ನಯಾ ಜಿಮ್ದಗಿ!
'ಝಿಂಬೋಲೇ.. ಝಿಂಬೋಲೇ...' ಎಂಬ ಹಾಡೀಗ ಹಳೆಯದಾಯ್ತು. ಈಗೇನಿದ್ದರೂ 'ಜಿಮ್-ಬೋಲೇ.. ಜಿಮ್-ಬೋಲೇ' ಜಮಾನ!

'ಝಿಂಬೋಲೇ.. ಝಿಂಬೋಲೇ...' ಎಂಬ ಹಾಡೀಗ ಹಳೆಯದಾಯ್ತು. ಈಗೇನಿದ್ದರೂ 'ಜಿಮ್-ಬೋಲೇ.. ಜಿಮ್-ಬೋಲೇ' ಜಮಾನ!
ಈಗಂತೂ ಯುವಜನತೆ 'ಜಿಮ್-ಬೋಲೇ.. ಜಿಮ್-ಬೋಲೇ' ಎಂದು ಗುನುಗುತ್ತಾ 'ಟ್ರೆಡ್ಮಿಲ್'ಗಳ ಮೇಲೆ ಹೆಜ್ಜೆ ಹಾಕುವ ದೃಶ್ಯ ಸಾಮಾನ್ಯ. ಎರಡಕ್ಕೂ ಇರುವ ಸಾಮ್ಯತೆ ಎಂದರೆ, ಅಂದು ಸಿನಿಮಾ ಕಲಾವಿದರು 'ಝಿಂಬೋಲೇ' ಎಂದಿದ್ದು 'ಚಿತ್ರ'ಕ್ಕೆ, ಇಂದಿನ ಯುವ ಜನತೆ 'ಜಿಮ್-ಬೋಲೇ' ಎನ್ನುತ್ತಿರುವುದು ಕೂಡ 'ಚಿತ್ರ'ಕ್ಕೆ. ಆದರೆ, ವ್ಯತ್ಯಾಸ ಏನೆಂದರೆ, ಅಂದು ಚಲನ'ಚಿತ್ರ'ಕ್ಕಾಗಿ, ಇಂದು ದೇಹದ 'ಚಿತ್ರ', ಅರ್ಥಾತ್ 'ಫಿಗರ್'ಗಾಗಿ.
ಸಿನಿ ನಟರಂತೆ 'ಫಿಗರ್ ಮೇಂಟೇನ್' ಮಾಡಬೇಕು, ಕಟ್ಟುಮಸ್ತಾದ ಮೈಕಟ್ಟು, ಸಿಕ್ಸ್ಪ್ಯಾಕ್ ಹೊಂದಬೇಕು ಎಂಬ ಆಸೆ ಯುವಜನರಲ್ಲಿ ಈಗ ಹೆಚ್ಚುತ್ತಿದೆ. ಅದಕ್ಕಾಗಿ 'ಜಿಮ್'(ಜಿಮ್ನಾಷಿಯಂ) ಒಂದೇ ಸಾಧನ ಎಂಬುದೇನೋ ಸಹಜ. ಅದನ್ನು ಮನಗಂಡು ಗಲ್ಲಿಗಲ್ಲಿಗೂ 'ಜಿಮ್' ಕೇಂದ್ರಗಳು ಆರಂಭ ಆಗಿರುವುದರಿಂದ ಮಹಾನಗರಗಳೆಲ್ಲ 'ಜಿಮ್'ಷೆಡ್ಪುರಗಳಾಗಿವೆ. ನಗರಗಳಲ್ಲಿ ಕೂಡ 'ದವಾಖಾನೆ'ಗಳಿಗೆ ಪೈಪೋಟಿ ನೀಡುವಂತೆ 'ಜಿಮ್'ಖಾನೆಗಳು ತೆರೆಯಲ್ಪಡುತ್ತಿವೆ.
