ಬೈಟುಕಾಫಿ

ಮಹೀರಾಜ

ಅಜ್ಜ ನೆಟ್ಟ ಮರ ಬೇರೂರಿ ನಿಂತಿತ್ತು. ಮೊಮ್ಮಗನಿಗೋ ಎಲ್ಲ ಕಡೆಗೂ ವ್ಯಾಪಿಸಿಕೊಳ್ಳುವ ಹಂಬಲ. ಅಜ್ಜ ನೆಟ್ಟಿದ್ದ ಮರವನ್ನು ಆತ...

ಮಹೀರಾಜ
Published On :

ಅಜ್ಜ ನೆಟ್ಟ ಮರ ಬೇರೂರಿ ನಿಂತಿತ್ತು. ಮೊಮ್ಮಗನಿಗೋ ಎಲ್ಲ ಕಡೆಗೂ ವ್ಯಾಪಿಸಿಕೊಳ್ಳುವ ಹಂಬಲ. ಅಜ್ಜ ನೆಟ್ಟಿದ್ದ ಮರವನ್ನು ಆತ ಕಡೆಗಣಿಸಲೂ ಇಲ್ಲ, ಅದನ್ನೊಂದೇ ನಂಬಿ ಕೂರಲೂ ಇಲ್ಲ. ಅದರ ರೆಂಬೆಕೊಂಬೆಗಳು ವಿಶಾಲವಾಗಿ ಹರಡುವಂತೆ ನೋಡಿಕೊಂಡ. ಜತೆಯಲ್ಲೇ ಆ ವೃಕ್ಷದ ನೆರಳಿನಲ್ಲಿಯೇ ಇನ್ನಷ್ಟು ಪುಟ್ಟಪುಟ್ಟ ಸಸಿಗಳನ್ನು ನೆಟ್ಟ. ಈ 68 ವರ್ಷಗಳಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ 16.2 ಶತಕೋಟಿ ಅಮೆರಿಕನ್ ಡಾಲರ್ (ಸುಮಾರು 8,74,800 ಕೋಟಿ ರುಪಾಯಿ) ಮೌಲ್ಯದ ಬೃಹತ್ ಉದ್ಯಮ ಸಂಸ್ಥೆಯಾಗಿ ಬೆಳೆದು ನಿಂತಿದೆ. ಜಗತ್ತಿನಾದ್ಯಂತ ತನ್ನ ಅಸ್ತಿತ್ವ ತೋರುತ್ತಿದೆ.
ಸತ್ಯಂ ಕಂಪ್ಯೂಟರ್ಸ್, ರೇವಾ ಎಲೆಕ್ಟ್ರಿಕ್ ಮೋಟಾರ್ಸ್, ಸಂಗ್‌ಯಾಂಗ್ ಮೋಟಾರ್ ಕಂಪನಿಯಂಥ ಸಂಸ್ಥೆಗಳನ್ನು ತೆಕ್ಕೆಗೆ ತೆಗೆದುಕೊಂಡದ್ದು ಮಾತ್ರವಲ್ಲ, ಬ್ಯಾಂಕಿಂಗ್, ರಿಯಲ್ ಎಸ್ಟೇಟ್, ಆತಿಥ್ಯ ಉದ್ಯಮ, ಟಿ.ವಿ ಚಾನೆಲ್ (ಶೀಘ್ರ ಪ್ರಸಾರ ಆರಂಭಿಸಲಿರುವ ಎಪಿಕ್ ಟಿ.ವಿಯಲ್ಲಿ ಶೇ 25ರಷ್ಟು ಪಾಲು)... ಎಲ್ಲ ಕ್ಷೇತ್ರಗಳಲ್ಲೂ ಎಂ ಅಂಡ್ ಎಂ ನಡೆದದ್ದೇ ದಾರಿ. ಇನ್ನು ಆಟೊಮೊಬೈಲ್‌ನಲ್ಲಂತೂ ಅವರಿಗೆ ಸಾಟಿ ಇಲ್ಲ ಬಿಡಿ. ಆನಂದ್ ಮಹೀಂದ್ರಾ ಎನ್ನುವ ಶಕ್ತಿ 1991ರಲ್ಲಿ ಉಪ ವ್ಯವಸ್ಥಾಪಕ ನಿರ್ದೇಶಕನಾಗಿ ಎಂ ಅಂಡ್ ಎಂಗೆ ಕಾಲಿಟ್ಟಿದ್ದೇ ನೋಡಿ, ಮಹೀಂದ್ರಾ ಸಮೂಹ ಎಲ್ಲಾ ರಂಗಗಳನ್ನೂ ಆವರಿಸಿಕೊಳ್ಳುತ್ತಿದೆ.
