ಬೈಟುಕಾಫಿ

ಕಿಣಿಕಾಣಿಕೆ

ಕಿಣಿಕಾಣಿಕೆ
Published On :

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಶಿರಸಿಯ ರಾಮು ಕಿಣಿ ಎಂಬವರು ಜಲಮೂಲವೇ ಇಲ್ಲದ ಮತ್ತು ಬರಗಾಲಕ್ಕೆ ತುತ್ತಾದ ಜಮೀನು ಖರೀದಿಸಿ ಈಗ ಅದರಲ್ಲಿ ಸಂಪದ್ಭರಿತ ಬೆಳೆ ಬೆಳೆಯುತ್ತಿದ್ದಾರೆ.
ರಾಮು ಕಿಣಿ ಮೂಲತಃ ಕೃಷಿಕರಲ್ಲ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಜಮೀನು ಖರೀದಿಸಿದಾಗ ಅದು ಕುರುಚಲು ಮುಳ್ಳು ಕಂಟಿಗಳಿಂದ ತುಂಬಿಕೊಂಡಿತ್ತು. ಜನಜೀವನ ಬರಗಾಲದಿಂದ ತತ್ತರಿಸುತ್ತಿತ್ತು. ಅಂತಹ ಪ್ರದೇಶದಲ್ಲಿ ರಾಮು ಕಿಣಿ ಕೃಷಿಗೆ ಮುಂದಾದರು.
ಜಮೀನಿನ ಅಕ್ಕಪಕ್ಕದಲ್ಲಿ ಭಾಗಶಃ ಮುಚ್ಚಿಹೋಗಿದ್ದ ಕಾಲುವೆಗಳಿದ್ದವು. ಜಮೀನು ಖರೀದಿಸಿದ ಪ್ರಾರಂಭದಲ್ಲಿ ಜಾಲಿ ಮುಳ್ಳಿನ ಕಂಟಿಯನ್ನು ತೆಗೆಸಿದರು. ನೀರು ಹೋಗುವ ಕಾಲುವೆಯನ್ನು 50 ಅಡಿ ಅಗಲ ಮತ್ತು ಐದು ಅಡಿ ಆಳ ಮಾಡಿ ಕೆರೆಯ ರೀತಿಯಲ್ಲಿ ಸಜ್ಜುಗೊಳಿಸಿದರು. ತಮ್ಮ ಜಮೀನಿಗೆ ಮಾತ್ರವಲ್ಲ, ಸುತ್ತಮುತ್ತಲಿನ ಜಮೀನುಗಳ ಅಂಚಿನಲ್ಲಿರುವ ಕಾಲುವೆಗಳಿಗೂ ಇದೇ ರೀತಿಯ ಜಲಸಂಗ್ರಹಾಗಾರವನ್ನು ನಿರ್ಮಿಸಿದರು. ಅದರಿಂದ ಬಂದ ಮಣ್ಣನ್ನು ಜಮೀನಿನ ಮೇಲ್ಮೈ ಹೊದಿಕೆಗೆ ಹಾಕಿದರು. ಮೊದಲನೇ ವರ್ಷ ತರಕಾರಿ ಬೆಳೆದರು. ಸಾಧಾರಣ ಬೆಳೆ ಬಂತು. ಆ ಪ್ರದೇಶದಲ್ಲಿ ಕೊಟ್ಟಿಗೆ ಗೊಬ್ಬರ ಇರಲಿಲ್ಲ. ಮಲೆನಾಡು ಗಿಡ್ಡ ತಳಿಯ ಆಕಳು ಸಾಕಿದರು. ಜಮೀನಿಗೆ ಸಾಕಾಗುವಷ್ಟು ಗೊಬ್ಬರ ತಯಾರಾಯಿತು.
