ಹಾರ್ಟ್ BREAKING NEWS
ಇಂದಿನ ಯುವತಿಯರಿಗೆ ಅದರಲ್ಲೂ ವಿಶೇಷವಾಗಿ 20-40 ವಯಸ್ಸಿನ ಭಾರತೀಯ ನಾರಿಯರಿಗೆ ಹೃದ್ರೋಗಗಳು ಹೆಚ್ಚುತ್ತಿವೆ.

ಹುಡುಗಿಯರ ಹೃದಯ ಕದಿಯುವ ಮುನ್ನ ಕಡ್ಡಾಯವಾಗಿ ಇಸಿಜಿ ಮಾಡಿಸಿ!
ಇದೇನಿದು ಹುಡುಗಿಯರ ಹೃದಯ ಗೆದ್ದು ಪ್ರೀತಿಸುವುದಕ್ಕೂ ಇಸಿಜಿ ಮಾಡಿಸುವುದಕ್ಕೂ ಏನ್ ಸಂಬಂಧ? ಎಂದು ಹುಬ್ಬೇರಿಸಬೇಡಿ. ಇಂದಿನ ಯುವತಿಯರಿಗೆ ಅದರಲ್ಲೂ ವಿಶೇಷವಾಗಿ 20-40 ವಯಸ್ಸಿನ ಭಾರತೀಯ ನಾರಿಯರಿಗೆ ಹೃದ್ರೋಗಗಳು ಹೆಚ್ಚುತ್ತಿವೆ. ಜೀವನಶೈಲಿಯ ಬದಲಾವಣೆಯೇ ಇದಕ್ಕೆ ಕಾರಣ. ಮಾಡರ್ನ್ ಯುಗದಲ್ಲಿ ಬಾಹ್ಯವಾಗಿ ಚೆಂದ ಕಾಣಿಸಿದಷ್ಟು ಆಂತರಿಕವಾಗಿ ರೋಗಗಳು ಉಲ್ಬಣಗೊಳ್ಳುತ್ತಿವೆ ಎನ್ನುವುದಕ್ಕೆ ಇದೊಂದು ಸಾಕ್ಷಿ.
ಮಹಿಳೆಯರು ಪುರುಷರಿಗೆ ಸರಿಸಮನಾಗಿ ಬೆಳೆಯುತ್ತಿದ್ದಾರೆ ಎಂಬ ಸಂತೋಷದ ನಡುವೆ ಇಂಥದ್ದೊಂದು ಆಘಾತಕಾರಿ ಅಂಶ ಹೊರಬಿದ್ದಿರುವುದು ಅಚ್ಚರಿಯೇ ಸರಿ. ಕೆಲಸದ ಒತ್ತಡ, ಅವಿಭಕ್ತ ಕುಟುಂಬ ವಿಘಟನೆಗೊಂಡು ಸಂಸಾರದ ಹೊರೆ ಹೆಚ್ಚಾಗಿರುವುದು, ಬದಲಾದ ಜೀವನ ಶೈಲಿಯಲ್ಲಿನ ಆಹಾರದ ಏರುಪೇರು, ಸ್ವಕಾಳಜಿ ಅಲಕ್ಷಿಸಿದ್ದು ಸೇರಿದಂತೆ 'ಕಾರಣ'ಗಳ ಪಟ್ಟಿ ಬೆಳೆಯುತ್ತಿದೆ. ಅತ್ತು ಹಗುರಾಗುತ್ತಿದ್ದ ಹೆಣ್ಣು ಅಳುವುದು ಅವಮಾನ ಎಂದೇ ಪರಿಗಣಿಸುತ್ತಿರುವುದೂ ಇಂಥದ್ದೊಂದು ಅನಾಹುತಕ್ಕೆ ಕಾರಣವಾಗಿರಬಹುದು.
ಗೊತ್ತಾಗಿದ್ದು ಹೇಗೆ?