ಲಂಡನ್‌ನ ಹಾರ್ವರ್ಡ್ ಸ್ಕೂಲ್ ಆಫ್ ಬಿಸಿನೆಸ್‌ನಲ್ಲಿ ಎಂಬಿಎ ಪದವಿ ಪಡೆದ ಬಳಿಕ ಆನಂದ್ ಮಹೀಂದ್ರಾ ಭಾರತಕ್ಕೆ ಮರಳಿದರು. ತಮ್ಮ ಮನೆತನದ್ದೇ ಕಂಪನಿಯಾದರೂ ಏಕಾಏಕಿ ದೊಡ್ಡ ಹುದ್ದೆ ಸಿಗಲಿಲ್ಲ. ಎಂ ಅಂಡ್ ಎಂ ಅಂಗಸಂಸ್ಥೆಯಾಗಿದ್ದ ಮಹೀಂದ್ರಾ ಉಗೈನ್ ಸ್ಟೀಲ್ ಕಂಪನಿಯಲ್ಲಿ 1981ರಲ್ಲಿ ಹಣಕಾಸು ನಿರ್ದೇಶಕರ ಕಾರ್ಯನಿರ್ವಾಹಕ ಸಹಾಯಕನಾಗಿ ನೇಮಕ. ಹಂತಹಂತವಾಗಿ ಸಾಮರ್ಥ್ಯ ತೋರುತ್ತ ಹತ್ತು ವರ್ಷದ ನಂತರ ಮಹೀಂದ್ರಾ ಅಂಡ್ ಮಹೀಂದ್ರಾ ಸಮೂಹಕ್ಕೆ ಪ್ರವೇಶ. 'ಔಟ್ ಆಫ್ ದಿ ಬಾಕ್ಸ್ ಥಿಂಕಿಂಗ್‌' ಎನ್ನುವುದೇ 'ಮಹೀಂದ್ರಾ ಕುಟುಂಬ'ಕ್ಕೆ ಅವರ ಸಲಹೆ.
ಜೈಪುರದಲ್ಲಿ ಈಚೆಗೆ ನಡೆದ ಮಹೀಂದ್ರಾ ಸೆಂಟ್ಯುರೊ ದ್ವಿಚಕ್ರ ವಾಹನ ಬಿಡುಗಡೆ ಸಮಾರಂಭದ ಬಳಿಕ 'ಬೈಟು ಕಾಫಿ'ಗೆ ಆನಂದ್ ಮಹೀಂದ್ರಾ ಚುಟುಕು ಮಾತುಕತೆಗೆ ಸಿಕ್ಕರು. 58 ಆಗಿದೆ ಎನ್ನಲು ಸಾಧ್ಯವಿಲ್ಲದ ಫಿಟ್‌ನೆಸ್, ತುಟಿಯಂಚಿನಲ್ಲಿ ಸದಾ ಮುಗುಳ್ನಗು, ದರ್ಪವಿಲ್ಲದ ಅದರೆ ಕಾರ್ಪೊರೆಟ್ ಜಗತ್ತಿಗೆ ಅನಿವಾರ್ಯವಾಗಿರುವ ಗಾಂಭೀರ್ಯ, ಸುತ್ತಮುತ್ತ ನಡೆಯುತ್ತಿರುವುದನ್ನು ಚಕ್ ಅಂಥ ಸ್ಕ್ಯಾನ್ ಮಾಡುವ ಚುರುಕಾದ ಕಣ್ಣುಗಳು. ಇದು ಆನಂದ್ ಮಹೀಂದ್ರಾ. ಸ್ವದೇಶಿ ತಂತ್ರಜ್ಞಾನದಲ್ಲಿ ಅವರ ನಂಬಿಕೆ. ಯಾವ ಸಂದರ್ಭದಲ್ಲೂ ನೈತಿಕತೆಯ ಗೆರೆ ದಾಟಕೂಡದು ಎನ್ನುವ ನಿಲುವು. 'ಕಡಿಮೆ ಹಣ ಅಧಿಕ ಮೌಲ್ಯ' ಎನ್ನುವುದು ಗ್ರಾಹಕರನ್ನು ತೃಪ್ತಿಪಡಿಸಲು ಕಂಡುಕೊಂಡಿರುವ ಮಂತ್ರ.

