ಬೈಟುಕಾಫಿ

ಮಂಚ ಸಾಕ್ಷಿ

ತಮಿಳುನಾಡಿನ ಮದ್ರಾಸ್ ಹೈಕೋರ್ಟ್ 'ವಿವಾಹಪೂರ್ವ ಸೆಕ್ಸ್ ಎಂದರೆ ಮದುವೆ ಫಿಕ್ಸ್‌' ಎಂಬ ಅರ್ಥ ಬರುವಂತೆ ತೀರ್ಪಿತ್ತಿದೆ.

ಮಂಚ ಸಾಕ್ಷಿ
Published On :

ವಿವಾಹಪೂರ್ವ ಲೈಂಗಿಕತೆಗೆ ಸಂಬಂಧಿಸಿದಂತೆ ನಟಿ ಖುಷ್ಬೂ ಹೇಳಿಕೆಯೊಂದನ್ನು ನೀಡಿದಾಗ ಇಡೀ ತಮಿಳುನಾಡೇ ಆಕ್ರೋಶ ವ್ಯಕ್ತಪಡಿಸಿತ್ತು. ಯಾರಿಗೆ ದೇವಸ್ಥಾನ ಕಟ್ಟಿ ಪೂಜಿಸಲಾಗುತ್ತಿತ್ತೊ ಅದೇ ನಟಿಗೆ ಜನರು ಕಲ್ಲು ಹೊಡೆದಿದ್ದರು!

ಆದರೆ, ಕಳೆದ ತಿಂಗಳು ಇದೇ ತಮಿಳುನಾಡಿನ ಮದ್ರಾಸ್ ಹೈಕೋರ್ಟ್ 'ವಿವಾಹಪೂರ್ವ ಸೆಕ್ಸ್ ಎಂದರೆ ಮದುವೆ ಫಿಕ್ಸ್‌' ಎಂಬ ಅರ್ಥ ಬರುವಂತೆ ತೀರ್ಪಿತ್ತಿದೆ. ಅಫ್‌ಕೋರ್ಸ್ ಇದು ಮದುವೆಗೂ ಮುಂಚೆ ದೈಹಿಕ ಸಂಪರ್ಕ ಹೊಂದಿದರೆ, ವೆಡ್ಡಿಂಗ್ ಎಂಬ ಲಾಕ್‌ಗೆ ಒಳಗಾಗುವಂತೆ ಪ್ರೇರೇಪಿಸಲಿದೆ. ಒಂದು ದೃಷ್ಟಿಯಲ್ಲಿ ಒಳ್ಳೆಯ ಜಡ್ಜ್‌ಮೆಂಟ್.
ಆದರೆ, ಈ ತೀರ್ಪಿಗೆ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಚರ್ಚೆಗಳನ್ನು ಹುಟ್ಟು ಹಾಕಿದೆ. ರೂಪದರ್ಶಿ ಪೂನಂ ಪಾಂಡೆ 'ಮದ್ರಾಸ್ ಹೈಕೋರ್ಟ್ ಪ್ರಕಾರ ನನಗಾಗಲೇ ಮದುವೆಯಾಗಿದೆ' ಎಂದೇ ಟ್ವೀಟ್ ಮಾಡಿದ್ದಾಳೆ!
ಸ್ವ ಇಚ್ಛೆಯಿಂದ ಲೈಂಗಿಕ ಸಂಪರ್ಕ ಹೊಂದಿರುವುದನ್ನು ಪ್ರೂವ್ ಮಾಡೋದು ಹೇಗೆ? ಮಗುವಿದ್ದರೆ ಓಕೆ. ನಾಲ್ಕು ಜನರ ಸಮ್ಮುಖದಲ್ಲಿ ಅವರ ವಿವಾಹ ವಿಧಿವತ್ತಾಗಿ ಆಗಿದ್ಯೋ, ಇಲ್ಲವೋ ಸೆಕೆಂಡರಿ. ಮಗುವಿನ ಮೂಲಕವೇ ದಂಪತಿಯೆಂದು ಪರಿಗಣಿಸಬಹುದು. ಇಂಥ ಕೇಸ್‌ಗಳಲ್ಲಿ ಮದ್ರಾಸ್ ಹೈ ಕೋರ್ಟ್ ನೀಡಿದ ತೀರ್ಪು ನಿಜವಾಗಲೂ ಹೆಣ್ಣು ಹಾಗೂ ಸಮಾಜದ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ. ಆದರೆ, ಒಬ್ಬರಿಗಿಂತಲೂ ಹೆಚ್ಚು ಮಂದಿಯೊಂದಿಗೆ ದೈಹಿಕ ಸಂಪರ್ಕ ಇಟ್ಟುಕೊಂಡವರ ಕಥೆ ಏನು? ನಮ್ಮಲ್ಲಿ ಲೈಂಗಿಕ ಕಾರ್ಯಕರ್ತೆಯರೂ ಇದ್ದಾರಲ್ಲ! ಅವರು ಈ ತೀರ್ಪನ್ನು ಮುಂದಿಟ್ಟುಕೊಂಡು ಏನು ಮಾಡಬಹುದು!?