ಹೆಣ್ಣು ಹೃದಯ ಬೇಗ 'ಕರಗುತ್ತದೆ' ಎಂಬುದು ಅವರ ಕಣ್ಣೀರಧಾರೆಯಿಂದಲೇ ಸಾಬೀತಾಗಿದ್ದರೂ ಹಾರ್ಟ್ ಮಾತ್ರ ಗಟ್ಟಿ ಎಂದೇ ಅಂದಾಜಿಸಲಾಗಿತ್ತು. ಪರಿವರ್ತನೆಯ ಕಾಲ ಗರ್ಭದಲ್ಲಿ ಎಲ್ಲವೂ ಸರಿ ಇಲ್ಲವೆಂದು ಅರಿತ ವೆಡ್ನಾ (ವಿಷುವಲೈಸಿಂಗ್ ದಿ ಎಕ್ಸ್ಟೆಂಡ್ ಆಫ್ ಹಾರ್ಟ್ ಡಿಸೀಸ್ ಇನ್ ಇಂಡಿಯನ್ ವಿಮೆನ್) ದೇಶದ ವಿವಿಧ ನಗರ ಹಾಗೂ ಅರೆನಗರ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿತು. 'ಈಸ್ಟ್ರೋಜೆನ್ ಹಾರ್ಮೋನ್ಸ್' ಕೊರತೆಯಿಂದಲೇ ಮಹಿಳೆಯರು, ಯುವತಿಯರಿಗೆ ಹೃದ್ರೋಗ ಬರುತ್ತಿದೆ. ಅಲ್ಲದೆ, ಜೀವನ ಶೈಲಿಯಲ್ಲಿ ಬದಲಾವಣೆಯಾಗಿದ್ದೂ ಭಾರಿ ದುಷ್ಪರಿಣಾಮ ಬೀರುತ್ತಿದೆ. ಋತುಮತಿಯಾಗುವ ಮುನ್ನ ಹೃದ್ರೋಗ ಬರಲ್ಲ ಎಂಬ ನಂಬಿಕೆಯೂ ಈಗ ಹುಸಿಯಾಗಿದೆ ಎನ್ನುತ್ತದೆ ಈ ಸಮೀಕ್ಷೆ.
ಒಡೆದ ಹೃದಯ
ಮೂರು ದಶಕಗಳ ಹಿಂದೆ ಯುವತಿಯರು ಆರೋಗ್ಯವಾಗಿಯೇ ಇರುತ್ತಿದ್ದರು. ಈಗ ಬದಲಾವಣೆ ಗಾಳಿ ಬೀಸುತ್ತಿರುವುದರಿಂದ ಹೆಚ್ಚಿದ ಜವಾಬ್ದಾರಿಯೊಂದಿಗೆ ಜೀವನ ಶೈಲಿಯೂ ಬದಲಾಗಿದೆ. ಇದರಿಂದ ಹೃದ್ರೋಗ ನಿಯಂತ್ರಿಸುವ ಈಸ್ಟ್ರೋಜೆನ್ ಹಾರ್ಮೋನ್ ಪ್ರಮಾಣವೂ ತಗ್ಗುತ್ತಿದ್ದು, ಇದು ಮಹಿಳೆಯರ ರೋಗ ನಿರೋಧಕ ಶಕ್ತಿಯನ್ನೇ ಕುಗ್ಗಿಸುತ್ತಿದೆ. ಧೂಮಪಾನ ಮಾಡುವ ಪರಿಪಾಠವೂ ಹೆಚ್ಚಾಗಿದೆ. (ಪುರುಷರಿಗಿಂತ ಮಹಿಳೆಯರಿಗೆ ಧೂಮಪಾನದಿಂದ ಶೇ.5ರಷ್ಟು ಹೆಚ್ಚು ದುಷ್ಪರಿಣಾಮ ಬೀರುತ್ತದೆ). ಗಂಡನಿಗೆ ಸರಿಸಮನಾಗಿ ದುಡಿಯುತ್ತಿರುವುದರಿಂದ ಒತ್ತಡ ಸಹಜವಾಗಿ ಹೆಚ್ಚುತ್ತಿದೆ.
ಹೋಗಲಿ, ಕೈ ತುಂಬಾ ದುಡಿಯುವ ಹೆಣ್ಣು ಹೊಟ್ಟೆ ತುಂಬ ಸರಿಯಾಗಿ ಬೇಯಿಸಿಕೊಂಡು ತಿನ್ತಾಳಾ? ಅದೂ ಇಲ್ಲ. ಜಂಕ್ಫುಡ್ನಂಥ ಆಹಾರಗಳಿಗೇ ಹೆಚ್ಚು ಮಾರು ಹೋಗುತ್ತಿದ್ದಾಳೆ. ಕೊಬ್ಬಿನಂಶ ಹೆಚ್ಚಿರುವ ಅಥವಾ ಮಾಂಸಾಹಾರ ಸೇವನೆಯಿಂದ ಹೃದಯದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ.
ಪತ್ತೆ ಹಚ್ಚೋದು ಹೇಗೆ?
