ಸವಿ ಜೀವನ

ಇವರು ಬಿಳಿ ಕಾಲರ್ ಜಾಬ್ನವರಲ್ಲ. ಸಾವಿರಾರು ರುಪಾಯಿ ಸಂಬಳವೂ ಇವರಿಗಿಲ್ಲ. ಹೆಸರು ಈರ ನಾಯ್ಕ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಬಳಕೂರು ಗ್ರಾಮದಲ್ಲಿದ್ದಾರೆ. 'ಕಾಯಕವೇ ಕೈಲಾಸ' ಎಂದು ನಂಬಿ ಬದುಕುತ್ತಿರುವ ಅವರ ವಯಸ್ಸೀಗ 90 ವರ್ಷ. ಇಂತಹ ಇಳಿವಯಸ್ಸಿನಲ್ಲಿಯೂ ಕೂಡ ತಾನೂ ಕಷ್ಟಪಟ್ಟು ದುಡಿದು ತಿನ್ನಬೇಕು ಎಂಬ ಛಲ. ಬಳಕೂರಿನ ಬೆಟ್ಟ ಗುಡ್ಡ ಇವರಿಗೆ ಚಿರಪರಿಚಿತ. ಚಿಕ್ಕ ವಯಸ್ಸಿನಿಂದಲೆ ಕಾಡಿಗೆ ಹೋಗಿ ಕಟ್ಟಿಗೆ ಹೊರೆ ತಂದು ಮಾರುತ್ತಾರೆ. ಬಂದ ಹಣದಲ್ಲಿ ಅವತ್ತಿಗೆ ಕುಟುಂಬದ ಖರ್ಚಿಗೆ ಎಷ್ಟು ಬೇಕೋ ಅಷ್ಟನ್ನು ಇಟ್ಟುಕೊಳ್ಳುತ್ತಾರೆ. ಉಳಿದ ಹಣದಲ್ಲಿ ಸಿಹಿ ಖರೀದಿಸಿ ಕರೆಕರೆದು ಶಾಲೆ ಮಕ್ಕಳಿಗೆ ಕೊಟ್ಟು ಕೈ ತೊಳೆದುಕೊಂಡು ನಡೆದುಬಿಡುತ್ತಾರೆ!
'ನೋಡಿ ಸ್ವಾಮಿ, ನಾನು ಶಾಲೆಯ ಮುಖ ಕಾಣದವನು. ಓದು ಬರಹ ಗೊತ್ತಿಲ್ಲ. ಚಿಕ್ಕವಯಸ್ಸಿನಲ್ಲಿ ಕಿತ್ತು ತಿನ್ನುವ ಬಡತನ. ಕಟ್ಟಿಗೆ ಹೊರೆ ತಂದು ಮಾರಿ ಬಂದ ಹಣದಿಂದ ಹೊಟ್ಟೆ ಹೊರೆದುಕೊಳ್ಳುತ್ತಿದ್ದೇನೆ. ನನಗೆ ಮಕ್ಕಳೆಂದರೆ ತುಂಬಾ ಪ್ರೀತಿ. ಉಳಿದ ಹಣದಲ್ಲಿ ಕನ್ನಡ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಅವರ ಜೊತೆ ಕಳೆಯುತ್ತೇನೆ. 50 ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಹೀಗೇ ಮಾಡುತ್ತಿದ್ದೇನೆ' ಎನ್ನುತ್ತಾರೆ ಈರ ನಾಯ್ಕ.
ಆರೋಗ್ಯದ ಗುಟ್ಟೇನು?
ಪ್ರತಿ ದಿನ ಬೆಳಿಗ್ಗೆ 5 ಗಂಟೆಗೆ ಎದ್ದು ಸಾಕಷ್ಟು ನೀರು ಕುಡಿದು, ಬೆಟ್ಟಕ್ಕೆ ಹೋಗಿ ಕಟ್ಟಿಗೆ ತಂದು ಮಾರಾಟ. ನಂತರ ಕುಸುಬಲಕ್ಕಿ ಗಂಜಿ, ಮೀನಿನ ಸಾರಿನ ಊಟ. ಸಾಕಪ್ಪಾ ಅದೇ ನನಗೆ ಎಲ್ಲಾ ಎಂದು ನಗು ನಗುತ್ತಲೇ ಹಳೆಯ ದಿನದ ಮೆಲುಕು ಹಾಕುತ್ತಾರೆ.
-ಬಳಕೂರು ವಿ.ಎಸ್. ನಾಯಕ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