ಹೋಗಲಿ. ಸಂಭಾವಿತ ಗೃಹಸ್ಥನೊಬ್ಬನಿಗೂ ಯಾರೋ ಒಬ್ಬಳೊಂದಿಗೆ, ಅದೂ ಕನ್ಯೆ ಐ ಮೀನ್ ಅವಿವಾಹಿತೆಯೊಂದಿಗೇ ದೈಹಿಕ ಸಂಪರ್ಕವಿದೆ ಎಂದಿಟ್ಟುಕೊಳ್ಳೋಣ. ಅವಳು ಅದನ್ನು ಬಹಳ ಸುಲಭವಾಗಿ ಪ್ರೂವ್ ಮಾಡಿಬಿಡುತ್ತಾಳೆ. ಆಗ ಆ ಸಂಬಂಧಕ್ಕೆ ಮದುವೆಯ ಚೌಕಟ್ಟು ನೀಡಲು ಸಾಧ್ಯವೇ? ಅಕಸ್ಮಾತ್ ಸೆಕ್ಸ್ ಹೊಂದಿದ್ದಾರೆಂಬ ಕಾರಣಕ್ಕಾಗಿಯೇ ಗಂಡ- ಹೆಂಡತಿ ಎಂದು ಪರಿಗಣಿಸಬಹುದಾದರೆ, ಆ ಪುರುಷನ ಲೀಗಲ್ ಪತ್ನಿಯ ಕಥೆ ಏನು? ಅವಳ ಸ್ಥಾನಮಾನಕ್ಕೆ ಏನು ಗತಿ?