ಆದರೆ, ಫಿಗರ್ ಮೇಂಟೇನ್ ಮಾಡುವ, ಅರ್ಥಾತ್ ಆಕರ್ಷಕ ದೇಹದಾರ್ಢ್ಯ ಪಡೆಯುವ ತವಕದಲ್ಲಿ ಜಿಮ್ ಕೇಂದ್ರಗಳಲ್ಲಿ ತಮ್ಮ 'ತನುಮನಧನ' ಅರ್ಪಿಸಿ, ಅಸಹಜ ರೀತಿಯಲ್ಲಿ ದೇಹ ದಂಡಿಸಿಕೊಳ್ಳುತ್ತಿರುವ ಬಹುತೇಕ ಯುವಕರು ತಮ್ಮ ಭವಿಷ್ಯಕ್ಕೆ ಕುತ್ತು ಉಂಟು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಉತ್ತಮ ನಿದರ್ಶನ ಎಂದರೆ ದೊಡ್ಡ ಚಿತ್ರ ನಾಯಕ ಆಗಬೇಕು ಎಂಬ ತೀವ್ರ ಹಂಬಲದಲ್ಲಿ ಜಿಮ್ನಲ್ಲೇ ಕಾಲ ಕಳೆದು ಮೊನ್ನೆ ಮೊನ್ನೆಯಷ್ಟೇ 'ಕಾಲ'ವಶವಾಗಿ, ಈಗ 'ನೆನಪಿನಂಗಳ'ದಲ್ಲಿ ಮಾತ್ರ ಉಳಿದಿರುವ ನಟ 'ಹೇಮಂತ್'.
ಸಿನಿ ನಟರಂತೆ ಕಟ್ಟುಮಸ್ತಾದ ದೇಹ ಬೆ ಳೆಸಿ, ಬಲಿತ 'ಬೈಸೆಪ್ಸ್' ಪ್ರದರ್ಶಿಸುತ್ತಾ ಬೀದಿ ಬದಿಯಲ್ಲಿ 'ಬೈಟು ಕಾಫಿ' ಹೀರಿ ಜನರ ಮನ ಸೆಳೆಯಬೇಕು ಎಂದು ಕನಸು ಕಾಣುವವರು ಬಹಳಷ್ಟಿದ್ದಾರೆ. ಜತೆಗೆ, ಕನಸು ನನಸಾಗುವ ಮುನ್ನವೇ ದೈಹಿಕ ನ್ಯೂನತೆಗೆ ಈಡಾಗುತ್ತಿರುವ ಅಥವಾ ಅಗಲುತ್ತಿರುವವರ ಸಂಖ್ಯೆ ಕಡಿಮೆ ಏನಿಲ್ಲ. ಆದರೆ, ಹಾಗಾದವರು ಹೈ ಪ್ರೊಫೈಲ್ ಅಥವಾ ಸೆಲೆಬ್ರಿಟಿಗಳನೆಸಿಕೊಂಡವರಾದರೆ ಮಾತ್ರ ದೊಡ್ಡ ಸುದ್ದಿಯಾಗಿ ವಿಷಯ ಬಹಿರಂಗವಾಗುತ್ತದೆ. ಆ ಹಿನ್ನೆಲೆಯಲ್ಲಿ ಜಿಮ್, ವರ್ಕೌಟ್ ಮುಂತಾದವುಗಳ ಕುರಿತು 'ಕನ್ನಡಪ್ರಭ-ಬೈಟು ಕಾಫಿ' ಸಂಗ್ರಹಿಸಿರುವ ಕೆಲ ಮಾಹಿತಿಗಳು ಇಂತಿವೆ.
ಜಿಮ್ಗಿಲ್ಲ ಪ್ರಮಾಣ ಪತ್ರ
ಒಂದು ಕ್ಲಿನಿಕ್ ತೆರೆಯಲು ಯಾವುದೇ ಪದ್ಧತಿಯ ವೈದ್ಯಕೀಯ ಪ್ರಮಾಣ ಪತ್ರ ಹೊಂದಿರಬೇಕು. ಕಡೇಪಕ್ಷ ಒಂದು ಮೆಡಿಕಲ್ ಶಾಪ್ ತೆರೆಯಲು ಬಿ-ಫಾರ್ಮಾ ಪ್ರಮಾಣಪತ್ರ ಇರಬೇಕು. ಆದರೆ, ನೀವು ಇಡೀ ದೇಹವನ್ನು ಹೇಗೆ ಬೇಕಾದರೂ ದಂಡಿಸಲೊಪ್ಪಿಸುವ ನಿಮ್ಮ ಜಿಮ್ ಮಾಲೀಕರಿಗೆ ಮಾತ್ರ ಯಾವುದೇ ಪ್ರಮಾಣಪತ್ರ ಬೇಕಾಗಿಲ್ಲ. ಅಂತಹ ಪ್ರಮಾಣಪತ್ರ ನೀಡುವ ಸಂಸ್ಥೆ ಕೂಡ ರಾಜ್ಯದಲ್ಲಿಲ್ಲ. ಹಾಗಾಗಿ ಯಾರು ಬೇಕಾದರೂ ಜಿಮ್ ತೆರೆಯುವಂತಾಗಿದೆ.