ಉದ್ಯಮ ಜಗತ್ತಿನಲ್ಲಿ ಗುರಿ
ವಹಿವಾಟಿನ ಗಾತ್ರ, ನಂಬರ್ ಗೇಮ್‌ನಲ್ಲಿ ನಂಬಿಕೆ ಇಲ್ಲ ನನಗೆ. ದೇಶದಲ್ಲಿ, ವಿಶ್ವದಲ್ಲಿ ಬಲಿಷ್ಠ ಮತ್ತು ವಿಶ್ವಾಸಾರ್ಹ ಸಂಸ್ಥೆಯಾಗಿ ಮಹೀಂದ್ರಾ ಅಂಡ್ ಮಹೀಂದ್ರಾ ಬೆಳೆಯಬೇಕು ಅಷ್ಟೆ.

ಯಶಸ್ಸಿನ ಗುಟ್ಟು
ನಾವು ಸಾಂಪ್ರದಾಯಿಕವಾಗಿ ಯೋಚಿಸುವುದನ್ನು ಬಿಟ್ಟುಬಿಡಬೇಕು. ಹೊಸತು...ಹೊಸತು...ಹೊಸತು...ನಮ್ಮ ಪ್ರತಿ ಉತ್ಪನ್ನವೂ ಗ್ರಾಹಕರ ಅವಶ್ಯಕತೆಗಳನ್ನು ಪೂರೈಸುವಂತಿರಬೇಕು ಮತ್ತು ಅವರಿಗೆ ಏನಾದರೂ ಹೊಸತು ನೀಡುತ್ತಿರಬೇಕು. ತಪ್ಪುಗಳಿಂದ ಎಷ್ಟು ಬೇಗ ಪಾಠ ಕಲಿಯುತ್ತೀರಿ ಮತ್ತು ಅದನ್ನು ಹೇಗೆ ತಿದ್ದಿಕೊಳ್ಳುತ್ತೀರಿ ಎನ್ನುವುದೂ ಮುಖ್ಯ.

'ಕಾನ್ಶಿಯಸ್ ಕ್ಯಾಪಿಟಲಿಸಂ' ಬಗ್ಗೆ
ಇದು ಉದ್ಯಮ ಜಗತ್ತಿಗೆ ನಾನೇ ನೀಡಿರುವ ಹೊಸ ಆಲೋಚನೆ. ಬಿಸಿನೆಸ್, ಸಮಾಜ ಮತ್ತು ನಮ್ಮ ಪಾಲುದಾರರು ಈ ಮೂವರ ನಡುವೆ ಪರಸ್ಪರ ನಂಬಿಕೆ, ವಿಶ್ವಾಸ ಬೆಳೆಯಬೇಕು. ಆಗಲೇ ನಾವು ಆರೋಗ್ಯಕರ ಪೈಪೋಟಿ ಎದುರಿಸಲು ಸಾಧ್ಯವಾಗುವುದು. ಇನ್‌ಫ್ಯಾಕ್ಟ್, 'ಸ್ಟ್ರಾಂಗ್-ಡ್ಯುರೆಬಿಲಿಟಿ-ರಿಲಯಬಲ್‌' (ಬಲಶಾಲಿ-ಬಾಳಿಕೆ-ವಿಶ್ವಾಸಾರ್ಹತೆ) ಎಂ ಅಂಡ್ ಎಂ ಧ್ಯೇಯವೂ ಹೌದು.

ಆಟೊಮೊಬೈಲ್ ಕಂಪನಿಯಾಗಿದ್ದ ಎಂ ಅಂಡ್ ಎಂ ಈಗ ರಿಯಲ್ ಎಸ್ಟೇಟ್‌ನಿಂದ ಸಾಫ್ಟ್‌ವೇರ್‌ವರೆಗೂ ನಿಂತದ್ದು...
ಪ್ರತಿ ಕ್ಷೇತ್ರದಲ್ಲೂ ನಮ್ಮ ಛಾಪು ಮೂಡಿಸಬೇಕು. ನಾನು ಹೊಸ ಕ್ಷೇತ್ರಕ್ಕೆ ಕಾಲಿಟ್ಟಾಗಲೆಲ್ಲ 'ಇದು ನಿಮ್ಮಿಂದ ಆಗಲ್ಲ. ನಿಮ್ಮ ಮೂಲ ಬಿಸಿನೆಸ್ ಏನಿತ್ತೋ ಅಷ್ಟೇ ನೋಡಿಕೊಳ್ಳಿ' ಎನ್ನುವ ಸಲಹೆ ಹರಿದುಬರುತ್ತಿತ್ತು. ಗೆಲ್ಲುವ ಹಕ್ಕು (ರೈಟ್ ಟು ವಿನ್) ಎಲ್ಲರಿಗೂ ಇದೆ. ಅದಕ್ಕೆ ತರ್ಕಬದ್ಧ ತಂತ್ರಗಳು, ಸೂಕ್ತ ಕಾರ್ಯಯೋಜನೆ ಅಗತ್ಯ. ಒಮ್ಮೊಮ್ಮೆ ಹಿನ್ನಡೆ ಆಗಬಹುದು. ಅಷ್ಟಕ್ಕೇ ಸೋಲೊಪ್ಪಿಕೊಂಡು ಉದ್ಯಮದಿಂದ ನಿರ್ಗಮಿಸಿದರೆ ಅದು ಹೇಡಿತನ. ನಾವಿನ್ನೂ ವಸಾಹತುಶಾಹಿ ಮನೋಭಾವದಿಂದ ಹೊರಬಂದಿಲ್ಲ. ಆ ಧೋರಣೆಯೇ ನಮ್ಮನ್ನು ಮುಂದಡಿ ಇಡಲು ಹೆದರಿಸುವುದು.