ಅದಿರಲಿ. ಒಂದು ಗಂಡು- ಹೆಣ್ಣು ದೈಹಿಕವಾಗಿ ಸಂಬಂಧ ಹೊಂದಿರುತ್ತಾರೆ. ಆದರೆ, ಅವರಲ್ಲಿ ಒಬ್ಬರಿಗೆ ಮತ್ತೊಬ್ಬರೊಟ್ಟಿಗೆ ಮದುವೆಯಾಗುತ್ತದೆ. ಮದುವೆಯಾಗದವರು ಮೊದಲನೆಯವರೊಟ್ಟಿಗೆ ಹೊಂದಿದ್ದ ಸೆಕ್ಸುಯಲ್ ರಿಲೇಷನ್‌ಶಿಪ್ ಅನ್ನು ಪ್ರೂವ್ ಮಾಡಿಬಿಟ್ಟರೆ? ಯಾರೊಂದಿಗೆ ಮದುವೆ ಸಿಂಧು ಎಂದು ಕನ್ಸಿಡರ್ ಮಾಡಬಹುದು?
ಹಾಗಂತ ಸಾವಿರಾರು ಜನರ ಮುಂದೆ, ಪಂಚಭೂತಗಳ ಸಾಕ್ಷಿಯಾಗಿ 'ಅರ್ಥೇಚ, ಧರ್ಮೇಚ ನಾತಿಚರಾಮಿ' ಎಂದು ಸಪ್ತಪದಿ ತುಳಿದು ಸತಿಪತಿಗಳಾದ ಎಲ್ಲರೂ ಅಂಥದ್ದೊಂದು ದೈವೀ ಸಂಬಂಧವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರಾ? ಗೊತ್ತಿಲ್ಲ. ಈ ದಾಂಪತ್ಯವೆಂಬುವುದೇ ವಿಚಿತ್ರ. ಆದರೂ, ಮದುವೆ ಎಂಬ ವ್ಯವಸ್ಥೆಯಲ್ಲಿ ಬಂಧಿಯಾದವರಿಗೆ ಸಮಾಜದ, ಕುಟುಂಬದ ನೈತಿಕ, ಮಾನಸಿಕ ಹಾಗೂ ಆರ್ಥಿಕ ಬೆಂಬಲಗಳು ದೊರೆಯುವ ಕಾರಣ ಅದು ಆಗಾಗ ಬಿರುಕು ಬಿಟ್ಟಂತೆ ಕಂಡರೂ, ಇನ್ನೆಲ್ಲೋ ಅದು ಬಿಗಿಯಾಗಿ ಬೆಸೆದುಕೊಂಡಿರುತ್ತದೆ. ಅದಕ್ಕೆ ಈ ಮದುವೆಗೆ ತನ್ನದೇ ಆದ ಧಾರ್ಮಿಕ ಹಾಗೂ ಸಾಮಾಜಿಕ ಚೌಕಟ್ಟಿದೆ.

ಇವೆಲ್ಲ ಯೋಚಿಸಿದರೆ ಮದುವೆ ಎಂಬುದು ಕೇವಲ ಭಾವನಾತ್ಮಕ ನೆಲೆಗಟ್ಟಿನ ಮೇಲೆ ರೂಪುಗೊಂಡು, ಮುಂದುವರಿಯುವ ಅನುಬಂಧ. ಫಿಸಿಕಲಿ ಒಂದಾಗಿದ್ದಾರೆ ಎಂಬ ಒಂದೇ ಕಾರಣಕ್ಕೆ ಗಂಡ-ಹೆಂಡತಿ ಎಂದು ಕನ್ಸಿಡರ್ ಮಾಡೋದು ಕಷ್ಟ. ಅಲ್ಲಿ ನೂರಾರು ಬೇರೆ ಬೇರೆ ವಿಷಯಗಳನ್ನೂ ಗಮನಿಸಬೇಕಾಗುತ್ತದೆ.

ಮದುವೆಗೂ ಮುಂಚೆ ನಾನು ಮತ್ತೊಬ್ಬ ಹುಡುಗನಿಗೆ 'ಮನಸ್ಸು ಕೊಟ್ಟಿದ್ದೆ' ಎಂದರೇನೆ ಒಪ್ಪಿಕೊಳ್ಳಲು ಇನ್ನೂ ಸಾಧ್ಯವಾಗದ ಭಾರತೀಯ ಮನಸ್ಸುಗಳು, ವಿವಾಹ ಪೂರ್ವ ಸೆಕ್ಸ್ ಇತ್ತು ಎಂಬುದನ್ನೆಲ್ಲ ಸ್ವೀಕರಿಸೋದು ಕಷ್ಟ. ಸೆಕ್ಸ್‌ಗೆ ಕಾನೂನು ಚೌಕಟ್ಟು ನೀಡೋದೂ ಕಷ್ಟ. ಅದರ ವ್ಯಾಪ್ತಿ ನಿಲುಕದಷ್ಟು ವಿಸ್ತಾರವಾಗಿದೆ. ಮನುಷ್ಯನಿಗೆ ಆಹಾರ, ಧರ್ಮಗಳಷ್ಟೆ ಸೆಕ್ಸ್ ಕೂಡ ಅಗತ್ಯ. ಅದಕ್ಕಾಗಿಯೇ ನಮ್ಮಲ್ಲಿ ಪುರಾಣ ಕಾಲದಿಂದಲೂ ವೇಶ್ಯೆಯರಿಗೆ ವಿಶೇಷ ಸ್ಥಾನಮಾನ ನೀಡುತ್ತಿರುವುದು.