ಅಮೇರಿಕಾದ ಕೆಲ ಸಂಸ್ಥೆ ದೂರಶಿಕ್ಷಣ ಮೂಲಕ ಜಿಮ್ ನಡೆಸುವ ಅರ್ಹತಾ ಕೋರ್ಸ್ ನಡೆಸುತ್ತಿದ್ದು, ಮುಂಬೈನಲ್ಲಿ ವರ್ಷಕ್ಕೊಮ್ಮೆ ಆ ಕುರಿತ ಪರೀಕ್ಷೆ ನಡೆಸುತ್ತದೆ. ಆ ಪರೀಕ್ಷಾ ಶುಲ್ಕ ಹಾಗೂ ಪಠ್ಯ ಪರಿಕರಗಳ ಒಟ್ಟು ಖರ್ಚು ವರ್ಷಕ್ಕೆ ಸುಮಾರು 40ರಿಂದ 50 ಸಾವಿರ ಆಗುತ್ತದೆ. ಒಮ್ಮೆ ಈ ಕೋರ್ಸ್ ಪಡೆದವರು ವರ್ಷ ವರ್ಷ ಅಪ್ಡೇಟ್ ಆಗುತ್ತಿರಬೇಕು. ಅಂತಹ ಪ್ರಮಾಣಪತ್ರ ಹೊಂದಿರುವ ಸಾಕಷ್ಟು ಮಂದಿ ರಾಜ್ಯದಲ್ಲಿದ್ದರೂ ಅವರಲ್ಲಿ ಕೆಲವರು ದುಬಾರಿ ಖರ್ಚಿನ ಕಾರಣ ಅಪ್ಡೇಟ್ ಆಗಿಲ್ಲ ಎನ್ನುತ್ತಾರೆ ಜಿಮ್ ಪರಿಣಿತ ಆ್ಯಕ್ಸಿಸ್ ಜಿಮ್ನ ವೆಂಕಟೇಶ್.
ಹಿನ್ನೆಲೆಯೇ ಮಾನದಂಡ
ನುರಿತ ಜ್ಞಾನ ಇರದವರ ಅಥವಾ ಅರೆಬರೆ ಕಲಿತವರ ಜಿಮ್ನಲ್ಲಿ ವರ್ಕೌಟ್ ಮಾಡಿದರೆ ಏನೂ 'ವರ್ಕೌಟ್' ಆಗುವುದಿಲ್ಲ. ಇರುವುದರಲ್ಲಿ ಒಳ್ಳೆಯ ಜಿಮ್ ಯಾವುದು ಎಂದು ತಿಳಿಯಬೇಕಿದ್ದರೆ ಜಿಮ್ ಹಾಗೂ ಜಿಮ್ ನಡೆಸುವವರ/ಮಾಲೀಕರ ಹಿನ್ನೆಲೆಯೇ ಮಾನದಂಡ. ಬಹಳ ವರ್ಷಗಳಿಂದ ಇರುವ ಜಿಮ್ ಕೇಂದ್ರ ಅಥವಾ ಸುದೀರ್ಘ ವರ್ಷಗಳ ಅನುಭವ ಇರುವ ದೇಹದಾರ್ಢ್ಯ ಪಟು ನಡೆಸುವ ಜಿಮ್ಗಳು ಅಭ್ಯಾಸಕ್ಕೆ ಸೂಕ್ತ ಎಂಬುದು ತಜ್ಞರ ಅಭಿಪ್ರಾಯ. ಅಪಕ್ವ ಕೋಚ್ಗಳ ಸಲಹೆ ಅಥವಾ ಸ್ವಂತ ನಿರ್ಧಾರದಂತೆ ತಪ್ಪುತಪ್ಪಾಗಿ ವರ್ಕೌಟ್ ಮಾಡಿದರೂ ಆರೋಗ್ಯಕ್ಕೆ ಹಾನಿ. ಇದರಿಂದ ಸ್ನಾಯು ಸವೆತ, ಕೀಲು ಸಮಸ್ಯೆ ಇತ್ಯಾದಿ ಸಮಸ್ಯೆ ಉಂಟಾಗುತ್ತದೆ.