ಉದ್ಯಮಿಯಲ್ಲದ ಆನಂದ್ ಮಹೀಂದ್ರಾ
ಟೆನ್ನಿಸ್ ಆಡುತ್ತೇನೆ. ಈಗೀಗ ಸೈಲಿಂಗ್ ಕೂಡ ಖುಷಿ ಕೊಡುತ್ತಿದೆ. ಫುಟ್ಬಾಲ್, ಸಿನಿಮಾ, ಓದು, ಸಂಗೀತ, ಫೋಟೊಗ್ರಫಿ ಇಷ್ಟ. ಉದ್ಯಮಕ್ಕೆ ಸಂಬಂಧಿಸಿದ ವಿಚಾರಗಳ ಕುರಿತು ಆಗಾಗ ಟ್ವೀಟ್ ಮಾಡುವೆ.

ಇದಕ್ಕೆಲ್ಲ ಸಮಯ?
ಹ್ಹ..ಹ್ಹ..ದಿನಪೂರ್ತಿ ಬಿಸಿನೆಸ್ ಬಗ್ಗೆಯೇ ಯೋಚಿಸುತ್ತಿದ್ದರೆ ಹೇಗೆ?

ಯಾರು ಈ ಆನಂದ?
1945ರಲ್ಲಿ ಕೆ.ಸಿ. ಮಹೀಂದ್ರಾ ಮತ್ತು ಜೆ.ಸಿ. ಮಹೀಂದ್ರಾ ಅವರು ಗುಲಾಮ್ ಮೊಹಮದ್ ಜತೆ ಸೇರಿ ಲೂಧಿಯಾನದಲ್ಲಿ ಆಟೊಮೊಬೈಲ್ ಕಂಪನಿ 'ಮಹೀಂದ್ರಾ ಅಂಡ್ ಮೊಹಮದ್‌' ಹುಟ್ಟುಹಾಕಿದರು. ಸ್ವಾತಂತ್ರ್ಯ ಸಿಕ್ಕು, ದೇಶ ವಿಭಜನೆಯಾದಾಗ ಗುಲಾಮ್ ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಪ್ರಥಮ ಹಣಕಾಸು ಸಚಿವರಾದರು. ಕೆ.ಸಿ. ಮಹೀಂದ್ರಾ ಸಹೋದರನೊಂದಿಗೆ ಕಂಪನಿ ಮುಂದುವರಿಸಿದರು ಮತ್ತು ಕಂಪನಿ ಹೆಸರು 'ಮಹೀಂದ್ರಾ ಅಂಡ್ ಮಹೀಂದ್ರಾ' ಎಂದು ಬದಲಾಯಿತು.
ಕೆ.ಸಿ. ಮಹೀಂದ್ರಾ ಅವರಿಗೆ ಹೆಣ್ಣು ಮಕ್ಕಳು. ಅವರಾರೂ ಅಪ್ಪನ ಬಿಸಿನೆಸ್ ಕುರಿತು ಆಸಕ್ತಿ ವಹಿಸಲಿಲ್ಲ. ಎರಡನೇ ಮಗಳು ಇಂದಿರಾ ಮಹೀಂದ್ರಾ ಅವರ ಮಗನೇ ಈ ಆನಂದ್ ಮಹೀಂದ್ರಾ. ಇಂದಿರಾ ಮನೆಯವರೂ ಬಿಸಿನೆಸ್‌ಮನ್‌ಗಳೇ. ವಿದ್ಯಾಭ್ಯಾಸ ಮುಗಿಸಿ ಸ್ವದೇಶಕ್ಕೆ ಮರಳಿದ ಆನಂದ್, ಅಜ್ಜನ ಕಂಪನಿಯತ್ತ ಆಸಕ್ತಿ ತೋರಿದ. ಈಗ ಅದರ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ.

- ರಾಜೇಶ ಮುಂಡಿಗೇಸರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.