ಹೀಗಾಗಿ, ಮದ್ರಾಸ್ ಹೈಕೋರ್ಟ್ ನೀಡಿರುವ ತೀರ್ಪಿನ ಸುತ್ತ ಪ್ರಶ್ನೆಗಳು, ವಿಚಾರಗಳು ಹೊರಳಲೇಬೇಕು. ಆ ತೀರ್ಪಿಗೆ ಯಾವ ಅರ್ಥ ಕಲ್ಪಿಸಬಹುದು? ಆ ಪ್ರಕರಣಕ್ಕಷ್ಟೇ ಆ ತೀರ್ಪು ಸರಿ ಎಂದು ಹೇಳಿ ಮುಗಿಸುವ ಬದಲು, ಚರ್ಚೆ ನಡೆಸೋಣ. 'ಬೈ ಟು ಕಾಫಿ' ಚಾವಡಿ ನಿಮ್ಮ ಚಿಂತನೆಗಳನ್ನು ಆಹ್ವಾನಿಸುತ್ತಿದೆ.

ಆ ತೀರ್ಪು ಯಾವುದು?
ಕೊಯಮತ್ತೂರಿನ ವ್ಯಕ್ತಿ, ಮಹಿಳೆಯೊಂದಿಗೆ ಐದು ವರ್ಷ ಜೊತೆಗಿದ್ದು, ಎರಡು ಮಕ್ಕಳನ್ನು ಪಡೆದಿದ್ದ. ಎರಡನೇ ಪ್ರಸವದ ವೇಳೆ ಸಂಬಂಧಪಟ್ಟ ದಾಖಲೆಗಳಿಗೂ ಆ ವ್ಯಕ್ತಿಯೇ ಪತಿ ಸ್ಥಾನದಲ್ಲಿ ನಿಂತು, ಸಹಿ ಮಾಡಿದ್ದ. ಅವರಿಬ್ಬರು ಬೇರೆಯಾಗಲು ನಿರ್ಧರಿಸಿದರು. ಮಹಿಳೆ ಜೀವನಾಂಶ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು. ಆದರೆ, ಅವರ ವಿವಾಹಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಪ್ರೊಡ್ಯೂಸ್ ಮಾಡದ ಕಾರಣ ಕೇವಲ ಮಕ್ಕಳಿಗೆ ಜೀವನಾಂಶ ನೀಡಲು ಕೋರ್ಟ್ ಆದೇಶಿಸಿತ್ತು. ಆದರೆ, ಈ ಕೇಸ್‌ನಲ್ಲಿ ಪ್ರತಿ ಸಂದರ್ಭಗಳಲ್ಲೂ ಆ ವ್ಯಕ್ತಿ ಪತಿಯಂತೆಯೇ ನಡೆದುಕೊಂಡಿದ್ದರಿಂದ ದಾಖಲೆಗಳಿಲ್ಲದೇ ಹೋದರೂ ಅವರಿಬ್ಬರೂ ದಂಪತಿಯೇ. ಆದ್ದರಿಂದ ಆಕೆಗೂ ಜೀವನಾಂಶ ನೀಡಬೇಕೆಂದು ಹೈ ಕೋರ್ಟ್ ತೀರ್ಪು ನೀಡಿ, ವಿವಾಹ ಪೂರ್ವ ಲೈಂಗಿಕತೆಗೆ ಸಂಬಂಧಿಸಿದಂತೆ ಹೊಸ ವ್ಯಾಖ್ಯಾನ ನೀಡಿದೆ.