ಸಾಮಾನ್ಯವಾಗಿ ಹೃದ್ರೋಗ ಬೇಗನೆ ಅರಿವಿಗೆ ಬರುವುದಿಲ್ಲ. ಆದರೆ, ಸುಲಭವಾಗಿ ಈ ಕಾಯಿಲೆಯನ್ನು ಪತ್ತೆ ಹಚ್ಚಬಹುದು. ನಿತ್ಯ ಒಂದೆರಡು ಕಿ.ಮೀ. ನಡೆಯುವುದನ್ನು ರೂಢಿಸಿಕೊಳ್ಳಿ. ನಡೆಯುವಾಗ ಹೃದಯ ಹಿಡಿದಂತಾಗುವುದು, ಎರಡೂ ಭುಜಗಳ ಬಳಿ ನೋವು ಕಾಣಿಸಿಕೊಳ್ಳುವುದು, ವಿಪರೀತ ಬೆವರುವುದು, ಆಗಾಗ ಬೆನ್ನು ನೋವು ಕಾಣಿಸಿಕೊಳ್ಳುವುದು, ಹೊಟ್ಟೆಯ ಕೆಳಭಾಗದಲ್ಲಿ ಗ್ಯಾಸ್ಟ್ರಿಕ್ನಂತೆ ನೋವು ಕಾಡುವುದು, ಎದೆಯ ಎಡಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಹೃದ್ರೋಗ ಎನ್ನಬಹುದು. ಹಾಗಂತ ಗಾಬರಿಯಾಗ್ಬೇಡಿ. ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.
ಸ್ಲಿಮ್ ಆಗಿದ್ರೂ ಅಟ್ಯಾಕ್!
ದಪ್ಪ ಇದ್ದವರಿಗೆ ಮಾತ್ರ ಕೊಬ್ಬು ಜಾಸ್ತಿ ಇರುತ್ತದೆ. ಅಂಥವರಿಗೆ ಮಾತ್ರ ಹಾರ್ಟ್ ಅಟ್ಯಾಕ್ ಆಗುತ್ತದೆ ಎಂಬುದು ಸುಳ್ಳು. ಬಳುಕುವ ಬಳ್ಳಿಯಂತಿದ್ದರೂ ಹೃದ್ರೋಗ ಕಾಡೋದು ತಪ್ಪೋದಿಲ್ಲ. ದೇಹದಲ್ಲಿ ಕೊಬ್ಬಿನಂಶ ಹೆಚ್ಚಾದರೆ, ಯಾರು ಏನೂ ಮಾಡ್ಲಿಕ್ಕೂ ಆಗಲ್ಲ. ಮದ್ಯಪಾನ ಮಾಡುತ್ತಿದ್ದರೆ ಈ ಚಾನ್ಸಸ್ ಹೆಚ್ಚು.
ಸುಲಭ ಉಪಾಯಗಳೇನು?
- ಪ್ರತಿದಿನ ತಪ್ಪದೇ ವ್ಯಾಯಾಮ ಮಾಡಿ.
- ಕೊಬ್ಬಿನಂಶ ಹೆಚ್ಚಿರುವ ಮಾಂಸ, ಜಂಕ್ಫುಡ್ಗಳಿಗೆ ಬೈ ಹೇಳಿ.
- ಸಸ್ಯಾಹಾರಿಯಾಗುವುದರ ಜತೆಗೆ ಡಯೆಟ್ ಮಾಡಿ.
- ಕಚೇರಿ ಕೆಲಸಕ್ಕೆ ತೆರಳಿದಾಗ ವಾಹನಗಳನ್ನು ಆಫೀಸ್ನಿಂದ ಒಂದು ಅಥವಾ ಒಂದೂವರೆ ಕಿ.ಮೀ. ದೂರದಲ್ಲಿ ಪಾರ್ಕ್ ಮಾಡಿ ನಡೆದುಕೊಂಡು ಹೋಗುವುದನ್ನು ರೂಢಿಸಿಕೊಳ್ಳಿ.
- ರಕ್ತದೊತ್ತಡ, ಸಕ್ಕರೆ ಕಾಯಿಲೆ, ಬ್ಲಡ್ ಕೊಲೆಸ್ಟ್ರಾಲ್, ದೈಹಿಕ ತೂಕ, ಗುರಿಗೆ ಇತಿಮಿತಿ ಹಾಕಿಕೊಳ್ಳಿ.
- ಮಕ್ಕಳು, ಪತಿ, ಕಚೇರಿಯ ಬಗೆಗಿನ ಒತ್ತಡ ಕಡಿಮೆ ಮಾಡಿಕೊಳ್ಳಿ. ವಿನಾಕಾರಣ ಕೋಪಿಸಿಕೊಳ್ಳುವ ಪರಿಪಾಠ ಬಿಟ್ಟು ಬಿಡಿ.
- ವೈದ್ಯಕೀಯ ಪರೀಕ್ಷೆ ಆಗಾಗ ಮಾಡಿಸಿಕೊಳ್ಳಿ. ರೋಗನಿವಾರಕ ಮಾತ್ರೆ ನುಂಗುವುದನ್ನು ಕಡಿಮೆ ಮಾಡಿ.
- ಧೂಮಪಾನ ಮಾಡಲೇಬೇಡಿ.
- ಚನ್ನು ಮೂಲಿಮನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