ಜಿಮ್ ಟಿಪ್ಸ್
- ಒಳ್ಳೆಯ ಹೆಸರಿರುವ ಹಾಗೂ ನುರಿತ ಕೋಚ್ ಇರುವ ಜಿಮ್ನಲ್ಲೇ ವರ್ಕೌಟ್ ಆರಂಭಿಸಿ.
- ಕೋಚ್ ಹೇಳಿದಂತೆ ಸರಿಯಾದ ಭಂಗಿಯಲ್ಲಿ, ಲಯಬದ್ಧವಾಗಿ ದೇಹ ದಂಡಿಸಿ. ಸ್ವತಃ ಅಭ್ಯಾಸ ಬೇಡ.
- ಬೇಗ ದೇಹದಾರ್ಢ್ಯ ಹೊಂದುವ ಆಸೆ ಹಾಗೂ ಅತಿಯಾದ ದೇಹದಂಡನೆ ಸಲ್ಲದು.
- ಆಹಾರ ಸೇವಿಸಿದ 2 ಗಂಟೆ ಬಳಿಕ ವರ್ಕೌಟ್ ಆರಂಭಿಸಿ, ಮುಗಿದ ಬಳಿಕ ಪೌಷ್ಟಿಕ ಆಹಾರ ತಿನ್ನಿ.
- ಚೆನ್ನಾಗಿ ದೇಹ ದಂಡಿಸಿ ಪೌಷ್ಟಿಕ ಆಹಾರ ತಿನ್ನದೇ ಇರುವುದು ಕೂಡ ಹಾನಿಕರ.
- ಕೃತಕ ಪ್ರೊಟೀನ್, ವಿಟಮಿನ್ಗಳ ಬದಲು ದೈನಂದಿನ ಆಹಾರದಲ್ಲಿ ಅವು ಹೆಚ್ಚಿರುವ ಪದಾರ್ಥ ತಿನ್ನಿ.
- ಉದಾಹರಣೆಗೆ, ಮೊಟ್ಟೆ, ಮೀನು, ಕೋಳಿ, ಹಸಿ ತರಕಾರಿ ಇತ್ಯಾದಿ. ಜತೆಗೆ ಸಾಕಷ್ಟು ನೀರು ಕುಡಿಯಿರಿ.
- ಕೃತಕ ಫುಡ್ ಸಪ್ಲಿಮೆಂಟ್ಸ್ ವರ್ಜಿಸುವುದು ಒಳಿತು. ಕೋಚ್ ಸೂಚಿಸಿದರೆ ವೈದ್ಯ/ಆಹಾರತಜ್ಞರ ಸಲಹೆ ಪಡೆಯಿರಿ.
- ಹಾರ್ಮೋನ್ಸ್, ಟೆಸ್ಟೋಸ್ಟೆರೋನ್ ಬಳಕೆ ಬೇಡವೇ ಬೇಡ.
- ದೇಹದ ಸ್ಥಿತಿಸ್ಥಾಪಕತ್ವ ಹೆಚ್ಚಳ
- ರೋಗ ನಿರೋಧಕ ಶಕ್ತಿ ಹೆಚ್ಚಳ
- ಸ್ನಾಯು, ಮೂಳೆಗಳ ಬಲ ವೃದ್ಧಿ
- ಹೃದಯದ ಆರೋಗ್ಯ ಹೆಚ್ಚಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