ತೀರ್ಪಿನಿಂದ ಸಮಸ್ಯೆ ಎಲ್ಲಿ?

  • ಒಬ್ಬರಿಗಿಂತ ಹೆಚ್ಚು ಮಂದಿಯೊಟ್ಟಿಗೆ ದೈಹಿಕ ಸಂಪರ್ಕ ಹೊಂದಿದವರಿಗೆ ತಮ್ಮ ಸಂಬಂಧವನ್ನು ಸಾಬೀತು ಮಾಡೋದು ಕಷ್ಟ.
  • ಅತ್ಯಾಚಾರ ಪ್ರಕರಣಗಳನ್ನು ಹೊರತುಪಡಿಸಿ, ಸ್ವ ಇಚ್ಛೆಯಿಂದ ಲೈಂಗಿಕ ಸಂಪರ್ಕ ಹೊಂದಿದರೆ ಯಾವುದೇ ಪುರಾವೆ ಒದಗಿಸಲು ಸಾಧ್ಯವೇ ಇಲ್ಲ. ಆದ್ದರಿಂದ ಈ ತೀರ್ಪು ಇಂಪ್ರಾಕ್ಟಿಕಲ್.
  • ವ್ಯಕ್ತಿಯೊಬ್ಬ ಮದುವೆಯಾಗಿಯೂ ಅನೈತಿಕ ಸಂಬಂಧ ಹೊಂದಿ, ಆಕೆ ಅವಿವಾಹಿತೆಯಾಗಿದ್ದರೆ ಈತನೊಂದಿಗಿರುವ ಸಂಬಂಧವನ್ನು ಪ್ರೂವ್ ಮಾಡಬಹುದು. ಆಗ, ಆತನೊಂದಿಗೆ ಮದುವೆಯಾದ ಲೀಗಲ್ ಪತ್ನಿಗೆ ಅನ್ಯಾಯವಾಗಲಿದೆ.
  • ಲೈಂಗಿಕ ಕಾರ್ಯಕರ್ತೆಯರು ಈ ತೀರ್ಪನ್ನು ಮಿಸ್‌ಯೂಸ್ ಮಾಡಿಕೊಳ್ಳಬಹುದು.
ಯಾರಿಗೆ ಅನುಕೂಲ?
  • ಮದುವೆಯಾಗುವುದಾಗಿ ಭರವಸೆ ನೀಡಿ, ದೈಹಿಕ ಸಂಪರ್ಕ ಹೊಂದಲು ಒತ್ತಾಯಿಸಿ, ನಂತರ ಈ ಮದುವೆ ಒಲ್ಲೆ ಎನ್ನುವವರಿಗೆ ಕೋರ್ಟ್‌ನ ತೀರ್ಪು ಪರಿಣಾಮಕಾರಿಯಾಗಲಿದೆ.
  • ಅದರಲ್ಲೂ ಯುವತಿ ಕನ್ಸೀವ್ ಆದ ಮೇಲೆ ಕೈ ಎತ್ತುವ ಹುಡುಗರಿಗೆ ಇದೊಂದು ಎಚ್ಚರಿಕೆ ಗಂಟೆ.
  • ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಮಕ್ಕಳಾದ ಮೇಲೂ ಯಾವುದೇ ಜವಾಬ್ದಾರಿಗಳನ್ನು ತೆಗೆದುಕೊಳ್ಳದವರಿಗೆ ಇದೊಂದು ಪಾಠ.
  • ದೈಹಿಕ ಸಂಬಂಧ ಹೊಂದಿರುವುದನ್ನು ಪ್ರೂವ್ ಮಾಡಲು ಸಾಧ್ಯವಾದರೆ, ವಂಚನೆ ಪ್ರಕರಣಗಳು ಕಡಿಮೆಯಾಗುತ್ತವೆ.
ಮಡಿವಂತ ಭಾರತದಲ್ಲಿ  ಲೈಂಗಿಕತೆ
