲಿಲ್ಲ. ಕೆಲಸವಿಲ್ಲದೆ ಓಡಾಡಿಕೊಂಡಿದ್ದ ಮಗನ ಸ್ಥಿತಿ ಕಂಡ ಕಲ್ಲೇಶನ ತಂದೆ ಒಂದು ಶಾಮಿಯಾನ ಅಂಗಡಿ ತೆರೆಯುವಂತೆ ಹೇಳಿ ಬಂಡವಾಳವಾಗಿ ಸ್ವಲ್ಪ ಹಣ ಕೊಟ್ಟ. ಸುತ್ತಮುತ್ತಲ ಹಳ್ಳಿಗಳಲ್ಲಿ ಶಾಮಿಯಾನ ಅಂಗಡಿ ಇಲ್ಲದೆ ಶಾಮಿಯಾನ ಬೇಕಾದವರು ಚಿಕ್ಕನಾಯಕನ ಹಳ್ಳಿಗೆ ಹೋಗಬೇಕಿತ್ತು. ಹಾಗಾಗಿ ಕಲ್ಲೇಶನ ಶಾಮಿಯಾನಕ್ಕೆ ವ್ಯಾಪಾರ ಉತ್ತಮವಾಗಿ ನಡೆಯುತ್ತಿತ್ತು. ಆದರೆ ಅದೊಂದು ದಿನ ಕಲ್ಲೇಶನಿಗೆ ಬರಸಿಡಿಲಿನಂಥ ಸುದ್ದಿಯೊಂದು ಬಡಿಯಿತು. ಅದು ಮಲ್ಲೇಶ ಶಾಮಿಯಾನ ಅಂಗಡಿ ತೆರೆಯುತ್ತಿರುವ ರೂಪದಲ್ಲಿ.
ಸುದ್ದಿ ತಿಳಿಯುತ್ತಲೇ, ಕಲ್ಲೇಶ ಮಲ್ಲೇಶನಿಗೆ ಧಮಕಿ ಹಾಕಿದ. ಇದಕ್ಕೆ ಮಲ್ಲೇಶ ಸೊಪ್ಪು ಹಾಕದೆ ಶಾಮಿಯಾನ ಅಂಗಡಿ ತೆರೆದ. ಜತೆಗೆ ಕಡಿಮೆ ಬಾಡಿಗೆ ಪಡೆದು ಶಾಮಿಯಾನ ನೀಡುತ್ತಿದ್ದ. ಜನರಲ್ಲಿ ಮಲ್ಲೇಶನಿಗೆ ಒಳ್ಳೆಯ ಹೆಸರಿದ್ದರೆ, ಕಲ್ಲೇಶನ ಬಗ್ಗೆ ಉತ್ತಮ ಅಭಿಪ್ರಾಯ ಇರಲಿಲ್ಲ. ಇದರಿಂದ ಕಲ್ಲೇಶನ ವ್ಯಾಪಾರ ದಿನೇ ದಿನೇ ಕಳೆಗುಂದಿತು. ಇವನನ್ನು ಹೀಗೆ ಬಿಟ್ಟರೆ ತನಗೆ ಉಳಿಗಾಲವಿಲ್ಲ. ಏನಾದರೂ ಮಾಡಿ ಮಲ್ಲೇಶನನ್ನು ಮುಗಿಸಬೇಕು ಎಂದು ತೀರ್ಮಾನಿಸಿದ ಕಲ್ಲೇಶ ಒಂದು ದಿನ ಮಲ್ಲೇಶನ ಮನೆಗೆ ಹೋಗಿ ತಮ್ಮಡಿಹಳ್ಳಿಯಲ್ಲಿ ಶಾಮಿಯಾನದ ಆರ್ಡರ್ ಇದೆ. ಅದು ತುಂಬಾ ದೊಡ್ಡ ಕಾರ್ಯಕ್ರಮವಾದ ಕಾರಣ ನನ್ನ ಒಬ್ಬನ ಶಾಮಿಯಾನ ಸಾಕಾಗುವುದಿಲ್ಲ. ಹಾಗಾಗಿ ಇಬ್ಬರೂ ಸೇರಿ ಹಾಕೋಣ ಎಂದು ಹೇಳಿದ.