ಎರಡನೇ ವರ್ಷ ನೀರಿನ ಮೂಲಕ್ಕಾಗಿ ಕೊಳವೆ ಬಾವಿ ತೋಡಿಸಿದರು. ನೂರು ಅಡಿಯಲ್ಲಿ 2.5 ಇಂಚು ನೀರು ಸಿಕ್ಕಿತು. ಅದರಿಂದ ಪಪ್ಪಾಯಿ ಬೆಳೆದರು. ಮಧ್ಯದಲ್ಲಿ ದಾಳಿಂಬೆ ಗಿಡಗಳನ್ನು ಹಚ್ಚಲು ಆರಂಭಿಸಿದರು. ಎರಡು ವರ್ಷಗಳವರೆಗೂ ಬೆಳೆ ಕೊಯ್ಲು ಮಾಡಲಿಲ್ಲ. ಬಂದ ಹೂವುಗಳನ್ನು ಚಿವುಟಿ ಹಾಕಿದರು. ಎರಡು ವರ್ಷದ ಬಳಿಕ ಮತ್ತೊಂದು ಕೊಳವೆ ಬಾವಿ ತೋಡಿಸಿದಾಗ ನೂರು ಅಡಿಗೆ 3.5 ಇಂಚು ನೀರು ಲಭಿಸಿತು. ದಡ್ಡಿ ಗೊಬ್ಬರ, ಗಿಡಗಳಿಗೆ ಬೇಕಾಗುವಷ್ಟೇ ನೀರಾವರಿ ಮೂಲಕ ಉತ್ತಮ ಬೆಳೆ ತೆಗೆದರು.
ರಾಸಾಯನಿಕ ಔಷಧಿ ಸಿಂಪಡಿಸಲಿಲ್ಲ. ಸಾವಯವ ಮಾದರಿಯಲ್ಲಿ ದಾಳಿಂಬೆ ಬೆಳೆದವರಲ್ಲಿ ರಾಮು ಕಿಣಿ ಅಗ್ರಗಣ್ಯರು. ದಾಳಿಂಬೆ ರಫ್ತು ಮಾಡಿದರು. ಖರೀದಿಸಿದ ಜಮೀನಿನ ಮೊತ್ತ, ಬೆಳೆ ಬೆಳೆಯಲು ಖರ್ಚು ಮಾಡಿದ ಹಣ ಕಳೆದು ಉತ್ತಮ ಲಾಭ ಕಂಡುಕೊಂಡಿದ್ದಾರೆ. ಈಗ ಅವರ ಜಮೀನಿನಲ್ಲಿ ನೀರಿನ ಸಮಸ್ಯೆಯಿಲ್ಲ. ಪಕ್ಕದ ಹೊಲಗಳಲ್ಲೂ ಸಮೃದ್ಧ ನೀರಿದೆ. ಪ್ರತಿಯೊಬ್ಬರೂ ಮಳೆಯ ನೀರನ್ನು ಈ ರೀತಿ ಸಂಗ್ರಹಿಸಿದಲ್ಲಿ ತೀವ್ರ ಬರಗಾಲ ಎದುರಿಸುವ ಚಿತ್ರದುರ್ಗದಂತಹ ಪ್ರದೇಶದಲ್ಲೂ ಅಂತರ್ಜಲ ಮಟ್ಟ ಹೆಚ್ಚಿಸಿಕೊಳ್ಳಬಹುದು.
ದಾಳಿಂಬೆ ಬೆಳೆ ಬೆಳೆಯುವವರು ವಿಷಕಾರಿ ಕೀಟನಾಶಕ ಬಳಸುತ್ತಾರೆ. ಅವು ಎಷ್ಟು ಪ್ರಭಾವಶಾಲಿ ಎಂದರೆ, ಆ ಪ್ರದೇಶವೆಲ್ಲ ವಿಷಮಯವಾಗುತ್ತದೆ. ಅಷ್ಟೇ ಅಲ್ಲ, ದಾಳಿಂಬೆ ಗಿಡಗಳಿಗೆ ಹಾಕುವ ರಸಗೊಬ್ಬರ ಭೂಮಿಯನ್ನು ಬರಡು ಮಾಡುತ್ತವೆ. ಅನೇಕ ಸಲ ಅಂತರ್ಜಲಕ್ಕೂ ಇಳಿಯುತ್ತವೆ. ಆದರೆ ರಾಮು ಕಿಣಿಯವರ ಕೃಷಿ ಕಾಯಕದಲ್ಲಿ ಇದ್ಯಾವುದಕ್ಕೂ ಆಸ್ಪದವಿಲ್ಲ. ಪರಿಶುದ್ಧತೆಗೆ, ಪರಿಶ್ರಮಕ್ಕೆ ಆದ್ಯತೆ. ಸಾವಯವ ಕೃಷಿಯ ದಾಳಿಂಬೆ ಬೆಳೆಗೆ ಉತ್ತಮ ಬೇಡಿಕೆ ಕಂಡುಕೊಂಡರು. ಬರಗಳ ನಾಡಿನ ಕೃಷಿಕರಿಗಷ್ಟೇ ಅಲ್ಲ, ಇತರರಿಗೂ ರಾಮು ಕಿಣಿ ಮಾದರಿ.

- ವಿಶ್ವಾಮಿತ್ರ ಹೆಗಡೆ
vishwottama@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.