ಕೋರ್ಟ್ ಕಣ್ಣಲ್ಲಿ ಲಿವ್ ಇನ್ ರಿಲೇಷನ್
  • 2001ರಲ್ಲಿ ಅಲಹಾಬಾದ್ ಹೈಕೋರ್ಟ್ ಹೀಗೆ ಹೇಳಿತು: 21 ವರ್ಷ ಮೀರಿದ ಹೆಣ್ಣೊಬ್ಬಳು ಯಾರೊಟ್ಟಿಗೆ, ಎಲ್ಲಿ ಬೇಕಾದರೂ ಬದುಕಬಹುದು. ಒಂದು ಹೆಣ್ಣು, ಗಂಡು ಬಯಸಿದಲ್ಲಿ ಮದುವೆಯಾಗದೆಯೂ ಒಟ್ಟಿಗಿರಬಹುದು. ಸಮಾಜದ ದೃಷ್ಟಿಯಲ್ಲಿ ಇದು ಅನೈತಿಕ ಎಂದು ಕರೆಯಿಸಿಕೊಂಡರೂ, ಕಾನೂನುಬಾಹಿರವಲ್ಲ.
  • 2003ರಲ್ಲಿ ಮಳಲಿಮಠ್ ಸಮಿತಿ ನೀಡಿದ ವರದಿಯಲ್ಲಿ ಐಪಿಸಿ 494ನೇ ಸೆಕ್ಷನ್ ಅನ್ನು ಪರಿಷ್ಕರಿಸಲು ಶಿಫಾರಸು ಮಾಡಿತ್ತು. ಇದರಂತೆ ಒಬ್ಬ ಪುರುಷ ಹಾಗೂ ಮಹಿಳೆ ಸುದೀರ್ಘ ಒಟ್ಟಿಗಿದ್ದರೆ, ಆ ಪುರುಷ ಆಕೆಯನ್ನು ಮದುವೆಯಾದಂತೆ.
  • 2005ರಲ್ಲಿ ಗೃಹ ಸಂಬಂಧಿ ಹಿಂಸೆ ವಿರೋಧಿ ಕಾಯ್ದೆಯ 2 (ಎಫ್) ಪ್ರಕಾರ, 'ಡೊಮೆಸ್ಟಿಕ್ ರಿಲೇಷನ್‌ಶಿಪ್‌' ಎಂದರೆ ಮದುವೆಯಾಗಿ ಅಥವಾ ಆಗದೆಯೇ ಒಂದೇ ಮನೆಯಲ್ಲಿದ್ದರೆ ಅವರನ್ನು ದಂಪತಿಯಂತೆಯೇ ಕನ್ಸಿಡರ್ ಮಾಡಬಹುದು.
  • 2008, ಜನವರಿಯಲ್ಲಿ ಸುಪ್ರೀಂ ಕೋರ್ಟ್ ಪೀಠದ ತೀರ್ಪೂ ಅಚ್ಚರಿ. ಲಿವ್ ಇನ್ ರಿಲೇಷನ್‌ಶಿಪ್ ಅನ್ನು ಮದುವೆಯಂತೆಯೇ ಪರಿಗಣಿಸಬಹುದು ಹಾಗೂ ಈ ಸಂಬಂಧದಿಂದ ಹುಟ್ಟಿದ ಮಗುವನ್ನು ಅಕ್ರಮ ಸಂತಾನ ಎಂದು ಪರಿಗಣಿಸಲಾಗುವುದಿಲ್ಲ.
  • ಡಿಸೆಂಬರ್‌ನಲ್ಲಿ ಲೋಕಸಭೆಯ ಪ್ರಶ್ನಾವಧಿಯಲ್ಲಿ ಕಾನೂನು ಸಚಿವ ಎಚ್.