ಇದನ್ನು ನಿಜವೆಂದೇ ನಂಬಿದ ಮಲ್ಲೇಶ ಒಪ್ಪಿಕೊಂಡ. ನಾನು ನಾಳೆ ಬೆಳಗ್ಗೆ ಬರುತ್ತೇನೆ ಇಬ್ಬರೂ ಹೋಗಿ ಜಾಗ ನೋಡಿ ಬರೋಣ ಎಂದು ಹೇಳಿ ಹೋದ ಕಲ್ಲೇಶ ತಮ್ಮಡಿಹಳ್ಳಿಗೆ ಹೋಗುವ ದಾರಿ ಮಧ್ಯೆ ಒಂದು ಪ್ರಶಸ್ತ ಸ್ಥಳ ನೋಡಿ ಅಲ್ಲಿಯೇ ಒಂದು ಹಗ್ಗ ಮತ್ತು ದೊಣ್ಣೆಯನ್ನು ಬಚ್ಚಿಟ್ಟು ಬಂದ. ಮಾರನೇ ದಿನ ಬಂದು ಮಲ್ಲೇಶನನ್ನು ಆತನ ಸೈಕಲ್ನಲ್ಲಿಯೇ ಕರೆದುಕೊಂಡು ತಮ್ಮಡಿಹಳ್ಳಿಯತ್ತ ಹೊರಟ. ಕಾಡಿನ ನಡುವೆ ತಾನು ಹಗ್ಗ ಮತ್ತು ದೊಣ್ಣೆ ಬಚ್ಚಿಟ್ಟಿರುವ ಸ್ಥಳಕ್ಕೆ ಬರುತ್ತಿದ್ದಂತೆ ದೊಣ್ಣೆ ತೆಗೆದುಕೊಂಡು ಮಲ್ಲೇಶನ ಮೇಲೆ ಎರಗಿದ. ಇದನ್ನು ನಿರೀಕ್ಷಿಸದ ಮಲ್ಲೇಶ 'ಅಯ್ಯಯ್ಯೋ ಬೇಡಣ್ಣ ಬೇಕಾದರೆ ನನ್ನ ಶಾಮಿಯಾನವನ್ನೂ ನೀನೆ ತೆಗೆದುಕೋ, ನನ್ನನ್ನು ಬಿಟ್ಟು ಬಿಡು' ಎಂದು ಅಂಗಲಾಚಿದ.
ಆದರೆ ಆ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ ಕಲ್ಲೇಶ ಇರಲಿಲ್ಲ. ದೊಣ್ಣೆಯಿದ ಬಲವಾದ ಹೊಡೆತ ಬೀಳುತ್ತಲೇ ಮಲ್ಲೇಶ ನೆಲಕ್ಕುರುಳಿದ. ಕೂಡಲೇ ಹಗ್ಗವನ್ನು ಕುತ್ತಿಗೆಗೆ ಬಿಗಿದು ಎಳೆದುಕೊಂಡು ಹೋಗಿ ಮೊದಲೇ ನೋಡಿ ಪ್ಲಾನ್ ಮಾಡಿದ್ದ ಹೊಂಗೆ ಮರಕ್ಕೆ ಮಲ್ಲೇಶನನ್ನು ನೇತು ಹಾಕಿದ. ಮಲ್ಲೇಶನ ಪ್ರಾಣ ಪಕ್ಷಿ ಹಾರಿಹೋಯಿತು. ಮೈಗೆ ಅಂಟಿದ್ದ ಧೂಳು ಕೊಡವಿಕೊಂಡು ಆತುರಾತುರವಾಗಿ ಊರಿನತ್ತ ಹೊರಟ.
ಆರೋಪ ಪಟ್ಟಿ ಸಿದ್ಧಪಡಿಸಿದ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಕಲ್ಲೇಶನಿಗೆ ಉದ್ದೇಶಪೂರ್ವಕವಾಗಿಯೇ ಕೊಲೆ ಮಾಡಿರುವುದಾಗಿ ಸಾಕ್ಷ್ಯಗಳಿಂದ ಸಾಬೀತಾದ ಕಾರಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಮಾಡಿದ ತಪ್ಪಿಗಾಗಿ ಕಲ್ಲೇಶನಿಗೆ ಶಿಕ್ಷೆ ಆಯಿತು ನಿಜ, ಆದರೆ ತಪ್ಪೇ ಮಾಡದ ಶಿವಣ್ಣನಿಗೆ ಬೆಳೆದು ಕೈಗೆ ಬಂದಿದ್ದ ಮಗ ಕೈ ತಪ್ಪಿ ಹೋದ ಶಿಕ್ಷೆ ಅನುಭವಿಸುವಂತಾಗಿದ್ದು ಮಾತ್ರ ವಿಪರ್ಯಾಸವೇ ಸರಿ.
- ಅಶ್ವತ್ಥನಾರಾಯಣ್ ಎಲ್.
sathyajns@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