ಆರ್. ಭಾರದ್ವಾಜ್ 'ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿರುವ ಮಹಿಳೆಯರನ್ನು ಡೊಮೆಸ್ಟಿಕ್ ವಯಲೆನ್ಸ್ ಆ್ಯಕ್ಟ್ ಅಡಿಯಲ್ಲಿ ರಕ್ಷಿಸಲಾಗುತ್ತದೆ. ಈ ಸಂಬಂಧವನ್ನು ಸಮಾಜ ಒಪ್ಪಿಕೊಳ್ಳುವುದಾದರೆ ಇದಕ್ಕೆ ಸಂಬಂಧಿಸಿದಂತೆ ಕಾನೂನು ಜಾರಿಗೊಳಿಸಲಾಗುತ್ತದೆ. ಕಾನೂನನ್ನು ಪ್ರಸ್ತುತ ಕಾಲಘಟ್ಟ, ದೇಶದ ಹಿತದೃಷ್ಟಿಯಿಂದ ರಚಿಸಲಾಗುತ್ತದೆ' ಎಂದಿದ್ದರು.
  •  2010ರಲ್ಲಿ ಸುಪ್ರೀಂ ಕೋರ್ಟ್ ಹೀಗೆ ಹೇಳಿತು; 'ಸಹಜ ಮದುವೆ ಹಾಗೂ ಕಾನೂನು ಬದ್ಧ ಮದುವೆ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಸಹಜ ಮದುವೆ ಎಂದರೆ ಸಮಾಜದ ದೃಷ್ಟಿಯಲ್ಲಿ ದಂಪತಿಯಂತೆ ಬದುಕಬೇಕು. ಅವರಿಬ್ಬರೂ ಕಾನೂನು ರೀತ್ಯ ವಯಸ್ಸಿಗೆ ಬಂದಿರಬೇಕು ಅಥವಾ ಕಾನೂನುಬದ್ಧವಾಗಿ ಮದುವೆಯಾಗಲು ಅಥವಾ ಹಾಗೆಯೇ ಮದುವೆಯಾಗದೆಯೇ ಒಟ್ಟಿಗಿರಲು ಅರ್ಹರಾಗಿರಬೇಕು, ಇಬ್ಬರೂ ಸ್ವಇಚ್ಛೆಯಿಂದ ಕೆಲವು ಕಾಲದವರೆಗಾದರೂ ಒಟ್ಟಿಗೆ ಗಂಡ-ಹೆಂಡಿರಂತೆ ವಾಸಿಸಿರಬೇಕು, ಆಗ ಅದನ್ನು ಮದುವೆಯಂತೆಯೇ ಪರಿಗಣಿಸಬಹುದು.
  • ಎಸ್. ಖುಷ್ಬೂ ವರ್ಸಸ್ ಕನ್ನೆಯಮ್ಮಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇಬ್ಬರು ಪ್ರಾಪ್ತರು ಒಟ್ಟಿಗೆ ಬದುಕಲು ನಿಶ್ಚಯಿಸಿದರೆ ಅದರಲ್ಲಿ ತಪ್ಪೇನಿದೆ? ಅದನ್ನು ಅಪರಾಧ ಎಂದು ಪರಿಗಣಿಸಲು ಸಾಧ್ಯವೇ? ಒಟ್ಟಾಗಿ ಜೀವಿಸುವುದು ಅಪರಾಧವಲ್ಲ, ಲಿವಿಂಗ್ ಟುಗೆದರ್ ಬದುಕುವ ಹಕ್ಕು ಎಂದಿದೆ.
ಪ್ರೂವ್ ಅಸಾಧ್ಯ
- ಕೆ.ಎಸ್. ನಿರುಪಮಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.